ವಿಷಯಕ್ಕೆ ಹೋಗು

ಪುಟ:ಕನ್ನಡದ ಬಾವುಟ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೮

ಭಲೆ ಭಲೆ! ನಮ್ಮಯ ಬಳಿಯಿಹ ಬಾನೊಳೆ
ತೊಳಗುವ ನೇಸರು ಮೂಡುವನು,
ಹೊಳೆಯುವ ಕೈಗಳನೆಳೆದೆಲ್ಲೆಡೆಯಲಿ
ಬೆಳಕು ಬೆಳಕನೇ ಮಾಡುವನು;
ಹೊಳಪನು ಎಲ್ಲಕೆ ನೀಡುವನು.

ಬೆಳಕನು ಮಾಡಲು ಕಳೆದುಹೋಗದೆಯ
ಉಳಿಯುವುದೇ ಕೊಳೆಗತ್ತಲೆಯು?
ಮಲಗಿದ ಕನ್ನಡದೆಳೆಯರು ಏಳುತೆ
ಸುಳಿದಾಡುವ! ಎತ್ತೆತ್ತಲೆಯು;
ನಲಿದಾಡುವ! ಎತ್ತೆತ್ತಲೆಯು.

ಮಿರುಗುವ ಕಿರಣವ ಹರಡುತೆ ನೇಸರು
ನಡುಬಾನಿಗೆ ತಾನೇರುವನು,
ಬಿರಿಮುಗುಳೆಲ್ಲವನರಳಿಸಿ ಹುರುಳನು
ಹವೆಯೊಳಗೆಲ್ಲಿಯು ತೂರುವನು,
ಅವನಿಗೆ ಕಂಪನು ಬೀರುವನು.

ಕನ್ನಡ ನಾಡಿನ ಗುಡಿಗಳಸಕೆ ಹೊಸ
ಬಣ್ಣವನೀತನು ಹಾಕುವನು,
ಹೊನ್ನಿನ ಕಿರಣದ ಹಂದರ ಬಿಗಿಯುತೆ
ಕನ್ನಡಿಗರನಲ್ಲಿರಿಸುವನು,
ಎಲ್ಲರ ಎದೆಗಳ ಬೆರಸುವನು.

ಭಯವೇತರದಾವಾಗ ನಮಗೆ? ನಿ.
ರ್ಭಯರು! ನೆರೆದು ಕುಣಿ-ಕುಣಿದಾಡಿ,
'ಜಯ ಜಯ ಜಯ ಕರ್ಣಾಟಕ' ಎನ್ನುತೆ
ಹಾಡುವ ನಾವೆಲ್ಲರು ಕೂಡಿ;
ಕೂಗುವ ನಾವೆಲ್ಲರು ಕೂಡಿ.

ಕನಸಿನೊಳಗೆ ಕಣ್ಮುಚ್ಚಿಯೆ ನೋಡಿದ
ಇನಿನೋಟದ ಪಟಗಳ ಬರೆದು,
ನನಸಿನಲಿಯು ಕಾಣುವ ತೆರಮಾಡುತೆ
ಜನಕಚ್ಚರಿ ತೋರುವ! ನೆರೆದು
ಬೆರಗನುಗೊಳಿಸುವ ನಾವ್ ಬೆರೆದು.