ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಸೂರ್ಯ ಚಂದ್ರರ ತರುವಾಯ ಶುಕ್ರನಷ್ಟು ತೇಜಸ್ವಿಯಾದ ವಸ್ತುವು ನಭೋಮಂಡಲದಲ್ಲಿ ಇನ್ನೊಂದಿಲ್ಲ. ಒಮ್ಮೊಮ್ಮೆ ನಾವು ಶುಕ್ರ ನನ್ನು ಹಗಲು ಸಹ ನೋಡಬಹುದು. ದುರ್ಬೀನುಗಳಲ್ಲಿಯಂತೂ ಪ್ರತಿ ಸೂರ್ಯನಂತೆ ಕಾಣುವನು. ಹೀಗೆ ಕಾಣುವ ಕಾರಣವೇನೆಂದರೆ ಶುಕ್ರನ ಸುತ್ತಲೂ ದಟ್ಟವಾದ ವಾತಾವರಣವಿದ್ದು ಅದು ಮೋಡದಿಂದ ತುಂಬಿರ ಬೇಕೆಂದೂ, ನಮಗೆ ಕಾಣುವುದು ಗ್ರಹದ ಮೇಲ್ಮಯ್ಯಾಗಿರದೆ ಈ ಮೋಡ ಗಳ ಹೊರಮೈಯಾಗಿರಬೇಕೆಂದೂ ಬಲ್ಲವರ ಮತವು. ಇಷ್ಟು ದಟ್ಟವಾದ ವಾತಾವರಣವಿದ್ದ ಬಳಿಕ ಅಲ್ಲಿ ಜನವಸತಿ ಇರಬಹುದಲ್ಲವೆ ಎಂದು ನೀವು ಕೇಳಬಹುದು. ಶುಕ್ರನಮೇಲಿನ ಋತುಗಳು ಸಮಶೀತೋಷ್ಣ ಗಳಾಗಿದ್ದರೆ ನಾವು ಹೀಗೆ ನಂಬಬಹುದಾಗಿತ್ತು. ಆದರೆ ಭೂಮಿಯ ಮೇಲಿನಂತಹ ಜೀವರಾಶಿಗಳು ಶುಕ್ರನ ಒಂದು ಗೋಲಾರ್ಧದಲ್ಲಿ ಬೆಂದು ಹೋದರೆ, ಇನ್ನೊಂದರಲ್ಲಿ ತಂಡಿಯಿಂದ ಸೆಟೆದುಹೋಗುವವು. ಶುಕ್ರನು ಸೂರ್ಯನಿಗೂ ನಮಗೂ ನಡುವೆ ಬಂದಾಗ ಒಮ್ಮೊಮ್ಮೆ ಸೂರ್ಯ ಬಿಂಬದ ಮೇಲೆ ಬುಧನಂತೆ ಕಪ್ಪು ಚುಕ್ಕೆಯಾಗಿ ಕಾಣುವನು, ಇಂತಹ ಪ್ರಸಂಗಗಳು ತೀರ ವಿರಳವಾಗಿರುತ್ತವೆ. ೧೮೮೨ರಿಂದ ಪುನಃ ಆಗಿಲ್ಲ. ೨೦೦೪ ನೆಯ ಇಸವಿಯವರೆಗೆ ಒದಗುವುದಿಲ್ಲ. ಆ ಸಮಯದಲ್ಲಿ ಸೂರ್ಯನ ಅಂತರವನ್ನು ಅಳೆಯುವುದಕ್ಕೆ ಬರುವುದರಿಂದ ಎಲ್ಲರೂ ಇದರ ಮಾರ್ಗ ಪ್ರತೀಕ್ಷೆಯನ್ನು ಮಾಡುವರು. ಶುಕನಾದ ಬಳಿಕ ಪೃಥ್ವಿಯು ಬರುವುದು. (ಇದರ ವಿಷಯಕ್ಕೆ ೮ನೆಯ ಪ್ರಕರಣವನ್ನು ನೋಡಿರಿ.) ಭೂಮಿಯ ಕಕ್ಷೆಯ ಹೊರಗಿನ ಮೊದಲನೆಯ ಗ್ರಹವೆಂದರೆ ಮಂಗಳನು, ಸೂರ್ಯನಿಂದ ಇವನ ಅಂತರವು ೧೪ ಕೋಟಿ ಮೈಲು, ಮಂಗಳ ಗ್ರಹದ ವ್ಯಾಸವು ನಾಲ್ವತ್ತೆರಡುನೂರು ಮೈಲುಗಳು. ಎಂದರೆ ಭೂಮಿಯ ಅರ್ಧದಷ್ಟು ಮಾತ್ರ. ನಿಮಿಷಕ್ಕೆ ೧೫ ಮೈಲಿನಂತೆ ನಡೆಯುವ ಇವನ ಸೂರ್ಯಪ್ರದಕ್ಷಿಣೆಯ ಕಾಲವು ೬೮೭ ದಿವಸಗಳು. ಅಕ್ಷ ಪ್ರದಕ್ಷಿಣೆಯು ೨೫ ಗಂಟೆಗಳಲ್ಲಿ, ಬುಧ ಶುಕ್ರರಂತೆ ಇದಕ್ಕೂ ಕಲೆಗಳುಂಟು. ಆದರೆ ಯಾವಾಗಲೂ ಪೂರ್ಣಬಿಂಬನಾಗಲಿ, ಚತುರ್ದಶಿಯ ಚಂದ್ರನಂತೆ ಸ್ವಲ್ಪ ಅಪೂರ್ಣನಾಗಲಿ ಕಾಣಿಸುವನು.