ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 33 ವರುಷದಿಂದ ಭಾಷಾಸೇವೆಮಾಡಿ ಸಂಗ್ರಹಿಸಿದ ವಿಷಯಗಳು “ ಜೀರ್ಣ ಮಂಗೇ ಸಂಭಾಷಿತಂ ಎಂಬಂತೆ ವ್ಯರ್ಥವಾಗಬಾರದು ; ಅವುಗಳನ್ನು ಪ್ರಕಟಿಸಿ ಕನ್ನಡಿಗರ ಮುಂದೆ ಇಟ್ಟರೆ ಅವರು ಒಂದಾನೊಂದುಕಾಲದಲ್ಲಿ ತಪ್ಪುಗಳನ್ನು ತಿದ್ದಿ ಶುದ್ಧಮಾಡಿ ವೃದ್ಧಿಗೊಳಿಸುವ ಸಂಭವವುಂಟು-ಎಂಬುದೇ, ಆದುದರಿಂದ ಕೊರತೆಗಳಿವೆ ಎಂದು ತಿಳಿದೂ ಈ ಗ್ರಂಥವನ್ನು ಕನ್ನಡಿಗರಿಗೆ ಕಾಣಿಕೆಯಾಗಿ ಒಪ್ಪಿಸಿದ್ದೇನೆ. ಇದರಿಂದ ಕನ್ನಡ ಭಾಷೆಯ ಅಭಿವೃದ್ಧಿಗೆ ಅಲ್ಪಸ್ವಲ್ಪ ಸಹಾಯವಾದರೂ ನನ್ನ ಶ್ರಮವು ಸಾರ್ಥಕವಾಯಿತೆಂದು ಆನಂದಿಸುವೆನು ಭಾಷಾಸೇವೆಯನ್ನು ಮಾಡಬೇಕೆಂಬ ಉತ್ಕಟೇಚ್ಛೆಯಿಂದ ಈ ಗ್ರಂಥವನ್ನು ಬರೆದಿದ್ದೇನೆಯೇ ಹೊರತು ಖ್ಯಾತಿಲಾಭ ಪೂಜೆಗಳಿಗಾಗಿ ಅಲ್ಲ ಇದರಲ್ಲಿರಬಹುದಾದ ಗುಣವನ್ನು ಮಾತ್ರ ಗ್ರಹಿಸಿ ಅಭಿನಂದಿಸುವುದು ಸಹೃದಯರಾದ ಮಹನೀಯರುಗಳಿಗೆ ಸ್ವಭಾವವಾಗಿದೆ. ಆದರೂ ಇದರಲ್ಲಿರುವ ತಪ್ಪುಗಳನ್ನೂ ನಿರ್ದಾಕ್ಷಿಣ್ಯವಾಗಿ ತಿಳಿಸಿ ನನಗೂ ಕನ್ನಡಸಾಹಿತ್ಯಕ್ಕೂ ಉಪಕಾರಮಾಡಬೇಕೆಂದು ಅವರನ್ನು ಬೇಡಿಕೊಳ್ಳುತ್ತೇನೆ.

   ಹದಿನೇಳನೆಯ ಶತಮಾನದಿಂದ ಈಚೆಗೆ ಬಾಳಿದ ಕವಿಗಳ ಚರಿತೆಯನ್ನು ಮೂರನೆಯ ಸಂಪುಟವಾಗಿ ಬರೆಯಬೇಕೆಂಬ ಕೋರಿಕೆಯಿದೆ. ಈ ಕೋರಿಕೆಯನ್ನು ದೇವರು ನೆರವೇರಿಸಬೇಕೆಂದು ಪ್ರಾರ್ಥಿಸುತ್ತೇನೆ. 
     ಈ ಸಂಪುಟವನ್ನು ತಮಗೆ ಅರ್ಪಿಸಲು ಅಪ್ಪಣೆಯನ್ನು ದಯಪಾಲಿಸಿದುದಕ್ಕಾಗಿ ಶ್ರೀಮನ್ಮಹಾರಾಜರವರಿಗೆ ಅತ್ಯಂತ ಕೃತಜ್ಞನಾಗಿದ್ದೇನೆ.
      ಪ್ರಥಮಸಂಪುಟದ ವಿಷಯವಾಗಿ ಸದಭಿಪ್ರಾಯಗಳನ್ನು ತಿಳಿಸಿದ ಮಹನೀಯರುಗಳ ದ್ವಿತೀಯಸಂಪುಟದ ಮುದ್ರಣಕ್ಕೆ ಸಹಕಾರಿಗಳಾದ ಮೈಸೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳ ಉಪಕಾರವು ಚಿರಸ್ಮರಣೀಯವಾಗಿದೆ.