ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೧೦
ಕುಕ್ಕಿಲ ಸಂಪುಟ


ಸ್ತುತಿನರ್ತನವಾದ ಮೇಲೆ ಕೆಲವು ವಂದನಶ್ಲೋಕಗಳನ್ನು ಹಾಡಿ ಪರದೆ ಎತ್ತುತ್ತಾರೆ. ನಾಟ್ಯಶಾಸ್ರೋಕ್ತ ಬಹಿರ್ಗೀತ ನಾಂದೀನರ್ತನಕ್ಕೆ ಪ್ರತಿಯಾಗಿ 'ಪುರಪ್ಪಾಡು' ಎಂಬ ಗೀತನೃತ್ತಗಳು ನಡೆಯುತ್ತವೆ. ಒಂದು ಪ್ರಧಾನ ಪುರುಷವೇಷವೂ ಒಂದೆರಡು ಉಪವೇಷ ಗಳೂ ಒಂದು ಸ್ತ್ರೀವೇಷ ಸಮೇತ ಛತ್ರ ಚಾಮರ ಶಂಖ ನಿರ್ಘೋಷ ಮೊದಲಾದ ರಾಜಮರ್ಯಾದೆಯೊಡನೆ ರಂಗಪ್ರವೇಶವನ್ನು ಮಾಡಿ ಶಿರೋಹಸ್ತಾದಿ ಷಡಂಗ ವಿನ್ಯಾಸ ದಿಂದ ಜೊತೆಯಲ್ಲಿ ನರ್ತಿಸುತ್ತಾರೆ. ಆಗ ಹಾಡುವ ಸ್ತುತಿಪದ್ಯಗಳು ಬೇರೆ ಇರುತ್ತವೆ. ಇವಾವುವೂ ಕೊಟ್ಟಾರಕರ ರಾಜನ ರಚನೆಗಳಲ್ಲ.
ಇದಾದ ಮೇಲೆ 'ಮೇಳಪ್ಪದಂ' ಎಂಬ ನರ್ತನವು ಸೌಮ್ಯ ವೇಷದ ಕಥಾಪಾತ್ರಗಳಿಂದ ನಿರ್ವಹಿಸಲ್ಪಡುತ್ತದೆ. ಆಗ ಜಯದೇವ ಕವಿಯ ಸಂಸ್ಕೃತ ಗೀತಗೋವಿಂದ ಕಾವ್ಯದ 'ಮ೦ಜುತರ ಕುಂಜವನ ಕೇಳಿಸದನೇ...' ಎಂಬ ಅಷ್ಟಪದಿಯನ್ನು ಹಾಡುವ ಸಂಪ್ರದಾಯವು ಪರಂಪರೆಯಿಂದ ನಡೆದುಬಂದಿದೆ. ಇದಾದಲ್ಲಿಗೆ ಪೂರ್ವರಂಗ ವಿಧಾನವು ಕೊನೆಗೊಳ್ಳುವುದು. ಆಮೇಲೆ ಕ್ರಮದಂತೆ ಮುಖ್ಯ ಕಥೆಯ ನಾಟ್ಯಾಭಿನಯವು ಪ್ರಾರಂಭ ವಾಗುವುದು.
ಕಥಕಳಿಯ ಗಾನವು ಪ್ರಾಯಿಕವಾಗಿ ವಿಲಂಬಿತ ಮತ್ತು ಮಧ್ಯಲಯಗಳಲ್ಲಿಯೇ ನಡೆಯುವುದಾಗಿದೆ. ಸರ್ವಸಾಮಾನ್ಯವಾಗಿ ೩೦-೩೨ ರಾಗಭೇದಗಳಿರುತ್ತವೆ. ಕೃತಿಕರ್ತೃ ಗಳೇ ಪದ್ಯಗಳಿಗೆ ರಾಗ ತಾಳ ನಿರ್ದೇಶಗಳನ್ನು ಮಾಡಿರುತ್ತಾರೆ. ಕರ್ಣಾಟಕ ಸಂಗೀತದಲ್ಲಿ ಈಗ ಪ್ರಯೋಗದಲ್ಲಿಲ್ಲದಿರುವ ಕೆಲವೊಂದು ಪ್ರಾಕ್ ಪ್ರಸಿದ್ಧ ರಾಗಗಳು ಕಥಕಳಿಯಲ್ಲಿ ಬಳಕೆಯಲ್ಲಿವೆ. ಗಾನಕ್ರಮವೂ ಕಚೇರಿ ಸಂಗೀತಕ್ಕಿಂತ ಕೆಲಮಟ್ಟಿಗೆ ಭಿನ್ನವಾಗಿದೆ. ಕಥಕಳಿ ಗಾನದಲ್ಲಿ ಕೇವಲ ರಾಗಾಲಾಪನೆ ಎಂದಿರುವುದಿಲ್ಲ. ಏರಿಳಿಯ ಸ್ವರಾಲಂಕಾರಗಳಲ್ಲಿ ಗಾನ ಸಂಚಾರವು ನಿಧಾನವಾಗಿ ಮೆಟ್ಟು ಮೆಟ್ಟಲಾಗಿ ಮೇಲೆ ಹೇಳಿರುವಂತಹ 'ಸೋಪಾನಕ್ರಮ' ದಲ್ಲಿ ನಡೆಯುತ್ತವೆ. ತಾಳಗಳಲ್ಲಿಯೂ ರಚನಾಭೇದಗಳು ವಿಚಿತ್ರವಾಗಿವೆ. ಮುಖ್ಯವಾದ ತಾಳಗಳೆಂದರೆ ಚೆಂಬಡ, ಅಡಂದ, ಪಂಚಾರಿ, ಚಂಬ ಎಂಬ ನಾಲ್ಕು. ಇವು ಕ್ರಮವಾಗಿ ಪ್ರಚಲಿತ ಸಂಗೀತದ ಆದಿತಾಳ (೧೬ ಮಾತ್ರೆ); ಅಟತಾಳ (೧೪ ಮಾತ್ರೆ); ರೂಪಕತಾಳ (೬ ಮಾತ್ರೆ); ಜಂಪೆತಾಳ (೧೦ ಮಾತ್ರೆ) ಇವಕ್ಕೆ ಸಮಾನವಾಗಿರುತ್ತವೆ. ಮಾತ್ರೆಗಳಲ್ಲಿ ಸಮಾನವಾಗಿದ್ದರೂ ಘಾತಗಳಲ್ಲಿ ವ್ಯತ್ಯಾಸವಿರುತ್ತದೆ.








(ಜಾನಪದ ಪತ್ರಿಕೆ : ಸಂ. : ೨, ಸಂ. : ೨)