ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೨
ಕರ್ನಾಟಕ-ಗತವೈಭವ

ತೆಗೆಯಲು ನಾವು ಈಗ ಧೈರ್ಯಗೊಳ್ಳುವುದಿಲ್ಲ, ಆಗಿನ ಕಾಲದ ಭಾಷಾ ವಿಸ್ತಾರವನ್ನಷ್ಟೇ ವರ್ಣಿಸುವುದು ಈಗಿನ ನಮ್ಮ ಉದ್ದೇಶವಿರುವುದರಿಂದ ಇಷ್ಟೊಂದು ವಿಸ್ತಾರವಾದ ಪ್ರದೇಶದಲ್ಲಿ ನಮ್ಮ ಕನ್ನಡ ಭಾಷೆಯು ತನ್ನ ವರ್ಚಸ್ಸನ್ನು ಹರಡಿತ್ತೆಂಬುದನ್ನು ಮೇಲೆ ಹೇಳಿದ್ದೇವೆ. ಇದರಿಂದ, ಕಠೋರವಾಗಿರುವ ಕನ್ನಡಿಗರ ಮನಸ್ಸಿನಲ್ಲಿ ಕನ್ನಡ ಭಾಷೆಯಲ್ಲಿ ಪೂಜ್ಯ ಬುದ್ಧಿಯೂ ಅಭಿಮಾನವೂ ಹೆಚ್ಚು ಘನ ವಾದರೆ, ನಮ್ಮ ಕಾರ್ಯವು ಕೈಗೂಡಿದಂತಾಯಿತು!
ನ್ನಡಿಗರೇ, ಈಗಿನ ಭಾಷಾ ವಿಸ್ತಾರಕ್ಕೂ ಹಿಂದಿನ ಭಾಷಾ ವಿಸ್ತಾರಕ್ಕೂ ಹೋಲಿಸಿ ನೋಡಿರಿ. ಸದ್ಯಕ್ಕೆ ಕನ್ನಡ ಭಾಷೆಯು ಉತ್ತರದಲ್ಲಿ ಸಾಂಗಲಿಯ ವರೆಗೆ ಮಾತ್ರ. ಹಾಗೂ ಹೀಗೂ, ಆಧುನಿಕ ಶಿಕ್ಷಣದ ಗಾಳಿಯು ಸೋಂಕದಿರುವಂಥ ಹಲ ಕೆಲವು ಜನರ ಬಾಯಿಯಲ್ಲಿ ಆಡುತ್ತಿರಬಹುದು. ಅದೂ ಕ್ರಮೇಣ, ಮರಾಠಿ ಭಾಷೆಯ ಉರುಬಿಗೆ ಸಿಲುಕಿ ಮೈ ಮುಚ್ಚಿ ಕೊಳ್ಳುತ್ತಲಿದೆ. ವಾಚಕರೇ, ನಮ್ಮ ದುರ್ದೈವದಿಂದಲೋ, ನಮ್ಮ ಮಾತೃಭಾಷೆಯ ದುರ್ದೈವದಿಂದಲೋ, ಒಂದು ಕಾಲಕ್ಕೆ ಕನ್ನಡನಾಡಿಗೆಲ್ಲ ದಿಗ್ದಂತಿಗಳಾಗಿ ಬಾಳಿದ ಪೊನ್ನ, ರನ್ನ ಮುಂತಾದವರು ಹುಟ್ಟಿದ ಊರುಗಳೇ ಪರಭಾಷೆಯಿಂದ ವ್ಯಾಪಿಸಲ್ಪಟ್ಟಿರುತ್ತವೆ. ಕನ್ನಡ ತಾಯ್ನುಡಿಯ ಕೊರಳಿಗೆ ಕೈ ಹಾಕಿ ದಬ್ಬುತ್ತಿರುವ ಈ ನೋಟವು ಯಾವ ಕನ್ನಡಿಗನ ಹೃದಯವನ್ನು ಕರಗಿಸದೆ ಇರದು! ಕನ್ನಡನಾಡೆಲ್ಲವೂ ಮಹಾರಾಷ್ಟ್ರಮಯವಾಗುತ್ತಿರುವುದು ಎಂಥ ಔದಾಸೀನ್ಯದ ಲಕ್ಷಣವು ! ಪೂರ್ವಕ್ಕಿರುವ ಬಳ್ಳಾರಿಯಂಥ ಶುದ್ದ ಕನ್ನಡಜಿಲ್ಲೆಯು ಕೂಡ ಕನ್ನಡಿಗರ ನಿರಭಿಮಾನತೆಯ ಮೂಲಕ ತೆಲುಗಿನವರ ಇರುಕಿನಲ್ಲಿ ಸಿಕ್ಕಿಕೊಂಡು ಬಾಡುತ್ತಿರುವ ನೋಟವು ಕನ್ನಡಿಗರ ಶೋಕ ಭಾರವನ್ನು ಇಮ್ಮಡಿಗೊಳಿಸದೆ ಇರದು. ಈ ಬಗೆಯಾಗಿ, ನಮ್ಮ ಕಣ್ಣೆದುರಿಗೇನೆ ನಮ್ಮ ಭಾಷೆಯನ್ನು ಪರಭಾಷೆಗಳು ಕೆಳಗೆ ದೂಡುತ್ತಿರಲು, 'ಕರ್ನಾಟಕ ವಿದ್ಯಾ ವರ್ಧಕ ಸಂಘ,' 'ಕರ್ನಾಟಕ ಸಾಹಿತ್ಯ ಪರಿಷತ್' ಮುಂತಾದ ಸಂಸ್ಥೆಗಳು, ಇನ್ನೂ ಕಣ್ಣು ಮುಚ್ಚಿಯೇ ಕುಳಿತಿರುವುದನ್ನು ಕೇಳಿ, ಯಾವ ಕನ್ನಡಿಗನ ಮನಸ್ಸು ವ್ಯಸನಾಕ್ರಾಂತವಾಗಲಿಕ್ಕಿಲ್ಲ ! ಕೊಡಗು ನೀಲಗಿರಿ ಪ್ರಾಂತಗಳ ಜನರು ಕನ್ನಡಿಗರೇ ಇರುವರೆಂಬ ಜ್ಞಾನವೂ ನಮಗೆ ಇರಬಾರದೋ ? ಧಿಕ್ಕಾರವಿರಲಿ ನಮ್ಮ ಔದಾಸೀನ್ಯಕ್ಕೆ!