ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸೂಡ - ಸೂಳಾದಿ - ಸಾಲಗ / ೨೫೩

ವ್ಯಾಖ್ಯಾನದಲ್ಲಿ ಕಲ್ಲಿನಾಥನು ದೇಶೀತಾಳಗಳ ಈ ಅವ್ಯವಸ್ಥೆಯನ್ನು ಹೀಗೆ ಸ್ಪಷ್ಟಪಡಿ ಸಿರುತ್ತಾನೆ-
'ದ್ರುತಾದೀನಾಂ ಲಘುಗುರುಪ್ಲುತಾನಾಂ ರಚನಾ, ಸನ್ನಿವೇಶವಿಶೇಷಃ, ಪ್ರಮಾಣ ವಿಶೇಷಶ್ಚ, ತಸ್ಯಭೇದೋ ವಿಶೇಷಾಂತರಂ ತಸ್ಮಾದ್ಧೇತೋಃ ತಾಲಭೇದೋಪ್ಯನೇಕಧಾ ಭವತಿ ವಿಚಿತ್ರೋ ಭವತಿ | ತಾಲವೈಚಿತ್ರ್ಯಮಪಿ ದ್ರುತಾದೀನಾಂ ಸನ್ನಿವೇಶಭೇದಾತ್ ಪ್ರಮಾಣಭೇದಾಚ್ಚೇತಿ ತಿ ಮಂತವ್ಯಂ' ಇದರ ಹಿಂದಿನ ಶ್ಲೋಕದ ವ್ಯಾಖ್ಯಾನದಲ್ಲಿಯೂ ಲಘು ಗುರುಗಳ ಪ್ರಮಾಣಭೇದವನ್ನು ಸೋದಾಹರಣವಾಗಿ ನಿರೂಪಿಸಿರುತ್ತಾನೆ.

ಹೀಗೆ ಲಘು ಗುರುಗಳ ನಿಜಪ್ರಮಾಣವೂ ಸಾಪೇಕ್ಷ್ಯಸಂಬಂಧವೂ ಭಿನ್ನ ಭಿನ್ನ ವಾಗಿರುವುದರಿಂದಲೇ ದೇಶೀತಾಳಗಳಿಗೆ ಖಂಡತಾಳ ಅಥವಾ ಛಾಯಾಲಗಳೆಂಬ (ಸಾಲಗ) ಹೆಸರು ಸಾರ್ಥಕವಾಗಿ ಬಂದಿರುವುದು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಛಾಯ ಎಂದರೆ ನೆರಳು, ನೆರಳು ಹೇಗೆ ಚಿಕ್ಕದೂ ಆಗುವುದೋ ಹಾಗೆಯೇ ಸಾಲಗತಾಳದ ಲಘು ಗುರುಗಳೂ ಗಾತ್ರ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗುವಂಥವಾದುದರಿಂದ ಅವಕ್ಕೆ ಛಾಯೆಯ ಸಾದೃಶ್ಯ ಛಾಯಾ ಮಾತ್ರವಾದ ಲಘು ಗುರುಗಳಿರುವ ತಾಳ-ಛಾಯಾಲಗ (ಸಾಲಗ) ಇದು ಮೂಲತಃ ದೇಶೀತಾಳಗಳಿಗೆ ಬಂದ ಹೆಸರು.

ಈಗ ಹೇಳಿದ 'ಛಾಯಾಲಗ,ಮೇಲಾದೇ...' ಎಂಬ ಶ್ಲೋಕದ ಪೂರ್ವಾರ್ಧಕ್ಕೆ, ಏಲಾದಿ ದೇಶೀಯ ಪ್ರಬಂಧಗಳು ಸಾಲಗತಾಳ ನಿಬದ್ಧವಾಗಿರುವುದರಿಂದ ಶಾಸ್ತ್ರಜ್ಞರು ಅವನ್ನು ಸಾಲಗಪ್ರಬಂಧಗಳೆಂದು ವ್ಯವಹರಿಸುತ್ತಾರೆ ಎಂದು ನ್ಯಾಯವಾದ ಅರ್ಥವಾಗುವುದು.

ಆ ಶ್ಲೋಕದ ಉತ್ತರಾರ್ಧದಲ್ಲಿ, ಶುದ್ಧ ಸಾದೃಶ್ಯವಿರುವುದರಿಂದ ಅವನ್ನು ಶುದ್ಧ ಎಂದು ಕರೆಯುವುದೂ ಸಮ್ಮತವೇ ಆಗಿದೆ ಎಂದಿರುವುದರ ನಿಜಾಭಿಪ್ರಾಯವೇನು? ಎಂದರೆ ಇಲ್ಲಿ ಶುದ್ಧ ಸಾದೃಶ್ಯ ಎಂಬುದಕ್ಕೆ ಏಲಾದಿಗಳ ರಚನೆಯ ಸ್ವರೂಪ ಮತ್ತ ಸ್ವಭಾವದಲ್ಲಿ ಶುದ್ಧ ಪ್ರಬಂಧಗಳ ಹೋಲಿಕೆಯಿದೆ ಎಂಬ ಅರ್ಥವಿರಬೇಕು ಹೊರತು ಅದೇ ಶಾಸ್ರೋಕ್ತ ಲಕ್ಷಣಗಳು ಇವುಗಳಲ್ಲಿವೆ ಎಂದಾಗದು. ಇಲ್ಲಿ ಶುದ್ಧ ಎಂದಿರುವುದು ಯಾವುದನ್ನು ಎಂದು ಯೋಚಿಸಿದರೆ- ಮಾರ್ಗ ಸಂಗೀತಕ್ಕೆ ಸಾಮಗಾನವು ಮೂಲ ಎಂಬುದು ಸರ್ವಪ್ರಸಿದ್ಧ, ಸಾಮಸಂಪ್ರದಾಯದಲ್ಲಿರುವುದಕ್ಕೆ ಅಥವಾ ಅದರಿಂದ ವಿಕಾಸಗೊಂಡಿರುವುದಕ್ಕೆಲ್ಲ ಮಾರ್ಗ ಪದ್ಧತಿಯಲ್ಲಿ ಶುದ್ಧ ಎಂದು ಹೇಳಲಾಗಿದೆ. ಸಾಮಗಾನದ ಸಪ್ತಸ್ವರಗಳೇ ಶುದ್ಧ ಸ್ವರಗಳೆಂಬುದು ಪ್ರಸಿದ್ಧ. ಹಾಗೆಯೇ ವೈದಿಕ ಸಾಮಗೀತಗಳೂ ಶುದ್ದಗೀತಗಳು, ಜಾತ್ಯಾದಿ ಗೀತಗಳು ಸಾಮಸಂಪ್ರದಾಯದಲ್ಲಿರುವುದರಿಂದ ಶುದ್ಧವರ್ಗದಲ್ಲಿ ಸೇರಿವೆ. ಏಲಾದಿ ಪ್ರಬಂಧಗಳ ರಚನೆಯಲ್ಲಿ ಆ ಸಾಮಗೀತಗಳ ಅನುಕರಣವಿದೆ ಎಂಬುದರಿಂದ ಅವುಗಳಲ್ಲಿ ಶುದ್ಧ ಸಾದೃಶ್ಯವಿದೆ ಎಂದು ಶಾರ್ಙ್ಗದೇವನು ಹೇಳಿದುದಿರಬೇಕು. ಒಂದರಲ್ಲಿ ಇನ್ನೊಂದರ ಸಾದೃಶ್ಯವಿದೆ ಎಂದರ ಅದರ ಗುಣ ಅಥವಾ ಲಕ್ಷಣವೇ ಯಥಾವತ್ತಾಗಿ ಇದರಲ್ಲಿದೆ ಎಂಬುದು ನ್ಯಾಯವಾದ ಅರ್ಥವಲ್ಲ. ಇದರ ಗುಣವು ಅದರ ಗುಣವನ್ನು ಹೋಲುತ್ತವೆ ಎಂಬುದೇ ಸರಿಯಾದ ಅರ್ಥ, ಗುಣಲಕ್ಷಣಗಳಲ್ಲಿ ಏನೂ ವ್ಯತ್ಯಾಸವಿಲ್ಲವೆಂದರೆ ಅವು ಅಭಿನ್ನವೆಂದ ಆಗುವುದಲ್ಲವೆ? ಸಾದೃಶ್ಯವೆಂದರೆ ಹೋಲಿಕೆಯೇ ಸರಿ.


೧. ಶುದ್ಧ ಸಾಲಗಸಂಕೀರ್ಣಾಸ್ತಾಲಭೇದಾಃ ಕ್ರಮಾನ್ಮತಾಃ, ಸಂ. ದರ್ಪಣ.