ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೫೮ /ಕುಕ್ಕಿಲ ಸಂಪುಟ

ಪದ್ಯದಲ್ಲಿ, ಮೇಲೆ ಹೇಳಿದಂತೆ ಶ್ರೀ ವಿಜಯಾದಿಗಳ ಪದ್ಯಕಾವ್ಯಗಳು ಪುರಾತನ ಮಾರ್ಗ ಪದ್ಧತಿಗೆ ಲಕ್ಷ್ಯಗಳಾಗಿವೆ ಎಂದು ಉಲ್ಲೇಖಿಸಿರುವುದರಿಂದ ಇಲ್ಲಿ ಈ ಮಾತಿಗೆ ಪ್ರಾಯಶಃ ಆ ಪ್ರಸಿದ್ಧ ಕಾವ್ಯಗಳ ಎಲ್ಲ ಲಕ್ಷಣಗಳನ್ನೂ ಒಳಗೊಳ್ಳದ ಕನ್ನಡಕಾವ್ಯಗಳು ಹೀಗೆ ಎರಡು ವಿಧವಾಗಿವೆ, ಎಂಬ ಅರ್ಥವಿರಬಹುದೆಂದು ತೋರುವುದು. ಆ ಪ್ರಕಾರ, ಅಸಂಪೂರ್ಣ ಲಕ್ಷಣದ ರಚನೆಗಳೆನ್ನಬಹುದಾದ ಚತ್ತಾಣ ಮತ್ತು ಬೆದಂಡೆ ಎಂಬವು ಗಳನ್ನು ಆಧುನಿಕ ಪದ್ಧತಿಯ ಪದ್ಯಕಾವ್ಯಗಳೆಂದು ಹಿಂದಿನ ಲಾಕ್ಷಣಿಕರು ಅಂಗೀಕರಿ ಸಿರುತ್ತಾರೆ ಎಂದು ಈ ಮೊದಲನೆಯ ಪದ್ಯದ ತಾತ್ಪರ್ಯವಾಗುವುದು. ಎರಡನೇ ಪದ್ಯದಿಂದ ಬೆದಂಡೆ ಎಂಬುದು ಎಡೆ ಎಡೆಯಲ್ಲಿ ಒಂದೊಂದು ಕಂದ ಮತ್ತು ಒಂದೊಂದು ವೃತ್ತಗಳನ್ನು ಒಳಗೊಂಡಿರುವ 'ಜಾತಿ'ಗಳ ರಚನೆ ಎಂದು ವ್ಯಕ್ತವಾಗು ವುದು. 'ಜಾತಿ' ಎಂಬ ಛಂದಸ್ಸುಗಳಲ್ಲಿ ಅನೇಕ ವಿಧಗಳಿರುತ್ತಾ ಇಂಥ ಒಂದು ಜಾತಿ ಎಂಬ ವಿಶೇಷ ನಿರ್ದೇಶವಿಲ್ಲದೆ ಏಕವಚನದಲ್ಲಿ ಹೇಳಿರುವುದರಿಂದ ಅದು ಜಾತೇಕ ವಚನ ಪ್ರಯೋಗವೆಂಬುದು ಸ್ಪಷ್ಟವೇ ಸರಿ. ಆದುದರಿಂದ ಬೆದಂಡೆ ಎಂಬುದು ಬಹ್ವಂಶ ಜಾತಿ ಛಂದಸ್ಸುಗಳಿಂದ ರಚಿಸಲ್ಪಡುವ ಕಾವ್ಯವೆಂದೂ, ಅಲ್ಲೊಂದು ಇಲ್ಲೊಂದರಂತೆ, ದೂರದೂರಕ್ಕೆ ಒಂದೊಂದು ಕಂದಗಳೂ ವೃತ್ತಗಳೂ ಅದರಲ್ಲಿರುತ್ತವೆ ಎಂದೂ ಊಹಿಸಬಹುದಾಗಿದೆ.
ಈ ಜಾತಿಗಳಾದರೆ ಯಾವುವು? ಮಾತ್ರಾಗಣಬದ್ಧವಾದ ಆರ್ಯೆ ಮೊದಲಾದ ಪ್ರಾಕೃತ ಜಾತಿಗಳೋ ಅಥವಾ ಅಕ್ಕರ ತ್ರಿಪದಿ ಮೊದಲಾದ ಕರ್ಣಾಟಕ ವಿಷಯ ಜಾತಿಗಳೊ ಎಂಬ ಸಂದೇಹಕ್ಕೆ ಇಲ್ಲಿ ಅವಕಾಶ ಕಾಣುವುದು. ಆದರೆ ಇಲ್ಲಿ ಮಾತ್ರಾಜಾತಿಗೆ ಸೇರಿದ ಕಂದವನ್ನು ಬೇರೆ ಹೇಳಿರುವುದರಿಂದ ಈ ಜಾತಿಗಳೆಂದರೆ ಅಕ್ಕರ ಮೊದಲಾದ ಕರ್ಣಾಟಕ ಭಾಷಾಜಾತಿಗಳೇ ಆಗಿರಬೇಕೆಂದು ನ್ಯಾಯವಾಗಿ ಊಹಿಸಬೇಕು. ಮುಂದಿನ ಚತ್ತಾಣಕ್ಕೆ ಹೇಳಿದ ಆರು ಬಗೆಯ ಛಂದಸ್ಸುಗಳಲ್ಲಿ ಕಂದವೃತ್ತಗಳನ್ನುಳಿದ ಇತರ ನಾಲ್ಕೂ ಛಂದಸ್ಸುಗಳು ಕರ್ಣಾಟಕ ಜಾತಿಗಳೇ ಆಗಿರುತ್ತವೆ ಎಂಬುದನ್ನೂ ಇಲ್ಲಿ ಗಮನಿಸಬಹುದು.
ಕಾವ್ಯಾವಲೋಕನದಲ್ಲಿ ನಾಗವರ್ಮನು ಬೆದಂಡೆ ಎಂಬುದು 'ಪಾಡುಗಬ್ಬ'ವೆಂದು ಅದರ ಲಕ್ಷಣವನ್ನು ಹೀಗೆ ಕೊಡುತ್ತಾನೆ :
ಪಾಡುಗಳಿಂದಂ ತರಿಸಲೆ
ಮಾಡಿದುದಂ ಪಾಡುಗಬ್ಬವೆಂದು ಬುಧರ್ ಕೊಂ
ಡಾಡುವರವರಿಂ ದಲ್ ಮೆಲ್
ವಾಡುಂ ರೂಢಿಯ ಬೆದಂಡೆಗಬ್ಬ ಮುಮಕ್ಕುಂ ||
ಹೆಚ್ಚಿನ ಅಂಶ ಹಾಡುಗಳಿಂದ ರಚಿಸಲ್ಪಡುವ ಕೃತಿಯು ಪಾಡುಗಬ್ಬವೆಂದು ಕರೆಯಲ್ಪಡುತ್ತದೆ; ಆದ್ದರಿಂದ ಮೆಲ್ಬಾಡು ಎಂಬ ರಚನೆಯೂ, ರೂಢಿಯಲ್ಲಿ ಬೆದಂಡೆ ಎಂದು ಹೆಸರಾದ ಕಾವ್ಯವೂ ಪಾಡುಗಬ್ಬಗಳೇ ಆಗಿವೆ ಎಂದು ಈ ಪದ್ಯದ ಅಭಿಪ್ರಾಯವಾಗಿದೆ.
ಈತನು ಕಾವ್ಯ ವಿಭಾಗವನ್ನು ಎರಡು ವಿಧವಾಗಿ ಹೇಳುತ್ತಾನೆ : ಗದ್ಯಕಾವ್ಯ, ಪದ್ಯಕಾವ್ಯ. ಇವೆರಡೂ ಮಿಶ್ರಿತವಾದ ಚಂಪೂಕಾವ್ಯವೆಂಬ ಮಾರ್ಗಪರಂಪರೆಯ ವಿಭಾಗವು ಒಂದು ವಿಧ, ಪ್ರಾಯಶಃ ದೇಶೀಪರಂಪರೆಯನ್ನು ಅನುಲಕ್ಷಿಸಿ, ಪಾಡುಗಬ್ಬ