ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನ] ವೀರಭದ್ರರಾಜ. 221
ಕುಲವಿದು ಗೋತ್ರವಿಂತಿದು ಚರಿತ್ರವಿದೆಂಬುದನಿನ್ನೆಗಂ ರಸಾ |
ತಲದಿನಧಾತ್ರಿಯಲ್ಲಿ ನೆಱೆ ಕಂಡವರಿಲ್ಲೆಲೆದೇವ ನಿನ್ನ ನೀ ||
ಕುಲಯುತೆ ಗೋತ್ರಜಾತೆ ಮಿಗೆ ಕೈವಿಡಿದಿರ್ದುದಱುಂದೆ ನೀಂ ಮಹಾ |
ಕುಲಪತಿಯೆಂಬುದಿಂದಱುಯೆಬಂದುದಿದೀಗಳುಮಾಮಹೇಶ್ವರಾ ||
ಲಲಿತಮೃದೂಕ್ತಿಯಿಂದೆ ಗಿಳಿಯಂ ಮುಡಿಯಿಂದೆ ಮಯೂರನಂ ಚಲ |
ದ್ವಿಲಸಿತನೇತ್ರದಿಂದೆ ಮೃಗಿಯಂ ಮಧುರಸ್ವನದಿಂದೆ ಮತ್ತಕೋ ||
ಕಿಲಮನದಾವಗಂ ಬಿಡದೆ ಪೋಲ್ತಗರಾಜಕುಮಾರಿ ನಿನ್ನ ತೋ |
ಳ್ವಲೆಗುಱೆ ಸಿಲ್ಕಿ ರಂಜಿಪುದು ಚೋದ್ಯಮೆ ನೋಡೆಯುಮಾಮಹೇಶ್ವರಾ |
ಸುರುಚಿರಪುಣ್ಯದೊಬ್ಬುಳಿಯನಾಶ್ರಯಿಸಿರ್ಪನುರಕ್ತಿಯೇೞ್ಗೆಯೋ |
ಸುರಕುಜಮಂ ಸಮಂತಡರ್ದು ಪರ್ವಿದ ವಿದ್ರುಮವಲ್ಲಿಯೋ ಎನಲ್ ||
ಕರಮೆಸೆದತ್ತು ನಿನ್ನ ಧವಳಾಂಗಸುಸಂಗದೊಳೊಪ್ಪುತಿರ್ಪ ಶಾಂ |
ಕರಿಯ ಶರೀರರಾಗರುಚಿ ಕಣ್ಗೆನಿದೀಯುತುಮಾಮಹೇಶ್ವರಾ ||
4. ಪ್ರಾಣನಾಥಶತಕ
ಇದರಲ್ಲಿ 101 ವೃತ್ತಗಳಿವೆ; ಪ್ರತಿವೃತ್ತವೂ ಪಾರ್ವತೀಪ್ರಾಣನಾಥಾ ಎಂದು ಮುಗಿಯುತ್ತದೆ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ-
ಸೊದೆಯಂ ತ್ವದ್ಧ್ಯಾನಪೀಯೂಷಮನಜನೊಲವಿಂ ತೂಗಲಾಧ್ಯಾನಪೀಯೂ |
ಷದ ಪೆರ್ಚ೦ ಕಾಣ್ಬುದೆಲ್ಲಾಮುನಿತತಿಯಮರ್ದ೦ ಸೇವಿಸಂಗಕ್ಕುಮೇಗಂ ||
ತ್ರಿದಶಾಂಗಂ ಧ್ಯಾನಪೀಯೂಷಮನುಱೆ ಸವಿವಂಗಕ್ಕುಮಷ್ಟಾಂಗಮೆಯ್ದಿಂ |
ತಿದು ಚಿತ್ರಂ ಸೆಂಪುದಾಳ್ದಿರ್ಪುದನಱುತಿವಱೋಳ್ ಪಾರ್ವತೀಪ್ರಾಣನಾಧಾ ||
ತನುಗಾಸತ್ತಾಗೆ ಸರ್ವೆಂದ್ರಿಯಮವು ಪಟುವಂ ನೀಗೆ ಮುನ್ನರ್ಜಿಸಿರ್ದ |
ರ್ಧನಿಕಾಯಂ ಪೋಗೆ ದೇಹಂ ವಲಿತಪಲಿತಕಿಂಬಾಗೆ ಬೆನ್ನೊಪ್ಪದಿಂದಂ ||
ಧನುವೋಲ್ ಮುಂ ಬಾಗೆ ನೋಡಲ್ ಶಿರಮದು ಭರದಿಂ ತೂಗೆ ಧರ್ಮಕ್ಕೆ ನಿಮ್ಮ|
ರ್ಚನೆಗಿಂಬುಂಟೇ ಮನುಷ್ಯರ್ಗಘಹರ ಗಿರಿಶಾ ಪಾರ್ವತೀಪ್ರಾಣನಾಧಾ ||
5. ಶ್ರೀಕಂಠಸೋಮೇಶ್ವರಶತಕ
ಇದರಲ್ಲಿ 101 ವೃತ್ತಗಳಿವೆ; ಪ್ರತಿವೃತ್ತವೂ ಶ್ರೀಕಂಠಸೋಮೇಶ್ವರಾ ಎಂದು ಮುಗಿಯುತ್ತದೆ, ಇದರಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇನೆ...