ಪುಟ:ಕರ್ನಾಟಕ ಗತವೈಭವ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬ ನೆಯು ಪ್ರಕರಣ – ಚಾಲುಕ್ಯರ ಪೂರ್ವದ ಕರ್ನಾಟಕದ ಇತಿಹಾಸ

೪೯


ಗಂಗರು

ಮೈಸೂರ ಸರಕಾರದವರು ತಮ್ಮ ಪ್ರಾಂತದ ಶಿಲಾಲಿಪಿಗಳನ್ನು ಹೊರಗೆಡುಹಿರುವುದರಿಂದ, ಆ ಪ್ರಾಂತದಲ್ಲಿ ಹಿಂದಕ್ಕೆ ಆಳಿದ ಗಂಗವಂಶದ ವಿಷಯವಾಗಿ ನಮಗೆ ಹೆಚ್ಚಿಗೆ ಸಂಗತಿಗಳು ಗೊತ್ತಾಗಿವೆ. ಅವರು ಸಾರ್ವಭೌಮ ಅರಸರಲ್ಲ ದಿದ್ದರೂ ಅವರಲ್ಲಿ ಅನೇಕ ಪ್ರಸಿದ್ದ ರಾಜರು ಆಳಿರುವರು. ಗಂಗರು ಮೈಸೂರಿನಲ್ಲಿ ೨ನೆಯ ಶತಮಾನದಿಂದ ೧೧ನೆಯ ಶತಮಾನದವರೆಗೆ ಆಳಿದರು. ಅವರ ರಾಜ್ಯಕ್ಕೆ ಗಂಗವಾಡಿ ಎಂದು ಹೆಸರು. ಕೋಲಾರ, ತಳಕಾಡುಗಳೇ ಅವರ ರಾಜಧಾನಿಗಳು, ಮಾಧವ ಅಥವಾ ಕೊಂಗುಣಿವರ್ಮನು ಇವರ ಮೂಲಪುರುಷನು. ಈ ವಂಶದಲ್ಲಿ ಹರಿವರ್ಮ, ಅವನೀತ, ದುರ್ವಿನೀತ, ಶಿವಮಾರ, ಶ್ರೀ ಪುರುಷ ಮುಂತಾದ ಅರಸರು ಪ್ರಬಲರಾಗಿದ್ದರು. ಅವರಲ್ಲಿ ಶ್ರೀ ಪುರುಷನೇ ಶ್ರೇಷ್ಠನು (೭೨೬-೭೭೬). ಈ ವಂಶದಲ್ಲಿ ಅನೇಕ ಅರಸರು ಗ್ರಂಥಕರ್ತರಾಗಿದ್ದರು. ಆ ವಿಷಯವನ್ನು ಮುಂದೆ ಹೇಳುವೆವು. ರಾಚಮಲ್ಲನೆಂಬ ಈ ವಂಶದ ಅರಸನ ಕಾಲದಲ್ಲಿ ಅವನ ಮಂತ್ರಿಯಾದ ಚಾಮುಂಡರಾಯನು ಶ್ರವಣಬೆಳುಗುಳದ ಅತ್ಯಂತ ಭವ್ಯವಾದ ಗೋಮಟೇಶ್ವರ ಎಂಬ ಜೈನಮೂರ್ತಿಯನ್ನು ೯೮೩ ರಲ್ಲಿ ಸ್ಥಾಪಿಸಿ ದನು. ಈ ಗಂಗರು ನಡುನಡುವೆ ಚಾಲುಕ್ಯರಾಷ್ಟ್ರಕೂಟರಿಗೆ ಮಾಂಡಲಿಕರಾಗಿದ್ದರು. ಮುಂದೆ ಈ ರಾಜ್ಯವು ಚೋಳರಾಜ್ಯದಲ್ಲಿ ಲೀನವಾಯಿತು.