ಪುಟ:ನನ್ನ ಸಂಸಾರ.djvu/೧೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


48 ಕಾದಂಬರಿ ಸಂಗ್ರಹ

ಭಾಸ್ಕರನು, ತನ್ನ ಸರದಿಯು ಬರಲು ಎದ್ದುನಿಂತು "ಧರ್ಮಾವತಾರನೇ (Judge) ನಾನು ಮಧುಸೂದನನನ್ನು ಪತ್ತೆಮಾಡುವುದಕ್ಕಾಗಿ ಕರೆಸಲ್ಪಟ್ಟೆನು. ನಾನು ವಿಚಾರಿಸಿದ್ದರಲ್ಲಿ ಮಧುಸೂದನನ ಕೊಠಡಿಯಿಂದ ಸುರಂಗಮಾರ್ಗ ವೊಂದಿರು ವುದೆಂದೂ ಮಧುಸೂದನನು ತನ್ನ ಸ್ನೇಹಿತರಿಂದ ಪೀಡಿಸಲ್ಪಡುತ್ತಿದ್ದನೆಂದೂ ತಿಳಿಯ ಬಂತು. ನಾನು ಅಲ್ಲಿನ ಸುರಂಗಮಾರ್ಗವನ್ನು ಪರೀಕ್ಷೆ ಮಾಡುವಲ್ಲಿ ಇದೋ ಈ ಗುಂಡಿಯೂ, ಈ ಹರಿದುಹೋದ ಏಳು ಬಣ್ಣದ ಕರವಸ್ತ್ರವೂ ಸಿಕ್ಕಿದವು. ಅವುಗಳನ್ನು ತೆಗೆದುಕೊಂಡುಬಂದು ಕಲ್ಕತ್ತೆಯಲ್ಲಿ ಮಧುಸೂದನನ ಸ್ನೇಹಿತನ ವಿಷಯವಾಗಿ ವಿಚಾ ರಿಸುವಲ್ಲಿ ಅವರಲ್ಲೊಬ್ಬನು ಮದ್ಯದಂಗಡಿಗೆ ಬರುವುದಾಗಿ ತಿಳಿಯಬಂದಿತು. ಹಾಗೆ ಬರುತಿದ್ದವನೇ ಈ ಹರಿಚಂದ್ರನು. ಅವನಿಗೆ ಮದ್ಯವನ್ನು ಹೆಚ್ಚಾಗಿ ಕುಡಿಸಿ ಅವನು ತನ್ನ ಏಳು ಬಣ್ಣದ ಕರವಸ್ತ್ರ‌‌ವನ್ನು ಹೊರಕ್ಕೆ ತೆಗೆದುದನ್ನು ನೋಡಿ ಅವನೇ ನನಗೆ ಬೇಕಾದ ಮನುಷ್ಯನೆಂದು ತಿಳಿದು ಅವನ ಮೂಲಕ ಅವನ ಸಂಘದ ವಿಷಯವನ್ನೂ ಅವರ ಮನೆಯನ್ನೂ ಅರಿತು, ಎರಡನೇದಿವಸ ರಾತ್ರಿ ಅವನನ್ನು ನನ್ನ ಸ್ನೇಹಿತನ ಮನೆಗೆ ಕೊಂಡೊಯ್ದು ಅಲ್ಲಿ ಅವನನ್ನು ಬಿಟ್ಟು ಅವನ ಉಡುಪುಗಳನ್ನು ನಾನು ಧರಿಸಿ ಆ ಸಂಘದ ಮನೆಗೆ ಹೋಗಿ ಅಲ್ಲಿ ಹರಿಚಂದ್ರನಹಾಗೇ ಮಾತನಾಡಿ ಬಂದೆನು. ಪುನಃ ಹರಿಚಂದ್ರನ ವೇಷದಲ್ಲಿ ಅವರ ಗುಪ್ತಗೃಹವನ್ನು ಹೊಕ್ಕು ಅಲ್ಲಿ ಎರಡು ದಿವಸಗಳು ವಾಸಮಾಡಿದೆನು. ಈಗಲೀಗ ಆ ಕಳ್ಳರ ಸಂಗತಿಯನ್ನು ಹೇಳಬೇಕಾಗಿದೆ. ಈ ನೀಚರುಗಳೆಲ್ಲರೂ ವಿದ್ಯಾವಂತರಾ ಗಿದ್ದರೂ ಕೆಟ್ಟತನಕ್ಕೆ ಬಿದ್ದು ಸಂಘವನ್ನೇರ್ಪಡಿಸಿಕೊಂಡು ಹೊರಕ್ಕೆ ಮಹಾ ಸಭ್ಯ ರಂತೆ ತೋರ್ಪಡಿಸಿಕೊಳ್ಳುತ್ತಾ ಒಳಗೊಳಗೇ ಕಳ್ಳತನಗಳನ್ನೂ ಕೊಲೆಗಳನ್ನೂ ನಡಿಸಿ ಆ ಹಣದಿಂದ ಜೀವನ ಮಾಡುತ್ತಿದ್ದರು. ಇವರುಗಳು ತಾವು ಮಹಾ ಶ್ರೇಷ್ಠರಾದ ಸಂಘಸಂಸ್ಕರಣಕರ್ತರಂತೆ ತೋರ್ಪಡಿಸಿಕೊಳ್ಳುತ್ತಾ ಜನಗಳನ್ನೂ ಇತರ ಸಂಘಸಂಸ್ಕ ರಣಿಗಳನ್ನೂ ಮರುಳುಮಾಡುತ್ತಿದ್ದರು. ಈ ನೀಚರುಗಳು ಒಂದು ತಿಂಗಳಿನ ಕೆಳಗೆ ಒಬ್ಬ ಚರ್ಮವ್ಯಾಪಾರಿಯನ್ನು ಲೂಟಿಮಾಡಿ ಅವನ ಹಣವನ್ನೆಲ್ಲಾ ತಿಂದುಹಾಕಿರುವರು. ಈ ನೀಚರುಗಳೇ ಒಂದು ಕಂಪನಿಯಿಂದ ರಿವಾಲ್ವರುಗಳನ್ನು ಕದ್ದವರು. ಆ ರಿವಾಲ್ವ ರುಗಳೆಲ್ಲಾ ಈಗ ಅವರ ಗುಪ್ತ ಗೃಹದಲ್ಲಿರುವುದು. ಇವರ ಮುಖ್ಯಸ್ಥನಾದ ವಿಶ್ವನಾ ಥನೆಂಬುವನು ತನ್ನ ಮಗಳನ್ನು ಯಾರಾದರೂ ಧನವಂತನಿಗೆ ಮದುವೆ ಮಾಡಬೇಕೆಂಬ ಭಿಲಾಷೆಯಿಂದಲೇ ಮಧುಸೂದನನನ್ನು ಕದ್ದು ತಂದು ಅವನಿಗೆ ಮದ್ಯಾದಿಗಳನ್ನು ಕುಡಿಸಿ ತನ್ನ ಮಾತಿಗೊಪ್ಪುವಂತೆ ಮಾಡಿಕೊಂಡನು. ಅನ್ಯಾಯವಾಗಿ ಆ ನೀಚನ ಕಾರ್ಯಕ್ಕಾಗಿ ಪ್ರಾಣ ಕೊಟ್ಟ ಅವನ ಪುತ್ರಿಯ ವಿಷಯದಲ್ಲಿ ನಾವು ಮರುಗಬೇಕಾಗಿದೆ.