ಪುಟ:ಕರ್ನಾಟಕ ಗತವೈಭವ.djvu/೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೭೨
ಕರ್ನಾಟಕ ಗತವೈಭವ

ಣನು ಗುಜರಾಥದ ಮೇಲೂ ಅನೇಕಾವರ್ತಿ ದಾಳಿಯನ್ನು ಮಾಡಿದನು. ಈ ಸಿಂಘಣನ ಮಗನಾದ ರಾಮನು, ಗುಜರಾಥದಲ್ಲಿ ಆಳುತ್ತಿರುವಾಗ ಒಂದು ಕಾಳಗದಲ್ಲಿ ಮಡಿದನು. ಆಗ ಅವನ ಮಗನು ಚಿಕ್ಕವನಾಗಿದ್ದುದರಿಂದ, ಅವನ ತಂಗಿಯಾದ ಲಕ್ಷ್ಮಿಯು, ಆ ದೇಶವನ್ನು ಕೆಲವು ಕಾಲಪರ್ಯಂತ ಆಳಿದಳು, ಸಂಘಣನು 'ಚಿಕ್ಕ' ನೆಂಬವನ ಮಗನಾದ ಬಿಜ್ಜಣ್ಣನನ್ನು ದಕ್ಷಿಣದೇಶಕ್ಕೆ ಅಧಿಕಾರಿಯನ್ನಾಗಿ ನೇಮಿಸಿದ್ದನು. ಈ ಬಿಜ್ಜಣ್ಣನು ರಟ್ಟರನ್ನೂ, ಕದಂಬರನ್ನೂ, ಗುತ್ತರನ್ನೂ, ಪಾಂಡ್ಯರನ್ನೂ ಗೆದ್ದು, ಹೊಯ್ಸಳ ರಾಜ್ಯವನ್ನು ತೆಗೆದುಕೊಂಡು ಕಾವೇರೀ ನದಿಯ ದಡದಲ್ಲಿ ತನ್ನ ವಿಜಯಸ್ತಂಭವನ್ನೂರಿದನು. ಆದುದರಿಂದ, ಈ ಸಿಂಘಣನ ಕಾಲದಲ್ಲಿ ಕೆಲವು ಕಾಲ ರಾಜ್ಯಗಳ ವಿಸ್ತಾರವು ಅತಿಶಯವಾಗಿ ಇದ್ದಂತೆ ತೋರುತ್ತದೆ. ಸಿಂಘಣನಿಗೆ ಪೃಥ್ವಿ ವಲ್ಲಭನೆಂದು ಬಿರುದು ಇತ್ತು. ದೇವಗಿರಿ ಯಾದವರು ತಾವು ವಿಷ್ಣು ವಂಶೋದ್ಭವರೆಂದೂ, ದ್ವಾರಾವತೀ ಪುರವರಾಧೀಶ್ವರರೆಂದೂ ಹೇಳಿಕೊಳ್ಳುವರು. ಭಾಸ್ಕರಾಚಾರ್ಯರ ಮೊಮ್ಮಗನಾದ ಚಂಗದೇವನು ಸಿಂಘಣನ ಆಸ್ಥಾನದಲ್ಲಿ ಜ್ಯೋತಿಷ್ಯನಾಗಿದ್ದನು.
ನಂತರದಲ್ಲಿ ಮಹಾದೇವನೇ ಹೆಸರಾದ ಅರಸನು. ಈತನು ತಲುಂಗ, ಗುರ್ಜರ, ಕರ್ಣಾಟ, ಕೊಂಕಣ ಮುಂತಾದ ಅರಸರನ್ನು ಗೆದ್ದನು, ಕರ್ಣಾಟರೆಂದರೆ ಹೊಯ್ಸಳ ಅರಸರು.
ವಂಶದ ಕೊನೆಯ ಅರಸನು ರಾಮಚಂದ್ರನು (೧೨೭೧-೧೩೦೯). ರಾಮಚಂದ್ರನ ರಾಜ್ಯವು ಮೈಸೂರಿನವರೆಗೆ ಹಬ್ಬಿತ್ತು. ಪ್ರಸಿದ್ಧ ಧರ್ಮಶಾಸ್ತ್ರ ಕಾರನಾದ ಹೇಮಾದ್ರಿಯು, ಮಹಾದೇವ ಮತ್ತು ರಾಮಚಂದ್ರ ಇವರ ಆಳಿಕೆಯಲ್ಲಿ ಮಂತ್ರಿಯಾಗಿದ್ದನು. ೧೨೯೬ನೆಯ ಇಸವಿಯಲ್ಲಿ ಅಲ್ಲಾವುದ್ದೀನ ಖಿಲಜಿಯು ರಾಮಚಂದ್ರನನ್ನು ಸೋಲಿಸಿದನು. ಅನಂತರ ಮಲಿಕಕಾಫರನು ರಾಮಚಂದ್ರನನ್ನು ಕೊಂದು ದೇವಗಿರಿಯನ್ನು ವಶಮಾಡಿಕೊಂಡನು.