ನಾಸ್ತಿಕ ಕೊಟ್ಟ ದೇವರು/ಯಾವ ಜನ್ಮದ ಶಾಪ?

ವಿಕಿಸೋರ್ಸ್ ಇಂದ
Jump to navigation Jump to search

 

ಕಥೆ: ಆರು
ಯಾವ ಜನ್ಮದ ಶಾಪ?“ಏಳೀಂದ್ರೆ..."
" ಊ...."
"ಕಾಫಿ ಆರೋಯ್ತು...."
"ಆ೦?"
-ಎಂಟೂಕಾಲು ಘ೦ಟೆಗೆ ನಾವು ಮತ್ತು ನಮ್ಮವರು, ಶ್ರೋತೃಗಳ ಪತ್ರಗಳಿಗೆ ನಮ್ಮ ಉತ್ತರ; ಎಂಟೂವರೆ ಘಂಟೆಗೆ ದೆಹಲಿ ಕೇಂದ್ರದಿಂದ ಪುನಃ ಪ್ರಸಾರ; ಎಂಟೂ ಐವತ್ತೈದಕ್ಕೆ To-day in Parliament ... ಪಾರ್ಲಿಮೆಂಟಿನ ...
ಏಳು ಘಂಟೆ ಆಗಿಹೋಯಿತು ಹಾಗಾದರೆ. ಬೆಳಕು ಹರಿಯುವುದಕ್ಕೆ ಮುನ್ನವೇ, ಮೂವತ್ತು ವರ್ಷಗಳ ಕಾಲ ಪ್ರತಿದಿನವೂ ಏಳುತ್ತಲಿದ್ದ ಮನುಷ್ಯ ತಾನು. ಈಗ ಈ ಆರೆಂಟು ದಿನಗಳಿ೦ದ ಹೀಗೆ... ಅల్ల,- ಎದ್ದು ತಾನು ಮಾಡಬೇಕಾದುದಾದರೂ ಏನು? ತಡವಾಯಿತು ಅಂತ ಚಡಪಡಿಸುತ್ತ, ಹೊಗೆ ತುಂಬಿದ ಸ್ನಾನದ ಮನೆಯಲ್ಲಿ ಮೈಗೆ ತಣ್ಣೀರು ಸುರಿದುಕೊಳ್ಳಬೇಕೆ? ಹೆಂಡತಿಯ ಮೇಲೆ ರೇಗಾಡಿ ಚೀರಾಡಿ, ಆವಿ ಏಳುವ ಬಿಸಿ ಅನ್ನ ಗಂಟಲಿನೊಳಕ್ಕೆ ತುರುಕಬೇಕೆ? ಸೈಕಲು ಹತ್ತಿ ತುಳಿದು ತುಳಿದು, ಬೆವರು ಸುರಿಸಿಕೊಂಡು ಅಠಾರಾ ಕಚೇರಿ ತಲುಪಿ, ಅಲ್ಲಿ ಏದುಸಿರು ಬಿಡಬೇಕೆ? ಯಾವುದೂ ಇಲ್ಲ. ಅಂದಮೇಲೆ, ಏಳಲು ಅವಸರವಾದರೂ ಯಾಕೆ? ಕತ್ತಿನವರೆಗೂ ಕಂಬಳಿ ಹೊದೆದು, ನೀಳವಾಗಿ ಮೈಚಾಚಿ ಮಲಗಿರುವುದೇ ಹಿತಕರ . . .
ತಾರಸಿ ಛಾವಣಿಯಿಂದ ಕೆಳಮೊಗವಾಗಿದ್ದ ತೊಟ್ಟಿಲು ತೂಗುವ ಕೊಂಡಿಗಳು, ಮಲಗಿದ್ದ ವಿಶ್ವನಾಥಯ್ಯನವರನ್ನೇ ದಿಟ್ಟಿಸಿದುವು. ಬರಿದು ಕೊಂಡಿಗಳು. ತುಕ್ಕು ಹಿಡಿದ ಕಬ್ಬಿಣ. ವಿಶ್ವನಾಥಯ್ಯ ಆ ಪುಟ್ಟ ಮನೆಯನ್ನು ಕಟ್ಟಿಸಿ ಹತ್ತು ವರ್ಷಗಳಾಗಿದ್ದುವು.
ಹಣ ಎಲ್ಲಿ೦ದ ಬ೦ತು? ಹೇಗೆ ಬಂತು? ಎಂದು ತನಿಖೆ ನಡೆಸಿರಲಿಲ್ಲ ಸದ್ಯಃ. ಆ ಹತ್ತು ವರ್ಷಗಳಲ್ಲಿ ಒಮ್ಮೆಯೂ ಕೊಂಡಿಗೆ ಸುತ್ತಿಕೊಂಡಿರಲಿಲ್ಲ ತೊಟ್ಟಿಲು ಹಗ್ಗ.
ಮುಗುಳು ನಗೆ ಮೂಡಿಸಿತು ಆ ನೆನಪು. ಮುಖದ ಸುಕ್ಕುಗಳು ತುಸು ಮಿಸುಕಿದುವು. ಹಿಂದೆ, ಸಹೋದ್ಯೋಗಿಗಳ ಮಧ್ಯೆ, ನಗೆ ಮಾತಿನ ರೂಪುತಳೆದು ಆ ಪ್ರಸ್ತಾಪ ಬಂದಿತ್ತು.
"ನೀವು ಪುಣ್ಯವಂತರು ಕಣ್ರೀ... ಚಿಕ್ಕದಾದ ಚೊಕ್ಕ ಸಂಸಾರ.”
"ನಮಗೂ ಸ್ವಲ್ಪ ಹೇಳ್ಕೊಡ್ರೀ ವಿಶ್ವನಾಥಯ್ಯನವರೇ!"
ತಮಗೆ ತಿಳಿದಿದ್ದರೆ! ಅಜ್ಞಾನದ ಕತ್ತಲಲ್ಲಿ ಪರದಾಟ. ಸತ್ತು ಹುಟ್ಟಿದ ಮೊದಲ ಕೂಸು. ವರ್ಷ ವರ್ಷಗಳ ಕಾಹಿಲೆ. ದೇವರ ಪ್ರಸಾದವಾಗಿ ದೊರೆತ ಗಂಡು— 'ಪ್ರಸಾದ.' ಮತ್ತೆ ಕಣ್ಣು ಮುಚ್ಚಾಲೆ. ಐದು ವರ್ಷಗಳ ಅನಂತರ ಹುಟ್ಟಿದ ಹೆಣ್ಣು. ಅಲ್ಲಿಗೆ ಬತ್ತಿ ಹೋಗಿತ್ತು... ಕುಟುಂಬ ಯೋಜನೆಯ ಮಾತೆಲ್ಲ ಈ ಚಿನದು, ಹೊಸದು. ಸಂಸಾರವಂದಿಗರಲ್ಲದ ಯುವಕರಿಗೇ ಅದರಲ್ಲಿ ಆಸಕ್ತಿ. ಅವರ ಮಾತು ಕಿವಿಗೆ ಬಿದ್ದರೆ ಲಜ್ಜೆಯಿಂದ ತಲೆತಗ್ಗಿಸಬೇಕು, ತನ್ನಂಥವರು. ಮೂರ್ಖರು. ನಮ್ಮ ಇಚ್ಛೆಯೆ ಅದೆಲ್ಲ? ಆತ ಕೊಟ್ಟರೆ ಉಂಟು, ಇಲ್ಲದಿದ್ದರೆ ಇಲ್ಲ.
ಆ ಯೋಚನೆಯನ್ನು ಅಲ್ಲಿಗೇ ನಿಲ್ಲಿಸಿದರು, ವಿಶ್ವನಾಥಯ್ಯ. ಕೊಠಡಿಯಲ್ಲಿದ್ದ ಪರಿಚಿತ ವಸ್ತುಗಳ ಮೇಲೆಲ್ಲ ಅವರ ದೃಷ್ಟಿ ಸೋಮಾರಿಯಂತೆ ಅಲೆಯಿತು. ಗೋಡೆಗೆ ಒರಗಿತು ಹೆಂಡತಿಯ ಸುರುಳಿ ಸುತ್ತಿದ ಹಾಸಿಗೆ. ಮಲೆಯಾಳಿ ಬಡಗಿಯೊಬ್ಬನನ್ನು ಹಿಡಿದು ಇಬ್ಬರಿಗೆಂದೇ ಮಂಚ ಮಾಡಿಸಿದ್ದರೂ, ಆಕೆ ಮಲಗುತ್ತಿದ್ದುದು ಕೆಳಗೇ. ಹಿಂಬದಿಯಲ್ಲಿದ್ದ ಮರದ ಬೀರು. ಹರಾಜಿನಲ್ಲಿ ಕಡಮೆ ಬೆಲೆಗೆ ತ೦ದದ್ದು. [ಒಂದು ಭಾನುವಾರವಿಡೀ ವ್ಯಯವಾಗಿತ್ತು ಅದಕ್ಕೋಸ್ಕರ ? ಅದರ ಮಗ್ಗುಲಲ್ಲಿ ಟ್ರಿಂಕುಗಳು, ಒಂದು ಹಳೆಯದು, ಒಂದು ಹೊಸದು. ಗೋಡೆಗೆ ಬಡಿದಿದ್ದ ಕತ್ತರಿಗೂಟ. ಇನ್ನು ಆ ರುಮಾಲನ್ನು ಕಪಾಟದೊಳಗೆ ಇರುಸುವುದೇ ಮೇಲು. ಧಾರವಾಡ ಕಡೆಯ ಟೋಪಿ ಕೊಳ್ಳಬೇಕು. ಹೇಗೂ... ಎಲ್ಲರೂ ಒಂದೇ ಆದೆವಲ್ಲ . . . .
"ಸಬ್ಬಸಿ ಸೊಪ್ಪು . . . ಕೊತ್ತಮಿರಿ ಸೊಪ್ಪೂ. . . ಟೊಮಾಟೋ ಹಣ್ಣೂ....”
ಮೂರು ಕಾಸಿನ ವ್ಯಾಪಾರ. ಮುಂದೆ ಒಂದು ನಯೆಪೈಸೆಗೆ ಒಂದು ಕಟ್ಟು ಕೊಡುತಾರೋ ಇಲ್ಲವೋ. ಒ೦ದಾದರೆ ನಯಾ ಪೈಸಾ ಅನ್ನಬೇಕು. ಹೆಚ್ಚಿದ್ದರೆ ನಯೇ. ಹಿಂದೀ ಪರೀಕ್ಷೆ ಕಡ್ಡಾಯವಾಗುವುದಕ್ಕೆ ಮು೦ಚೆಯೇ ಪಾರಾದೆ ತಾನು !
“ಅವರೇಕಾಯಿಯ ! ”
“ಕರೀಲೇನಮ್ಮ? "
“ಬೇಡ್ವೇ. ಮಾರ್ಕೆಟ್ನಲ್ಲಿ ಕಡಿಮೆಗೆ ಸಿಗುತ್ತೆ. ಇವರಿಗೆ ಇನ್ನೇನು ಕೆಲಸ – ಹೋಗಿ ತರ್ತಾರೆ.”
ಓಹೋ ! ಇನ್ನೇನು ಕೆಲಸ? ಚೀಲ ಎತ್ತಿಕೊಂಡು ಮಾರ್ಕೆಟ್ಟಿಗೆ ಯಾತ್ರೆ !
ಡರ್ ಡರ್ ಡರ್ー
ಈ ರೇಡಿಯೋ ಕೆಟ್ಟಿದೆ. ಒಂದು ತಿಂಗಳಿನಿಂದಲೂ ಹೀಗೆಯೇ. ರಿಪೇರಿ ಮಾಡಿಸಿಕೊಂಡು ಬರಬೇಕು.
ಸರಿ. ಇದೀನಲ್ಲ. ಹೇಗೂ ನನಗೆ ಇನ್ನೇನು ಕೆಲಸ?
'ಓ, ನನ್ನ ಚೇತನಾ, ಆಗು ಅನಿಕೇತನಾ...?
ಒಳ್ಳೆಯ ಕ೦ಠ, ఓ ನನ್ನ ಚೇತನಾ...
" ಗಿರಿಜಾ, ನಿಮ್ಮ ಅಣ್ಣಯ್ಯ ಎದ್ದರೇನೋ ನೋಡು.”
" ಮಲಕೊಳ್ಲಿ ಬಿಡಮ್ಮ. ಅವರಿಗೆ__”
" ನೀನೂ ಸರಿ, ಹೋಗಿ ಎಬ್ಬಿಸು!”
ಅಂಬೆಗಾಲಿಡುತ್ತ ಮಗಳು ತನ್ನಡೆಗೆ ಹರಿದಾಡುತ್ತಿದ್ದ ಆ ದಿನದಿಂದ, ಆಕೆ ಇಪ್ಪತ್ತರ ಯುವತಿಯಾಗಿರುವ ಇಂದಿನವರೆಗೆ, ಚಿರಪರಿಚಿತವಾದ ಹೆಜ್ಜೆಯ ಸಪ್ಪಳ.
"ಅಣ್ಣಯ್ಯ, ಎದ್ದಿದೀಯಾ ? "
"ಹೂ೦.”
“ಕಾಫಿ__”
“ಬಂದೆ.”
ವಿಶ್ವನಾಥಯ್ಯ ಎದ್ದರು. ಹಿತ್ತಿಲ ಬಾಗಿಲ ಕಡೆ ನಡೆದವರು, ದಿನಚರಿ ಬದಲಾಗಲೆಂದು, ತಡೆದು ನಿಂತು, ಮುಖಮಾರ್ಜನವನ್ನಷ್ಟೆ ಮಾಡಿ ಅಡುಗೆ ಮನೆಯತ್ತ ಕಾಲಿರಿಸಿದರು.
ಕಾಫಿ ತಿಂಡಿ ಮುಗಿಸಿ ಬಂದ ವಿಶ್ವನಾಥಯ್ಯ, ಬೆತ್ತದ ಒರಗು ಕುರ್ಚಿಯಲ್ಲಿ ಆಸೀನರಾದರು.
ವಾರ್ತೆ ಬರತೊಡಗಿತೆಂದು ರೇಡಿಯೋಗೆ ವಿಶ್ರಾಂತಿ ಕೊಟ್ಟಿದ್ದಳು ಮಗಳು. ತಾವು ಇನ್ನು ವಾರ್ತೆ ಕೇಳುವ ಅಭ್ಯಾಸ ಮಾಡಬೇಕು. ಸಂಜೆಯವರೆಗೂ ಹೊತ್ತು ಕಳೆಯಬೇಕಲ್ಲ ಇನ್ನು? ಹೇಗೆ ? ಹೇಗೆ?
“ಗಿರಿಜಾ, ಅದು ಯಾವ ಪುಸ್ತಕ ನಿನ್ನ ಕೈಲಿರೋದು?”
“ಯಾವುದೋ ಕಾದಂಬರಿ ಅಣ್ಣಯ್ಯ.”
“ಓದ್ತಿದೀಯೇನು?”
“ಹೂಂ.”
“ಚೆನ್ನಾಗಿದೆಯೊ ? ”
“ಹೂಂ.”
“ನೀನು ಓದಿ ಮುಗಿಸಿದ್ಮೇಲೆ ನನಗೂ ಸ್ವಲ್ಪ ಕೊಟ್ಟಿರು.”
ಆ ಮಾತು ಕೇಳಿಸಿದ ಅವರಾಕೆ ಪರಿಹಾಸ್ಯದ ಧ್ವನಿಯಲ್ಲಿ ಅಂದರು:
“ನೀವೂ ಕಥೆ ಪುಸ್ತಕ ಹಿಡಿಕೊಂಡು ಕೂತ್ಬಿಡಿ. ಸರಿಹೋಗುತ್ತೆ ಅಲ್ಲಿಗೆ ! ಏಳಿ, ಸ್ನಾನ - ಪೂಜೆ ಯೋಚ್ನೆ ಮಾಡಿ. ಎಲ್ಲಿಗೋ ಹೋಗ್ಬೇಕು ಅಂದಿದ್ರಲ್ಲ? ”
ಪ್ರಶ್ನಾರ್ಥಕ ನೋಟದಿಂದ ಗಿರಿಜಾ ನೋಡಿದಳು. ಆ ನೋಟವನ್ನು ಇದಿರಿಸದೆ ವಿಶ್ವನಾಥಯ್ಯ ಅ೦ದರು :
“ಇವತ್ತು ಬೇಡ, ಭಾನುವಾರ ಹೋಗ್ತಿನಿ. ಸಿಕ್ಕಿಯೇ ಸಿಗ್ತಾರೆ.”
ಭಾನುವಾರ, ಅಂತಹ ಅಲೆದಾಟಕ್ಕೆಲ್ಲ ಹಿಂದೆ ಇದ್ದುದು ಅದೊಂದೇ ದಿನ. ಈಗ ವಾರದ ಏಳು ದಿನಗಳೂ ಭಾನುವಾರಗಳೇ. ಆದರೂ ಹಿಂದಿನ ರೂಢಿಗೆ ಅಂಟಿಕೊಳ್ಳುವ ಆಸೆ.
ಅಲ್ಲದೆ, ಅವರಾದರೂ ಸಿಗಬೇಕಲ್ಲ? ಸಿಕ್ಕಿದರೂ ಕಾರ್ಯಗಂಡಾಗುತ್ತದೆನ್ನುವ ಭರವಸೆ ಏನು? ಹೆಣ್ಣು ಹೆತ್ತಮೇಲೆ ತಪ್ಪಿದ್ದಲ್ಲ ಈ ಸಂಕಟ_
ಕತ್ತು ತುರಿಸಲೆಂದು ಕೈ ಎತ್ತಿದ ವಿಶ್ವನಾಥಯ್ಯ ಗಲ್ಲವನ್ನು ಮುಟ್ಟಿ ನೋಡಿದರು. ಕೆನ್ನೆಗಳ ಮೇಲೂ ಕೈಯಾಡಿಸಿದರು. ಮುಖಕ್ಷೌರ ಮಾಡಿಕೊಂಡರಾದೀತೆನಿಸಿತು.
ಇನ್ನು ಬ್ಲೇಡ್ ಎಲ್ಲಿಯದು?– ಕ್ಷೌರಿಕನ ಕತ್ತಿಯೊಂದನ್ನು ಮಾಡಿಸಿ ಇಟ್ಟು ಕೊಳ್ಳುವುದೇ ಯೋಗ್ಯ.
ಮೆಲ್ಲನೆದ್ದು, ಕನ್ನಡಿಯಲ್ಲಿ ಇಣಿಕಿನೋಡಿದಾಗ, ನರೆಗಡ್ಡ ಆವರಿಸಿದ್ದ ಮುಖ ಸೊರಗಿದ್ದಂತೆ ಕಂಡಿತು.
ಒಂದು ವಾರದೊಳಗೇ ಇಷ್ಟೊಂದು ಮುದಿತನ ಅಡರಿತೋ ಹೇಗೆ?
ಬಿಸಿ ನೀರು ತಂದು, ಸೋಪು ಹಚ್ಚಿ, ಗಾಜಿನ ಸಾಣೆಗಲ್ಲಿನ ಮೇಲೆ ಬ್ಲೇಡು ತೀಡಿದ ಬಳಿಕ, ಬಲು ನಿಧಾನವಾಗಿ ಮುಖ ಕ್ಷೌರ. ಅದು ಮುಗಿದಾಗ, ಯೌವನದ ಹುರುಪು ಮರುಕಳಿಸಿದಂತೆ ಅವರಿಗೆ ತೋರಿತು. ಆದರೆ, ತಲೆಗೂದಲ ತುಂಬಾ ನೂರಾರು ಬೆಳ್ಳಿ ಗೆರೆಗಳು, ಬలు ತೆಳು. ಈ ಕೆಲ ವರ್ಷಗಳಿಂದ ಒಂದೇ ಸಮನೆ ಉದುರುತ್ತ ಬಂದಿವೆ. ಇನ್ನು ಹಲ್ಲುಗಳೂ ಉದುರಬಹುದು ಒಂದೊಂದಾಗಿ....
ಬಿಸಿಲೇರಿದ ಬಳಿಕ ಪ್ರಾತರ್ವಿಧಿಗಳು.
"ಎಣ್ಣೆ ಹಚ್ಚಲೇನು?”
"ಬೇಡ ಮಹಾರಾಯಿತಿ.”
ಬಿಸಿನೀರಿನ ಸ್ನಾನ.
ಸ್ನಾನದ ಬಳಿಕ ಪೂಜೆ ... ನಿತ್ಯದ ಗಡಿಬಿಡಿಯಲ್ಲಿ ದೇವರಿಗೆ ಎಷ್ಟೊಂದು ಅನ್ಯಾಯ ಮಾಡಿಲ್ಲ! ಇನ್ನು ಸಾವಕಾಶವಾಗಿ-ಬಲು ಸಾವಕಾಶವಾಗಿ -ಮಂತ್ರ ಜಪಿಸಬಹುದು.
ಪ್ರಸಾದನಿಂದ ಪತ್ರಬಂದು ಹತ್ತು ದಿನಗಳಾದುವು. ಆಗಾಗ್ಗೆ ಬರೆಯ ಬಾರದೆ ಇವನು? ತಂದೆಗೆ ಬರೆದರೆ ನಾಲ್ಕೇ ಸಾಲು. ಬರಿಯ ಒಣ ಕ್ಷೇಮ ಸಮಾಚಾರ. ತಂಗಿಗೆ ಬರೆದರೆ ನಾಲ್ಕಾರು ಪುಟಗಳು. ರೂ ರ್ ಕೆ ಲಾ ಕಾರಖಾನೆ ಯೋಜನೆ ಕಾರ್ಯಗತವಾಗುತ್ತಿರುವುದು ತನ್ನೊಬ್ಬನಿಂದಲೇ ಎನ್ನುವ ಹಾಗೆ. ಯೌವನದ ಹುಚ್ಚುಚ್ಚಾರ. ತಾನೂ ಒಮ್ಮೆ ಯುವಕನಾಗಿದ್ದೆ. ಗುಮಾಸ್ತೆಯಾಗಿ ಕೆಲಸಕ್ಕೆ ಸೇರಿ ಶಿರಸ್ತೇದಾರನಾಗಿ ನಿವೃತ್ತನಾದೆ. ಆದರೆ, ಮೈಸೂರು ಸರಕಾರ ನಡೆಯುತ್ತಿರುವುದು ತನ್ನಿಂದಲೇ ಅಂತ ಯಾವತ್ತಾದರೂ ಭ್ರಮಿಸಿದ್ದೆನೇನು? ಹುಡುಗು ಬುದ್ಧಿ...
ಛೆ, ಇದೇನು? ಪೂಜೆಗೆಂದು ಕುಳಿತರೆ, ಈ ಯೋಚನೆ ?
“ಲೇ ಅಡುಗೆ ಆಯ್ತೇನು?”
ತಾಯಿ ಮತ್ತು ಮಗಳು ನಕ್ಕರು. ಅಭ್ಯಾಸ ಬಲದಿಂದ ತಾನು ಆ ಪ್ರಶ್ನೆ ಕೇಳಿದೆನೆಂದು ಮೋಜೆನಿಸಿತ್ತು ಅವರಿಗೆ.

****

"ಇನ್ನಾದರೂ ಮಧ್ಯಾಹ್ನದ ಹೊತ್ತು ಊಟಮಾಡಬಾರದೆ?”
“ಆಗಲಿ ಆಗಲಿ...”
ಟ್ರಿಣ್, ಟ್ರಿಣ್ ... ಸೈಕಲ್ ಬೆಲ್. ಪೂಜೆ ಮುಗಿಸಿ ಹೊರಬಂದ ವಿಶ್ವನಾಥಯ್ಯನವರ ಕೈಗೆ ಪೇಪರ್ ಸಿಕ್ಕಿತು. ಪ್ರಸಾದ ಬಿ. ಇ. ಮುಗಿಸಿ ಉದ್ಯೋಗ ದೊರೆತು ಉತ್ತರ ಭಾರತಕ್ಕೆ ಹೋಗಿ, ಹಣ ಕಳುಹತೊಡಗಿದಂದಿನಿಂದ ಈ ಪತ್ರಿಕೆ ಬರುತ್ತಿತ್ತು. ಸಾಹೇಬರು ತರಿಸುತ್ತಿದ್ದುದು ಮದರಾಸಿನ ಆ ಪತ್ರಿಕೆಯನ್ನೇ. ಹೀಗಾಗಿ ವಿಶ್ವನಾಥಯ್ಯನವರೂ "ಅದೇ ಸರಿ” ಎಂದಿದ್ದರು . . .
" ಅಣ್ಣಯ್ಯ, ನರಸಿಂಗರಾಯರ ಮೊಮ್ಮಗ ಬಂದಿದ್ಧಾನೆ. ಪೇಪರ್ ಬೇಕಂತೆ.”
ಸಾಕಷ್ಟು ಹಿರಿಯ ಹುದ್ದೆಯಲ್ಲಿದ್ದು ನಿವೃತ್ತನಾದ ಮನುಷ್ಯ ಆತ. ಅದೇ ಬೀದಿಯಲ್ಲಿ ಮನೆ ಕೊಂಡುಕೊಂಡು ತಳವೂರಿದ್ದರು. ಬೇಕಷ್ಟು ದುಡ್ಡಿದ್ದ, ದುಡ್ಡು ಮಾಡಿದ್ದ, ವ್ಯಕ್ತಿ. ಆದರೆ ಪರಮ ಲೋಭಿ.
"ಈಗ ನಾನೂ ಮನೇಲೇ ಇದೀನಿ ಅ೦ತ ಹೇಳಿ ಕಳಿಸು !”
ಪಕ್ಕದ ಮನೆಯ ಪತ್ರಿಕೆಯಿಂದಲೇ ಇವರ ಪ್ರಪಂಚಜ್ಞಾನ ವೃದ್ಧಿಯಾಗಬೇಕು, ಹು೦ !
ವಿಶ್ವನಾಥಯ್ಯ ಪತ್ರಿಕೆ ಓದತೊಡಗಿದರು. ಅರ್ಧ ಓದಿ ಊಟಕ್ಕೆದ್ದರು. ಊಟದ ಬಳಿಕ ಓದಿ ಮುಗಿಸಿದರು. ನರಸಿಂಗರಾಯರ ಮೊಮ್ಮಗ ಮತ್ತೆ ಬಂದಾಗ, ಪತ್ರಿಕೆಯನ್ನು ರಭಸದಿಂದಲೆ ಮಡಚಿ ಹುಡುಗನೆಡೆಗೆ ತಳ್ಳಿದರು.
ಮನಸ್ಸು ಎಲ್ಲಿಗೋ ಹಾರಾಡಿ ಅಠಾರಾ ಕಚೇರಿಯ ಸುತ್ತುಸುತ್ತು ಸುಳಿಯುತ್ತಿತ್ತು. ಕೆಂಪು ಕಟ್ಟಡದಿಂದ ವಿಧಾನಸೌಧಕ್ಕೆ ಅವರು ಸ್ಥಾಳಾಂತರ ಹೊಂದಿರಲಿಲ್ಲ. ವೇತನ ಹೆಚ್ಚುವುದಕ್ಕೆ ಮುನ್ನವೇ నిವೃತ್ತರಾಗಿದ್ದರು. ತಾನು ಕೈ ಓಡಿಸಿದ್ದ ತನ್ನ ಹಸ್ತಾಕ್ಷರವಿದ್ದ, ಆ ಫೈಲುಗಳೆಲ್ಲ ಎಲ್ಲಿವೆಯೊ ಈಗ? ಹತ್ತಾರು ಕಡೆಗಳಿಂದ ಹೊಸಬರು ಬಂದು ಅಠಾರಾ ಕಚೇರಿಯ ವಾತಾವರಣವೇ ಬದಲಾಗಿತ್ತು-ಬದಲಾಗಿತ್ತು . . .
ಪ್ರಸಾದ ಬರೆಯುತಿದ್ದುದೂ ಅದನ್ನೇ. "ಊರುಬಿಟ್ಟು ಇಷ್ಟು ದೂರ ಬಂದೆನೆಂದು ನನಗೆ ಸಂತೋಷವಾಗಿದೆ. ನಾಳೆ ಇಲ್ಲೇ ನನಗೆ ಕೆಲಸ ಖಾಯ೦ ಆಗಬಹುದು. ವಿದೇಶ ವ್ಯಾಸಂಗಕ್ಕೂ ಅವಕಾಶವಿರಬಹುದು. ದೇಶಕ್ಕೆ ಉಪಯುಕ್ತನಾದ ಮನುಷ್ಯನಾಗಿದೇನೆ ಎಂದು ನನಗೆ ಸಮಾಧಾನ..."
ಸಮಾಧಾನವೇ! ತಾನು ಕೂಗಿದರೆ ಸಾಕು ಲೋಕಕ್ಕೆಲ್ಲ ಬೆಳಕು.
“ನೀನೂ ಯಾವುದಾದರೂ ಕೆಲಸಕ್ಕೆ ಸೇರಿಕೊ ಗಿರಿಜಾ.”
ತನ್ನದು ಸಾಲದೆಂದು ತಂಗಿಗೂ ಹಿತಬೋಧೆ ಬೇರೆ!
ಪ್ರಸಾದನಿಗೆ ಮದುವೆ ಬೇಡವಂತೆ–ಈಗಲೇ ಬೇಡವಂತೆ. ಸರಿ. ನಾಳೆ ಯಾರನ್ನೋ ಕಟ್ಟಿಕೊಂಡ ಅಂದರೆ ಅಲ್ಲಿಗಾಯಿತು. ಹೇಗೂ ಕಟ್ಟುತ್ತಿರುವುದು ಜಾತ್ಯತೀತ ರಾಷ್ಟ್ರತಾನೆ? ಹಿಂದಿನವರು ಉಚ್ಚ ಶಿಕ್ಷಣಕ್ಕೆಂದು ವಿಲಾಯತಿಗೆ ಹೋಗಿ ದೊರೆಸಾನಿಗಳ ಜೊತೆ ಬರುತ್ತಿದ್ದರು. ಈಗಿನವರು ಅವೆುರಿಕದಿ೦ದಲೋ ರಷ್ಯದಿಂದಲೋ ತಂದರಾಯಿತು. ಹುಚ್ಚಶಿಕ್ಷಣ, ಹುಂ. ಎದುರು ನಿಂತಾಗ ಪ್ರಸಾದ ಮಿತಭಾಷಿ. ತಂದೆ ಎನ್ನುವ ಪ್ರಾಣಿ ದೂರದ ಸಂಬಂಧವೇನೋ ಎನ್ನುವ ಹಾಗೆ. ಪರವೂರು ಸೇರಿದ್ದೇ ತಡ, ಹೇಗೆ ಬಲಿತುಕೊಂಡುವು ರೆಕ್ಕೆಗಳು!
ಮಗಳ ವಿಷಯದಲ್ಲಂತೂ ತಾನು ತೋರಿಸಿದ ಔದಾರ್ಯ ಹೆಚ್ಚಾಯಿತು. ಐದಾರು ವರ್ಷ ಹಿಂದೆಯೇ ಯಾರಿಗಾದರೂ ಕೊಟ್ಟುಬಿಟ್ಟಿದ್ದರೆ ಇಂತಹ ಪರಿಸ್ಥಿತಿ ಒದಗುತ್ತಿತ್ತೆ? ಮದುವೆಯ ಮಾರುಕಟ್ಟೆಗೆ ಇಂಟರ್ ಮೀಡಿಯೆಟ್ ಕನಿಷ್ಠ ವಿದ್ಯೆ ಅಂತ ಓದಿಸಿದ್ದಾಯ್ತು. ಗಿರಾಕಿ ಕುದುರಲಿಲ್ಲಿ ಮನೆಯಲ್ಲಿದ್ದು ಮಾಡುವುದೇನು ಅಂತ ಮುಂದೆಯೂ ವಿದ್ಯಾಭ್ಯಾಸ. ಪದವೀಧರೆ ಹೆಣ್ಣು. ಪದವೀಧರನಾದ ಗಂಡೇ ಬೇಕು ತಾನೇ?
ಎಂಥ ವಿಚಾರಗಳು ಈಗೆಲ್ಲ! ವಿವಾಹ ವಿಚ್ಛೇದನಕ್ಕೆ ಅವಕಾಶವಿದೆ ನಮ್ಮಲ್ಲಿ. ಆದರೆ ವಿವಾಹಕ್ಕೆ ಅವಕಾಶವಿಲ್ಲ. ಆಸ್ತಿಯಲ್ಲಿ ಗಂಡುಮಕ್ಕಳು ಹೆಣ್ಣಮಕ್ಕಳು ಇಬ್ಬರಿಗೂ ಸಮಪಾಲು. ಹಂಚುವುದಕ್ಕೆ ಆಸ್ತಿ ಮಾತ್ರ ನಾಸ್ತಿಯೆ!
ಮಗಳನ್ನೊಮ್ಮೆ ಸಾಗಹಾಕಿ ಕನ್ಯಾಸೆರೆ ಬಿಡಿಸಿಕೊಂಡು, ಸೊಸೆಯೊಬ್ಬಳನ್ನು ಮನೆಗೆ ತರುವಂತಾದರೆ–
ಸುತ್ತಮುತ್ತೆಲ್ಲ ಸಾಗರ. ನಡುಗಡ್ಡೆಯ ಮೇಲೆ ನಿಂತು ವಿಶ್ವನಾಥಯ್ಯ ಯೋಚಿಸಿದ್ದರು: ಈ ಜಲರಾಶಿಯನ್ನು ದಾಟಿ ದಂಡೆಯನ್ನು ಹೇಗೆ ಸೇರಲಿ? ಹೇಗೆ ಸೇರಲಿ?
ಒಳಬಾಗಿಲಲ್ಲಿ ನಿಂತು ಗಂಡನನ್ನು ಉದ್ದೇಶಿಸಿ ಅವರಾಕೆ ಅಂದರು :
" ಸ್ವಲ್ಪ ಹೊತ್ತು ಮಲಗಿ ವಿಶ್ರಾಂತಿನಾದರೂ ತಗೋಬಾರದೆ ? "
ಹಗಲು ಹೊತ್ತು ನಿದ್ದೆ. ಎಂದೂ ಮಾಡದಿದ್ದವರು ಇನ್ನು ಈ ಕಡೆಗಾಲದಲ್ಲಿ . . .
“ ಛೆ! ಛೆ!” ಎಂದರು ವಿಶ್ವನಾಥಯ್ಯ, ಮೈಮೇಲೆ ಎರಗಬಯಸಿದ ನೊಣವನ್ನು ಝಾಡಿಸುವವರಂತೆ.
ಅವರು ಎದ್ದು ಶತಪಥ ತುಳಿದರು. ಕೋಟು ಅವರನ್ನು ಅಣಕಿಸಿತು. ಬಡ ಸೈಕಲು ಅವರೆಡೆಗೆ ಕಾತರದ ನೋಟ ಬೀರಿತು.
ಕಪಾಟದ ಬಳಿ ನಿಂತು ಗೊತ್ತು ಗುರಿ ಇಲ್ಲದೆ ಕದ ತೆರೆದಾಗ 'ಗೀತಾ ರಹಸ್ಯ'ದ ಒಂದು ಪ್ರತಿ ವಿಶ್ವನಾಥಯ್ಯನವರ ಕಣ್ಣಿಗೆ ಬಿತ್ತು. ಒಂದು ವರ್ಷದ ಹಿಂದೆ ಕೊಂಡು ತಂದಿದ್ದರೂ ಓದಲು ಬಿಡುವು ದೊರೆತಿರಲಿಲ್ಲ. ಈಗ ಓದೋಣವೆಂದು ಕೈಗೆತ್ತಿಕೊಂಡು ಮಂಚದ ಮೇಲೆ ಪವಡಿಸಿದರು. ಅಲ್ಲಿಯೇ ಅವರಿಗೆ ಜೊಂಪುಹತ್ತಿತು.

****

ಅವರು ಎಚ್ಚೆತ್ತಾಗ ಸಂಜೆಯಾಗಿತ್ತು. ಎದ್ದ ಗಂಡನನ್ನು ನೋಡಿ ಮುಗುಳು ನಕ್ಕು, ಹೆಂಡತಿ ಕಾಫಿ ತಂದುಕೊಟ್ಟರು.
"ಗಿರಿಜಾ ಎಲ್ಲಿ?"
"ಸಮಾಜಕ್ಕೆ ಹೋಗಿದಾಳೆ.”
"ಸರಿ!"
ಚೀಲ ತಂದು ಕೊಡ್ತೀನಿ. ಮಾರ್ಕೆಟ್ ಕಡೆ ಹೋಗಿ ಬ‍‍‍‍ರ್ತೀರಾ?"
"ಓಹೋ!"
ಪೋಷಾಕು ಧರಿಸಿ ಸೈಕಲಿನ ಗೊಡವೆಗೆ ಹೋಗದೆ ಕಾಲ್ನಡಿಗೆಯಲ್ಲೇ ವಿಶ್ವನಾಥಯ್ಯ ಹೊರಟರು. ಎಂತಹ ಜನಜಂಗುಳಿ ಬೀದಿಯಲ್ಲಿ! ಅల్ల! ಹೇಗಿದ್ದ ಬೆಂಗಳೂರು ಹೇಗಾಗಿ ಹೋಯಿತು ಅಂತ ! ಇಷ್ಟೊಂದು ಕಾರುಗಳು ಮೊದಲು ಇದ್ದುವೆಲ್ಲಿ? ನಾನಾ ತರಹೆ ಜೀವನ ವೈಖರಿ . . . ಇಪ್ಪತ್ತನೆಯ ಶತಮಾನ. ಎಲ್ಲರೂ ನಾಗರಿಕರೇ. ಮೊನ್ನೆ ಯಾವನೋ ತತ್ವಜ್ಞಾನಿ ಹೇಳಿದನಲ್ಲವೆ? 'ಚಂದ್ರಲೋಕ ವಾಸಯೋಗ್ಯವೆ ಅಂತ ಸಂಶೋಧನೆ ನಡಸಿದಾರೆ; ಭೂಲೋಕದಲ್ಲಿ ವಾಸ ಸಾಧ್ಯವೆ ಅಂತ ಅವರು ಮೊದಲು ಹೇಳಬೇಕು.' ಮುತ್ತಿನಂತಹ ಮಾತು.
"ನಮಸ್ಕಾರ ವಿಶ್ವನಾಥಯ್ಯ."
" ನಮಸ್ಕಾರ ಸಾರ್.”
[ ಈ ಸಾರ್ ಬಿಡಲೊಲ್ಲದು. ಯಾರಪ್ಪಾ ? ನರಸಿಂಗರಾಯರು !]
"ಯಾವ ಕಡೆ ಹೊರಟಿದೀರಿ?"
“ಮಾರ್ಕೆಟ್ಟಿಗೆ.”
"ನಾನೂ ಅಲ್ಲಿಗೇನೇ. ನಡೀರಿ, ಹೋಗೋಣ.”
[ಸಿಕ್ಕಿಬಿದ್ದೆ. ಸುಳ್ಳು ಹೇಳಿ ತಪ್ಪಿಸಿಕೊಳ್ಳಬೇಕಾಗಿತ್ತು.]
ನಿವೃತ್ತ ಮನುಷ್ಯನಿಗೆ ನಿವೃತ್ತ ಮನುಷ್ಯನೇ ಜತೆ ಎಂದುಕೊಂಡು ವಿಶ್ವನಾಥಯ್ಯ ಅಸಹಾಯರಾಗಿ ಅನಿವಾರ್ಯವಾಗಿ ನರಸಿಂಗರಾಯರೊಂದಿಗೆ ಹಾದಿ ನಡೆದರು.

****

ಲೋಕಾಭಿರಾಮ ಮಾತುಗಳನ್ನಾಡುತ್ತ ಸಂಜೆಯನ್ನು ಕಳೆದು ಮನೆಗೆ ಮರಳಿದರು ವಿಶ್ವನಾಥಯ್ಯ.
ಮಗಳನ್ನು ಅವರು ಕೇಳಿದರು:
"ಎಷ್ಟು ಹೊತ್ತಾಯ್ತು ಬಂದು?"
"ಆಗಲೆ ಬಂದೆ, ಅಣ್ಣಯ್ಯ.”
ಊಟಕ್ಕೆ ಕುಳಿತಾಗ ವಸ್ತುಸ್ಥಿತಿಯ ಚಿಂತೆ ಮತ್ತೆ ವಿಶ್ವನಾಥಯ್ಯನವರನ್ನು ಕಾಡಿತು.
ಕೈ ತೊಳೆಯುವಾಗ ಅವರೆಂದುಕೊಂಡರು : ಯೋಚಿಸುತ್ತಾ ಕಾಲ ಕಳೆಯುವುದರಲ್ಲಿ ಅರ್ಥವಿಲ್ಲ. ಏನನ್ನಾದರೂ ತಾನು ಮಾಡಲೇ ಬೇಕು. ಗಿರಿಜೆಯ ವಿವಾಹ ತಡವಾಗಬಾರದು. ಹುಟ್ಟಿ ಬೆಳೆದ ಊರು ಬಿಟ್ಟು ಸಾವಿರ ಮೈಲು ಆಚೆ ಮಗನ ಜೊತೆ ತಾವು ವಾಸಮಾಡುವುದು, ಆಗದ ಮಾತು. ಪ್ರಸಾದ ತಮ್ಮ ಬಳಿಯಲ್ಲೇ ಇರಬೇಕು. ಇಲ್ಲೇ ಆತನಿಗೆ ಕೆಲಸ ದೊರಕಿಸಿ ಕೊಡಬೇಕು. ಸೊಸೆ ಮನೆಗೆ ಬರಬೇಕು. ಅಷ್ಟು ಮಾಡುವುದು ತನ್ನಿಂದ ಆಗಲಾರದೇನು?
ರಾತ್ರಿ ದಿಂಬಿಗೆ ತಲೆ ಸೋಂಕಿದಾಗ, ಮಗನನ್ನು ಬೇಗನೆ ಕಂಡು ಮಾತನಾಡಬೇಕೆಂಬ ಬಯಕೆ ಅವರಿಗೆ ಬಲವಾಯಿತು. ಭಾನುವಾರಕ್ಕೆಂದು ತಾನು ಮುಂದೆ ತಳ್ಳಿದ್ದ ಮಾತುಕತೆಯ ನೆನಪಾಗಿ, ತಮ್ಮ ಆಸೆ ಈಡೇರುವುದೆಂಬ ನಂಬಿಕೆ ಮೊಳೆಯಿತು. ಮಾರನೆಯ ದಿನ ಮಗನಿಗೆ ಕಳುಹಬೇಕಾದ ತಂತಿಯನ್ನು ವಿಶ್ವನಾಥಯ್ಯ ಮನಸ್ಸಿನಲ್ಲೆ ರೂಪಿಸಿದರು.
"ತಂದೆಗೆ ಸಕತ್ ಕಾಹಿಲೆ ತಕ್ಷಣ ಹೊರಟು ಬಾ, ಗಿರಿಜಾ.”
[ಹೌದು, ಗಿರಿಜೆಯ ಹೆಸರು ಕೊನೆಯಲ್ಲಿ.]
ವಿಶ್ವನಾಥಯ್ಯನವರ ದೃಷ್ಟಿ ತಾರಸಿ ಛಾವಣಿಯತ್ತ ಹೊರಳಿತು. ತೊಟ್ಟಿಲುತೂಗುವ ಕರಿದುಕೊಂಡಿಗಳು ಕೆಳಮೊಗವಾಗಿ ಅವರನ್ನೇ ನೋಡುತ್ತಿದ್ದುವು.

ಪ್ರಸಾದ ಊರಿಗೆ ಬಂದ. ಆತ ಬೆಂಗಳೂರನ್ನು ತಲಪಿದುದು ಬೆಳಗಿನ ಜಾವ.
ಆ ಹಿಂದಿನ ರಾತ್ರಿ ವಿಶ್ವನಾಥಯ್ಯನವರಿಗೆ ಚೆನ್ನಾಗಿ ನಿದ್ರೆ ಬಂದಿರಲಿಲ್ಲ. ಅಸ್ವಾಸ್ಥ್ಯದಿಂದಲ್ಲ, ಯೋಚನೆಯಿಂದ. ಮೂರು ಘಂಟೆಗೆ ಎಚ್ಚರವಾಗಿತ್ತು. ದೀಪ ಹಾಕಿಕೊಂಡು, ಚಾದರ ಹೊದೆದು, ಜಗಲಿಯಲ್ಲಿ ಆರಾಮ ಕುರ್ಚಿಯ ಮೇಲೆ ಕುಳಿತು ಹೊತ್ತು ಕಳೆದಿದ್ದರು.
ಅವರಾಕೆಗೂ ಬೇಗನೆ ಎಚ್ಚರವಾಯಿತು.
“ ಯಾಕೇಂದ್ರೆ ಹೀಗೆ ಕೂತ್ಬಿಟ್ಟಿದೀರಿ?"-ಎಂದರು.
"ಯಾಕಿಲ್ಲ-ಸುಮ್ನೆ,” ಎಂದರು ವಿಶ್ವನಾಥಯ್ಯ ಚುಟುಕಾಗಿ.
"ಇವತ್ತು ಪ್ರಸಾದು ಬರಬೌದು, ಅಲ್ವೆ?”
"ಹೂಂ."
ನಸುಕಿನಲ್ಲಿ ಟ್ಯಾಕ್ಸಿ ಮನೆ ಮುಂದೆ ನಿಂತಿತು. ಬಂದವನು ಪ್ರಸಾದ ಎಂಬುದನ್ನು ವಿಶ್ವನಾಥಯ್ಯ ಊಹಿಸಿಕೊಂಡರು.
ಅವರಾಕೆ ಬಾಗಿಲನ್ನು ತೆರೆದು, "ಬಾಪ್ಪಾ,” ಎಂದು ಮಗನನ್ನು ಸ್ವಾಗತಿಸುತ್ತಿದ್ದಂತೆ, ವಿಶ್ವನಾಥಯ್ಯ ಮನಸ್ಸಿನಲ್ಲೆ ಅಂದುಕೊಂಡರು :
"ದುಂದು ವೆಚ್ಚ. ನನ್ನ ಕಾಲದಲ್ಲಿ ರೈಲ್ವೆ ಸ್ಟೇಶನಿಂದ ನಡಕೊಂಡು ಬರ್‍ತಿದ್ದೆ. ಈತನ ಕೈಯಲ್ಲಿ ಅದಾಗದಿದ್ದರೆ ಜಟಕಾದಲ್ಲಾರೂ ಬರಬಹುದಿತ್ತಲ್ಲ. ಟ್ಯಾಕ್ಸಿಗೆ ದುಡ್ಡು ಸುರೀತಾನಲ್ಲಾ."
ಒಳಗೆ ಬಂದ ಪ್ರಸಾದ ನುಡಿದ:
“ ಈಗ ಹ್ಯಾಗಿದೆ ಅಣ್ಣಯ್ಯ?”
ಇವನ ದೃಷ್ಟಿಯಲ್ಲಿ ತಾವು ರೋಗಿ ಎಂಬುದು ವಿಶ್ವನಾಥಯ್ಯನಿಗೆ ಥಟ್ಟನೆ ಮನವರಿಕೆಯಾಗಿ, ಒಳಗಿಂದೊಳಗೆ ನಕ್ಕು, ಬಾಹ್ಯವಾಗಿ ಸಪ್ಪೆ ಮುಖದಿಂದಿದ್ದು, “ ಊಂ. . . ಹೂಂ . . .” ಎಂದು ರಾಗಹೊರಡಿಸಿ, ಅಸ್ಪಷ್ಟವಾಗಿ ಏನನ್ನೋ ಗೊಣಗಿದರು.
ಧರ್ಮಪತ್ನಿ ಕೈಕೊಡಬೇಕೆ?
ಕೊಟ್ಟ ತಂತಿಯ ಒಕ್ಕಣೆಯನ್ನು ಗಿರಿಜೆಯಿಂದ ತಿಳಿದಿದ್ದರೂ ಆಕೆ ಅಂದರು:
"ಅವರಿಗೇನಾಗೆದೆ?"
ಪ್ರಸಾದ ತಿವಿಯುವ ನೋಟದಿಂದ ತಂದೆಯನ್ನು ನೋಡಿದ.
ವಿಶ್ವನಾಥಯ್ಯ ಪತ್ನಿಯನ್ನು ದುರದುರನೆ ದಿಟ್ಟಿಸಿ, "ಪೂರ್ತಿಮಾಡು. ಧಾಡಿ-ಅಂತ," ಎಂದು ಗುಡುಗಿದರು.
ಪ್ರಸಾದ ದಡದಡನೆ, ಹಿಂದೆ ತನ್ನದಾಗಿದ್ದ ಈಗ గిరిಜೆ ಬಳಸುತ್ತಿದ್ದ. ಕೊಠಡಿಗೆ ಸೂಟ್ ಕೇಸ್-ಕಿಟ್ ಗಳೊಡನೆ ಹೊರಟು ಹೋದ.
ಘಂಟೆಗಳು ಕಳೆದರೂ ಪ್ರಸಾದನ ಸಿಟ್ಟು ಇಳಿಯುವ ಲಕ್ಷಣ ಕಾಣಿಸಲಿಲ್ಲ.
ವಿಶ್ವನಾಥಯ್ಯನವರು ಸ್ನಾನ ಪೂಜೆ ಪತ್ರಿಕೆಗಳಲ್ಲಿ ನಿರತರಾಗಿದ್ದರು. ಊಟಕ್ಕೆ ಮುನ್ನ ಪ್ರಸಾದ ಮನೆಯಿಂದ ಹೊರಬೀಳುವ ಸಿದ್ಧತೆಯಲ್ಲಿದ್ದುದನ್ನು ಕಂಡ ಅವರು, ಕನ್ನಡಕವನ್ನು ಮೂಗಿನ ತುದಿಗಿಳಿಸಿ ಕತ್ತು ಬಾಗಿಸಿ బరిಯ ಕಣ್ಣುಗಳಿಂದ ಮಗನನ್ನು ನೋಡಿ ಅ೦ದರು:
"ಎಲ್ಲಿಗೆ ಇಷ್ಟೊತ್ನಲ್ಲಿ?”
ಹೊಸ್ತಿಲ ಮೇಲೆ ನಿಂತು ಪ್ರಸಾದ ನುಡಿದ :
"ಟಿಕೆಟು ಕೊಳ್ಳೋಕೆ! ವಾಪಸು ಹೋಗ್ಬೇಕಲ್ಲ? ಸುಳ್ಳು ತಂತಿ ಕೊಟ್ಟು ಕರೆಸಿದಿರಿ. ಸಂತೋಷವಾಯ್ತು ತಾನೆ? ನನಗೆ ರಜಾ ಇಲ್ಲ. ನಾನು ಹೊರಡ್ಬೇಕು.”
ವಿಶ್ವನಾಥಯ್ಯನವರ ಸುಕ್ಕುಗಟ್ಟಿದ ಮುಖದ ಸ್ನಾಯುಗಳು ಮಿಸುಕಿದುವು.
"ಸಾಕು ತಲೆಹರಟೆ !” ಎ೦ದು ಅವರು ಗದರಿದರು.
ತಂದೆ ಮಕ್ಕಳ ಧ್ವನಿ ಕೇಳಿ ಪ್ರಸಾದನ ತಾಯಿ ಹೊರಬಂದರು.
“ಊಟಕ್ಕಾಯ್ತು ಅಂದ್ರೆ . . . "
ಹೊರಬೀಳಲೋ ಬೇಡವೋ ಎಂದು ಪ್ರಸಾದ ಅನಿಶ್ಚತೆಯಿ೦ದ ಕ್ಷಣಕಾಲ ಹೊಯ್ದಾಡಿದ.
ನಿರೀಕ್ಷಿಸುತ್ತಲಿದ್ದ ಮಾತುಕತೆ ಮುಗಿದುಹೋಗಲೆಂದು ಆತ ಮತ್ತೆ ಮನೆಯೊಳಗೆ ಬಂದ.
ಮಾತಿಲ್ಲದ ಗಂಭೀರ ವಾತಾವರಣದಲ್ಲಿ ಊಟ ಮುಗಿಯಿತು.
ಕೈ ಮುಖ ತೊಳೆದುಕೊಂಡು ವಿಶ್ವನಾಥಯ್ಯ ನೇರವಾಗಿ ಜಗಲಿಗೆ ಬಂದು,
" ಪ್ರಸಾದ್, ಇಲ್ಲಿ ಬಾ,"
-ಎ೦ದು ಕರೆದರು.
ಪ್ರಸಾದ ಕೊಠಡಿಯ ಬಾಗಿಲ ಚೌಕಟ್ಟಿನಲ್ಲೊಂದು ಪ್ರತಿಮೆಯಾಗಿ ನಿಂತ.
ಮಗನನ್ನು ನೋಡುತ್ತ ವಿಶ್ವನಾಥಯ್ಯನಿಗೆ ಅನಿಸಿತು:
"ಗಿಡವಾಗಿತ್ತು ಮೊನ್ನೆವರೆಗೆ, ಈಗ ಮರವಾಗಿದೆಯಲ್ಲ . . .”
ಪ್ರಕಾಶವಾಗಿ ಅವರೆಂದರು :
" ನನಗೆ ರಿಟೈರಾಯ್ತು.”
ಬೀಗಿಗೊಂಡಿದ್ದ ಮುಖಭಾವವನ್ನು ಶಿಥಿಲಗೊಳಿಸದೆಯೇ ಪ್ರಸಾದನೆಂದ:
" ಆಗುತ್ತೇಂತ ಆವತ್ತೇ ಬರೆದಿದ್ದಿರಲ್ಲ?”
"ಹ್ಞ. ಇನ್ನು ಮನೆಯ ಜವಾಬ್ದಾರಿ ನೀನು ಹೊತ್ಕೋಬೇಕು.”
"..."
"ಸುಮ್ಮನಿದೀಯಲ್ಲ?"
"ನೀವು ಏನು ಕೇಳ್ತಿದೀರೀಂತ ಸ್ಪಷ್ಟವಾಗಿಲ್ಲ. ತಿಂಗಳಿಗೆ ಈಗ ನೂರು ರೂಪಾಯಿ ನಾನು ಕಳಿಸ್ತಾ ಇಲ್ವೆ ?”
" ದುಡ್ಡು-ದುಡ್ಡು ! ಸಂಸಾರ ಬಂಧನ ಅಂದರೆ ಆರ್ಥಿಕ ವ್ಯವಹಾರ ಅಂತ ತಿಳಿಕೊಂಡೆಯೇನಯ್ಯ?"
ಅಷ್ಟು ಹೇಳಿ ವಿಶ್ವನಾಥಯ್ಯ ಹುಬ್ಬು ಹಾರಿಸಿದರು, ಹಿರಿತನದ ಹೆಮ್ಮೆಯಿಂದ.
ತಂದೆಯ ಮಾತು ವಾತಾವರಣದಲ್ಲಿ ಲೀನವಾದ ಮೇಲೂ ಸ್ವಲ್ಪ ಹೊತ್ತು ಸುಮ್ಮನಿದ್ದು, ಪ್ರಸಾದನೆಂದ :
" ಒಂದು ಮಾತು ಹೇಳ್ತೀನಿ. ಕೋಪಿಸ್ಕೋಬೇಡಿ, ಅಣ್ಣಯ್ಯ. ಐವತ್ತೈದು ಆದರಾಯ್ತು; ಇನ್ನು ಮಾಡುವಂಥಾದ್ದು ಏನೂ ಇಲ್ಲ ಅಂತ ನಮ್ಮ ಜನ ತಿಳಕೋತಾರೆ. ಇದು ಈ ದೇಶದ ದೌರ್ಭಾಗ್ಯ. ಇಲ್ಲದ ಚಿಂತೆ ಕಲ್ಪಿಸಿಕೊಂಡು ನೀವು ಸುಮ್ನೆ ಕೊರಗ್ತೀರಿ. ಎಪ್ಪತ್ತು ದಾಟಿದರೂ ನಿತ್ಯ ದುಡಿಯುವ ವಿದೇಶಿಯರನ್ನ ನಾನು ಕಂಡಿದೇನೆ.”
ವಿಶ್ವನಾಥಯ್ಯನ ಮೂಗು ಕುಣಿಯಿತು. ಸಹನೆಯ ಕಟ್ಟೆಯೊಡೆದು ತಾವಿನ್ನು ಕನಲಿ ರುದ್ರನಾಗುವುದು ಖಂಡಿತ ಎಂದು ಅವರಿಗೆ ಭಾಸವಾಯಿತು. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ಸಿಟ್ಟಿನ ಬತ್ತಳಿಕೆಯಿಂದ ವ್ಯಂಗ್ಯ ಮಾತುಗಳನ್ನು ಆರಿಸಿಕೊಳ್ಳುತ್ತ ಅವರೆಂದರು:
"ವಿದೇಶದಿಂದ ಯಾವತ್ತು ಬಂದೆಯಪ್ಪ?”
ಪ್ರಸಾದನ ಪಾಲಿಗೆ ಇದು ಗೆಲುವಿನ ಘಳಿಗೆ.
"ಮುಂದಿನ ತಿಂಗಳು ಹೊಗ್ತೀನಿ, ಜರ್ಮನಿಗೆ.”
ಅಡಿ ತಪ್ಪಿ ಜೋಲಿ ಹೊಡೆದಂತಾಯಿತು ವಿಶ್ವನಾಥಯ್ಯನವರಿಗೆ.
"ಏನಂದೆ ?”
"ನಮ್ಮ ಸಂಸ್ಥೆಯವರು ಉಚ್ಚ ಶಿಕ್ಷಣಕ್ಕೆ ನನ್ನನ್ನು ಕಳಿಸಬೇಕೂಂತ ರ್ತೀಮಾನಿಸಿದಾರೆ.”
"ಅವರೇ ತೀರ್ಮಾನಿಸಿದರೊ? ಹೆತ್ತ ಹಿರಿಯರು ಮಾಡಬೇಕಾದ ನಿರ್ಧಾರ ಇನ್ನು ಏನೂ ಇಲ್ಲ ಅನ್ನು."
"ಸುದ್ದಿ ಕೇಳಿ ಸಂತೋಷಪಡ್ತೀರಾಂತಿದೆ.”
"ಸಂತೋಷವೇ ಕಣಯ್ಯ. ಎರಡು ವರ್ಷ ಯಾತಕ್ಕೆ? ಇಪ್ಪತ್ತು ವರ್ಷ ಜರ್ಮನೀಲೇ ಇರು.”
ತಬ್ಬಿಬ್ಬಾಗದೆ ಪ್ರಸಾದನೆಂದ:
" ಪ್ರಯಾಣದ ದಿನ ಗೊತ್ತಾದ್ಮೇಲೆ ಒಮ್ಮೆ ಬಂದು ಹೋಗೋಣಾಂತಿದ್ದೆ. ಸರಿ. ತಂತಿಕೊಟ್ಟಿರಿ. ಈಗಲೇ ಬಂದೆ. ಆಶೀರ್ವಾದ ಮಾಡಿ ಕಳಿಸ್ಕೊಡಿ. ಇನ್ನು ಭೇಟಿ ಎರಡು ವರ್ಷ ಆದ್ಮೇಲೆ.”
ಒರಗುವ ಕುರ್ಚಿಯಲ್ಲಿ ವಿಶ್ವನಾಥಯ್ಯನವರ ಮೈ ಮುದುಡಿತು. ಗಂಟಲೊಣಗಿದಂತೆ, ಉಸಿರು ಕಟ್ಟಿದಂತೆ, ಬವಳಿ ಬಂದಂತೆ ಅವರಿಗೆ ಅನಿಸಿತು.
ತಂದೆ ಏನಾದರೂ ಹೇಳಬಹುದೆಂದು ಪ್ರಸಾದ ಎರಡು ನಿಮಿಷ ಕಾದು ನೋಡಿದ. ಅವರ ಮೌನ ಈತನನ್ನು ವಿವಂಚನೆಗೆ ಗುರಿ ಮಾಡಿತು. ತಂದೆಯ ಕುಗ್ಗಿದ ಜೀವವನ್ನು ಕಂಡು ಒಂದು ಕ್ಷಣ ಕನಿಕರವೆನಿಸಿತು. ತಾನು ಹೇಳಿದುದನ್ನು ಜೀರ್ಣಿಸಿಕೊಳ್ಳಲು ಅವರಿಗೆ ಕಾಲಾವಕಾಶಬೇಕು ಎಂದು ತೋರಿ, ಆತ ಒಳಕ್ಕೆ ಸರಿದ.

ಸಂಭಾಷಣೆಯನ್ನು ಕೇಳಿಸಿಕೊಂಡಿದ್ದ ಗಿರಜೆಯ ಮುಖ ಅಲ್ಲಿ ಬೆಳಗುತ್ತಿತ್ತು.
ಅವಳೆಂದಳು:
"ಜರ್ಮನಿಗೆ ನೀನು ಹೋಗೋದು ನಿಜವೆ ಪ್ರಸಾದು? ಓ! ಎಷ್ಟು ಚೆನ್ನಾಗಿರುತ್ತೆ!”
ಪ್ರಸಾದ, ತಂಗಿ ವ್ಯಕ್ತಪಡಿಸಿದ ಪ್ರತಿಕ್ರಿಯೆಗಾಗಿ ತಾನು ಕೃತಜ್ಞ ಎನ್ನುವಂತೆ ನಸುನಕ್ಕ.
ಸಂತಸವನ್ನು ತಾಯಿಗೆ ತಿಳಿಸಲು ಗಿರಿಜೆ ಒಳಕ್ಕೋಡಿದಳು. ಉಣ್ಣುತ್ತ ಕುಳಿತಿದ್ದ ತಾಯಿಯ ಮುಂದೆ ನಿಂತು, “ಅಮ್ಮಾ ! ಪ್ರಸಾದು ಜರ್ಮನಿಗೆ ಹೋಗ್ತಾನಂತೆ,” ಎಂದಳು.
ಮಗಳು ಆಡುತ್ತಿದ್ದ ಮಾತು ವಿಶ್ವನಾಥಯ್ಯನವರಿಗೆ ಕೇಳಿಸುತ್ತಿತ್ತು. ಹುಚ್ಚು ಹುಡುಗಿ-ಎಂದುಕೊಂಡರು ಅವರು.
ಮಗ ವಿದೇಶಕ್ಕೆ ಹೋಗುವನೆಂಬ ವಾರ್ತೆ ಸಿಹಿ ಭಕ್ಷ್ಯವಲ್ಲ-ಎಂದು ತಾಯಿ ಕಾತರಗೊಂಡು, ಬೇಗ ಬೇಗನೆ ಊಟ ಮುಗಿಸಿ ಎದ್ದರು.
ಪರಿಸ್ಧಿತಿ ತನ್ನ ಹಿಡಿತದಲ್ಲಿಲ್ಲ ಎಂದು ವಿಶ್ವನಾಥಯ್ಯನವರಿಗೆ ಸಂಕಟವಾಯಿತು. ಗಿಡವಾಗಿ ಬಗ್ಗಿತ್ತೆ? ಅವರಿಗೆ ನೆನಪಿಲ್ಲ. ಜೀವನದ ದಿನನಿತ್ಯದ ಜಂಜಾಟದಲ್ಲಿ ಮಕ್ಕಳನ್ನು ಕುರಿತು ಅವರು ಹೆಚ್ಚಿನ ಯೋಚನೆಯನ್ನೇ ಮಾಡಿರಲಿಲ್ಲ. ಈಗ ಬಿಡುವಿದೆಯೆಂದು ಮರವನ್ನು ಬಗ್ಗಿಸಲು ಹೊರಟಿದ್ದರು.
ಗಂಟಲು ಗೊಗ್ಗರ ಧ್ವನಿ ಹೊರಡಿಸಿ, "ಪ್ರಸಾದ್,” ಎಂದಿತು.
"ಬಂದೆ ಅಣ್ಣಯ್ಯ."
ಮಗನ ಮಾತಿನಲ್ಲಿ ಮಾರ್ದವತೆಯಿತ್ತು. ತಾನು ಗೆದ್ದುದು ಖಚಿತವಾದಾಗ ಆತ ಉದಾರಿಯಾಗಿದ್ದ.
ಆ ಕಾರಣದಿಂದ, ಬಾಗಿಲ ಚೌಕಟ್ಟಿನೊಳಗೆ ತುಸು ಭಿನ್ನವಾದ ಚಿತ್ರ ಈಗ ಕಂಡಿತು.
ದೈನ್ಯ ನೋಟದಿಂದ ಮಗನನ್ನು ದಿಟ್ಟಿಸಿ ವಿಶ್ವನಾಥಯ್ಯ ಅಂದರು :
"ನೀನು ಹೇಳಿದ್ದೆಲ್ಲ ನಿಜ ಅನ್ನು.”
"ಹುಂ."
"ನಿನ್ನ ತಂಗಿಯ ಮದುವೆಯೊಂದು ಆಗಬೇಕಲ್ಲಪ್ಪ."
"ವರ ಗೊತ್ತಾಗಿದೆಯೆ?”
"ಇಲ್ಲ ಪ್ರಯತ್ನ ಮಾಡ್ತಿದೀನಿ.”
"ಆಗಲಂತೆ, ಏನವಸರ?”
"ಹುಟ್ಟಿಸಿ ದೊಡ್ಡದು ಮಾಡಿದವರಿಗೆ ಒಂದು ಜವಾಬ್ದಾರಿ ಇರುತ್ತೆ ನೋಡು.”
ಮಾತಿನ ಬದಲು ಹುಬ್ಬಗಳ ಪ್ರಶ್ನಾರ್ಥಕ ಚಿಹ್ನೆ.
"ನಿನಗೂ ಹೆಣ್ಣು ನೋಡ್ತಿದೀನಿ."
"ಈಗ್ಲೇ ನಾನು ಮಾಡ್ಕೊಳ್ಳೊಲ್ಲ."
"ಪೂರ್ತಿ ಕೇಳಯ್ಯ. ಗಿರಿಜೆ ಮದುವೆ ಅಂದರೆ ಖರ್ಚು. ವರದಕ್ಷಿಣೆ ಕೊಡಬೇಕಾಗುತ್ತೆ. ನಿನಗೆ ಹೆಣ್ಣು ಕೊಡುವವರು ವರದಕ್ಷಿಣೆ ಕೊಡ್ತಾರೆ. ಆ ಹಣವನ್ನ-”
“ಅಣ್ಣಯ್ಯ! ಸಂಸಾರ ಸಂಬಂಧವನ್ನ ಆರ್ಥಿಕ ವ್ಯವಹಾರದ ಮಟ್ಟಕ್ಕೆ ಇಳಿಸ್ತಿದೀರಲ್ಲ !"
ತಾನು ಹಿಂದೆ ಬಳಸಿದ್ದು ತಿರುಗುಬಾಣವಾಗಿ ಬಂತೆಂದು ತಿಳಿಯಲು ವಿಶ್ವನಾಥಯ್ಯನವರಿಗೆ ಒಂದು ನಿಮಿಷ ಹಿಡಿಯಿತು. ಚೇಳು ಕುಟುಕಿತೆಂದು ಅವರು ಚಡಪಡಿಸಿದರು. ಉಗುಳು ನುಂಗಿ ಅವರೆಂದರು :
"ನೀನು ಜರ್ಮನಿಗೆ ಹೋಗಿ ಬರೋ ಖರ್ಚನ್ನೂ ನಿನಗೆ ಹೆಣ್ಣು ಕೊಡುವವರು—”
ಪ್ರಸಾದ ಧ್ವನಿ ಏರಿಸಿ ಅಂದ :
“ಆ ತೊಂದರೆ ಬೇಡಿ, ಅಣ್ಣಯ್ಯ. ನನ್ನನ್ನು ಕಳಿಸ್ತಿರೋದು ಸಂಸ್ಥೆಯವರು. ಖರ್ಚೆಲ್ಲಾ ಅವರದೇ.”
"ಅಂದರೆ? ವಾಪಸಾದ್ಮೇಲೆ ಇಂತಿಷ್ಟು ವರ್ಷ ಅಲ್ಲೇ ಕೆಲಸ ಮಾಡ್ತೀನಿ ಅಂತ ಬರಕೊಡ್ತೀಯೋ?"
"ಹತ್ತು ವರ್ಷ. ಕರಾರು ಪತ್ರಕ್ಕೆ ಆಗಲೇ ಸಹಿ ಹಾಕಿದೀನಿ. ಎಲ್ಲಾ ಸರಿ ಹೋದರೆ ಸದಾಕಾಲವೂ ಆ ಸಂಸ್ಥೆಲೇ ಇರ್ತೀನೆ"
ಮುಂಡಮೋಚ್ತು ಎಂದು ಅಸ್ಪಷ್ಟವಾಗಿ ವಿಶ್ವನಾಥಯ್ಯ ಗೊಣಗಿದರು. ಗಡಸು ಕಂಠದಲ್ಲಿ ಅವರೆಂದರು:
" ನಾನು ಹೇಳೋದನ್ನು ಇಷ್ಟು ಕೇಳ್ತೀಯೇನಯ್ಯ? ನೀನು ಬೆಂಗಳೂರಿಗೆ ವಾಪಸು ಬಂದು ಇಲ್ಲೇ ನೆಲೆಸಬೇಕೂಂತ ನನ್ನ ಅಪೇಕ್ಷೆ. ಇರೋದಕ್ಕೆ ಸ್ವಂತದ ಮನೆ ಇದೆ. ಇಂಜಿನಿಯರ್ ಕೆಲಸ ఇಲ್ಲಿಯೇ ಸಿಕ್ಕುತ್ತೆ. ಇನ್ನೇನಪ್ಪ? ಬೇಕಿದ್ದರೆ ವಿದೇಶಕ್ಕೂ ಹೋಗಿ ಬರಬಹುದು, ನಿಧಾನವಾಗಿ.”
ಉತ್ತರ ರೂಪವಾಗಿ ಪ್ರಸಾದ ಸಣ್ಣನೆ ನಕ್ಕ.
"ಎಲಾ! ನಗ್ತೀಯಲ್ಲ ನೀನು? ನಾನೇನು ಡೊಂಬರಾಟ ಆಡ್ತಿದೀನಾ?"
"ಇಲ್ಲ, ಅಣ್ಣಯ್ಯ. ನನ್ನನ್ನು ನೀವು ಅರ್ಥ ಮಾಡ್ಕೊಂಡಿಲ್ಲ.”
"ನೀನು ನನ್ನನ್ನು ಅರ್ಥಮಾಡ್ಕೊಂಡ್ಬಿಟ್ಟಿದೀಯೋ?”
"ಹಾಗೇಂತ ತಿಳಕೊಂಡಿದೀನಿ."
ಮೌನದ ಕಂದಕ. ತಮ್ಮೊಳಗೇ ನರಳುತ್ತ ವಿಶ್ವನಾಥಯ್ಯ ಅನ್ನುದ ದಾಟಿದರು. ಜಗಲಿಯ ಗೋಡೆಯಲ್ಲಿ ಗಾರೆ ಕಿತ್ತು ಬಂದಿದ್ದ ಕಡೆಗೆ ಬಿರುನೋಟ ಬೀರಿ ಅವರೆಂದರು :
"ಇನ್ನೊಂದು ವಾರದೊಳಗೆ ಹೆಣ್ಣು ಗೊತ್ಮಾಡ್ತೀನಿ. ನಾಲ್ಕೈದು ಜನ ಕೇಳ್ಕೊಂಡು ಹೋಗಿದಾರೆ. ಹುಡುಗಿಯರನ್ನ ನೀನೂ ನೋಡು. ಮದುವೆ ಮಾಡ್ಕೊಂಡು ಜರ್ಮನಿಗೋ ವಿಲಾಯತಿಗೋ ಎಲ್ಲಿಗೆ ಬೇಕಾದರೂ ಹೋಗು."
ಪ್ರಸಾದನ ಮುಖ ಗಂಭೀರವಾಯಿತು.
"ಅದು ಸಾಧ್ಯವಿಲ್ಲ ಅಣ್ಣಯ್ಯ,” ಎಂಬ ಪದಗಳನ್ನು ಹೊರಹಾಕಿ, ಅವನ ತುಟಿಗಳು ಒಂದನ್ನೊಂದು ಬಲವಾಗಿ ಆತುಕೊಂಡುವು.
ದೃಷ್ಟಿಯನ್ನು ಪ್ರಯತ್ನಪೂರ್ವಕವಾಗಿ ಕಿತ್ತು ವಿಶ್ವನಾಥಯ್ಯ ಮಗನತ್ತ ಹೊರಳಿದರು.
ಅವರ ನೋಟದೆದುರು ಪ್ರಸಾದ ತುಸು ಬಾಗಿದ.
ಅವನೆಂದ :
“ನಿಮ್ಮ ಮನಸ್ಸು ನೋಯಿಸ್ತಿರೋದಕ್ಕೆ ವ್ಯಥೆಯಾಗ್ತಿದೆ, ಅಣ್ಣಯ್ಯ. ಆದರೆ ನಾನೇನೂ ಮಾಡುವಂತಿಲ್ಲ."
"ಸತ್ತಾಗ ಗಂಗೋದಕ ?”
ವಿಶ್ವನಾಥಯ್ಕನವರ ಗಂಟಲು ಬಿರುಕು ಬಿಟ್ಟಿತ್ತು.
ಅವರಾಕೆ ಬಂದು ಹಜಾರದ ಬಾಗಿಲ ಮರೆಯಲ್ಲಿ ನಿಂತಿದ್ದರು. ಗಂಡನ ಆ ಪ್ರಶ್ನೆ ಕೇಳಿದೊಡನೆ ಅವರು ಗೋಳಾಡಿದರು :
"ಅಯ್ಯೋ! ಎಂಥಾ ಮಾತು ಆಡ್ತೀರಿ ಅಂದ್ರೆ. . ."
ವಿಶ್ವನಾಥಯ್ಯ ಕೂಗಾಡಿದರು:
"ಸತ್ತಾಗ ಅನ್ನದೆ, ಇನ್ನೇನು-ಹುಟ್ಟಿದಾಗ ಅನ್ಬೇಕೆ?”
ತಾಯಿ ಮಗನತ್ತ ತಿರುಗಿದರು:
"ಪ್ರಸಾದು-ಏನೋ ಇದೆಲ್ಲಾ?”
ಪ್ರಸಾದನ ಗಂಟಲೊಣಗಿತು.
ಕಂಪಿಸುವ ಸ್ವರದಲ್ಲಿ ಅವನೆಂದ:
"ಅಮ್ಮ ನಾನು ನಾಳೆಯ ಯೋಚ್ನೆ ಮಾಡ್ತಿದೀನಿ. ಆದರೆ ಅಣ್ಣಯ್ಯ ನನ್ನ ದಾರಿಗೆ ಕಲ್ಲು ಹಾಕ್ತಿದ್ದಾರೆ, ಅಮ್ಮ."
“ಹೂಂ-ಕಣೋ. ಕಲ್ಲು ಹಾಕ್ತಿದೀನಿ-ಕಲ್ಲು! ನಾನು-”
ಮಾತನ್ನು ವಿಶ್ವನಾಥಯ್ಯ ಅಷ್ಟಕ್ಕೆ ನಿಲ್ಲಿಸಿದರು. ರಸ್ತೆಯಿಂದಹಿತ್ತಿಲಿನೊಳಕ್ಕೆ ಬರತೊಡಗಿದ್ದ ಹಳೆಯ ಪಾದರಕ್ಷೆಗಳನ್ನೂ ಮಾಸಿದಧೋತರವನ್ನೂ ಅವರು ಕಂಡರು.
ಈ ಘಳಿಗೆಯಲ್ಲಿ ಬರಬೇಕೆ ಈತ?
ತಮ್ಮ ಎಲ್ಲ ಭಾವನೆಗಳನ್ನೂ ಹತ್ತಿಕ್ಕಿ, ಮುಗುಳು ನಗೆಯ ಮುಖವಾಡ ಧರಿಸಿ, ಬಂದ ಮನುಷ್ಯನನ್ನು ತಾವು ಸ್ವಾಗತಿಸಬೇಕು.
ವಿಶ್ವನಾಥಯ್ಯ ಮುಖಭಾವವನ್ನು ಮಾರ್ಪಾಟುಗೊಳಿಸುವುದಕ್ಕೆ ಮುನ್ನವೇ, ಅಂಗಳ ದಾಟಿ ಮನೆಯ ಮೆಟ್ಟಿಲುಗಳ ಮೇಲೆ ನಿಂತ ವ್ಯಕ್ತಿ ಅಂದಿತು:
"ನಮಸ್ಕಾರ. ಸಾಯಂಕಾಲ ಬರೋಣಾಂತಿದ್ದೆ. ಆದರೆ ರಾಹುಕಾಲ. ಈಗ್ಲೇ ಹೋಗೋದು ಮೇಲು ಅನಿಸ್ತು. ನನಗೇನೋ ಇವತ್ತು ರಜಾ. ಆದರೂ ನೀವು ಮಲಗಿರ್ತೀರೇನೋ ಅಂತ...”
ಮಲಗುವುದರ ಹೊರತು ಬೇರೆ ಕೆಲಸವೇನಿದೆ ತನಗೆ? ಎಂದು ವಿಶ್ವನಾಥಯ್ಯ ಮನಸಿನೊಳಗೇ ಕಹಿಯಾಗಿ ಅಂದುಕೊಂಡರು. ಬಹಿರಂಗವಾಗಿ ಶಿಷ್ಟಾಚಾರವನ್ನು ಪಾಲಿಸಲು ಪ್ರಯತ್ನಿಸುತ್ತ, ಕುಳಿತಲ್ಲೆ ತುಸು ಮಿಸುಕಿದಂತೆ ಮಾಡಿ,
“ಬನ್ನಿ ಚಂದ್ರಶೇಖರಯ್ಯನವರೆ,” ಎಂದರು.
[ಹೆಣ್ನು ಹೆತ್ತವರಿಗೆ 'ಬನ್ನಿ' ಸಾಕು. ಗಂಡಿನ ತಂದೆಗಾದರೆ 'ದಯಮಾಡಿಸಿ.']
ಮಧ್ಯವಯಸ್ಕ ಚಂದ್ರಶೇಖರಯ್ಯನವರ ದೃಷ್ಟಿ ಪ್ರಸಾದನ ಮೇಲೆ ತಂಗಿತು. ಪ್ರೀತಿ ತುಂಬಿದ್ದ ನೋಟ.
ಅವರ ದಪ್ಪಗಂಟಲು ನಿಧಾನವಾಗಿ ಪದಗಳನ್ನು ಹೊರಕ್ಕೆ ಉರುಳಿಸಿತು:
"ಚಿರಂಜೀವಿಯವರು ಈ ಬೆಳಗ್ಗೆ ಬಂದ್ರು, ಅಲ್ವೆ? ನಿಮ್ಮದೆಲ್ಲಾ ಅಚ್ಚುಕಟ್ಟು ವಿಶ್ವನಾಥಯ್ಯನವರೆ! ಹೇಳಿದ ದಿವಸ ಹೇಳಿದ ಟೈಮಿಗೆ ನೀವು ಹೇಳಿದ್ದು ಆಗಿಯೇ ಆಗುತ್ತೆ. ಅಷ್ಟು ಶಿಸ್ತು!”
[ಶಿಸ್ತನ್ನು ಸುಟ್ಟಿತು.]
ಸ್ಟೂಲಿನತ್ತ ಬೊಟ್ಟು ಮಾಡಿ,
"ಕೂತ್ಕೊಳ್ಳಿ," ಎಂದರು ವಿಶ್ವನಾಥಯ್ಯ.
ಪ್ರಸಾದ ಏನನ್ನೋ ಊಹಿಸಿ, ತನ್ನ ಊಹೆ ಸರಿ ಇರಬಹುದೆಂದು ಭಾವಿಸಿ, ಕೊಠಡಿಯೊಳಕ್ಕೆ ತೆರಳಿದ. ಮಂದಹಾಸ ಸೂಸಲು ಅವನ ತುಟಿಗಳು ಸಿದ್ಧವಾದುವು. ಆದರೆ ಹುಬ್ಬಗಳಾಗಲೇ ಮೇಲಕ್ಕೆ ಸರಿದು ಗಂಟಿಕ್ಕಿ ಕೊಂಡಿದ್ದುವು.
ಸ್ಟೂಲಿನ ಮೇಲೆ ಕುಳಿತುಕೊಳ್ಳುತ್ತಿದ್ದಾಗಲೇ ಚಂದ್ರಶೇಖರಯ್ಯನ ದೃಷ್ಟಿ ನಿರ್ಗಮಿಸುತ್ತಿದ್ದ ಪ್ರಸಾದನ ಮೇಲೆ ನೆಟ್ಟಿತ್ತು.
ಅವರೆಂದರು:
"ಪ್ರಸಾದ್ ಎಷ್ಟೊಂದು ಬೆಳೆದ್ಬಿಟ್ಟಿದಾರೆ. ನಿಮ್ಮ ಮಗ ಎಸ್.ಎಸ್.ಎಲ್.ಸಿ.ಗೆ ಕಟ್ಟಿದ್ದ ವರ್ಷ ನಾನು ಇವರ ಸ್ಕೂಲು ಸೇರ್ಕೊಂಡೆ. ಹಹ್ಹ-ನಾನು ಇವರಿಗೆ ಮೇಷ್ಟ್ರಾಗಿರಲಿಲ್ಲ ಅನ್ನೋಣ. ಆದರೂ-ನಿಮ್ಮ ಮಗ ನಮ್ಮ ಸ್ಕೂಲಿನ ಹಳೇ ವಿದ್ಯಾರ್ಥಿ ಅಂತ ಹೆಮ್ಮೆ ಪಟ್ಕೋಬಹುದು.”
“ಓಹೋ-ಧಾರಾಳವಾಗಿ. . .”
"ನಿಮ್ಮ ಮಗಳೂ ನಮ್ಮ ಲೀಲಾನೂ ಒಂದೇ ವರ್ಷ—”
"ಹೌದು ಹಾಗೇಂತ ಅವತ್ತೇ ಹೇಳಿದಿರಿ.”
"ಹೇಳಿದೆನೆ? ಪ್ರಿಯವಾದ ವಿಷಯ ಆಗಾಗ್ಗೆ ಬಾಯಿಂದ ಬರ್ತಿರುತ್ತೆ. ಮರೆವು ಅಂತಲ್ಲ..."
ಚಂದ್ರಶೇಖರಯ್ಯನವರ ಮಾತನ್ನು ಕೇಳಿಸಿಕೊಳ್ಳದವರಂತೆ ವಿಶ್ವನಾಥಯ್ಯ, ಹೊರಗೆ ರಸ್ತೆಯಂಚಿನಲ್ಲಿದ್ದ ವಿದ್ಯುತ್ ಕಂಬದತ್ತ ದೃಷ್ಟಿ ಹರಿಸಿದರು.
ಉಪಧ್ಯಾಯರ ಧ್ವನಿಯೇ ಝೇಂಕರಿಸುತ್ತ ಸಾಗಿತು:
"ನಿಮ್ಮ ಮಗ ಇವತ್ತು ತಾನೇ ಬಂದಿದಾರೆ. ನಾನು ನಾಳೆಯೋ ನಾಡದ್ದೋ ಬರಬಹುದಾಗಿತ್ತು. ಆದರೂ ಶುಭ ಪ್ರಸ್ತಾಪಕ್ಕೆ ವಿಳಂಬ ಸಲ್ಲದು ಅಂತ-”
ಕೊನೆಯ ವಾಕ್ಯ ಪ್ರತಿಸಾರೆಯೂ ಅರ್ಧಕ್ಕೇ ನಿಂತುಹೋಗುತ್ತಿತ್ತು. ಈತ ಪೂರ್ತಿ ಆಡಿ ಮುಗಿಸಬಾರದೆ—ಎನಿಸುತ್ತಿತ್ತು ವಿಶ್ವನಾಥಯ್ಯನವರಿಗೆ.
ಅವರ ಪತ್ನಿಗೆ ಒಂದೇ ಸಮಾಧಾನ. ಚಂದ್ರಶೇಖರಯ್ಯ ಬಂದುದರಿಂದ ತಂದೆ-ಮಗನ ಕಹಿ ಮಾತುಗಳ ವಿನಿಮಯ ವಿನಿಮಯ ಅಷ್ಟಕ್ಕೇ ತಡೆಯಿತಲ್ಲ! ಯಾರಿಗೆ ಗೊತ್ತು? ಚಂದ್ರಶೇಖರಯ್ಯ ಬಂದುದರಿಂದ ಒಳಿತೇ ಆದರೂ ಆಗಬಹುದು! ಪ್ರಸಾದ ಮನಸ್ಸು ಬದಲಾಯಿಸಲೂ ಬಹುದು. ಇದೆಲ್ಲ ಹೆತ್ತವಳ ಯೋಚನೆ.
ಒಳಗೆ ಗಿರಿಜೆ ಅಣ್ಣನಿಗೆ ಹೇಳಿದಳು:
"ಇವರು ನನಗೆ ಮೇಷ್ಟ್ರಾಗಿದ್ರು, ಪ್ರಸಾದು. ನನ್ನ ಕ್ಲಾಸಿನಲ್ಲಿ ಲೀಲಾ ಅಂತ ಇರ್ಲಿಲ್ವೆ? ನಾವಿದ್ದ ಹಿಂದಿ ನಮನೆಗೆ ಒಮ್ಮೆ ಬಂದಿದ್ಲು. ಇವರು ಆಕೆಯ ತಂದೆ."
ಪ್ರಸಾದ ಪದಗಳನ್ನು ಬಿಗಿಗಿಗೊಳಿಸುತ್ತ ಅಂದ:
"ಅಣ್ಣಯ್ಯನ ಸ್ನೇಹಿತರೊ?”
ಗಿರಿಜೆ ಅರ್ಥಪೂರ್ಣವಾಗಿ ನಕ್ಕಳು.
"ಅಂಥದೇನಿಲ್ಲಪ್ಪ. ಒಂದೆರಡ್ಸಲ ಬಂದಿದ್ರು."
"ಯಾಕೆ?"
"ನೀನೊಮ್ಮೆ ಅವರ ಮನೆಗೆ ಹೋಗ್ಬೇಕಂತೆ.”
"ಹೆಣ್ಣು ನೋಡೋದಕ್ಕೊ?"
"ಬುದ್ಧಿವಂತ! ತಿಳಕೊಂಡ್ಬಿಟ್ಟೆಯಲ್ಲ . . .”
ಪ್ರಸಾದ ನಿಟ್ಟುಸಿರುಬಿಟ್ಟ. ಬಟ್ಟೆ ಬದಲಿಸಿ, ಬೂಟುಗಳೊಳಕ್ಕೆ ಕಾಲು ಚೀಲ ಧರಿಸಿದ - ಪಾದಗಳನ್ನು ತುರುಕಿ, ಲೇಸ್ ಕಟ್ಟಿ, ಸೂಟ್ಕೇಸಿನಿಂದ ಪಾಕೆಟನ್ನೆತ್ತಿಕೊಂಡ. ಹೊರಗೆ ಚಂದ್ರಶೇಖರಯ್ಯನವರ ಧ್ವನಿ ತನ್ನ ವಿಹಾರವನ್ನು ನಡೆಸಿಯೇ ಇತ್ತು.
"ನೀವು ಮಗನನ್ನು ಇಂಜಿನಿಯರಿಂಗ್ ಓದಿಸಿ ಒಳ್ಳೆ ಕೆಲಸ ಮಾಡಿದ್ರಿ, ವಿಶ್ವನಾಥಯ್ಯನವರೆ. ನನ್ನ ಮೂರನೆಯವನಿಗೆ ಸೀಟು ಸಿಗುತ್ತೇನೋಂತ ಈ ವರ್ಷ ನೋಡಿದೆ. ಸಿಗಲಿಲ್ಲ. ಯಾವುದಕ್ಕೂ ಅದೃಷ್ಟ ಬೇಕು. ಘಳಿಗೆ ಕೂಡಿಬರಬೇಕು.”
ಮಾತಿನ ಪ್ರವಾಹದ ನಡುವೆ ಕಲ್ಲುಬಂಡೆಯಾಗಿ ಕುಳಿತಿದ್ದರು ವಿಶ್ವನಾಥಯ್ಯ.
ಬೂಟುಗಳ ಸಪ್ಪಳ ಕೇಳಿಸಿತು. ಪ್ರಸಾದ ಹೊರಗೆ ಬಂದ.
ಈತ ಹೊರಟೇಬಿಟ್ಟನಲ್ಲ - ಎಂದು ಚಂದ್ರಶೇಖರಯ್ಯ ವಿವಂಚನೆಗೆ ಗುರಿಯಾದರು. ಉಗುಳು ನುಂಗಿ ಹಲ್ಲುಗಳನ್ನೆಲ್ಲ ತೋರಿಸುತ್ತ ಅವರೆಂದರು:
"ನಮಸ್ಕಾರ ಪ್ರಸಾದು. ನನ್ನ ನೆನಪಿದೆಯೇನಪ್ಪ ?
"ನಮಸ್ಕಾರ ಸರ್,” ಎಂದ ಪ್ರಸಾದ.
ತಂದೆಯತ್ತ ತಿರುಗಿ, "ರೈಲ್ವೆ ಸ್ಟೇಷನಿಗೆ ಹೋಗ್ಬರ್ತೀನಿ,” ಎಂದು ನುಡಿದು, ಮೆಟ್ಟಲಿಳಿದುನಡೆದೇಬಿಟ್ಟ.
ಚಂದ್ರಶೇಖರಯ್ಯ ತಡವರಿಸುತ್ತ ಅಂದರು:
"ಇದೇನು ಈಗ ಸ್ಟೇಷನಿಗೆ?”
ವಿಶ್ವನಾಥಯ್ಯ ತುಟಿತೆರೆದು ಅಂದರು:
"ಟಿಕೆಟು ಕೊಳ್ಳೋದಕ್ಕೆ.”
"ಟಿಕೆಟು? ಎಲ್ಲಿಗೆ?”
"ಜರ್ಮನಿಗೆ."
"ಜರ್ಮನಿಗೆ?”
"ಹ, ಜರ್ಮನಿಗೆ! ಪ್ರಸಾದ ಉಚ್ಚಶಿಕ್ಷಣಕ್ಕೆ ಹೋಗ್ತಾನೆ.”
"...ಹೌದೆ? – ಸರಿ . . . ಮದುವೆ ಮಾಡ್ಕೊಂಡೇನೇ...”
"ಚಂದ್ರಶೇಖರಯ್ಯ, ಆ ಮಾತು ಬಿಟ್ಬಿಡಿ. ಪ್ರಸಾದ ಈಗ ಮದುವೆ ಯಾಗೋದಿಲ್ವಂತೆ. ನಿಮ್ಮ ಮಗಳಿಗೆ ನೀವು ವರ ಹುಡುಕ್ತಿದೀರಿ. ನನ್ನ ಮಗಳಿಗೆ ನಾನು ವರ ಹುಡುಕ್ತಿದೇನೆ, ಅಷ್ಟೆ ... ”
“ಛೇ ! ಅದು ಬೇರೆ ವಿಷಯ. ನೀವು ಯಾಕೋ ನಿರಾಶರಾಗಿದೀರಿ. ... ನಾನು-ನಾನು ಪ್ರಸಾದನ ಕೂಡೆ ಮಾತಾಡ್ಲೆ ?”
“ತಂದೆಯ ಮಾತು ಕೇಳದವನು ಇನ್ನೊಬ್ಬರ ಮಾತಿಗೆ ಕಿವಿ ಕೊಡ್ತಾನ ಚಂದ್ರಶೇಖರಯ್ಯ ? ಈ ವಿಷಯ ಸದ್ಯಕ್ಕೆ ಮರೆತ್ಬಿಡಿ.”
“ನಾನು-ನಾನು ಪ್ರಸಾದನ ಜತೆ ಮಾತಾಡೋದು ಬೇಡ-ಅಂತೀರಾ ?”
“ನೀವು ದಯವಿಟ್ಟು ಮನೆಗೆ ಹೋಗಿ.”
ವಿಶ್ವನಾಥಯ್ಯ ಎಷ್ಟೇ ಮೃದುವಾಗಿ ಆಡಲು ಯತ್ನಿಸಿದರೂ ಪದಗಳು ನಿಷ್ಠುರವಾಗಿದ್ದುವು.
ಚಂದ್ರಶೇಖರಯ್ಯ ನೀಳವಾಗಿ ಉಸಿರು ಬಿಟ್ಟರು. ಅವರ ಹೃದಯ ಅತ್ತಿತು.

ರಾತ್ರಿಯ ಗಾಡಿಗೆ ಪ್ರಸಾದ ಹೊರಡುವನೆಂಬುದು ಖಚಿತವಾದಾಗ ವಿಶ್ವನಾಥಯ್ಯನವರ ಮಾನಸಿಕ ಯಾತನೆ ತೀವ್ರಗೊಂಡಿತು.
ಕೋಟು ಟೋಪಿಗಳನ್ನು ಧರಿಸಿ, ಚಪ್ಪಲಿ ಮೆಟ್ಟಿಕೊಂಡು, ರಸ್ತೆಗಿಳಿದು, ಗೊತ್ತು ಗುರಿ ಇಲ್ಲದೆ ಉದ್ದಕ್ಕೂ ಅವರು ಸಾಗಿದರು.
ಫುಟ್ಪಾತಿನ ಮೇಲೆ ನಡೆದಾಗ ಕೊರಕಲು ಕಲ್ಲುಗಳೊಳಗೆ ಪಾದ ಸಿಲುಕಿ ತಾವು ಬಿದ್ದು ಕಾಲು ಮುರಿದರೊ? ರಸ್ತೆ ದಾಟುವಾಗ ಬಿ.ಟಿ.ಎಸ್. ಬಸ್ಸು ತಮ್ಮನ್ನು ಅಪ್ಪಳಿಸಿದರೊ ? ಅಥವಾ ನಡೆಯುತ್ತಲಿದ್ದಂತೆ ಕುಸಿದು ಬಿದ್ದು ತಮಗೆ ಹೃದಯಸ್ತಂಭನವಾದರೊ ?
ಹಾಗೆ ಆಗುವುದು ಒಂದು ರೀತಿಯಲ್ಲಿ ಒಳ್ಳೆಯದೇ ಅಲ್ಲವೇ? ತಾವಿನ್ನು ಬದುಕಿ ಯಾವ ಸುಖ ಕಾಣಬೇಕು? ತಾವು ಹಾಲೆರೆದು ಬೆಳೆಸಿದ ಒಬ್ಬನೇ ಮಗ ಹೆಡೆ ಎತ್ತಿದ ಅಂದ ಮೇಲೆ?
ಗಿರಿಜೆಯ ಮದುವೆಯನ್ನಾದರೂ ಮಾಡಿಬಿಡೋಣ ಎಂದರೆ ಅಡಚಣೆಗಳು ಹತ್ತಾರು. ಪ್ರಸಾದನಿಗೆ ಸರಿಯಾದ ಕಡೆ ಹೆಣ್ಣು ಗೊತ್ತಾದರೆ ಬರುವ ಹಣದಿಂದ ಮಗಳ ಮದುವೆಯನ್ನು ಮಾಡಿ ಮುಗಿಸಬಹುದು. ಆದರೆ, ತನ್ನ ಹೊರತಾಗಿ ಇತರರ ಪರಿವೆಯೇ ಇಲ್ಲವಲ್ಲ ಪ್ರಸಾದನಿಗೆ!. . .
ನಾಲ್ಕು ರಸ್ತೆಗಳು ಕೂಡುವೆಡೆ ಒಂದು ವೃತ್ತ ರಚಿಸಿದ್ದರು. ಅದರೊಳಗೆ ಹೂವಿನ ಗಿಡಗಳು. ಮಧ್ಯದಲ್ಲೊಂದು ಕಾರಂಜಿ. ಸಿಮೆಂಟಿನ ಬೆ೦ಚುಗಳು ಕೆಲವು.
ಅವನ್ನು ಕಂಡಾಗ, ತಮ್ಮ ಕಾಲುಗಳು ಸೋತಿವೆ, ತುಸು ವಿಶ್ರಾಂತಿಬೇಕು-ಎನಿಸಿತು ವಿಶ್ವನಾಥಯ್ಯನವರಿಗೆ.
ಅವರು ಕಲ್ಲುಗೂಟಗಳ ನಡುವಣ ಸಂದಿಯಿಂದ ಸುಲಭವಾಗಿ ತಮ್ಮ ತೆಳು ಶರೀರವನ್ನು ಒಳಕ್ಕೆ ದಾಟಿಸಿ, ತೆರವಾಗಿದ್ದ ಬೆಂಚೊಂದನ್ನು ದಿಟ್ಟಿಸಿ ಅದರತ್ತ ನಡೆದರು.
ಆಟವಾಡುತ್ತಿದ್ದ ಹುಡುಗರು. ಹುಲ್ಲಿನ ಮೇಲೆ ಕುಳಿತಿದ್ದ ಒಂದು ಸಂಸಾರ. ["ನೀರಿನ ಹತ್ರಕ್ಕೆ ಹೋಗ್ಬೇಡ, ಮರಿ” "ಹೂ ಕೀಳ್ಬೇಡ್ವೇ. ಮಾಲಿ ಹಿಡಕೊಂಡು ಹೋಗ್ತಾನೆ.”] ನಡೆಗೋಲುಗಳನ್ನು ಹಿಡಿದು ವಾಯುಸೇವನೆಗೆ ಹೊರಟ ವೃದ್ಧರು ಮೂವರು ['ನಿವೃತ್ತರಿರಬೇಕು? . . . .']
ಸುತ್ತಲಿನ ವಾಪಾರವನ್ನು ಜಡವಾದ ಕಣ್ಣಗಳಿಂದ ದಿಟ್ಟಿಸುತ್ತ ವಿಶ್ವನಾಥಯ್ಯ ಕುಳಿತರು.
ರಾತ್ರಿಯ ರೈಲು ಹೊರಡುವುದು ಹತ್ತೂಕಾಲಿಗೆ. ಟಾಕ್ಸಿ [ಇನ್ನೇನು ಜಟಕವೆ?] ಒಂಭತ್ತೂವರೆಗೆ ಮನೆಗೆ ಬರಬಹುದು . . .
ವಿಶ್ವನಾಥಯ್ಯ ಅಂದುಕೊಂಡರು:
ಮನೆಗೆ ತಾವು ಹೋಗದೇ ಇದ್ದರೇನಾದೀತು? ಇವತ್ತು ಈ ಬೆಂಚಿನ ಮೇಲೆಯೇ ಮಲಗಿಬಿಡಬೇಕು. ಮಗ ಸತ್ತ ಅ೦ತ ಸೂತಕ. ಬೆಳಗಾಗುವದರೊಳಗೆ ಚಳಿಯಿಂದ ಹೆಪ್ಪು ಗಟ್ಟಿ ತಾವು ಕೊರಡಾದರೆ? ಅದೂ ಒಳ್ಳೆಯದೇ. ಯಾಕಾಗಬಾರದು? ಅನಾಥ ಶವವನ್ನು ಎಳೆದೊಯ್ಯಲು ಪುರಸಭೆ ಇಲ್ಲವೆ? ಅವರು ಸುಮ್ಮನಿದ್ದರೆ ಜನ ಬಿಡುತ್ತಾರೆಯೆ? ಶವದಿಂದ ದುರ್ನಾತ ಹೊರಟಾಗ ಸಹಿಸುವುದುಂಟೆ ಸಾರ್ವಜನಿಕರು?
'ಉದ್ಯಾನದಲ್ಲಿ ಅನಾಥ ಶವ'
-ಪತ್ರಿಕೆಯಲ್ಲಿ ಒಂದು ಶಿರೋನಾಮೆ.
ಹಹ್ಹ !
ಕೊನೆಯಲ್ಲಿ ಹುಚ್ಚು ಹುಡುಗಿ ಗಿರಿಜೆ ಓಡಿ ಬಂದು ಗುರುತು ಹಿಡಿಯುತ್ತಾಳೆ ಎಂದಿಟ್ಟುಕೊಳ್ಳೋಣ. ಆಗ ವಿಶ್ವನಾಥಯ್ಯ ಯಾಕೆ ಸತ್ತ ಅಂತ ಊಹಾಪೋಹ ನಡೆದೀತು. ದೀರ್ಘಕಾಲದ ಹೊಟ್ಟೆ ನೋವಿನಿಂದ ಪಾರಾಗುವುದಕ್ಕೋಸ್ಕರ ವಿಷಪ್ರಾಶನ? ವಿಷ ಕುಡಿದುದಕ್ಕೆ ಪುರಾವೆ ಇಲ್ಲವಲ್ಲ? ['ಹೊಟ್ಟೆ ನೋವಲ್ಲ-ಇದು ಹೃದಯದ ನೋವು, ಹೃದಯದ ನೋವು !] ಆತ್ಮಹತ್ಯೆ? ಉರುಲು ಹಾಕಿಕೊಂಡುದಕ್ಕೆ ಗುರುತೇ ಇಲ್ಲವಲ್ಲ
... ವೃದ್ಧಾಪ್ಯದ ನಿಶ್ಯಕ್ತಿಯಿಂದ ಏಳಲಾಗದೆ ಉದ್ಯಾನದ ಕಲ್ಲುಬೆಂಚಿನ ಮೇಲೆ ರಾತ್ರಿಯನ್ನು ಕಳೆದುದರಿಂದ, ಹಿಮಪೀಡಿತರಾಗಿ ಹೆಪ್ಪುಗಟ್ಟಿ ಕಾಲವಾದರು! ಭೇಷ್ !
ಆಡುತ್ತಿದ್ದ ಎಳೆಯ ಹುಡುಗನೊಬ್ಬ ಕಾರಂಜಿಯ ಬಳಿ ಹೋಗಿ ಅಂಗೈಯಿಂದ ನೀರನ್ನು ಬಡೆದ. ಕೊಳಕು ನೀರು ಉಡುಪಿನ ಮೇಲೆ ಬಿದ್ದು, ಬಟ್ಟೆ ಹಾಳಾಯಿತು. ಗಂಡನೊಡನೆ ಮಾತನಾಡುತ್ತ ಕುಳಿತಿದ್ದ ತಾಯಿ ಬಂದು, ಆ ಹುಡುಗನ ಕಿವಿ ಹಿಂಡಿದಳು. ಹುಡುಗ 'ಅಯ್ಯೋ!' ಎಂದು ಚೀರಿದ.
ಆ ದೃಶ್ಯವನ್ನು ಕಂಡ ವಿಶ್ವನಾಥಯ್ಯನಿಗೆನ್ನಿಸಿತು:
'ಪ್ರಸಾದ ಚಿಕ್ಕವನಾಗಿದ್ದರೆ ಕಿವಿ ಹಿಂಡಿ ಬುದ್ದಿ ಕಲಿಸುತ್ತಿದ್ದೆ.'
... ಕತ್ತಲಾಯಿತು. ರಸ್ತೆಯಂಚಿನ ನಿಯೊನ್ ಲೈಟುಗಳ ಮಂದ ಬೆಳಕು ಉದ್ಯಾನವೃತ್ತದ ಮೇಲೆ ಬಿದ್ದಿತು.
ಮೆಲ್ಲಮೆಲ್ಲನೆ ಜನ ಕರಗಿದರು.
ವಿಶ್ವನಾಥಯ್ಯ ಕುಳಿತಲ್ಲಿಂದ ಕದಲದೆ ಹೊತ್ತು ಕಳೆದರು. ಮೆದುಳು ಯೋಚನೆಯ ತಂತಿಗಳ ಮೇಲೆ ಕಸರತ್ತು ನಡೆಸಿತ್ತು. ಆಯಾಸವಾದಾಗ ಒರಗುಬೆಂಚೇ ತಲೆಗೆ ದಿಂಬು. ಅದಕ್ಕೆ ಆತು ಮೆದುಳಿಗೆ ವಿಶ್ರಾಂತಿ ...
. . . . ಮನೆಯಲ್ಲಿ ಪ್ರಸಾದನ ತಾಯಿ, 'ಕತ್ತಲಾಯಿತು. ಇವರ ಸುಳಿವಿಲ್ಲವಲ್ಲ' ಎಂದು ಚಡಪಡಿಸಿದರು. ಬಂದುದನ್ನು ಅನುಭವಿಸಬೇಕು; ಸುಮ್ಮನೆ ರೋದಿಸಿ ಏನು ಫಲ?- ಎನ್ನುವುದು ಅವರ ವಿಚಾರ ಸರಣಿ. ದೂರ ದೇಶಕ್ಕೆ ಹೋಗುತ್ತೇನೆ - ಎನ್ನುತ್ತಿದ್ದಾನೆ ಮಗ. ಹೊರಡುವುದಕ್ಕೆ ಮುನ್ನ ತಂದೆ-ಮಕ್ಕಳ ನಡುವೆ ವಿರಸ ಬೇಡ, ಎಂಬುದು ಆಕೆಯ ಆಸೆ. ಅವರು ಬಂದರೆ, ಮಕ್ಕಳಿಗೂ ಅವರಿಗೂ ಜತೆಯಾಗಿ ಬಡಿಸಬಹುದು.
ಆ ಸೌಹಾರ್ದ ಭೋಜನ ಸಾಧ್ಯವಾಗದು-ಎಂಬ ಶಂಕೆ ಪ್ರಸಾದನಿಗೆ. ವಿವೇಕವಿದ್ದವರಿಗೆ ತಿಳಿಯಹೇಳಬಹುದು. ಹಟಮಾರಿಗಳನ್ನು ಹಾದಿಗೆ ತರುವುದಕ್ಕಾದೀತೆ? ವಯಸ್ಸಾದಂತೆ ಬುದ್ಧಿ ಕಡಮೆಯಾಗುತ್ತ ಹೋಗುತ್ತದಲ್ಲ! ಇದು ಭಾರತೀಯ ಗುಣವಿಶೇಷವಿರಬೇಕು.
ಗಿರಿಜೆಗೂ ಒಂದು ಬಗೆಯ ಆತಂಕ. ಎರಡು ಮೂರು ಮಾತುಕತೆಗಳು ಮುರಿದ ಮೇಲೆ ಮದುವೆಯ ಯೋಚನೆಯನ್ನು ಅವಳು ಬಿಟ್ಟುಕೊಟ್ಟಿದ್ದಳು. ಆದರೆ, ತಂದೆ ಅಣ್ಣನಿಗೆ ಕಳುಹಿಸಿದ ತಂತಿ, ಪ್ರಸಾದನ ಆಗಮನ, ಪೆಟ್ಟಿಗೆಯಲ್ಲಿರಿಸಿದ್ದ ಪುಸ್ತಕ ಮತ್ತೆ ಹೊರಗೆ ಬರಲು ಕಾರಣವಾಗಿದ್ದುವು. ಅದನ್ನು ತೆರೆದು ಓದು ಮುಂದುವರಿಸಲು ಮಾತ್ರ ಅವಕಾಶವಾಗಿರಲಿಲ್ಲ, ಕ್ಷಿಪ್ರಗತಿಯಿಂದ ನಡೆದ ಘಟನೆಗಳಿಂದ. ಈಗ ತನ್ನ ಬಳಿಯಲ್ಲಿದ್ದ ಸೋದರ ಇನ್ನು ಕೆಲವೇ ದಿನಗಳ ಬಳಿಕ ಜರ್ಮನಿಯಲ್ಲಿ! ಆ ಯೋಚನೆ ಸುಂದರವಾಗಿತ್ತು. ಗೆಳತಿಯರೆದುರು ಹೇಳಿಕೊಳ್ಳಬಹುದು. ಮಾತುಕತೆಗೆ ಅದಕ್ಕಿಂತ ಹೆಚ್ಚು ಅಭಿಮಾನದ ವಸ್ತುವುಂಟೆ? ಆದರೆ, ಹೆಂಗಸರ ನಾಲಗೆಗಳ ಚಲನ ಕೌಶಲ ತನಗೆ ತಿಳಿಯದೆ? ತನ್ನ ಬೆನ್ನ ಹಿಂದೆ ಕೆಲವೊಮ್ಮೆ ತನಗೆ ಕೇಳಿಸುವಂತೆಯೂ ಕೂಡಾ, ಮಾತು ಬಂದೇ ಬರುತ್ತದೆ: 'ಇನ್ನೂ ಮದುವೆಯಿಲ್ಲ. . .'
. . . ಪ್ರಸಾದ ಸೂಟ್ಕೇಸನ್ನು ಮತ್ತೊಮ್ಮೆ ಅಣಿಗೊಳಿಸಿದ. ಗಾಡಿಯಲ್ಲಿ ಉಪಯೋಗಕ್ಕೆ ಬೇಕಾದ ಬಟ್ಟೆಗಳನ್ನೂ ಮುಖಮಾರ್ಜನದ ಸಾಧನಗಳನ್ನೂ ತೆಗೆದಿರಿಸಿದ, ಕಿಟ್‌ನಲ್ಲಿ.
ಜಗಲಿಯಲ್ಲಿ ತಂದೆ ಕುಳಿತುಕೊಳ್ಳುವ ಆರಾಮ ಕುರ್ಚಿಯ ಮೇಲೆ ಮೈಚೆಲ್ಲಿ ತಂಗಿಯತ್ತ ನೋಡಿ ಅವನೆಂದ :
“ ಅಣ್ಣಯ್ಯನ ಸಿಟ್ಟು ಇಳಿದ ಹಾಗಿಲ್ಲ, ಅಲ್ವೇನೆ ಗಿರಿಜಾ ?”
ಪ್ರಸಾದ ನಿಂತಿರುತ್ತಿದ್ದ ಬಾಗಿಲ ಚೌಕಟ್ಟಿನಲ್ಲಿ ಗಿರಿಜಾ ಈಗ ಪ್ರತಿಮೆಯಾಗಿದ್ದಳು. ಸೋದರನ ಮಾತು ಕೇಳಿ ಅವಳು ಸಣ್ಣನೆ ನಕ್ಕಳು. ಮೆಲ್ಲನೆ ಚಲಿಸಿ ಮುಂದುವರಿದು, ಬರಿದಾಗಿದ್ದ ಸ್ಟೂಲಿನ ಮೇಲೆ ಕುಳಿತಳು.
ತಂಗಿಯನ್ನು ದಿಟ್ಟಿಸಿ ನೋಡಿ ಪ್ರಸಾದನೆಂದ:
“ಅಣ್ಣಯ್ಯನ ಮದುವೆ ಏರ್ಪಾಟಿಗೆ ನಾನು ಒಪ್ಪಲಿಲ್ಲ ಅಂತ ನಿನಗೆ ಬೇಸರವಿಲ್ಲ ತಾನೆ?”
ತಡಮಾಡದೆ ಗಿರಿಜಾ ಅಂದಳು :
“ಖಂಡಿತ ಇಲ್ಲ, ಪ್ರಸಾದು.”
ಹಾಗೆ ಅ೦ದಳಾದರೂ ಅವಳ ಒಳದನಿ ಕುಟುಕಿತು :
'ಇವನ ಬದುಕಿನ ತಿರುಗಣಿಗೆ ನಿನ್ನ ಬದುಕಿನ ತಿರುಗಣಿ ಆತುಕೊಂಡಿದೆ. ಅದು ಚಲಿಸಿದಾಗ ನಿನ್ನದರ ಚಲನೆ.'
ಒಳಗಿನ ಕಡಿತದಿಂದ ನೋವಾಗಿ, ಮುಖಬಾಡಿಸಿ, ಗಿರಿಜಾ ನೆಲ ನೋಡಿದಳು.
“ಹುಡುಗ ನಿನಗೆ ಇಷ್ಟವಾಗದೇ ಇದ್ದರೆ ನೀನು ಒಪ್ಕೊಬೇಡ, ಗಿರಿಜಾ.”
ವಸ್ತುಸ್ಥಿತಿಯನ್ನು ಮರೆತು ಉತ್ತರ ನೀಡುವುದು ಎಷ್ಟು ಸುಲಭ !
“ಇಲ್ಲ, ಪ್ರಸಾದು.”
“ಅಣ್ಣಯ್ಯನಿಗಾಗಲೀ ಅಮ್ಮನಿಗಾಗಲೀ ಗೊತ್ತಾಗೋದಿಲ್ಲ. ಅವರದು ಹಳೇ ಕಾಲದ ಯೋಚನೆ. ಒಂದು ಗಂಡನ್ನೂ ಒಂದು ಹೆಣ್ಣನ್ನೂ ಅಂತೂ ಇಂತೂ ಗಂಟುಹಾಕೋದು. ಇವರು ಸಂಸಾರ ಹೂಡಿ ಮಕ್ಕಳನ್ನ ಪಡೆಯೋದು. ಆ ಮೊಮ್ಮಕ್ಕಳನ್ನ ಎತ್ತಿ ಆಡಿಸಿ ವೃದ್ದ ತಾಯಿತಂದೆ ಕಣ್ಣು ಮುಚ್ಚೋದು. ಅವರ ದೃಷ್ಟೀಲಿ ಅದು ಸಾರ್ಥಕ ಜೀವನ.”
“ಇದೆಲ್ಲಾ ನನ್ನ ತಿಳಿವಳಿಕೆಗೆ ಮೀರಿದ್ದು.”
“ಮೀರಿದ್ದಲ್ಲವೇ ಅಲ್ಲ. ನೀನು ವಿದ್ಯಾವಂತೆ. ನನ್ನ ಅಭಿಪ್ರಾಯ ಏನು ಗೊತ್ತೆ? ಮನೇಲಿ ಕೂತು ವ್ಯರ್ಥವಾಗಿ ಕಾಲ ಕಳೆಯೋ ಬದಲು ನೀನು ಕೆಲಸಕ್ಕೆ ಸೇರಿಕೋಬೇಕು. ನಿನಗೆ ಇಷ್ಟವಾಗೋ ವರ ದೊರೆತಾಗ ಮದುವೆಯಾಗ್ಬೇಕು. ಏನಂತೀಯಾ ?”
“ಅಣ್ಣಯ್ಯ ಒಪ್ತಾರಾ, ಪ್ರಸಾದು ?”
"ಒಪ್ಪಿಸ್ಬೇಕು. ಯಾವುದು ಸರೀಂತ ನಮಗೆ ತೋರುತ್ತೋ ಅದನ್ನು ನಾವು ಮಾಡಿಯೇ ತೀರ್ಬೇಕು. ನಾಲ್ಕು ದಿವಸ ಬಡಕೋತಾರೆ. ಆಮೇಲೆ ಸುಮ್ಮನಾಗ್ತಾರೆ.”
“ನಿಜ ಅನ್ನು. ಆದರೂ, ಅವರ ಮನಸ್ಸು ನೋಯಿಸೋದು ಅಂದರೆ ಯಾಕೋ ಸಂಕಟವಾಗುತ್ತಪ್ಪ.”
“ ಅದಕ್ಕೇ ಅನ್ನೋದು ಹೆಂಗರುಳು ಅಂತ.”
ಮಕ್ಕಳಿಬ್ಬರೇ ಮಾತನಾಡಿಕೊಳ್ಳುತ್ತಿದ್ದುದು ಕಿವಿಗೆ ಬಿದ್ದ ಅವರ ತಾಯಿ ಹೊರಗೆ ಬಂದರು. ಕೆಂಪಡರಿ ಊದಿಕೊಂಡಿದ್ದ ಕಣ್ಣುಗಳು ಆಕೆ ಒಳಗೆ ಅಳುತ್ತಿದ್ದರೆಂದು ಸಾಕ್ಷ್ಯ ನುಡಿದುವು.
ಪ್ರಸಾದ ಕೇಳಿದ:
“ಅಳ್ತಿದ್ದೆಯೇನಮ್ಮ?” ಅವರು ಸೆರಗಿನ ಅಂಚಿನಿಂದ ಮತ್ತೊಮ್ಮೆ ಕಣ್ಣುಗಳನ್ನು ಒತ್ತಿಕೊಂಡರು.
"ಇಲ್ವಲ್ಲ... ಕೆಟ್ಟ ಹೊಗೆ.”
ಪ್ರಸಾದ ನಕ್ಕ.
“ನಿಜ, ಅಮ್ಮ. ಇದು ಹೊಗೆ ತುಂಬಿದ ಮನೆ. ಕಿಟಕಿಗಳು ಮುಚ್ಚೇ ಇರುತ್ವೆ. ಕಿಟಕಿಗಳ್ನ ಸ್ವಲ್ಪ ತೆರೀಬೇಕು. ಅಲ್ವಾ ಅಮ್ಮ?”
“ಚಳಿಗಾಲ ಅಲ್ವೇನೋ? ”
ಗಿರಿಜೆಯ ಕಡೆ ನೋಡಿ, ಇಂಥವರಿಗೆ ಏನಾದರೂ ಮನವರಿಕೆ ಯಾಗೋದು ಸಾಧ್ಯವೆ? ಎಂಬರ್ಥದಲ್ಲಿ ಪ್ರಸಾದ ತಲೆಯಾಡಿಸಿದ.
ಆತನ ತಾಯಿ ಅಂದರು :
“ಇವರು ಬಂದಿಲ್ವಲ್ಲಾ ಇನ್ನೂ.”
ಪ್ರಸಾದ ಕೈಗಡಿಯಾರದತ್ತ ದೃಷ್ಟಿಹರಿಸಿದ.
“ಇನ್ನು ಹತ್ತು ನಿಮಿಷ ನೋಡಿ, ಆಮೇಲೆ ಊಟಕ್ಕೇಳ್ತೀನಿ.”
“ಹಾಗೇ ಮಾಡಪ್ಪ. ನೀನು ಇವತ್ತೇ ಹೋಗ್ಬೇಕು, ಅಲ್ವೆ?”
“ಹೂನಮ್ಮ. ಇನ್ನು ಹದಿನೈದು ನಿಮಿಷಗಳಲ್ಲಿ ಟ್ಯಾಕ್ಸಿ ಬರುತ್ತೆ.”
“ಸ್ಟೇಷನಿಗೆ ಇವರೂ ಬಾರ್ತಾರೋ ಏನೋ !”
ಗಿರಿಜಾ ಅಂದಳು :
“ಅಣ್ಣಯ್ಯನ ಜತೆ ನಾನೂ ಹೋಗಿಬರಬೌದು.”
ಪ್ರಸಾದನೆಂದ :
“ಸುಮ್ಮನೆ ಯಾಕೆ ಶ್ರಮ?”
ತಾಯಿ ಅಂದರು :
"ಕಾಗದ ಬರೀತಿರು, ಪ್ರಸಾದು. ಅಲ್ಲಿ ನಿನಗೆ ಊಟ ಉಪಚಾರ ಸರಿಹೋಗುತ್ತೋ ಇಲ್ವೊ!”
“ಅದರದೇನೂ ಯೋಚ್ನೆ ಇಲ್ಲಮ್ಮ. ನಮ್ಮೂರಿನವರು ಅಲ್ಲಿ ಬಹಳ ಜನ ಇದಾರೆ.”
ತಾಯಿಯ ಸೆರಗಿನ ಅಂಚು ಮತ್ತೆ ಕಣ್ಣುಗಳನ್ನು ಸವಿಾಪಿಸಿತು.
ಗಿರಿಜಾ ಅಂಗಳಕ್ಕಿಳಿದಳು. ರಸ್ತೆಯುದ್ದಕ್ಕೂ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ನೋಡಿದಳು. ಎಷ್ಟೋ ಜನ ಬರುತ್ತಿದ್ದರು, ಹೋಗುತ್ತಿದ್ದರು. ವಿಶ್ವನಾಥಯ್ಯನವರು ಮಾತ್ರ ಕಾಣಿಸಲಿಲ್ಲ.
... ಮತ್ತೊಮ್ಮೆ ಕೈಗಡಿಯಾರ ನೋಡಿ, ಪ್ರಸಾದ ಊಟಕ್ಕೆದ್ದ.
"ಮಗೂ ಒಬ್ನೇ ಉಣ್ಣೋದೇ? ನೀನೂ ಕೂತ್ಕೋ ಗಿರಿಜಾ,” ಎಂದರು ತಾಯಿ.
ಉಣ್ಣುತ್ತಲಿದ್ದಾಗ ತಾಯಿಯ ಮುಖವನ್ನು ದಿಟ್ಟಿಸಿ, ಬಂದೀಖಾನೆಯಂತಿದ್ದ ಆ ಕೊಠಡಿಯನ್ನು ನೋಡಿ, ಪ್ರಸಾದನ ಗಂಟಲು ಒತ್ತರಿಸಿತು. ಮನಸ್ಸಿಲ್ಲದ ಮನಸ್ಸಿನಿಂದ ಆತ ನಾಲ್ಕು ತುತ್ತು ಉಂಡ. ಉಂಡುದರ ಎರಡು ಪಾಲು ನೀರು ಕುಡಿದ.
ಪ್ರಸಾದ ಎದ್ದು ಕೈ ಬಾಯಿ ತೊಳೆದುಕೊಳ್ಳುತ್ತಿದ್ದಾಗ ಗಿರಿಜಾ ಕೂಗಿ ನುಡಿದಳು :
“ಅಣ್ಣಯ್ಯ ಬಂದ್ರು ! ”
[ಬಹಳ ಹೊತ್ತು ಒರಗುಬೆಂಚಿನಮೇಲೆ ಕುಳಿತ ಬಳಿಕ, ಇದ್ದಕ್ಕಿದ್ದಂತೆ ವಿಶ್ವನಾಥಯ್ಯ ಎದ್ದು ನಿಂತಿದ್ದರು. ಮನೆಗೆ ಹೋಗಬೇಕು-ಎಂದು ತೋರಿತ್ತು. ನಿಧಾನವಾಗಿ ನಡೆದರಾಯ್ತು, ಮನೆ ತಲಪುವ ವೇಳೆಗೆ ಪ್ರಸಾದ ಹೊರಟು ಹೋಗಿದ್ದರೆ ತೊಂದರೆಯೇ ಇರುವುದಿಲ್ಲ-ಎಂದುಕೊಂಡರು. ಆದರೆ ನಡೆಯ ತೊಡಗಿದಮೇಲೆ ಪಾದಗಳು ಬೇಗಬೇಗನೆ ಮುಂದುವರಿದಿದ್ದುವು.]
ತಂದೆ ಬಂದರೆಂದು ಸಾರಿ ಹೇಳಿದ ಗಿರಿಜಾ, “ಟ್ಯಾಕ್ಸಿ ಬಂತು,” ಎಂದು ನುಡಿದಳು.
ಮನೆ ಹುಡುಕುತ್ತ ಆ ದಾರಿಯಲ್ಲಿ ಮೆಲ್ಲಗೆ ಬಂದಿದ್ದ ಟ್ಯಾಕ್ಸಿಯ ಚಾಲಕ ನಂಬರನ್ನು ಗುರುತಿಸಿ ಬ್ರೇಕು ಹಾಕಿದ್ದ. ಬಸವಳಿದಿದ್ದ ಟ್ಯಾಕ್ಸಿ ಹುಶ್ಶೆಂದಿತು.
ನಡೆದು ದಣಿದು ಮೃದುವಾಗತೊಡಗಿದ್ದ ಮೆದುಳಿಗೆ ವಿಶ್ವನಾಥಯ್ಯನವರೂ ಬ್ರೇಕುಹಾಕಿ, ಉಸ್ಸೆಂದು ಆರಾಮ ಕುರ್ಚಿಯ ಮೇಲೆ ಕುಳಿತರು.
ಒಳಗೆ ಪ್ರಸಾದ ತಾಯಿಯ ಪಾದಗಳಿಗೆ ನಮಿಸಿದ.
ಬಿಕ್ಕುತ್ತ ಆಕೆ, “ನಿಮ್ತಂದೆಯ ಆಶೀರ್ವಾದ ಕೇಳ್ಕೊ,” ಎಂದರು.
ಪ್ರಸಾದ ಹೊರಕ್ಕೆ ಬಂದು ಯಾಂತ್ರಿಕವಾಗಿ ತಂದೆಯ ಅಡಿಗಳಿಗೆ ನಮಿಸಿದ.
ಯಾವ ಭಾವವನ್ನೂ ವ್ಯಕ್ತಪಡಿಸದೆ ಗೊಗ್ಗರ ಗ೦ಟಲಲ್ಲಿ ಅವರೆಂದರು :
"ಏಳು. ”
ಅವರಾಕೆ ನುಡಿದರು:
"ಟೈಮಾಯ್ತಂತೆ, ಊಟಕ್ಕೆದ್ಬಿಡಿ. ಸ್ಟೇಷನಿಗೆ ಹೋಗೋದಿಲ್ವೆ? ”
ಗೋಡೆಯತ್ತ, ಕಿತ್ತು ಬಂದಿದ್ದ ಜಾಗವನ್ನು ದಿಟ್ಟಿಸಿ, ವಿಶ್ವನಾಥಯ್ಯ ಅ೦ದರು :
“ಅವನೇನು ಚಿಕ್ಕ ಮಗುವೆ? ದಾರಿ ತಿಳೀದೆ ಅವನಿಗೆ? ”
ಮುಖ ಗಂಟಿಕ್ಕಿ ಪ್ರಸಾದನೆಂದ :
"ಬೇಡಿ. ಯಾರೂ ಬರಬೇಕಾದ್ದಿಲ್ಲ.”
ಟ್ಯಾಕ್ಸಿಯವನು ಸೂಟ್ಕೇಸನ್ನೊಯ್ದ.
ಪ್ರಸಾದ ಕಿಟ್ಟನ್ನೆತ್ತಿಕೊಂಡು ಹೊಸ್ತಿಲ ಮೇಲೆ ನಿಂತು, "ಬರ್ತೀನಿ ಅಮ್ಮ. ಬರ್ತೀನಿ ಅಣ್ಣಯ್ಯ. ಗಿರಿಜಾ, ಬರ್ತೀನಿ,” ಎಂದ. " ಹೋಗ್ಬರ್ತೀನಿ ಅನ್ನೋ,” ಎಂದು ತಾಯಿ ಗೋಗರೆದರು.
“ಹ್ಞೂ. ಹೋಗ್ಬರ್ತೀನಿ.”
"ಹುಷಾರಿ, ಪ್ರಸಾದು. ”
"ಹೂನಮ್ಮಾ. ”
ಟ್ಯಾಕ್ಸಿಯೊಳಕ್ಕೆ ಪ್ರಸಾದ ಕುಳಿತ. ಗೇಟಿನ ಬಳಿ ಗಿರಿಜೆ ನಿಂತಳು. ಆಕೆಯ ಹಿಂದೆ ತಾಯಿ.
ಪ್ರಸಾದನೆಂದ :
"ಗಿರಿಜಾ ಬೈ ಬೈ.”
ನಾಲಗೆಯ ತುದಿಗೆ ಬಂದರೂ ಪದಗಳನ್ನು ಉಚ್ಚರಿಸಲಾಗಿದೆ ಗಿರಿಜಾ ಅಂಗೈಯನ್ನು ಆಡಿಸಿದಳು.
ಟ್ಯಾಕ್ಸಿ ಹೊರಟಿತು.

ರೂರ್ಕೆಲಾ ತಲಪಿ ಕೆಲ ದಿನಗಳಾದ ಬಳಿಕ ಪ್ರಸಾದನಿಂದ ಒಂದು ಕಾಗದ ಬಂತು. ಇನ್ನೊಂದು, ಜರ್ಮನಿಯನ್ನು ಆತ ಮುಟ್ಟಿದಮೇಲೆ.
ಎರಡೂ ಗಿರಿಜೆಗೆ.
ವಿಶ್ವನಾಥಯ್ಯ ನಂಬಲಾರರು, ನಂಬದೆ ಇರಲಾರರು.
ಸುಳ್ಳಲ್ಲ, ನಿಜ. ಪ್ರಸಾದ ಜರ್ಮನಿಗೆ ಹೋದುದು ನಿಜವೇ.
ದಾರಿಯಲ್ಲೊಂದು ಸಂಜೆ ನರಸಿಂಗರಾಯರು ಅವರನ್ನು ತಡೆದು ನಿಲ್ಲಿಸಿ ಕೇಳಿದರು :
"ವಿಶ್ವನಾಥಯ್ಯ, ನಿಮ್ಮನ್ನ ಒಂದು ವಿಷಯ ಕೇಳ್ಬೇಕೂಂತ ಅವತ್ನಿಂದ ಅಂದ್ಕೊಂಡಿದೀನಿ. ನೀವು ಕೈಗೇ ಸಿಗ್ತಾ ಇಲ್ಲ.”
ನಗಲು ಪ್ರಯತ್ನಿಸಿ ವಿಶ್ವನಾಥಯ್ಯ ಕೇಳಿದರು:
"ಹೆಹ್ಹೆ. ಏನು ವಿಷಯ?”
"ನಿಮ್ಮ ಮಗ ಜರ್ಮನಿಗೆ ಹೋದ್ನಂತೆ, ಹೌದೆ?”
"ಹ್ಞ."
"ಚಂದ್ರಶೇಖರಯ್ಯ ಇಲ್ವೆ?-ಮೇಷ್ಟ್ರು. ಆತನಿಂದ ತಿಳೀತು."
"...."
ಮಾತಿಗೆ ಬರಗಾಲವೆ? ವಿಶ್ವನಾಥಯ್ಯ ಮೌನ ತಳೆದರೆಂದು ಬಿಡುವವರೆ ನರಸಿ೦ಗರಾಯರು?
"ಒಳ್ಳೇದೇ ಆಯ್ತು, ಅನ್ನಿ. ಆದರೂ, ಮದುವೆ ಮುಗಿಸ್ಕೊಂಡು ಹೋಗಿದ್ದರೆ ಚೆನಾಗಿತ್ತು. ಅಲ್ದೆ ನಿಮ್ಮ ಮಗಳದೂನೂ . . .”
ನಿನಗೆ ಯಾತಕ್ಕೆ ಇದರ ಉಸಾಬರಿ? – ಮುಚ್ಕೊಂಡು ಹೋಗಯ್ಯ ತೆಪ್ಪಗೆ! ಎಂದು ಆಕ್ರೋಶದ ನುಡಿ ಒಳಗೆ ರೂಪುಗೊಂಡರೂ, ಅದನ್ನು ಹೊರಗೆಡವದೆ ವಿಶ್ವನಾಥಯ್ಯ ನಿಟ್ಟುಸಿರು ಬಿಟ್ಟು, ನರಸಿ೦ಗರಾಯರ ಮಗ್ಗುಲಲ್ಲಿ ನಡೆದರು.
ಹೃದಯ ತೋಡಿಕೊಳ್ಳಲು ಯಾರಾದರೇನು? ಎ೦ಬ ತೀರ್ಮಾನಕ್ಕೆ ಬಂದು, ಉಸಿರು ಕಟ್ಟಿದೆಯಲ್ಲಾ ಎಂದು, ಕೋಟಿನ ಗುಂಡಿಯನ್ನು ಬಿಚ್ಚಿದರು. ದಣಿದು ಒಳಗೆ ಕುಳಿತಿದ್ದ ಪದಗಳು ಕುಂಟುತ್ತ ಒಂದರ ಹಿಂದೆ ಒಂದಾಗಿ ಹೊರಬಂದುವು:
“ಏನು ಹೇಳ್ಲಿ ಸಾರ್? ಪ್ರಾರಬ್ಧ ...”

ರೇಗುತ್ತ ಆ ಮಾತು ಈ ಮಾತು ಆಡುತ್ತ ಇದ್ದರೆ ಚೆನ್ನು. ಮನೆಗೆ ಶೋಭೆ. ಬದಲು, ಅಂತರ್ಮುಖಿಯಾಗಿ ಮೌನ ತಳೆದರೆ?
_ಗಂಡನ ಹೊಸ ನಡತೆಯಿಂದ ಹೆಂಡತಿಗೆ ದಿಗಿಲು.
ಸಮಯ ನೋಡಿ ವಿಶ್ವನಾಥಯ್ಯನನ್ನು ಅವರಾಕೆ ಮಾತನಾಡಿಸಿದರು:
"ಕೇಳಿಸ್ತೆ ?"
ಹೇಳುವುದಕ್ಕೆ ಮುನ್ನವೇ ಆ ಪ್ರಶ್ನೆಯ ಪೀಠಿಕೆ.
ವಿಶ್ವನಾಥಯ್ಯ ತಲೆ ಎತ್ತಿ ಪತ್ನಿಯನ್ನು ನೋಡಿದರು.
“ಮಗೂ ಮದುವೆಯ ವಿಷಯ ಏನು ತೀರ್ಮಾನ ಮಾಡಿದಿರೀಂದ್ರೆ...”
"ಯಾವ ಮಗು?"
"ಗಿರಿಜಾದು."
ಕಡತದ ಮೇಲೆ ಷರಾ ಬರೆದುದನ್ನು ನಿರ್ವಿಕಾರವಾಗಿ ಓದುವವರಂತೆ ವಿಶ್ವನಾಥಯ್ಯ ಅಂದರು:
"ಮೂರು ತಿಂಗಳ ಕೆಳಗೆ ಸಕಲೇಶಪುರದವರು ಒಬ್ಬರು ಬಂದಿದ್ದರಲ್ಲ ಪತ್ನೀಪುತ್ರ ಸಮೇತರಾಗಿ? ಅವರ ಮಗನಿಗೆ – ಡಾಕ್ಟ್ರು ಜ್ಞಾಪಕ ಇದೇ ತಾನೆ? - ಗಿರಿಜಾ ಒಪ್ಪಿಗೆಯಂತೆ. ಒಂದು ಫಿಯೆಟ್ ಕಾರು, ಒಂದು ಸೇರು ಬಂಗಾರ, ಮೇಲೆ ಆರು ಸಾವಿರ ರೂಪಾಯಿ ಕೊಟ್ಟರೆ ಮಾಡ್ಕೋತಾನಂತೆ.”
"ಕಾರಿಗೆ ಎಷ್ಟಾಗುತ್ತೆ?”
"ಹಳೇದಲ್ಲ, ಹೊಸದು. ಹದಿಮೂರು ಸಾವಿರ ರೂಪಾಯಿ ಚಿಲ್ಲರೆ...”
"ಅಯ್ಯೋ ದೇವರೇ !"
"ಈ ಅರಮನೆ ಮಾರಿದರೆ ಹದಿನೈದು ಸಾವಿರ ರೂಪಾಯಿ ಬರಬಹುದು. ಉಳಿದದ್ದಕ್ಕೆ ಏನು ಮಾಡೋಣ?”
ಕಾಸಿಗೆ ಕಾಸು ಕೂಡಿಟ್ಟು ಕಟ್ಟಿಸಿದ ಮನೆಯನ್ನು, ಅದು ತಮಗೆ ಸೇರಿದ್ದಲ್ಲ ಎನ್ನುವಂತೆ, ಮಾರುವ ಮಾತನ್ನು ವಿಶ್ವನಾಥಯ್ಯ ಆಡಿದ್ದರು.
ಆದರೆ, ಅದನ್ನು ಆಲಿಸಿದ ಮನೆಯೊಡತಿಯ ಗಂಟಲೊಣಗಿತು.
"ಮನೆ ಮಾರಿ ನಾವೇನು ಮಾಡೋಣ ಅಂದ್ರೆ?”
"ಕೈಲಿ ಕಪ್ಪರ ಹಿಡಿದು ಹೊರಡೋದು . . . ಕಾಶಿಗೆ ಯಾಕೆ ಹೋಗಬಾರದೂ೦ತೀನಿ . . . "
"ಅಣ್ಣಯ್ಯ!”
ಕಾತರದ ಧ್ವನಿ. ಗಿರಿಜೆಯದು.
“ಇಲ್ಲೇ ಇದೀಯಾ? ಸಮಾಜಕ್ಕೆ ಹೋಗಿದಾಳೆ ಅಂದ್ಕೊಂಡಿದ್ನಲ್ಲೇ...”
"ಇಲ್ಲೇ ಇದ್ದೆ ಅಮ್ಮ. ಎಲ್ಲಾ ಕೇಳಿಸ್ಕೊಂಡೆ."
"ಸರಿ !ಸರಿ !"
ಗಿರಿಜಾ ಬಹಳ ದಿನಗಳಿಂದ ಕಂಠಪಾಠ ಮಾಡಿಕೊಂಡಿದ್ದ ಮಾತುಗಳನ್ನು ಉಸಿರು ಬಿಗಿಹಿಡಿದು ಅಂದಳು:
"ನನಗೆ ಈಗ್ಲೇ ಮದುವೆ ಬೇಡ. ನಾನು ಕೆಲಸಕ್ಕೆ ಸೇರ್ಕೋತೀನಿ,
ಅಣ್ಣಯ್ಯ. ನೀವು ಒಪ್ಪಬೇಕು, ಅಣ್ಣಯ್ಯ.”
ನೀರವತೆ. ಗಿರಿಜೆ ಆಡಿದುದಕ್ಕೆ ಪ್ರತಿಕ್ರಿಯೆಯಾಗಿ ಯಾವ ಮಾತೂ ಬರಲಿಲ್ಲ.
ನಿರಾಕರಣೆಯ ನುಡಿಗಿಂತಲೂ ಕಠಿನತರವಾಗಿತ್ತು ಆ ಮೌನ.
ಅದು ಸಹ್ಯವಾಗದೆ ಗಿರಿಜೆ ಅತ್ತಳು.
ಆ ಸದವಕಾಶವನ್ನು ಬಳಸಿಕೊಂಡು ಆಕೆಯ ತಾಯಿಯೂ ಕಂಬನಿ ಮಿಡಿದರು.
ವಿಶ್ವನಾಥಯ್ಯ ಎದ್ದು, ಮನೆಯಿಂದ ಹೊರಬೀಳಲು ಅಣಿಯಾದರು. ಕೊಠಡಿಯ ಬಾಗಿಲಿಗೊರಗಿ ರೋದಿಸುತ್ತಿದ್ದ ಮಗಳಿಗೆ ಅವರೆಂದರು:
“ಗಿರಿಜಾ! ನಾನು ಸಾಯುವವರೆಗೆ ನಿನ್ನನ್ನ ಚಾಕರಿಗೆ ಕಳಿಸೋದಿಲ್ಲ. ಕೆಲಸಕ್ಕೆ ನಾನು ಸೇರ್ಕೋತೀನಿ. ದೇವರು ಕಣ್ಣು ತೆರೆದರೆ, ಯಾವನಿಗಾದರೂ ಕೊಟ್ಟು ನಿನ್ನನ್ನು ಮದುವೆ ಮಾಡೇನು. ಸಮಾಜ ಗಿಮಾಜ ಅಂತ ಹೋಗ್ಬೇಡ. ಬಾಗಿಲು ಹಾಕ್ಕೋ . . .”
“ಏಳೀಂದ್ರೆ..."
"ಹಾಂ ಹಾಂ-"
ಗಡಬಡಿಸಿ ವಿಶ್ವನಾಥಯ್ಯ ಎದ್ದರು.
"ಇವತ್ನಿಂದ ಕೆಲಸಕ್ಕೆ ಹೋಗ್ಬೇಕು ಅಂದಿದ್ರಿ, ಅಲ್ವೆ?”
"ಹೌದು. ಎದ್ದೆ."
ರೇಡಿಯೋನಿಂದ ವೆಂಕಟೇಶಸ್ತುತಿ ಕೇಳಿಬರುತ್ತಿತ್ತು.
[ಈ ದಿನ ಈ ಸ್ತೋತ್ರ, ನಾಳೆ ಮಲ್ಲಿಕಾರ್ಜುನ ಸ್ತೋತ್ರ]
ಅವಸರದ ಮುಖಮಾರ್ಜನ, ಗುಟುಕು ಕಾಫಿ, ಸ್ನಾನ. ಬಿಸಿಬಿಸಿ ಅನ್ನದ ತುತ್ತು.
ಹಿಂದಿನ ದಿನ ಉದ್ಯೋಗ ದೊರಕಿಸಿಕೊಂಡಿದ್ದರು ವಿಶ್ವನಾಥಯ್ಯ. ನೂರು ರೂಪಾಯಿ ಮಾಸಿಕ ತಲಬಿನ ಆಫೀಸು ಮ್ಯಾನೇಜರು. ಏಕ ಕಾಲದಲ್ಲೇ ಹತ್ತಾರು ಕಟ್ಟಡಗಳ ನಿರ್ಮಾಣಕಾರ್ಯವನ್ನು ಕೈಗೊಳ್ಳುವುದರಲ್ಲಿ ಹೆಸರು ಪಡೆದಿದ್ದ ಕಂಟ್ರಾಕ್ಟರು ಮಹಾದೇವಯ್ಯ – ಸ್ವತಃ ನಿರಕ್ಷರ ಕುಕ್ಷಿ- ತಮ್ಮ ವ್ಯವಹಾರ ಸುಗಮವಾಗುವುದಕ್ಕೋಸ್ಕರ ಆಫೀಸು ತೆರೆದಿದ್ದರು.
" ನೂರು ರೂಪಾಯಿ ಕೊಡುತೀನಪ್ಪ. ಇಷ್ಟವಿದ್ದರೆ ಬನ್ನಿ," ಎ೦ದಿದ್ದರು ಮಹಾದೇವಯ್ಯ.
ಕತ್ತೆ ದುಡಿಮೆಯಲ್ಲಿ ಈ ವಿಶ್ವನಾಥಯ್ಯನನ್ನು ಮೀರಿಸುವವರಿಲ್ಲ ಎ೦ದು ತಿಳಿದಿದ್ದರೂ ಮಾತು ಸೇರಿಸಿದ್ದರು :
" ಸರಕಾರೀ ಕೆಲಸದ ಹಾಗಲ್ಲ. ಹೇರು ಜಾಸ್ತಿ !"
" ಅದೇನೂ ದೊಡ್ಡದಲ್ಲ. ಬರ್ತೀನಿ, ಒಪ್ಪಿಗೆ" ಎ೦ದಿದ್ದರು ವಿಶ್ವನಾಥಯ್ಯ.
" ನಾಳೆ ದಿವಸ ಚೆನ್ನಾಗಿದೆ. ಹತ್ತು ಘ೦ಟೆಗೆ ಆಫೀಸು ಶುರು. ಬ೦ದ್ಬುಡಿ," ಎ೦ದು ಹುಬ್ಬು ಹಾರಿಸಿದ್ದರು ಮಹಾದೇವಯ್ಯ.
ಏಳುತ್ತಲಿದ್ದ ವಿಶ್ವನಾಥಯ್ಯನವರ ದೃಷ್ಟಿ ತಾರಸಿಯಲ್ಲಿದ್ದ ತೂಗು ಕೊ೦ಡಿಗಳನ್ನು ನೋಡಿತು.
ಪ್ರಸಾದನ ಮಗುವಿಗಾಗಿ ತೊಟ್ಟಿಲು? ಗಿರಿಜೆಯ ಹೆರಿಗೆಗಾಗಿ ತೊಟ್ಟಿಲು?
-ವಿಚಾರ ಸರಣಿ ಕಹಿಯಾಗಿ ಹರಿಯಬೇಕಾಗಿತ್ತು. ಆದರೆ ವಿಶ್ವನಾಥಯ್ಯನವರಿಗೆ ಬಿಡುವಿರಲಿಲ್ಲ.
ನಿವೃತ್ತಿಯ ಅನ೦ತರದ ವಿಶ್ರಾ೦ತಿಯ ಕನಸನ್ನು ಹಿ೦ದೆ ಕ೦ಡಿದ್ದರಲ್ಲ?
ಆ ವಿಶ್ರಾ೦ತಿ ಮುಗಿದೇಹೋಗಿತ್ತು. ಒ೦ದು ತಿ೦ಗಳಲ್ಲಿ ಮುಗಿದಿತ್ತು. ಪೂಜೆಗೆ ಕುಳಿತಾಗ ವಿಶ್ವನಾಥಯ್ಯನವರ ಕಣ್ಣುಗಳಿ೦ದ ಕ೦ಬನಿ ತೊಟ್ಟಿಕ್ಕಿತು.
ಹೀಗೂ ಆಯಿತಲ್ಲ ಅವಸ್ಥೆ; ಯಾವ ಜನ್ಮದ ಶಾಪ ತಮ್ಮ ಈ ದುಸ್ಥಿತಿ- ಎ೦ದು ಅವರು ಕೊರಗಿದರು.
. . . ಕೋಟು ತುಸು ಹರಿದಿತ್ತು. ಅದನ್ನೇ ಅವರು ತೊಟ್ಟರು. ಸೈಕಲಿನ ಮೇಲಣ ಧೂಳನ್ನು ಝಾಡಿಸಿ ಅದನ್ನು ಅ೦ಗಳಕ್ಕಿಳಿಸಿದರು. ಗಾಲಿಗಳಲ್ಲಿ ಗಾಳಿ ಇರಲಿಲ್ಲ.
ಹತ್ತು ಮಾರುಗಳಾಚೆ ಸೈಕಲ್ ಶಾಪು. ವಾಹನವನ್ನು ತಳ್ಳಿಕೊ೦ಡು ಆ ಅ೦ಗಡಿಯುತ್ತ ವಿಶ್ವನಾಥಯ್ಯ ಹೋದರು.