ವಿಷಯಕ್ಕೆ ಹೋಗು

ಪುಟ:ಕನ್ನಡದ ಬಾವುಟ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೧

ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ! ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನಮಾಡಿದರೆ ಕಲ್ಲು ತಾಗಿದ ಮಿಟ್ಟ ಯಂತಪ್ಪರಯ್ಯ,

ಎರೆದರೆ ನೆನೆಯದು, ಮರೆದರೆ ಬಾಡದು. ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ, ಕೂಡಲಸಂಗಮದೇವ ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು.

ಉಳ್ಳವರು ಶಿವಾಲಯವ ಮಾಡುವರು. ನಾನೇನ ಮಾಡುವೆ ? ಬಡವ ನಯ್ಯ ! ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ, ಕೂಡಲಸಂಗಮದೇವ ಕೇಳಯ್ಯ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

ಆಡಿದರೇನು, ಹಾಡಿದರೇನು, ಓದಿದರೇನು, ತ್ರಿವಿಧ ದಾಸೋಹವಿಲ್ಲ ದನ್ನ ಕ್ಕ? ಆಡದೇ ನವಿಲು, ಹಾಡದೇ ತಂತಿ, ಓದದೇ ಗಿಣಿ? ಭಕ್ತಿಯಿಲ್ಲ ದವರನೆಲ್ಲ ಕೂಡಲಸಂಗಮದೇವ.

ವಚನದಲ್ಲಿ ನಾಮಾಮೃತ ತುಂಬಿ, ನಯನದಲ್ಲಿ ನಿಮ್ಮ ಮೂರುತಿ ತುಂಬಿ, ಮನದಲ್ಲಿ ನಿಮ್ಮ ನೆನಹು ತುಂಬಿ, ಕಿವಿಯಲ್ಲಿ ನಿಮ್ಮ ಕೀರ್ತಿ ತುಂಬಿ, ಕೂಡಲಸಂಗಮದೇವಾ, ನಿಮ್ಮ ಚರಣಕಮಲದೊಳಗಾನು ತುಂಬಿ.

ಎನ್ನ ಕಾಯವ ದಂಡಿಗೆಯ ಮಾಡಯ್ಯ, ಎನ್ನ ಶಿರವ ಸೋರೆಯ ಮಾಡಯ್ಯ, ಎನ್ನ ನರವ ತಂತಿಯ ಮಾಡಯ್ಯ, ಎನ್ನ ಬೆರಳ ಕಡ್ಡಿಯ ಮಾಡಯ್ಯ, ಬತ್ತೀಸ ರಾಗವ ಹಾಡಯ್ಯ, ಉರದಲೊ ಬಾರಿಸು ಕೂಡಲ ಸಂಗಮದೇವ.

ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ, ಸತ್ಯವ ನುಡಿವುದೇ ದೇವಲೋಕ; ಮಿಥ್ಯವ ನುಡಿವುದೇ ಮರ್ತ್ಯಲೋಕ, ಆಚಾರವೇ ಸ್ವರ್ಗ; ಅನಾಚಾರವೇ ನರಕ. ಕೂಡಲಸಂಗಮದೇವ ನೀವೇ ಪ್ರಮಾಣ.

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ. ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ. ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ, ಕೂಡಲ ಸಂಗಮದೇವ.

ಪುಣ್ಯ ಪಾಪಗಳೆಂಬುವು ತಮ್ಮ ಇಷ್ಟ ಕಂಡಿರೆ. ಅಯ್ಯ ಎಂದಡೆ ಸ್ವರ್ಗ, ಎಲವೊ ಎಂದಡೆ ನರಕ. ದೇವ ಭಕ್ತ ಜಯ ಜೀಯಾ ಎಂಬ ನುಡಿಯೊಳಗೆ ಕೈಲಾಸವಿಹುದು ಕೂಡಲಸಂಗಮದೇವ.

ಪರಚಿಂತೆ ನಮಗೇಕಯ್ಯ ? ನಮ್ಮ ಚಿಂತೆ ನಮಗೆ ಸಾಲದೆ ? ಕೂಡಲ ಸಂಗಯ್ಯ ಒಲಿವನೋ ಒಲಿಯನೋ ಎಂಬ ಚಿಂತೆ ಹಾಸಲುಂಟು, ಹೊದೆಯಲುಂಟು.

ಎಲ್ಲರೂ ವೀರರು, ಎಲ್ಲರೂ ಧೀರರು, ಎಲ್ಲರೂ ಮಹಿಮರು, ಎಲ್ಲರೂ ಪ್ರಮಥರು, ಕಾಳಗದ ಮುಖದಲ್ಲಿ ಕಾಣಬಹುದು. ಓಡುವ ಮುಖದಲ್ಲಿ ಕಾಣಬಾರದು. ನಮ್ಮ ಕೂಡಲಸಂಗಮದೇವನ ಶರಣರು ಧೀರರು, ಉಳಿದವ ರೆಲ್ಲ ಅಧೀರರು.