ವಿಷಯಕ್ಕೆ ಹೋಗು

ಪುಟ:ಕನ್ನಡದ ಬಾವುಟ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಲೆದೂಗೆ ತೆಂಗು, ನೇಗಿಲು ನಗಲು, ಹೊಳೆಯು
ಸುಳಿದೋಡೆ, ತಲೆ ಎತ್ತಿ ಕಂಗೊಳಿಸೆ ಬೆಳೆಯು,
ಮಳಿಗೆ ತಕ್ಕಡಿ ಕುಣಿಯೆ, ಶಂಖ ದೇಗುಲದಿ
ಮೊಳಗೆ, ಮನೆ ಮಕ್ಕಳಿಂದುಲಿಯ ಗದ್ದಲದಿ-
ಮೆರೆಯಲಿಂತಾಂಗೈಯರೊಡೆತನದಿ ನಾಡು!
ಪರಮೇಶನೊಲುಮೆಯಿಂ; ಶಾಂತಿಗಿದು ಬೀಡು!
ಬರಲೆಮಗೆ ಜನ್ಮ ನಿನ್ನುದರದಲಿ, ತಾಯೆ!
ದೊರೆಯಲೆಮಗನುದಿನವು ನಿನ್ನಡಿಯ ಸೇವೆ!

ಎಂ. ಎನ್. ಕಾನುತ್

೧೨. ಕನ್ನಡನಾಡ ರಾಣಿ
ಏಳು ಶೂರರ ಖಣಿ ಏಳು ಶೂರರ ರಾಣಿ
ಏಳು ತೀರದ ವೀರರಸದ ವಾಣಿ
ಏಳು ಮಾರಿದ ಜಾನಿ ಏಳು ಈ ಸ್ಥಿತಿಗಾಣಿ
ಏಳು ವರ ವರದ ಪಾಣಿ.
ಶೂರ ಪುರುಷರ ಕೊನೆಯು ವೀರ ಕವಿಗಳ ಗೊನೆಯು
ಭೀರುತನವೆಂಬ ಶಲ್ಯಕ್ಕೆ ಮೊನೆಯು
ಧೀರ ಸತಿಯರ ತೆನೆಯು ವೀರರಸಗಳ ಸೊನೆಯು
ಈ ರೀತಿ ನಿನ್ನ ಮನೆಯು.
ಬರದೆ ಬೆಳೆಯುವ ಬೆಳೆಯು ತ್ವರದೆ ಹರಿಯುವ ಹೊಳೆಯು
ಇರದೆ ಪ್ರತಿಕಾಲಕ್ಕೆ ಬರುವ ಮಳೆಯು
ವರಲಕ್ಷಣದ ಕಳೆಯು ಸುರರ ಸೀಮೆಯ ಬೆಳೆಯು
ಇರುವಂಥ ನಿನ್ನ ಇಳೆಯು
ಸತ್ತಿರುವುದೆದೆ ಸೇರು ಸುತ್ತಿರುವ ವಿಷ ಹೀರು
ಬತ್ತಿರುವುದಮೃತ ಝರಿ ಮತ್ತೆ ತೋರು
ಸತ್ತುಳ್ಳ ನೂರಾರು ಬಿತ್ತುಗಳ ನೀನೂರು
ಕಿತ್ತು ಭಯಬಿಟ್ಟ ಬೇರು.
ಅಂದಿನಂತಹ ಧನವು ಅಂದಿನಂತಹ ತನುವು
ಅಂದಿನಂತವರ ಹಿರಿದಾದ ಮನವು
ಅಂದೆ ಅಂದಿನತನವು ಚಂದದಾಟಕೆ ಅನುವು
ಎಂದು ತಂದೀತು ದಿನವು!