ವಿಷಯಕ್ಕೆ ಹೋಗು

ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮುನ್ನುಡಿ xi

ನಿರ್ಲಿಪ್ತತೆ-ಇವೆಲ್ಲ ಐನ್‌ಸ್ಟೈನರನ್ನು ಅತ್ಯಂತ ವಾತ್ಸಲ್ಯಪಾತ್ರರನ್ನಾಗಿ ಅಜಾತಶತ್ರುವನ್ನಾಗಿ ಮಾಡಿದ್ದುವು.

ಅಜಾತಶತ್ರು ? ಹೌದು, ಅವರ ದೃಷ್ಟಿಯಲ್ಲಿ, ಅವರಿಗೆ ಯಾರನ್ನೂ ದ್ವೇಷಿಸಲಿಕ್ಕೆ ಬರುತ್ತಿರಲಿಲ್ಲ. ಅದರ ಅರ್ಥ ಅವರಿಗೆ ಶತ್ರುಗಳಿರಲಿಲ್ಲವೆಂದಲ್ಲ.

ಮಿಕಕೂ ಮೀನಿಗು ಒಳ್ಳೆಯ ಜನಕೂ
ಹುಲ್ಲೂ ನೀರೂ ತೃಪ್ತಿಯೆ ಸಾಕು ;
ಆದರೆ ಬೇಡನು ಬೆಸ್ತನು ಹಿಸುಣ
ಹಗೆಗಳವರಿಗೂ ವಿನಾಕಾರಣ

ಎಂಬ ಭರ್ತೃಹರಿಯ ಮಾತು ಐನ್‌ಸ್ಟೈನರಿಗೆ ಬಹಳ ಚೆನ್ನಾಗಿ ಅನ್ವಯಿಸುತ್ತಿತ್ತು. ಜಗತ್ತಿನಲ್ಲಿ ಹೇಗೆ ಹೇಗೆ ಅವರ ಮೇಲೆ ಪ್ರೀತಿಗೌರವ ಬೆಳೆಯುತ್ತಿತ್ತೋ ಹಾಗೆ ಹಾಗೆ ಜರ್ಮನಿಯಲ್ಲಿ ಹುಟ್ಟಿ, ಜರ್ಮನ್ ಹೊರತು ಇತರ ಭಾಷೆಗಳನ್ನು ಕೊನೆವರೆಗೂ ಸರಿಯಾಗಿ ಮಾತಾಡಲಾರದಿದ್ದ ಈ ವಿಶ್ವವಿಜ್ಞಾನಿಯನ್ನು ದ್ವೇಷಿಸುತ್ತಿದ್ದವರಲ್ಲಿ ಜರ್ಮನ್ ವಿಜ್ಞಾನಿಗಳೂ ಅವರಲ್ಲಿ ನೊಬೆಲ್ ಪಾರಿತೋಷಿಕವನ್ನು ಗೆದ್ದವರೂ ಸೇರಿದ್ದರು ಇದ್ದರೆಂಬುದನ್ನು ನೆನೆದರೆ ಸತ್ಯಶೋಧಕರೆಂದು ಬಿರುದು ಹೊತ್ತ ವಿಜ್ಞಾನಿಗಳೂ ನರಲೋಕದ ಪಿಶುನತೆಗೆ ಹೊರತಾದವರಲ್ಲ ಎಂಬುದು ಕೆನ್ನೆಗೆ ಹೊಡೆದಂತೆ ಪ್ರತೀತಿಗೆ ಬರುತ್ತದೆ. ಐನ್‌ಸ್ಟೈನರ ತಪ್ಪೆಂದರೆ ಅವರು ಯೂರೋಪಿನ 'ಹೊಲೆಯ'ರಾದ ಯೆಹೂದ್ಯರ ಜಾತಿಯಲ್ಲಿ ಹುಟ್ಟಿದ್ದು.

ಜರ್ಮನಿಯಲ್ಲಿ ಐನ್‌ಸ್ಟೈನರಿಗೊದಗಿದ ಅವಸ್ಥೆಯ ಕಥೆ ವಿಚಿತ್ರ ಮಾರ್ಗವನ್ನು ಅನುಸರಿಸಿತು. ಹಿಂಸೆ, ಯುದ್ಧ ಎಂಬುದನ್ನು ಸಹಿಸಲಾರದ ಈ ಶಾಂತಿಪಕ್ಷಪಾತಿ ಮೊದಲನೇ ಮಹಾಯುದ್ಧ ನಡೆಯುತ್ತಿದ್ದಾಗಲೇ ಯುದ್ಧದ ಸೈನಿಕ ಮನೋವೃತ್ತಿಯ ಬಗ್ಗೆ ತಮಗಿರುವ ವಿರೋಧವನ್ನು ಬಹಿರಂಗವಾಗಿಯೇ ಪ್ರಕಟಪಡಿಸಿದ್ದರೂ ಚಕ್ರವರ್ತಿ ಕೈಸರನ ಯುದ್ಧೋತ್ಸಾಹಿ ಸರಕಾರ ಅವರಗೊಡವೆಗೆ ಹೋಗದೆ ಅವರ ವೈಜ್ಞಾನಿಕ ಕೆಲಸವನ್ನು ನಿರಾತಂಕವಾಗಿ ನಡೆಸಲು ಬಿಟ್ಟಿತ್ತಾದರೆ, ಯುದ್ಧೋತ್ತರ ಜರ್ಮನಿಯಲ್ಲಿ ತಲೆಯೆತ್ತಿದ 'ಪ್ರಜಾತಂತ್ರ ದಲ್ಲಿ ಅವರ ಮೇಲೆ ದ್ವೇಷಸಾಧನೆ ಪ್ರಾರಂಭವಾಗಿದ್ದು ಸೋಜಿಗವಾಗಿ ಕಂಡರೂ ಅದು ಬರೇ ವಿರೋಧಾಭಾಸ ಮಾತ್ರ. ಪರಂಪರಾ ಗತವಾಗಿ ಅಧಿಕಾರ ನಡೆಸುವ ಗುಂಪಿಗಿಂತಲೂ 'ಜನಪ್ರಿಯ ಮಾರ್ಗಗಳಿಂದ ಹೊಸದಾಗಿ ಅಧಿಕಾರಕ್ಕೆ ಬರುವವರಲ್ಲಿ ಮಿತಾಮಿತ ನ್ಯಾಯಾನ್ಯಾಯ ಸತ್ಯಾಸತ್ಯ ವಿವೇಕ ಕಡಿಮೆಯಿರುತ್ತದೆಂದೂ ಅವರು ಜನಜಂಗುಳಿಯ ಅವಿಚಾರಿತ ರಾಗದ್ವೇಷಗಳ ಮಿತಿಮೀರಿ ಉಬ್ಬಿಸಿದ ಆವೃತ್ತಿಗಳಾಗಿರುತ್ತಾರೆಂದೂ ಇತಿಹಾಸದ ಸಾಮಾನ್ಯ ಅನುಭವ ಹೇಳುತ್ತದೆ. ತಾನೇ ಬಲಿಯಾಗಿ ಸೋತ ಜರ್ಮನಿಯಲ್ಲಿ ತಲೆಯೆತ್ತಿದ ಹೊಸ ನಾಯಕರು, ಜನಜಂಗುಳಿಯಲ್ಲಿ ಶತಮಾನಗಳಿಂದ ತಿರಸ್ಕಾರಪಾತ್ರರಾಗಿದ್ದ ಯೆಹೂದ್ಯರ ಮೇಲಿನ ದ್ವೇಷಕ್ಕೆ ಉರುವಲು ಒಟ್ಟಿ ಅದರ ಬಲದಿಂದ ಅಧಿಕಾರಕ್ಕೆ ಯಶಸ್ವಿಯಾಗಿ ಲಗ್ಗೆ ಹಾಕಿದರು. ಯೆಹೂದ್ಯರ ದ್ವೇಷ ಅವರ ಸರಕಾರದ ಅಧಿಕೃತ ರಾಜನೀತಿಯೇ ಆಯಿತು. ಯೆಹೂದ್ಯರಾದ ಸಾಲದ್ದಕ್ಕೆ ಯುದ್ಧವಿರೋಧಿಯೂ ಅಂತಾ ರಾಷ್ಟ್ರೀಯವಾದಿಯೂ ಆಗಿ ಇಮ್ಮಡಿ 'ಅಪರಾಧ' ವೆಸಗಿದ ಐನ್‌ಸ್ಟೈನರ ಜೀವನ ಜರ್ಮನಿಯಲ್ಲಿ ಅಸಹನೀಯವಾಯಿತು. ಯೆಹೂದ್ಯರಿಗೆ ಸಂಬಂಧಪಟ್ಟಿದ್ದೆಲ್ಲ ವರ್ಜ್ಯವಾದದ್ದರೊಟ್ಟಿಗೆ ಯೆಹೂದ್ಯವಿಜ್ಞಾನವನ್ನೂ ಬಹಿಷ್ಕರಿಸುವ ವಿಪರೀತ ವೃತ್ತಿಯಲ್ಲಿ ಹೆಸರಾಂತ ಜರ್ಮನ್ ವಿಜ್ಞಾನಿಗಳಲ್ಲಿ ಬಹುಸಂಖ್ಯಾಕರು ಪಾಲುಗೊಂಡು ತಮ್ಮ 'ದೇಶಭಕ್ತಿ'ಯನ್ನು ಪ್ರದರ್ಶಿಸಿದ್ದನ್ನು ನೋಡಿ