ವಿಷಯಕ್ಕೆ ಹೋಗು

ಪುಟ:ಪರಂತಪ ವಿಜಯ ೨.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೧೫
೧೧೭

ಬಾಗಿಲು, ಭಾರೀ ಕಬ್ಬಿಣದ ಸಲಾಕಿಗಳಿಂದ ಮಾಡಲ್ಪಟ್ಟಿತ್ತು. ಇದಕ್ಕೆ ದೊಡ್ಡ ಬೀಗವನ್ನೂ ಹಾಕಿದ್ದರು. ಈ ಬಂಡೆಯ ಹಿಂಭಾಗದಲ್ಲಿ ಒಂದು ಕಾಲುವೆಯು ಹರಿದುಹೋಗುತಿತ್ತು. ಅದರ ನೀರು ಈ ಗುಹೆಯ ಒಂದು ಕಂಡಿಯಿಂದ ಒಳಕ್ಕೆ ಪ್ರವೇಶಿಸಿ ಮತ್ತೊಂದು ಕಂಡಿಯಿಂದ ಹೊರಕ್ಕೆ ಹೋಗುತಿತ್ತು. ಈ ಗುಹೆಯಲ್ಲಿ, ಒಂದು ಮಂಚವೂ ಅದರ ಮೇಲೆ ಬಂದು ಹಾಸಿಗೆಯೂ ದಿಂಬೂ ಕಂಬಳಿಗಳೂ ಹಾಕಲ್ಪಟ್ಟಿದ್ದುವು. ಇದಲ್ಲದೆ, ಒಂದು ಕುರ್ಚಿ, ಒಂದು ಮೇಜು, ಒಂದು ನೀರಿನ ಪಾತ್ರೆ, ಸ್ವಲ್ಪ ಸೌದೆ, ಒಂದು ಚೌಕ, ಇವೂ ಹಾಕಲ್ಪಟ್ಟಿದ್ದವು. ಅವನು ಈ ಸೌದೆಯನ್ನು ಉರಿಸುತ್ತ ಕೆಲವು ದಿವಸಗಳವರೆಗೂ ಬೆಳಕನ್ನು ಅನುಭವಿಸಬಹುದೆಂದು ಯೋಚಿಸು ತಿದ್ದನು. ಎರಡು ದಿವಸಗಳವರೆಗೂ ತನಗೆ ಆಹಾರವು ಬರಲಿಲ್ಲವಾದುದರಿಂದ, ಬಹಳ ನಿಶ್ಯಕ್ತನಾಗಿ, ಆಹಾರವಿಲ್ಲದೆ ತನ್ನನ್ನು ಕೊಲ್ಲುವರೆಂದು ತಿಳಿದುಕೊಂಡು, ಈ ರೀತಿಯಲ್ಲಿ ಬದುಕುವುದಕ್ಕಿಂತ ಸಾಯುವುದೇ ಮೇಲೆಂದು ಯೋಚಿಸುತ್ತಿದ್ದನು. ಮೂರನೆಯ ದಿವಸ, ಅರ್ಥಪರನು ಅಲ್ಲಿಗೆ ಬಂದು, ಸಲಾಕಿಗಳ ಮಧ್ಯದಿಂದ ಬಂದು ರೊಟ್ಟಿಯನ್ನು ಬೀಸಾಕಿ, “ ಕಾಲವೆಯಲ್ಲಿ ನೀರಿದೆ, ಕುಡಿಯಬಹುದು ” ಎಂದು ಹೇಳಿ, ಅಲ್ಲಿ ನಿಲ್ಲದೆ ಹೊರಟು ಹೋದನು. ಹೀಗೆಯೇ ಕೆಲವು ದಿವಸಗಳು ನಡೆದುವು. ಒಂದು ದಿನ, ಕತ್ತಲೆಯಲ್ಲಿ ಮಂಚದ ಮೇಲೆ ತನ್ನ ಅವಸ್ಥೆಯನ್ನು ಕುರಿತು ಸಂತಪಿಸುತ್ತಿರುವಾಗ, ಒಂದು ಬೆಳಕು ಕಾಣ ಬಂದು, ಆ ದುರ್ಗದ ಕಾವಲಗಾರನು ಸಲಾಕಿಯ ಸಂದುಗಳಿಂದ ಪರಂತಪನನ್ನು ನೋಡಿದನು. ಪರಂತಪನು ಎದ್ದು ಹಾಸಿಗೆಯ ಮೇಲೆ ಕುಳಿತುಕೊಂಡು, ಇವನನ್ನು ಬಹಳ ಔತ್ಸುಕ್ಯದಿಂದ ನೋಡಿದನು. ಈ ಕಾವಲಗಾರನು, ಕುಳ್ಳನಾಗಿಯೂ, ಗೂನುಳ್ಳವನಾಗಿಯೂ, ಮಹಾ ಪ್ರಕಾಶಮಾನವಾದ ಕಣ್ಣುಗಳುಳ್ಳವನಾಗಿಯೂ, ಮಧ್ಯಸ್ಥವಾದ ವಯಸ್ಸುಳ್ಳವನಾಗಿಯೂ, ಬಹಳ ಭಯಂಕರನಾಗಿಯೂ ಕಾಣ ಬಂದನು. ಇವನು, ಪರಂತಪನನ್ನು ದುರುಗುಟ್ಟುಕೊಂಡು ನೋಡಲುಪಕ್ರಮ ಮಾಡಿದನು.
ಪರಂತಪ- ಅಯ್ಯಾ! ನೀನು ಯಾರು? ಇಲ್ಲಿ ಏನು ಕೆಲಸವಾಗಿ ಬಂದಿರುವೆ?