ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೪
ಕರ್ನಾಟಕ ಗತವೈಭವ

ವಾಗುವುದು” ಎಂದು ಹಲವರು ಆಕ್ಷೇಪಿಸಬಹುದು, ಆದುದರಿಂದ, ಹಾಗೆ ಅಭಿಮಾನ ಪಡಲಿಕ್ಕೆ ಯೋಗ್ಯವಾದ ಸಂಗತಿಗಳಾವುವೆಂಬುದನ್ನು ಇಲ್ಲಿ ಸಂಕ್ಷೇಪವಾಗಿ ವಿವರಿಸುವೆವು.
ವಾಚಕರೇ! ತನ್ನ ಜನಾಂಗವು ರಾಮಾಯಣ ಮಹಾಭಾರತ ಕಾಲದಿಂದ ಮೊನ್ನೆ ಮೊನ್ನಿನವರೆಗೆ ಹೆಸರುವಾಸಿಯಾಗಿತ್ತೆಂದು ಹೇಳಿದರೆ ಯಾವನಿಗೆ ತಾನೇ ಆನಂದವಾಗಲಿಕ್ಕಿಲ್ಲ! ನಿಮ್ಮ ಕರ್ನಾಟಕವು ಅದೇ ಪ್ರಕಾರದ ರಾಷ್ಟ್ರವೆಂದು ತಿಳಿಯಿರಿ. ಈ ನಿಮ್ಮ ಕರ್ನಾಟಕವು ಶ್ರೀರಾಮಚಂದ್ರನ ಪಾದಧೂಳಿಯಿಂದ ಪಾವನವಾಗಿದೆ, ಶ್ರೀರಾಮಚಂದ್ರನು ಸುಗ್ರೀವನೊಡನೆ ಸಖ್ಯ ಬೆಳಿಸಿದ ಆ ಕಿಷ್ಕಿಂಧೆಯು (ಆನಿಗೊಂದಿ) ಇದೇ ಕರ್ನಾಟಕದಲ್ಲಿಯೇ ಉಂಟು, ಮಹಾಭಾರತ ಕಾಲದಲ್ಲಿ, ಚಂದ್ರಹಾಸನು ಈ ಕುಂತಲದೇಶದಲ್ಲಿಯೇ ರಾಜ್ಯವಾಳಿದನು. ಈ ಪೌರಾಣಿಕ ಕಾಲವನ್ನು ಬಿಟ್ಟು ಐತಿಹಾಸಿಕ ಕಾಲಕ್ಕೆ ಇಳಿದರೂ, ಆಂಧ್ರಕೃತ್ಯ, ಕದಂಬ ಮುಂತಾದ ಬಲಾಢ್ಯ ರಾಜವಂಶಗಳು ಕ್ರಿಸ್ತಶಕದ ಆರಂಭಕ್ಕೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ವೈಭವದಿಂದ ಆಳಿರುತ್ತವೆ. ಆರನೆಯ ಶತಮಾನದಿಂದ ಹದಿನಾರನೆಯ ಶತಮಾನದ ಕೊನೆಯ ಭಾಗದ ವರೆಗಂತೂ ನಿಮ್ಮ ಈ ಕರ್ನಾಟಕವು ದಕ್ಷಿಣ ಹಿಂದುಸ್ಥಾನಕ್ಕೆಲ್ಲ ಸಾರ್ವಭೌಮ ಚಕ್ರವೆನಿಸಿ ಅತ್ಯಂತ ಗೌರವದಿಂದ ಮೆರೆದಿರುತ್ತದೆ. ನಿಮ್ಮ ಅರಸರು ಚೇರ, ಚೋಳ, ಪಾಂಡ್ಯ, ಮೌರ್ಯ, ಕಲಚೂರ್ಯ, ಗುರ್ಜರ, ಮಾಳವ ಇವರೇ ಮೊದಲಾದ ಅನೇಕ ರಾಜರನ್ನು ಸದೆಬಡಿದು, ಅವರ ರಾಜ್ಯಗಳನ್ನು ಪಾದಾಕ್ರಾಂತವಾಗಿ ಮಾಡಿದ್ದರೆಂದು ಹೇಳಿದರೆ ಅದು ನಿಮಗೆ ಕನಸಾಗಿ ತೋರುವುದಲ್ಲವೆ? ಇದು ಕನಸಲ್ಲ- ನನಸು. ನಿಮ್ಮ ಪೂರ್ವಜರು ಒಂದಾನೊಂದು ಕಾಲಕ್ಕೆ ಉತ್ತರದಲ್ಲಿ ಬಂಗಾಲ-ಅಸಾಮದವರೆಗೂ ದಕ್ಷಿಣದಲ್ಲಿ ಸಿಂಹಲ ದ್ವೀಪದವರೆಗೂ ತಮ್ಮ ರಾಜ್ಯವನ್ನು ಹಬ್ಬಿಸಿದ್ದರು. ಇಷ್ಟೇ ಅಲ್ಲ; ಕರ್ನಾಟಕ ವಂಶವೃಕ್ಷದ ಅಗಿಗಳು ಗುಜರಾಥ ನೇಪಾಳಗಳಲ್ಲಿಯೂ ನಾಟಿದ್ದವು, ಬಾದಾಮಿಯ ಚಾಲುಕ್ಯ ಅರಸನಾದ ನಿಮ್ಮ ಸತ್ಯಾಶ್ರಯ ಶ್ರೀ ಪುಲಿಕೇಶಿಯು (೭ನೆಯ ಶತಕ) ಉತ್ತರ ಹಿಂದುಸ್ಥಾನಕ್ಕೆಲ್ಲ ಸಾರ್ವಭೌಮ ಚಕ್ರವರ್ತಿಯಾಗಿದ್ದ ಹರ್ಷವರ್ಧನನನ್ನು ಸೋಲಿಸಿ 'ಪರಮೇಶ್ವರ' ನೆಂಬ ಘನವಾದ ಬಿರುದನ್ನು ಪಡೆದಿರುವನು. ಮಳಖೇಡದ ರಾಷ್ಟ್ರಕೂಟ ಅರಸನಾದ ೩ನೆಯ ಗೋವಿಂದನು (೯ನೆಯ ಶತಕ)