ಪುಟ:ಕರ್ನಾಟಕ ಗತವೈಭವ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪ನೆಯ ಪ್ರಕರಣ – ಕರ್ನಾಟಕದ ವಿಭೂತಿಗಳು

೨೭


ಹಿಂಸೆಯನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಶ್ರೀರಾಮಾನುಜಾಚಾರ್ಯರು ಕನ್ನಡ ಅರಸನಾದ ವಿಷ್ಣು ವರ್ಧನನ್ನು ಆಶ್ರಯಿಸಿ ತಮ್ಮ ಮತಪ್ರಸಾರಣೆಯನ್ನು ಮಾಡಿದರು. ಮಧ್ವಾಚಾರ್ಯರಿಗೆ ನಿಮ್ಮ ಕರ್ನಾಟಕವೇ ತವರುಮನೆಯು, ವೀರಶೈವ ಮತೋದ್ದಾರಕನಾದ ಬಸವೇಶ್ವರನಂತೂ ಶುದ್ಧ ಕನ್ನಡಿಗನೇ, ಜೈನ ಮತದ ಪ್ರಖ್ಯಾತ ಗುರುಗಳಾದ ಪೂಜ್ಯ ಪಾದ, ಜಿನಸೇನ, ಗುಣಭದ್ರ ಮುಂತಾದವರು ಈ ನಮ್ಮ ಕನ್ನಡ ನಾಡಿನಲ್ಲಿಯೇ ಬಾಳಿಬದುಕಿದರು; ಚಾಲುಕ್ಯ ವಿಕ್ರಮಾದಿತ್ಯನ ದರಬಾರಿನಲ್ಲಿ 'ವಿದ್ಯಾಪತಿ'ಯಾಗಿದ್ದ ಬಿಲ್ಲಣನೂ ಧರ್ಮಶಾಸ್ತ್ರಕಾರನಾದ ವಿಜ್ಞಾನೇಶ್ವರನೂ, ಪ್ರಸಿದ್ಧ ವೇದಾಂತಿಯಾದ ಸಾಯಣನೂ ಪ್ರಖ್ಯಾತ ಜ್ಯೋತಿಷಿಯಾದ ಭಾಸ್ಕರಾಚಾರ್ಯನೂ, ಇವರೆಲ್ಲರಿಗೂ ಮುಕುಟ ಮಣಿಯಂತಿರುವ ಕರ್ನಾಟಕ 'ಸಿಂಹಾಸನ ಸ್ಥಾಪನಾಚಾರ್ಯ'ರೆಂಬ ಬಿರುದುಳ್ಳ ಜಗದ್ವಿಖ್ಯಾತರಾದ ಶ್ರೀ ವಿದ್ಯಾರಣ್ಯರೂ, ಇವರೆಲ್ಲರೂ ಕನ್ನಡ ತಾಯಿಯ ಮುದ್ದು ಮಕ್ಕಳೇ ಅಲ್ಲವೆ? ಕಳೆದ ಅನೇಕ ಶತಮಾನಗಳಿಂದ ಕರ್ನಾಟಕ ವಾಙ್ಮಯವೆಂಬಗಗನ ಮಂಡಲದೊಳಗೆ ದಿವ್ಯ ನಕ್ಷತ್ರಗಳಂತೆ ಬೆಳಗುತ್ತಿರುವ ಆದಿಪಂಪ, ಪೊನ್ನ, ರನ್ನ, ಜನ್ನ, ಮೊದಲಾದ ವಾಙ್ಮಯ ಪ್ರಭುಗಳು ಕೇವಲ ಕನ್ನಡಿಗರೇ ! ಪರಮ ಭಗವದ್ಭಕ್ತರಾದ ಪುರಂದರದಾಸ, ಕನಕದಾಸ ಮುಂತಾದ ದಾಸ ಶ್ರೇಷ್ಠರಿಗೆ ಈ ನಮ್ಮ ಬಡ ಕರ್ನಾಟಕವೇ ಜನ್ಮಭೂಮಿ, ಇಷ್ಟೇ ಅಲ್ಲ, ಕನ್ನಡಿಗರೇ ನಿಮ್ಮ ಭಾಗ್ಯವನ್ನು ಎಷ್ಟೆಂದು ಹೇಳಬೇಕು! ನಿಮ್ಮ ಅರಸರೂ ಸ್ವಂತ ಕವಿಗಳಾಗಿದ್ದರು. ಗಂಗ ಅರಸರಲ್ಲಿ ಮಾಧವ, ದುರ್ವಿನೀತ ಮುಂತಾದ ಅನೇಕ ರಾಜರು ಅಶ್ವಶಾಸ್ತ್ರ, ಗಜಶಾಸ್ತ್ರ, ಕಿರಾತಾರ್ಜುನ ಟೀಕೆ, ದತ್ತಕ ಸೂತ್ರ ಮುಂತಾದ ಮಹತ್ವದ ಪುಸ್ತಕಗಳನ್ನು ಬರೆದಿರುವರು, ರಾಷ್ಟ್ರಕೂಟದ ಪ್ರಖ್ಯಾತ ಆರಸನಾದ ನೃಪತುಂಗನು 'ಕವಿರಾಜಮಾರ್ಗ' ಎಂಬ ಸುಪ್ರಸಿದ್ಧವಾದ ಅಲಂಕಾರಶಾಸ್ತ್ರದ ಗ್ರಂಥವನ್ನು ಬರೆದಿರುವನು, ಚಾಲುಕ್ಯವಂಶದ ಅರಸನಾದ ಸೋಮೇಶ್ವರನೆಂಬುವನು “ಮಾನಸೋಲ್ಲಾಸ ಅಥವಾ ಅಭಿಲಷಿತಾರ್ಥಚಿಂತಾಮಣಿ” ಎಂಬ ರಾಜಕೀಯ ಗ್ರಂಥವನ್ನು ಬರೆದನು. ಇಂಥ ರಾಜಕವಿಗಳೂ ವರಕವಿಗಳೂ ನಿಮ್ಮಲ್ಲಿ ಹುಟ್ಟಿರಲು ನೀವು ನಿಮ್ಮ ಕರ್ನಾಟಕಕ್ಕೆ ಹೆಸರಿಡುವುದೇಕೆ ?