ರೋಹಿಣಿ.
ಸೋಣ ! ಎಂಬದಾಗಿ ಹೇಳಿ ಹಾಲನ್ನು ಬಿಸಿ ಮಾಡಿ ಮಗುವಿಗೆ ಕುಡಿಸಿದನು. ಮಗುವು ಮೆಲ್ಲಗೆ ಕುಡಿಯಲಾರಂಭಿಸಿತು. ಅಷ್ಟರಲ್ಲಿ ಹಿಮದಲ್ಲಿ ತೊಯ್ದು ನಡುಗುತ್ತಲಿದ್ದ ಕರುಣಾಕರನು ಬೆಂಕಿಯನ್ನು ಕಾಸಿಕೊಳ್ಳುತ್ತಾ ದಯಾಕರನನ್ನು ಕುರಿತು ತನಗೆ ಮಗುವು ಸಿಕ್ಕಿದ ಸಂಗತಿಯನ್ನು ವಿಸ್ತಾರವಾಗಿ ಹೇಳಿದನು. ದಯಾಕರನು ಈ ಮಾತುಗಳನ್ನು ಕೇಳಿ ಬಹು ಕೋಪಗೊಂಡು-"ಇಂತಹ ಸುಂದರವಾದ ಮಗುವನ್ನು ಹಿಮದಲ್ಲಿ ಹಾಕಿ ಹೋದವರೆಂತಹ ಕ್ರೂರಾತ್ಮರೋ ! ಆಹಾ ! ಇಂಥವರೂ ಈ ಲೋಕದಲ್ಲಿ ಇರುವರೇ ? ಅಯ್ಯೋ, ನೀವು ಆ ಮಾರ್ಗವಾಗಿ ಪ್ರಯಾಣಮಾಡದೆ ಇದ್ದರೆ ಈ ಕೂಸಿನ ಗತಿ ಏನಾಗುತ್ತಿತ್ತೋ ?ಇಂಥ ಮಗುವನ್ನು ಅದರ ಮಾತಾಪಿತೃಗಳೇ ಈ ರೀತಿ ತ್ಯಜಿಸಿದ್ದ ಪಕ್ಷದಲ್ಲಿ ವಿಚಾರಣೆ ಇಲ್ಲದೆ ಅವರನ್ನು ಗಲ್ಲಿಗೆ ಹಾಕಬೇಕು”,ಎಂದು ಹೇಳಿ ಮಗುವಿಗೆ ಬೆಚ್ಚಗೆ ಹೊದ್ದಿಸಿದನು. ಇದನ್ನು ಕೇಳಿ ಶಾಂತನಾದ ಕರುಣಾಕರನು-" ದಯಾಕರನೇ ! ಸಜ್ಜನರಿಗೆ ಪರನಿಂದೆಯು ಯೋಗ್ಯವಾದದ್ದಲ್ಲಿ.ಆ ರೀತಿ ದೂಷಿಸುವುದು ಮಹಾ ಪಾತಕವು.ಆದರೆ ಯಾವ ಕಾರಣದಿಂದ ಮಗುವನ್ನು ಹಿಮದಲ್ಲಿ ಹಾಕಿ ಹೋದರೋ ಅದನ್ನು ವಿಮರ್ಶಿಸದೆ ಅವರನ್ನು ನೀಚರು, ಘಾತುಕರು, ಕ್ರೂರಾತ್ಮರು, ಎಂದು ನಾವು ನಿಂದಿಸುವುದು ಕೂಡ ನ್ಯಾಯವಲ್ಲ” ಎಂದು ಹೇಳಿದನು. ಅದಕ್ಕೆ ದಯಾಕರನು--ಈ ಶಿಶುವು ಯಾರದೋ ತಿಳಿಯಲಿಲ್ಲ. ಮೈಮೇಲಿನ ಬಟ್ಟೆಗಳಾದರೋ ಬಹು ಶುಭ್ರವಾಗಿವೆ. ಆದರೂ 'ಅವು ಅಷ್ಟು ಬೆಲೆಯುಳ್ಳವುಗಳಲ್ಲ. ಅದಿರಲಿ, ಇದಕ್ಕೆ ಏನು ಹೆಸರಿಡೋಣ ? ಎಂದು ಕೇಳಿದನು. ಅದಕ್ಕೆ ದಯಾರ್ದ್ರಹೃದಯನಾದ ಕರುಣಾಕರನು ಪಂಚಾಂಗವನ್ನು ತೆಗೆದುನೋಡಿ “ ಆ ಮಗುವು ದೊರೆತ ದಿವಸವು ರೋಹಿಣೀನಕ್ಷತ್ರ ಯುಕ್ತವಾದ್ದರಿಂದಲೂ, ಬಹು ಸುಂದರವಾದ್ದರಿಂದಲೂ, ರೋಹಿಣಿಯೆಂದೇ ನಾಮಕರಣವನ್ನು ಮಾಡೋಣ ಎಂದು ಹೇಳಿದನು. ಅದನ್ನು ದಯಾಕರನು ಒಪ್ಪಿ ಮಗುವಿಗೆ ರೋಹಿಣಿಯೆಂದೇ ನಾಮಕರಣವನ್ನು ಮಾಡಿ ಆ ರೋಹಿಣೀನಕ್ಷತ್ರಾಧಿದೇವತೆಯೇ ಇದನ್ನು ಕಾಪಾಡಲಿ ಎಂದು ಆಶೀರ್ವದಿಸಿ ಮಗುವಿಗೆ ಬೆಚ್ಚಗೆ ಹೊದಿಸಿ ಮಲಗಿಸಿದನು.