ವಿಷಯಕ್ಕೆ ಹೋಗು

ಪುಟ:ಕನ್ನಡದ ಬಾವುಟ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೪

ಆಸರಲಿ ಕಣ್ಣೆವೆಯು ಮುಚ್ಚಿ ಬರುತಿರಲತ್ತ
ಹೊಸತವಕದೊತ್ತಿನಲಿ ಮೇಲೆತ್ತಿದೆ!
- ಅಭೀಃ! ಅಭೀಃ! ಅಭೀಃ! ಇದೆ ಮಂತ್ರವೆನ್ನುತ್ತೆ
ಎಂಟು ದಿಕ್ಕಿನ ಗಾಳಿಗುಸಿರೆತ್ತಿ ಊದುತಿದೆ!
ನೀಳ್ಗೊರಲ ತುತ್ತುರಿಯನೂದಿಸುತಿದೆ!
ಯುಗದಗಲ ಜಗದಗಲ ಎಡರೆದ್ದು ನಿಂತಾವು!
ಸಂರಾಜರಬ್ಬರವು ನಡುಗಿಸೀತು!
ಕುಲವೆಂಬ ಮತವೆಂಬ ಕೆಳೆಯೆಂಬ ನಾಡೆಂಬ
ಮಮತೆಗಳು ದಾರಿಯಲಿ ಕತ್ತಲಿಟ್ಟಾವು!
- ಅಭೀಃ! ಅಭೀಃ! ಅಭೀಃ! ಎಂಬ ಧುವ ತಾರಗೆಯು
ಕತ್ತಲಲಿ ತವಿಲಲ್ಲಿ ದಿಕ್ಕನ್ನು ಕಾಣಿಪುದು
ನಿಜಕಿಟ್ಟ ಮುಸುಕೆತ್ತಿ ಮರೆ ತೆರೆವುದು
ಮಣಿಯದಿಹ ಮನವೊಂದು ಸಾಧಿಸುವ ಹಟವೊಂದು
ನಿಜದ ನೇರಕೆ ನಡೆವ ನಿಶ್ಚಲತೆಯೊಂದು
ಅನ್ಯಾಯಕೆಂದೆಂದು ಬಾಗದೆಚ್ಚರವೊಂದು
ಮರುಕಕ್ಕೆ ಪ್ರೇಮಕ್ಕೆ ಚಿರ ತೆರೆದ ಎದೆಯೊಂದು
- ಅಭೀಃ! ಅಭೀಃ! ಅಭೀಃ! ಎಂಬ ತಾರಕವಾಕ್ಯ
ನಾಡಿಯನು ನಡಸುತಿರೆ, ಬಾಳನ್ನು ತಿದ್ದುತಿರೆ
ನಡೆ ಮುಂದಕೆನ್ನು ತ್ತೆ, ಕೂಗುತಿವೆ ನುಗ್ಗಿಸುತಿವೆ.

ವಿ. ಸೀ.

(ವಿ. ಸೀತಾರಾಮಯ್ಯ)

೪೫. ನವೀನ

ನಾಡಿನ ಪುಣ್ಯದ ಪೂರ್ವದಿಗಂತದಿ
ನವ ಅರುಣೋದಯ ಹೊಮ್ಮು ತಿದೆ!
ಚಿರ ನೂತನ ಚೇತನದುತ್ಸಾಹದಿ
ನವೀನ ಜೀವನ ಚಿಮ್ಮುತಿದೆ!
ಅಭಿನವ ಮಧುಕೋಕಿಲ ಕಲಕಂಠದಿ
ಸ್ವರಸುರಚಾಪಗಳುಣ್ಮುತಿವೆ!
ಶ್ಯಾಮಲ ಕಾನನ ಸುಮಸಮ್ಮೇಲದಿ
ಇಂಚರ ಸಾಸಿರ ಪೊಣ್ಮುತಿವೆ!
ಕಿವಿ ಕಣ್ಣಾಗುತಿದೆ!
ಕಣ್ ಕಿವಿಯಾಗುತಿದೆ!