ನನ್ನ ಸಂಸಾರ
ನಾನು ರಂಗಪುರದಲ್ಲಿ ಹುಟ್ಟಿದೆನು. ನಮ್ಮ ಪೂರ್ವಿಕರು ಶ್ರೋತ್ರಿಯರೆಂದು ಕೇಳಿ ಬಲ್ಲೆನು. ಅದು ಬಹು ದಿನದ ಮಾತು. ಸುಮಾರು ನೂರಾರು ವರ್ಷ ಕಳೆದುಹೋಗಿರಬಹುದು. ಈಗಿನ ಸ್ಥಿತಿಯಲ್ಲಿ ಅದನ್ನು ಕಥೆಯೆಂದು ಹೇಳಿದರೆ ಸಾಕಾಗಿದೆ. ನಾನು ಈಗಿನ ಹುಡುಗಿ, ನನಗೆ ಅದೆಲ್ಲಾ ತಿಳಿಯದು. ನನಗೆ ತಿಳಿದಿರುವಷ್ಟನ್ನು ಮಾತ್ರ ನಮ್ಮ ಸೋದರಿಯರಿಗೆ ವಂಚನೆಯಿಲ್ಲದೆ ಹೇಳಿಬಿಡುವೆನು. ನನ್ನ ಹೆಸರು ಮಹಾಲಕ್ಷ್ಮಿ. ನಮ್ಮ ತಂದೆಗೆ ವಿಷ್ಣುಮಿತ್ರರೆಂದು ನಾಮಧೇಯವು. ನಮ್ಮ ಪಿತಾಮಹರು ಕೃಷ್ಣಮಿಶ್ರರೆಂದು ಪ್ರಸಿದ್ಧರಾದವರು. ನಮ್ಮ ಮುತ್ತಾತಂದರ ಕಾಲದಲ್ಲಿ ನಮ್ಮ ಮನೆಯಲ್ಲಿ ಸರ್ವದಾ ಐಶ್ವರ್ಯ ಲಕ್ಷ್ಮಿಯ ತಾಂಡವವಾಡುತ್ತಿದ್ದಳಂತೆ? ಆ ಕಾಲದಲ್ಲಿ ಮನೆಯಲ್ಲಿ ಬಹುಮಂದಿ ಶಿಷ್ಯರು ಪಾಠಪ್ರವಚನ ಮಾಡುತ್ತಾ ನಮ್ಮ ಮನೆಯಲ್ಲೇ ವಾಸಮಾಡಿಕೊಂಡಿದ್ದರಂತೆ? ಕರಾವುಗಳು ಬಹಳವಾಗಿದ್ದವಂತೆ? ಧಾನ್ಯದ ರಾಶಿಯು ಯಾವಾಗ ನೋಡಿದರೂ ಮೂಲೆ ಮೂಲೆಯಲ್ಲಿ ಸುರಿದಿರುತ್ತ ಇದ್ದುದಂತೆ? ಅತಿಥಿ ಅಭ್ಯಾಗತರ ಸೇವೆಯೂ ವೇದಾಧ್ಯಯನ ಘೋಷವೂ, ಅಗ್ನಿಹೋತ್ರಾರ್ಥಿಗಳ ಸಮಾರಂಭವೂ ನಮ್ಮ ಮನೆಯ ಕಾಂತಿಯನ್ನು ವಿಶೇಷತಃ ಅಭಿವೃದ್ಧಿಪಡಿಸುತ್ತಿದ್ದವಂತೆ! ಈಗಣ ಕಾಲದಲ್ಲಿ ನಾನೆಲ್ಲಿಯೂ ಇದನ್ನು ನೋಡಿದವಳೇ ಅಲ್ಲ. ಈಗಲೂ ಅಂತಹ ಪ್ರಣ್ಯವಂತರು ಅಲ್ಲಲ್ಲಿಯೇ ಇರುವರೆಂದು ಕೇಳುತ್ತೇನೆ-ಅಂತಹ ಮಹಾತ್ಮರಿಗೆ ಸಹಸ್ರಶಃ ನಮಸ್ಕಾರ ಮಾಡುತ್ತೇನೆ.
ಈಗ ನಮ್ಮ ಮನೆಯಲ್ಲಿ ಆ ಭಾಗ್ಯವು ಇಲ್ಲ. ಆ ಐಶ್ವರ್ಯಲಕ್ಷ್ಮಿಯು, ನಾನು ಜನ್ಮಿಸುವದಕ್ಕಿಂತ ಐವತ್ತು ವರ್ಷಗಳ ಹಿಂದೆಯೇ ನಮ್ಮ ಮನೆಯನ್ನು ಬಿಟ್ಟು ಪ್ರಯಾಣಮಾಡಿ ಬಿಟ್ಟಳಂತೆ! ನಮ್ಮ ತಾತ ಕೃಷ್ಣಮಿಶ್ರರು ಬಡವರಾದಾಗ್ಯೂ ಅವರ ಪೂರ್ವಿಕರ ಸದ್ಗುಣಗಳು ರಾರಾಜಿಸುತ್ತಿದ್ದುವು. ನಾನು ಚಿಕ್ಕಮಗುವಾಗಿದ್ದಾಗ ಅವರು ಸಾಯಂಕಾಲದಹೊತ್ತು ನನ್ನನ್ನು ತಮ್ಮ ಬಳಿಯಲ್ಲಿ ಕುಳ್ಳಿರಿಸಿಕೊಂಡು ಶ್ಲೋಕಗಳನ್ನು ಹೇಳಿಕೊಡುತ್ತಿದ್ದರು. ಆಗಾಗ್ಗೆ ಅವರು ತಮ್ಮ ಪೂರ್ವಿಕರ ಮಹಿಮೆಯನ್ನೂ