ವಿಷಯಕ್ಕೆ ಹೋಗು

ಪುಟ:ಕನ್ನಡದ ಬಾವುಟ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೩

ನೊರೆಯ ಸೇಸೆಗಳನು ಸೂಸಿ ತೆರೆಯ ಚವರಗಳನೆ ಬೀಸಿ
ಬಾಲೆಯಂತೆ ನಲಿದು ಕುಣಿದು ಕಾಳಿಯಂತೆ ಕನಲಿ ಮೊರೆದು
ಉರಗಿಯಂತೆಯುರುಗಿ ತಿರುಗಿ ಛಲದ ಭರದಿ ಸರಿದು ಮಸಗಿ
ಬೆಟ್ಟದಿಂದಲುರುಳಿ ಹೊರಳಿ ದಿಟ್ಟತನದಿ ತೊಳಗಿ ಮೊಳಗಿ
ಘೋರ ವೇಗದಿಂದ ನೆಗೆದು ಭೋರೆನುತ್ತೆ ಮಂಜನೆಸೆದು
ಪನಿಯ ಮುಗಿಲ ಕವಿಸಿ ಸರಿದು ಮನುಜಸೇವೆಯಿಂದಲೊಲಿದು
ಬಲವ ಬೆಳಕ ನೀಡುತುಂ ನಿಲದೆ ನಾಟ್ಯವಾಡುತುಂ
ನುಗ್ಗಿ ಬೀಳುತೇಳುತುಂ ನೆಗೆದು ಪಾರುತೋಡುತುಂ
ಭುವನರಚನೆಯೆನಿತು ಕುತುಕಮೆನುತ ಜನಕೆ ಸಾರುತುಂ
ಭುವನಜನನಿಯೆನಿತು ಚತುರಳೆನುತ ಕಣ್ಗೆ ತೋರುತುಂ
ಪುರುಷಬಲವ ಬೆಳಗಿರೆನುತ ಜಡರ ಪಳಿದು ಮೊಳಗುತುಂ
ಪರಿವಳೀ ಕವೇರ ತನಯೆ ಧೀರಜನನಿಯೆನಿಸುತುಂ

ಕನ್ನಡ ನಾಡಿನ ಕುತುಕಂ
ಕನ್ನಡಿಗರ ಸಾಹಸಕ್ಕೆ ಕನ್ನಡಿ ಮೇಣೀ
ಕನ್ನಡಿಗರ ಭಾಗ್ಯದ ನಿಧಿ
ಯುನ್ನತಿಯಂ ಪಡೆದು ಬಾಳ್ಗೆ ಶಿವನಸಮುದ್ರಂ

ಡಿ.ವಿ.ಗುಂಡಪ್ಪ

೨೬. ಲಲಿತಾದ್ರಿ


ತಿರೆಯ ಹೋರಾಟದಲಿ
ಬಗೆ ಕದಡಿ ಕಂಗೆಡಲು,
ನೇಹಿಗನೆ, ಬಾ, ಇಲ್ಲಿ
ಶಾಂತಿಯಿಹುದು!
ತಂಬೆಲರ ತೀಟವಿದೆ
ಬಳಲಿಕೆಯ ಪರಿಹರಿಸೆ;
ಮೋಹಿಸಲು ಕಂಗಳನು
ಪರಮ ಸೌಂದರ್ಯವಿದೆ;
ಜೀವವನು ಸಂತವಿಸೆ
ದೇವಸಾನ್ನಿಧ್ಯವಿದೆ!
ಸೋದರನೆ, ಬಾ, ಇಲ್ಲಿ;
ಧನ್ಯನಾಗುವೆ ಇಲ್ಲಿ.