ಸೃಷ್ಟಿಕರ್ತನೊಬ್ಬನಿಗಲ್ಲದೆ ಮತ್ತಾರಿಗೂ ಹೊಸಬಗೆಯ ಸೃಷ್ಟಿಯನ್ನು ಮಾಡುವುದಕ್ಕೆ ಶಕ್ತಿಯಿಲ್ಲ. ಈಗ ಬಂದಿದ್ದ ಐಂದ್ರಜಾಲಿಕನು ಮಾಡಿದುದೆಲ್ಲವೂ ಮೋಸವೇ ಅಲ್ಲದೆ ಮತ್ತೆ ಬೇರೆಯಲ್ಲ. ಅವನು ತನ್ನ ಬಳಿಯಲ್ಲಿಟ್ಟು ಕೊಂಡಿದ್ದ ನಾಲ್ಕು ಕಾಲಿನ ದೊಡ್ಡ ಬಿದಿರುಬುಟ್ಟಿಯನ್ನೂ ಅದರಮೇಲೆ ಹೊದೆಯಿಸಿದ್ದ ಬಟ್ಟೆಯನ್ನೂ ತೆಗೆದುಬಿಟ್ಟರೆ, ಮಾವಿನ ಓಟೆಯನ್ನು ನೆಲದಲ್ಲಿ ಬಹಿರಂಗವಾಗಿ ಹೂತಿಟ್ಟು ಮೊಳೆತು ನಲಿಸುವಂತೆ ಮಾಡಲಾರನು. ಅವನು ಇಲ್ಲಿಗೆ ಬರುವಾಗಲೇ ಚಿಗುತಿದ್ದ ಮಾವಿನಕೊನೆಯೊಂದನ್ನೂ, ಹೂಗಚ್ಚಿದ್ದ ಕೊನೆಯೊಂದನ್ನೂ, ಹೀಚುಗಳಿಂದ ತುಂಬಿದ ಕೊನೆಯೊ೦ದನ್ನೂ ರಹಸ್ಯವಾಗಿ ತನ್ನೊಡನೆ ತಂದು ಬಹು ಜಾಗರೂಕತೆಯಿಂದ ಅವುಗಳನ್ನು ತನ್ನ ಬಳಿಯಲ್ಲಿ ಬಚ್ಚಿಟ್ಟು ಕೊಂಡಿದ್ದನಾದುದರಿಂದ, ಮಧ್ಯೆ ಮಧ್ಯೆ ಮೇಲೆ ಬಟ್ಟೆಯನ್ನು ತೆರೆಹಾಕಿ ನಾವು ನೋಡುತ್ತಿರುವಂತೆಯೇ ಮೊದಲು ನೆಲದಲ್ಲಿ ಹೂತಿದ್ದ ಓಟೆಯನ್ನು ತೆಗೆದುಹಾಕಿ ಬಟ್ಟೆಯಲ್ಲಿ ಬಚ್ಚಿಟ್ಟು ಕೊಂಡಿದ್ದ ಚಿಗುತಮಾವಿನಕೊನೆಯನ್ನೂ ತರುವಾಯ ಕಾಯಿಗಳಿಂದ ತುಂಬಿದ ಕೊನೆಯನ್ನೂ ಅಲ್ಲಿ ನಾಟಿ ತೋರಿಸಿದನು. ಅವನು ಬುಟ್ಟಿಯ ಮೇಲೆ ತೆರೆಯನ್ನು ಹಾಕಿ ಮಧ್ಯೆ ಮಧ್ಯೆ ಒಳಗೆ ಕೈಯಿಟ್ಟು ಮಾಡುತ್ತಿದ್ದುದು ಇದೇ ಕೌಶಲವು. ಅವನು ಕಾಸುಗಳನ್ನು ಮಾಡಿ ತೋರಿಸಿದುದೂ ಇಂತಹ ಮೋಸದಿಂದಲೇ, ಅವನು ತನ್ನ ಹಸ್ತಲಾಘವದಿಂದ ನಮಗೆ ಕಾಣಿಸದಿರುವಂತೆ ಕೆಲವು ಕಾಸುಗಳನ್ನು ಕೈಯಲ್ಲಿ ಮುಚ್ಚಿಟ್ಟು ಕೊಂಡಿದ್ದು, ಅವುಗಳಲ್ಲಿ ಒಂದನ್ನು ಮಾತ್ರ ಮೊದಲು ನನಗೆ ತೋರಿಸಿ, ಉಳಿದುವನ್ನೆಲ್ಲ ಆ ಒಂದೇ ಕಾಸಿನಿಂದಲೇ ಮಾಡಿದಂತೆ ನಮಗೆ ಭ್ರಮೆಯನ್ನುಂಟುಮಾಡಿದನು. ಅವನು ಮತ್ತೆಲ್ಲಿ ಹೋಗಿ ಈ ವಿನೋದವನ್ನು ಮಾಡಿದರೂ ತನ್ನ ಬಳಿಯಲ್ಲಿ ಹತ್ತು ಕಾಸುಗಳನ್ನು ಮಾತ್ರ ತೋರಿಸಬಲ್ಲನಲ್ಲದೆ ಅದಕ್ಕಿಂತ ಹೆಚ್ಚಾಗಿ ತೋರಿಸಲಾರನು. ಅವನಿಗೆ ಕಾಸುಗಳನ್ನು ಮಾಡುವಂತಹ ಶಕ್ತಿಯಿರುವ ಪಕ್ಷದಲ್ಲಿ, ಈ ವಿಧವಾಗಿ ಅವನು ಮನೆಮನೆಗೂ ತಿರುಗಿ ಯಾಚಿಸುವ ಅವಶ್ಯಕವಿಲ್ಲದೆ, ತನ್ನ ಮನೆಗೆ ಚಿನ್ನದ ಗೋಡೆಗಳನ್ನು ಹಾಕಿಸಿ ನಮ್ಮಂತಹರಿಗೂ ಅಪೇಕ್ಷಿಸಿದಷ್ಟು ಧನವನ್ನು ಕೊಡುವುದಕ್ಕೆ ಸಮರ್ಥನಾಗಿರುತ್ತಿದ್ದನು. ನಡುಹಗಲಲ್ಲಿ ಅವನು ನಮ್ಮೆಲ್ಲರ ಕಣ್ಣನ್ನೂ ಮುಚ್ಚಿ ಭ್ರಮಿಸುವಂತೆ
ಪುಟ:ಚಂದ್ರಮತಿ.djvu/೨೧
ಗೋಚರ