ವಿಷಯಕ್ಕೆ ಹೋಗು

ಪುಟ:ಕನ್ನಡದ ಬಾವುಟ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫. ಹೊನ್ನಮ್ಮ ಸು. ೧೬೯೦

ಹದಿಬದೆಯ ಧರ್ಮ

ಆದಿನಾರಾಯಣನಾ ಶೇಷನೊಡಗೂಡಿ! ಯಾದರದಿಂದವತರಿಸೆ
ಯಾದವಕುಲವೇಳೆಗೆವೆತ್ತಿರ್ಪುದು | ಮೇದಿನಿಯೊಳು ಮೈಮೆವಡೆದು
ಆ ಯಾದವರಿಗೆ ಕುಲದೇವರೆನಿಪ ನಾ | ರಾಯಣನಾದಿ ಕಾರಣನು
ಶ್ರೀಯೊಡಗೂಡೀ ಕರ್ಣಾಟದೇಶದೊ |ಳೀ ಯಾದವಾದ್ರಿಯೊಳಿಹನು
ಬಲಕೃಷ್ಣರಿಂದೆ ಹಲವು ಪೂಜೆಗೊಂಡಿರ್ಪ | ಕುಲದೇವರ ಸೇವೆಗೆಂದು
ಪಲವು ಯಾದವರಾಯರಾ ದ್ವಾರವತಿಯಿಂದೊ | ಲಿದೈತಂದರೀ ನೆಲಕೆ
ಶ್ರೀ ನಾರಾಯಣನಡಿಗಳಿಗೆರಗಿ ಮ | ಹಾನಂದರಸದ ಮೈಮೆಯೊಳು
ಆ ನೆಲೆಯನ್ನು ಬಿಟ್ಟಗಲಲಾರದೆ ತಾ | ವೀ ನಾಡೊಳು ನೆಲಸಿದರು
ಈ ಶೈಲಕೆರಡು ಗಾವುದ ತೆಂಕಣ ರಮ್ಯ | ದೇಶವ ನೆಲೆವೀಡುಗೊಳಿಸಿ
ಈ ಶೂರರು ನೆಲಸಿದರದರಿ೦ದೆ ಮ | ಹಿಶೂರಪುರವೆನಿಸಿದುದು
ಶ್ರೀರಂಗಪಟ್ಟಣದೊಳು ರತ್ನ ಸಿಂಹಾಸ | ನಾರೋಹಣವನಾಚರಿಸಿ
ಧಾರಿಣಿಯನು ಧರದೊಳು ಪಾಲಿಸುತ ಮಹಾರಾಜನೆನಿಸಿ ರಾಜಿಪನು
ಧರೆಯ ಪೊರೆವ ಧರ್ಮವ ಸಂಪಾದಿಪ | ಧುರವ ಗೆಲುವ ಗೈಮೆಯೊಳು
ನರಪತಿ ಚಿಕದೇವರಾಜೇ೦ದ್ರಗೆ ಶೌರಿ | ನೆರವಾಗಿಹನು ನೇಮದೊಳು
ಚಿಕದೇವರಾಜಚಂದ್ರಮನ ಪಟ್ಟದ ರಾಣಿ | ಸಕಲ ಸದ್ಗುಣಸಂಪನ್ನೆ
ಅಕಲುಕ್ಷೆಯೆಳವಂದೂರ ದೇವಮ್ಮನು |ಸಕಲ ಸಂಪದದೊಡನಿಹಳು
ಓಲಗಗೊಳುತೊಂದು ದಿನವೆಡಬಲದ ಸು| ಶೀಲೆಯರೊಳು ಕಡೆಗಣ್ಣ
ಸಾಲುವಿಡಿದು ಸುಳಿಸುಳಿಸಿಯೆನ್ನೊಳು ಸತ್ಕೃ | ಪಾಲೋಕನವನೆಸಗಿದನು
ಕರುಣಾಮೃತಾಭ್ದಿಯ ಕಲ್ಲೋಲಗಳಂತೆ | ತರತರದೊಳು ಕವಿತರುವ
ಸರಸಕಟಾಕ್ಷವನೆಸಗಿಯೆನ್ನೊಳು ಮನ | ಗರಗಿ ಮನ್ನಿಸಲೆಳಸಿದನು
ಅರಸಿ ಕೇಳೀ ಹೊನ್ನಿ ಸರಸ ಸಾಹಿತ್ಯದ | ವರದೇವತೆ ತಾನೆಂದು
ಪರಮಾರ್ಥವಾದಿಯಳಸಿಂಗರಾರ್ಯನು | ಪರಿಪರಿಯೊಳು ಬಣ್ಣಿಪನು
ಇವಳು ಕಾವ್ಯಾಲಂಕಾರ ನಾಟಕಗಳ | ಪವಣಿಗೆಯಿರವ ಬಲ್ಲವಳು
ಇವಳ ಸಾಹಿತ್ಯದ ಸವಿಗೆಳಸುತ್ತೆನ್ನ | ಕಿವಿಗಳು ಕದುಬುಗೊಂಡಿಹವು
ಪವಣಿಗೆಯೊಪ್ಪೆ ಪುರುಳು ಪೊಗೆ ರೀತಿಯಂ | ಗವಿಸೆಯಲಂಕಾರಗಳು
ಕವಿದು ಸರಿಯೆ ರಸದೊಳಂಪು ಘಮ್ಮನೆ | ಕವಿತೆಯೊಂದನು ಪೇಳಿಸಿಂದು
ಎಂದ ರಾಯನ ನುಡಿಗಾನು ವಿನಯಗೂಡಿ | ಸಿಂದೆಗೆದಿರೆ ಪಟ್ಟದರಸಿ
ಕಂದ ಬಾರೆನ್ನ ಕಟ್ಟಾಣಿ ಪೆಣ್ಮಣಿಯೆ ಬಾ | ರೆಂದು ಮುಂದಕೆ ಬರಿಸಿದಳು