ಪುಟ:ಕರ್ನಾಟಕ ಗತವೈಭವ.djvu/೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೨೫
೪ನೆಯ ಪ್ರಕರಣ – ಕರ್ನಾಟಕದ ವಿಭೂತಿಗಳು.

ತನ್ನ ವಿರುದ್ಧವಾಗಿ ಬಂಡಾಯವನ್ನು ಹೂಡಿದ ಹನ್ನೆರಡು ಅರಸರನ್ನು ಬಗ್ಗು ಬಡಿದು, ಗುರ್ಜರ, ಮಾಳವ, ಮಧ್ಯಪ್ರಾಂತ ಇವೇ ಮೊದಲಾದ ನಾಡುಗಳನ್ನು ಗೆದ್ದು, ಪೂರ್ವಚಾಲುಕ್ಯರ ಅರಸನನ್ನು ಹಣ್ಣಿಗೆ ತಂದು, ಅವನಿಗೆ ತನ್ನ ಕೋಟೆ ಕೊತ್ತಳಗಳನ್ನು ಕಟ್ಟಲು ಹಚ್ಚಿದ ಸಂಗತಿಯೇನು ಸಾಧಾರಣವಾಯಿತೇ ? ಕರ್ನಾಟಕರು ಪ್ರತಿದಿನವೂ ಸ್ಮರಿಸಬೇಕಾಗಿರುವ ಆ ರಾಷ್ಟ್ರಕೂಟರ ಅಮೋಘವರ್ಷ ಅಥವಾ ನೃಪತುಂಗನು (೯ನೆಯ ಶತಕ) ಯಾವ ದೇಶಕ್ಕೆ ಭೂಷಣವೆನಿಸಲಾರನು ? ೬೩ ವರುಷಗಳ ವರೆಗೆ ಎಡೆಬಿಡದೆ ಆಳಿದ ಈ ನೃಪತುಂಗನೇ ಅಲ್ಲವೇ ಕನ್ನಡಿಗರ 'ಕವಿರಾಜಮಾರ್ಗ'ವೆಂಬ ಅಲಂಕಾರ ಗ್ರಂಥವನ್ನು ಬರೆದವನು? ಪ್ರತಿಯೊಬ್ಬ ಆರ್ಯಪುತ್ರನಿಗೂ ಗೊತ್ತಿರುವ ಆ ಪ್ರಸಿದ್ಧ ಭೋಜರಾಜನ ಕಕ್ಕನಾದ ಶೂರಧೀರ ಮುಂಜನನ್ನು ಸೆರೆಹಿಡಿದು ತಂದವನು ನಿಮ್ಮ ಕರ್ನಾಟಕ ತೈಲಪನೇ (೧೦ನೆಯ ಶತಕ), ಮೇಲ್ಗಡೆಗೆ, ಗುರ್ಜರ ಮಾಳವ ಮುಂತಾದ ಅರಸರನ್ನು ಗೆದ್ದು ವಿಂದ್ಯ ಪರ್ವತದವರೆಗೆ ರಾಜ್ಯವನ್ನು ಪಾದಾಕ್ರಾಂತವಾಗಿ ಮಾಡಿಕೊಂಡು ಬಂಗಾಲದ ಮೇಲೆ ದಾಳಿಮಾಡಿ ಈಶಾನ್ಯ ದಿಕ್ಕಿನಲ್ಲಿ ಅಸಾಮದಲ್ಲಿಯೂ, ಕೆಳಗಡೆಗೆ ಕೇರಳ ಚೋಳ ಪಾಂಡ್ಯ ಮುಂತಾದ ಅರಸರನ್ನು ಮುರಿಬಡೆದು, ಸಮುದ್ರದವರೆಗೆ ರಾಜ್ಯವನ್ನು ಹಬ್ಬಿಸಿ ದಕ್ಷಿಣದಲ್ಲಿ ಸಿಂಹಲದ್ವೀಪದಲ್ಲಿಯೂ ಕರ್ನಾಟಕದ ವಿಜಯ ಪತಾಕೆಯನ್ನೂರಿದ, ಆ ರಣಧೀರನೂ ರಾಜತಂತ್ರ ಪ್ರವೀಣನೂ ವಿದ್ಯಾ ಪಕ್ಷ ಪಾ ತಿಯೂ ಆದ ಮಹಾ ಬಲಾಡ್ಯ ವಿಕ್ರಮಾದಿತ್ಯನೆಂಬ (೧೧ನೆಯ ಶತಕ) ಶಕಪುರು ಪನ ಅರಿವು ಕೂಡ ಕನ್ನಡಿಗರಿಗೆ ಈಗ ಇರದಿದ್ದರೂ ಅವನ ಹೆಸರನ್ನು ಕರ್ನಾಟಕ ಇತಿಹಾಸವು ಆಚಂದ್ರಾರ್ಕವಾಗಿ ಮರೆಯಲಾರದು, ಗಂಗ, ಕದಂಬ, ಶಿಲಾಹಾರ, ಯಾದವ ಮುಂತಾದ ಅರಸರು ಇವನಿಗೆ ದಾಸಾನುದಾಸರಾಗಿದ್ದರು. ಬಿಲ್ಲಣ, ವಿಜ್ಞಾನೇಶ್ವರ ಮುಂತಾದ ಕವಿವರರು ಏಕಛತ್ರಾಧಿಪತಿಯಾದ ಈತನ ಆಸ್ಥಾನವನ್ನಲಂಕರಿಸಿದ್ದರು. ಕರ್ನಾಟಕಸ್ಥರೇ, ಪುಲಿಕೇಶಿ, ನೃಪತುಂಗ, ಗೋವಿಂದ, ತೈಲಪ, ವಿಕ್ರಮಾದಿತ್ಯರಂಥ ಮಹಾಮಹಿಮರಾದ ರಾಜರು ನಿಮ್ಮ ಪಾಲಿಗೆ ಬಂದಿದ್ದು ಘನವಾದ ಪುಣ್ಯವೆಂದು ಭಾವಿಸಿರಿ, ಅಷ್ಟೇಕೆ ? ನಿಮ್ಮ ಹರಿಹರ ಬುಕ್ಕರಾಯರೇನು (೧೪ನೇ ಶತಕ) ಕಡಿಮೆ ಪ್ರತಾಪಿಗಳೊ? ಉತ್ತರ ಹಿಂದುಸ್ಥಾನ