ಪುಟ:ಕ್ರಾಂತಿ ಕಲ್ಯಾಣ.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೬

ಕ್ರಾಂತಿಕಲ್ಯಾಣ

ನಿರ್ವಹಿಸಿದನು. ಚೆನ್ನಬಸವಣ್ಣನವರೂ ಪ್ರವಚನಗಳನ್ನು ಮೆಚ್ಚಿದರು. ಬ್ರಹ್ಮೇಂದ್ರ ಶಿವಯೋಗಿಗಳು ಉತ್ತಮ ಪ್ರವಚನಕಾರರೆಂಬ ಕೀರ್ತಿಯು ಅಂಕುರಾರ್ಪಣವಾಯಿತು. ಈ ರೀತಿ ಎರಡು ವಾರಗಳು ಕಳೆದವು. ಆಮೇಲೆ ಒಂದು ದಿನ ಮಹಮನೆಯ ಸಡಗರವನ್ನು ಕಂಡು ಬ್ರಹ್ಮಶಿವನು, “ಈ ದಿನ ಏನು ವಿಶೇಷ?” ಎಂದು ಸ್ನಾನಗೃಹದ ತನ್ನ ಸಂಗಡಿಗನನ್ನು ಕೇಳಿದನು.

ನಿಮಗೆ ತಿಳೀದ ಹರೀಶಣ್ಣನೋರ ? ಸರ್ವಾಧಿಕಾರಿ ಬಿಜ್ಜಳರಾಯರು ಇವೊತ್ತು ಮಹಮನೆಗೆ ಬರ್ತಾರ,” ಎಂದು ಸಂಗಡಿಗನು ಹೇಳಿದನು.

ಬ್ರಹ್ಮಶಿವನು ಕೂಡಲೆ ಈ ವಿಚಾರವನ್ನು ಬೊಮ್ಮರಸನಿಗೆ ತಿಳಿಸಿ, “ಬಿಜ್ಜಳರಾಯರು ಬಂದು ಹೋಗುವವರೆಗೆ ನೀವು ಧ್ಯಾನದ ನೆವದಿಂದ ಈ ಕೋಣೆಯಲ್ಲಿಯೇ ಇದ್ದರೆ ಒಳಿತು,” ಎಂದು ಎಚ್ಚರಕೊಟ್ಟನು.

ಬ್ರಹ್ಮಶಿವನ ಭೀತಿ ನಿರಾಧಾರವಾಗಿರಲಿಲ್ಲ. ಒಂದು ಸಾರಿ ನೋಡಿದವರ ಗುರುತು ಪರಿಚಯಗಳನ್ನು ಬಿಜ್ಜಳನು ಯಾವಾಗಲೂ ನೆನಪಿನಲ್ಲಿಡುತ್ತಿದ್ದನು. ಗಡ್ಡ ಮೀಸೆ ಜಟೆಗಳ ಮರೆಯಲ್ಲಿಯೂ ಅವನು ಬೊಮ್ಮರಸನ ಗುರುತು ಹಿಡಿಯಬಹುದಾಗಿತ್ತು.

ಕಲಚೂರ್ಯ ಅರಮನೆಯ ಹಿರಿಯ ಹೆಗ್ಗಡೆ ಹಿಂದಿನ ದಿನ ಮಹಮನೆಗೆ ಬಂದು, ಮರುದಿನ ಪ್ರಾತಃಕಾಲ ಸರ್ವಾಧಿಕಾರಿ ಬಿಜ್ಜಳರಾಯರು ಬರುವ ವಿಚಾರವನ್ನು ಚೆನ್ನಬಸವಣ್ಣನವರಿಗೆ ತಿಳಿಸಿ, ಅದಕ್ಕಾಗಿ ಯಾವ ವಿಶೇಷ ರೀತಿಯ ವೈಭವ ಸಿದ್ಧತೆಗಳೂ ನಡೆಯಕೂಡದೆಂದು ಪ್ರಭುಗಳು ಹೇಳಿರುವುದಾಗಿ ಎಚ್ಚರಿಸಿದ್ದನು. ಆದರೂ ಚಾಲುಕ್ಯ ಸರ್ವಾಧಿಕಾರಿ ಮಾಹಾಮಂಡಲೇಶ್ವರನ ಭೇಟಿಯನ್ನು ಯಾವ ಸಡಗರವೂ ಇಲ್ಲದೆ ನಿರೀಕ್ಷಿಸುವುದು ಸರಳಜೀವನದ ಆದರ್ಶವನ್ನು ಆಚರಣೆಗೆ ತಂದುಕೊಂಡಿದ್ದ ಮಹಮನೆಯ ಶರಣರಿಗೂ ಸಾಧ್ಯವಾಗಲಿಲ್ಲ. ಮಹಾದ್ವಾರ ಅಂಗಣಗಳನ್ನು ಸಾರಣೆ ರಂಗವಲ್ಲಿ ತಳಿರು ತೋರಣಗಳಿಂದ ಅಂದಗೊಳಿಸುವುದು ಅಗತ್ಯವಾಯಿತು. ಸಮಿತಿ ಚರ್ಚಾಗೋಷ್ಠಿಗಳೂ ನಡೆಯುತ್ತಿದ್ದ ಸಣ್ಣ ಸಭಾಂಗಣ ಸತ್ಕಾರಕ್ಕಾಗಿ ಸಿದ್ಧವಾಯಿತು. ನೀಲಲೋಚನೆ ಅಣ್ಣನ ಉಪಾಹಾರ ಪಾನೀಯಗಳನ್ನು ತಾನೇ ಸಿದ್ಧಗೊಳಿಸಿದಳು. ಸಂಗಮನಾಥನಿಗೆ ಸ್ನಾನಮಾಡಿಸಿ, ಅಂದದ ಹೊಸ ಉಡಿಗೆ ತೊಡಿಗೆಗಳಿಂದ ಸಿಂಗರಿಸುವ ಭಾರ ನಾಗಲಾಂಬೆಯ ಮೇಲೆ ಬಿದ್ದಿತು. ಬಿಜ್ಜಳನು ಬಂಧುವಿನಂತೆ ಮಹಮನೆಗೆ ಬರುತ್ತಿದ್ದುದರಿಂದ ಮನೆಯವರ ಹೊರತಾಗಿ ಮತ್ತಾರಿಗೂ ಭೇಟಿಯಲ್ಲಿ ಎದುರಿಗಿರುವ ಅವಕಾಶವಿರಲಿಲ್ಲ. ಭೇಟಿಯ ಉದ್ದೇಶವೇನು? ಎಂದು ಯೋಚಿಸುತ್ತಿದ್ದ ಚೆನ್ನಬಸವಣ್ಣನವರಿಗೆ ನಾಗಲಾಂಬೆ,