ಪುಟ:ಅಜಿತ ಕುಮಾರ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

V

ಮಲ್ಲ ಯುದ್ಧ

ಸಾಯಂಕಾಲವಾಗುತ್ತ ಬಂದಿತು. ಅಜಿತನು ಇನ್ನೂ ಆ ಕಾಡು
ಗುಡ್ಡಗಳಲ್ಲಿಯೇ ನಡೆದು ಹೋಗುತಿದ್ದನು. ಆತನಿಗೆ ರಾತ್ರಿಯಾದೀತೆಂಬ
ಭಯವೇನೂ ಇರಲಿಲ್ಲ. ಹೊಟ್ಟೆ ಹಸಿದರೆ ಮರಗಳಲ್ಲಿ ಹಣ್ಣುಗಳಿವೆ;
ನಿದ್ದೆ ಕವಿದರೆ ಮಲಗುವುದಕ್ಕೆ ಹಸುರು ಹುಲ್ಲು ಇದೆ. ಕತ್ತಲಾಗುವುದ
ರೊಳಗೆ ಯಾವದಾದರೊಂದು ಪಟ್ಟಣವನ್ನು ಸೇರಬೇಕೆಂಬ ಯೋಚನೆಯೇ
ಇರಲಿಲ್ಲ. ಆದುದರಿಂದ ದೂರದಲ್ಲಿ ಬೆಳ್ಳಗೆ ಕಾಣಿಸುವ ಪರ್ವತಗಳ
ಅಂದವನ್ನು ನೋಡುತ್ತ, ನಿಧಾನವಾಗಿ ನಡೆದು ಹೋಗುತ್ತ, ಹೊತ್ತು
ಮುಳುಗುವುದಕ್ಕಾದಾಗ ಕುಸುಮಪುರವೆಂಬ ಪಟ್ಟಣವನ್ನು ಮುಟ್ಟಿದನು.

ಕುಸುಮಪುರವು ಆಗಿನ ಕಾಲದಲ್ಲಿ ಹೆಸರುವಾಸಿಯಾದ ಪಟ್ಟಣ.
ಬೇಸಾಯವು ಅಲ್ಲಿಯೇ ಪ್ರಾರಂಭವಾಯಿತು. ಒಂದು ಸಲ ಭೂದೇವಿಯು
ಅವತಾರವೆತ್ತಿ ಅಲ್ಲಿಗೆ ಹೋಗಿ, ನೆಲವನ್ನು ಉತ್ತು ಬಿತ್ತುವ ಕ್ರಮಗಳನ್ನು
ಜನಗಳಿಗೆ ಉಪದೇಶಿಸಿದಳಂತೆ, ಆಕೆಯ ಗಂಡನು ಅವರಿಗೆ ಬಿತ್ತವನ್ನು
ಒದಗಿಸಿಕೊಟ್ಟನಂತೆ. ಆದುದರಿಂದ ಅಲ್ಲಿ ಭೂದೇವಿಯನ್ನೂ ಆಕೆಯ
ಪತಿಯನ್ನೂ ದೇವಾಲಯಗಳಲ್ಲಿ ಪೂಜಿಸುವ ವಾಡಿಕೆ ಇತ್ತು.

ಕುಸುಮಪುರಕ್ಕೆ ಕ್ರೂರಾಕ್ಷನೆಂಬವನು ಅರಸನಾಗಿದ್ದನು. ಆತನ
ಹೆಸರೆಷ್ಟು ಕಠಿನವೋ ಮನಸೂ ಅಷ್ಟೇ ಗಟ್ಟಿಯಾಗಿತ್ತು. ಅಲ್ಲಿಯ
ಪ್ರಜೆಗಳು ಸುಖವೆಂದರೆ ಏನೆಂದು ತಿಳಿದಿರಲಿಲ್ಲ; ಆತನೊಂದು ಸಲ ಸತ್ತರೆ
ಸಾಕೆಂದು ಹಾರೈಸುತ್ತಿದ್ದರು.