ವಿಷಯಕ್ಕೆ ಹೋಗು

ಪುಟ:ಕನ್ನಡದ ಬಾವುಟ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೩ ೬

" ಮೆಚ್ಚಿದೆನು, ಮೆಚ್ಚಿದೆನು, ವಿನಯನಿಧಿ; ನನ್ನೊಲುಮೆಗುವರಿ, ಈ ಅರಸಿ,
 ಚಿಕ್ಕದೇವಾಂಬೆಯನು ದುಃಖವಾವರಿಸುತಿರೆ, ಅದ ನಿನ್ನ ಕರಸಿ,
 ಪರಿಹರಿಸಿ, ರಾಜ್ಯವನು ನಿನ್ನ ತೋಳಿನಲಿರಿಸಿ ಕಾಯುವೆನು, ಬಾಳು.
 ಕೃಷ್ಣ ದೇವನ ಕುಲದ ನೆಲದರಿಕೆಯಾಳಿಕೆಯ ಹೆಮ್ಮೆಯಿಂದಾಳು.
 ನಿನ್ನ ಮಕ್ಕಳ ಸಾಲು ಕುಡಿಯೊಡೆದು ಹಬ್ಬುವುದು, ಬೆಳಗುವುದು ಬೀಡು;
 ಕಡೆಗಾಣದಂತೆಂತು ನಿಮಿರುವುದು ಯಾದವರ ಸಂತಾನ, ನೋಡು;
 ಕರ್ಣಾಟ ಚಕ್ರವರ್ತಿಗಳು, ಹೊಳೆಹೊಳೆಯುತಿಹರೆಂತು ಹೆಸರಾಂತು!
 ರಾಜೊಡೆಯ, ನರಸಿಂಹ, ಚಿಕದೇವ, ಮುಮ್ಮಡಿ ಕೃಷ್ಣೇ೦ದ್ರನಿ೦ತು,
 ಹೊಸಯುಗದ ಚಾಮೇ೦ದ್ರ- ಹಿರಿಯರೆಲ್ಲರ ಪುಣ್ಯ ಫಲಿಸಿ ಬಂದಂತೆ,
 ನಿರ್ಮಲದ ಗಗನದಲಿ ನೆಲಸಿ ಶಾಂತಿಯೊಳಿರುವ ಚಂದ್ರನೆಂಬಂತೆ,
 ನಾಲ್ಮಡಿಯ ಶ್ರೀ ಕೃಷ್ಣ - ಶ್ರೀ ಕೃಷ್ಣ- ಸಾಕೆನಿತು ಮಾತಿನಿತು ಸಾಕು.
 ಪರಮತೇಜಸ್ವಿಗಳು, ರಣಧೀರರಪ್ರತಿಮವೀರರಾಗಿದ್ದು,
 ಚಕ್ರವನ್ನು ತಡೆಯಿಲ್ಲದೋಡಿಸುತ, ಆಡು, ದುರ್ಗಗಳ ಗೆದ್ದು,
 ಯುದ್ದ ಕಾನ೦ದಿಸರು; ಕತ್ತಿಹೊಳಪನು ಚಿನ್ನ ದೊರೆಯೊಳಗೆ ಮರಸಿ,
 ತೊಡವೆನಿಸಿ ಮಡಗಿಹರು, ಶಾಂತಿಯಲಿ ಮನಸೋತು ಸಾತ್ವಿಕವನರಸಿ.
 ಸೌಮ್ಯ ಮೂರ್ತಿಗಳವರು, ಸಾಧುಗಳು, ಪ್ರೇಮಿಗಳು, ಭಕ್ತಿಬೋಧಕರು,
 ಕಾವ್ಯ ರಸಿಕರು, ಗಾನ ಕೌಶಲರು, ಕಲ್ಯಾಣಕಾರ್ಯ ಸಾಧಕರು.
 ಗುರುಗಳನು ಹಲವರನು ಸೇವಿಸುತ, ಧರ್ಮಸಾರವನು ಕಡೆಯುವರು,
 ಸ್ವಾಮಿಭಕ್ತಿಯೊಳೆರಡನೆಣಿಸದೆಯೆ, ತನ್ನೊಡೆಯ ತನವ ನಡೆಯುವರು.
 ಬ್ರಹ್ಮದಲಿ, ಕ್ಷಾತ್ರದಲ್ಲಿ, ನೀತಿಯಲಿ, ನೆರೆ ಪಳಗಿ ಮೈಮೆವೆತ್ತಿಹರು.
 ಒಮ್ಮೆ ನಾಡನು ತಿರುಗಿ ಹಳ್ಳಿಗರ ನೆಮ್ಮದಿಯ ನೇರ್ಪಡಿಸುತಿಹರು.
 ಒಮ್ಮೆ ಹೊಳಲನು ಮೆರೆದು ಮಿತ್ರರಾಜರ ಬರಿಸಿ ಸುಖಗೊಳಿಸುತಿಹರು.
 ಹೊಳೆಗಳನು ತಡೆಗಟ್ಟಿ ಬೆಂದ ಕಾಡನು ಬೆಳಸಿ ಹಸುರೆರಚುತಿಹರು.
 ಬೆಟ್ಟದಲ್ಲಿ ವಿಹರಿಸುತ ಜಾತ್ರೆಗಳ ಸಂಭ್ರಮಕೆ ಸಡಗರಿಸುತಿಹರು.
 ಜ್ಞಾನಿಗಳ ಗೋಷ್ಠಿಯಲ್ಲಿ ಕೇಳುವರು, ಬರಸುವರು, ತಾವೆ ಬರೆಯುವರು.
 ಪ್ರಜೆಗಳೊಲುಮೆಯ ಸೆಳೆದು, ರಾಜರಲಿ ಗಣ್ಯತೆಯ ಪಡೆದು ಮೆರೆಯುವರು.

ಮೈಸೂರರಸರ ಮೊದಲಿಗ, ನೋಡು,
ಇಂತಹ ದೊರೆಗಳ ಸೇರಿದ ನಾಡು,
ಸಿ೦ಗರದಾ ಸಿರಿಗನ್ನಡನಾಡು,
 ಮಂಗಳಮಯದಾ ನನ್ನೀ ನಾಡು,
ಕಂದಮ್ಮು, ಕುಂದದು, ಕೊರಗದು, ನೋಡು,
ಮೈಸೂರರಸರ ಅರಮನೆ, ನೋಡು