ಈ ಪುಟವನ್ನು ಪರಿಶೀಲಿಸಲಾಗಿದೆ
214 ಕರ್ಣಾಟಕ ಕವಿಚರಿತೆ. (16 ನೆಯ
3 ಏಕೋನವಿಂಶತಿಪ್ರಬಂಧ ಇದರಲ್ಲಿ 19 ಪದ್ಯವಿರುವುದರಿಂದ ಈ ಹೆಸರು ಬಂದಂತೆ ತೋರುತ್ತದೆ. ಇದು ವೇದಾಂತಬೋಧಕವಾದ ಗ್ರಂಥ .ಇದರಿಂದ ಒಂದು ಪದ್ಯವನ್ನು ಉದಾಹರಿಸುತ್ತೇವೆ- ಶ್ರವಣ ಕೀರ್ತನ ನಿಜಸ್ಮರಣ ಪದಸೇವನಂ | ವಿವಿದಾರ್ಚನಂ ವಂದನಂ ದಾಸ್ಯಮನುವಿನಿಂ | ತವೆ ಸಖ್ಯಮಾತ್ಮವಿನಿವೇದನಂ ಶಂಭುವಿನ ಭಕ್ತಿಯೊಂಬತ್ತು ತೆಱನು || ವಿವರಿಸಲ್ ಮಂಡೆಮನಕಣ್ಗಳಿಂದೆರ್ದೆಯಿಂದೆ | ಸವಿವಾತಿನಿಂ ಪಾದಕರಬಾಹುಯುಗಳದಿಂ | ದವತರಿಕುಮಿವು ನಮಸ್ಕಾರಾಂಗಮೆಂಟಾಗಿ ಸದ್ಭಕ್ತಿ ಸಂಪನ್ನರ || ಈ ಗ್ರಂಥಕ್ಕೆ ಒಂದು ವ್ಯಾಖ್ಯಾನವೂ ಇದೆ. _____________________________ ಸಂಪಾದನೆಯ ಚೆನ್ನಂಚೆದೇವ, ಸು.1530, ಈತನು ಆಚರಣೆಯ ಸಂಬಂಧದ ವಚನ, ಬಸವಸ್ತೋತ್ರದ ವಚನ, ಮಿಶ್ರಸ್ತೋತ್ರದ ವಚನ ಇವುಗಳನ್ನು ಸೇರಿಸಿದುದಾಗಿ ತಿಳಿಯುತ್ತದೆ: ಎಂದರೆ ಈ ಗ್ರಂಥಗಳು ಏತತ್ಕೃತವಲ್ಲ ; ಇತರರ ಗ್ರಂಥಗಳಿಂದ ಆರಿಸಿ ಜೋಡಿಸಿದ ವಚನಗಳನ್ನು ಒಳಕೊಂಡಿವೆ. ಇವನು ವೀರಶೈವಕವಿ. ಸಂಪಾದನೆಯ ಗುರುಲಿಂಗದೇವನ ಶೀಲವಂತಯ್ಯನ ತ್ರಿವಿಧಿಯ ಟೀಕೆಯಿಂದ ಈತನು ತೋಂಟದಸಿದ್ಧಲಿಂಗನ (ಸು. 1470) ಶಿಷ್ಯನಾದ ಬೋಳಬಸವನ ಶಿಷ್ಯನೆಂದು ತಿಳಿವುದರಿಂದ ಇವನ ಕಾಲವು ಸುಮಾರು 1530 ಆಗಬಹುದು. ಇವನಿಂದ ಸಂಕಲಿತವಾದ ಗ್ರಂಥಗಳಲ್ಲಿ ಆಚರಣೆಯಸಂಬಂಧದವಚನವು 261 ವಚನಗಳನ್ನೂ ಬಸವಸ್ತೋತ್ರದ ವಚನವು 123 ವಚನಗಳನ್ನೂ ಮಿಶ್ರಸ್ತ್ರೋತ್ರದವಚನವು 108 ವಚನಗಳನ್ನೂ ಒಳಗೊಂಡಿವೆ. ಇವನು ಸೇರಿಸಿರುವ ವಚನಗಳಲ್ಲಿ ಒಂದನ್ನು ಉದಾಹರಿಸುತ್ತೇವೆ- ಜನ ಮೆಚ್ಚೆ ಶುದ್ಧನಲ್ಲದೆ ಮನ ಮೆಚ್ಚೆ ಶುದ್ಧನಲ್ಲವಯ್ಯಾ; ನುಡಿಯಲ್ಲಿ ಜಾಣನಲ್ಲದೆ ನಡೆಯಲ್ಲಿ ಜಾಣನಲ್ಲವಯ್ಯಾ; ವೇಷದಲ್ಲಿ ಅಧಿಕನಲ್ಲದೆ ಭಾಷೆಯಲ್ಲಿ ಅಧಿಕನಲ್ಲ