ಒಂದು ಏಕಾಂತವಾದ ಮಾರ್ಗದಿಂದ ನಿಮ್ಮನ್ನು ರತ್ನಾಕರದ ಒಳಕ್ಕೆ ಕರೆದುಕೊಂಡು ಹೋಗುವೆನು. ಅಲ್ಲಿಗೆ ಹೋದಮೇಲೆ ಸಮಯವನ್ನು ನೋಡಿ ನಾನು ಒಂದು ಗುರುತನ್ನು ಮಾಡುವೆನು ಆಗ ಇವರು ಶಂಬರನನ್ನು ದಸ್ತಗಿರಿ ಮಾಡಲಿ.
ಸಮರಸಿಂಹ- ಸರಿ, ಆಗಬಹುದು. ಸಮಯಕ್ಕೆ ಸರಿಯಾಗಿ ನಿನ್ನ ಭೃತ್ಯನು ಬರುತ್ತಾನೆ, ನೋಡು, ಇದು ನಿನಗೆ ಶುಭಸೂಚನೆಯಲ್ಲವೆ?
ಪರಂತಪ- ಒಹೋ! ಮಂಜೀರಕನು ಬರುವನು! ಸಹಸ್ರಜನ ಪೊಲೀಸಿನವರ ಸಹಾಯವು ಸಿಕ್ಕಿದಂತಾಯಿತು. ಶಂಬರನನ್ನು ಗಲಾಟೆಯಿಲ್ಲದೆ ದಸ್ತಗಿರಿ ಮಾಡುವುದು ಇನ್ನು ಬಹಳ ಸುಲಭ, ನಾನು ಇಲ್ಲಿರುವೆನೆಂದು ಅವನಿಗೆ ಹೇಳಬೇಡ. ನನ್ನ ವಿಷಯದಲ್ಲಿ ಏನು ವರ್ತಮಾನವನ್ನು ತಂದಿರುವನೋ ಅದನ್ನು ಕೇಳು.
ಸಮರಸಿಂಹ- ಹಾಗೆಯೇ ಮಾಡುವೆನು.
ಮಂಜೀರಕನು ಸಮರಸಿಂಹನ ಬಳಿಗೆ ಬಂದು ನಮಸ್ಕಾರವನ್ನು ಮಾಡಿದನು.
ಸಮರಸಿಂಹ- ಎಲೈ ಮಂಜೀರಕನೆ! ನೀನು ನನ್ನ ಅಪ್ಪಣೆಯನ್ನು ತೆಗೆದುಕೊಂಡು ಹೋಗಿ ಬಹಳ ದಿವಸವಾಯಿತು. ಪರಂತಪನ ವಿಚಾರವೇನು?
ಮಂಜೀರಕ- ಪರಂತಪನ ವಿಚಾರವನ್ನು ಸಮಗ್ರವಾಗಿ ತಿಳಿದುಕೊಳ್ಳುವಂತೆ ಬಹಳ ವ್ಯವಸಾಯ ಮಾಡಬೇಕಾಯಿತು. ಆತನು ರತ್ನಾಕರದಲ್ಲಿ ಕಾಡುಮೃಗದಂತೆ ಒಂದು ಬೋನಿನಲ್ಲಿ ಕೂಡಲ್ಪಟ್ಟಿರುವನು.
ಸಮರಸಿಂಹ- ಕಾಮಮೋಹಿನಿಯ ವೃತ್ತಾಂತವೇನು?
ಮಂಜೀರಕ - ಶಂಬರನು ಸತ್ಯವರ್ಮನ ಮನೆಯಿಂದ ಅವಳನ್ನು ಬಲಾತ್ಕಾರವಾಗಿ ತೆಗೆದುಕೊಂಡು ಹೋಗಿ ರತ್ನಾಕರದಲ್ಲಿ ಇಟ್ಟುಕೊಂಡಿರುವನು.
ಸಮರಸಿಂಹ- ಇದಕ್ಕೆ ರುಜುವಾತು ಏನಾದರೂ ಉಂಟೋ?
ಮಂಜೀರಕ-ಸಂಪೂರ್ಣವಾದ ರುಜುವಾತು ಸಂಪಾದಿಸಲ್ಪಟ್ಟಿರುವುದು.
ಸಮರಸಿಂಹ- ಶಂಬರನು ಈಗ ಎಲ್ಲಿರುವನು?
ಮಂಜೀರಕ- ಈ ಕಲ್ಯಾಣಪುರದಲ್ಲಿ ಅವನು ಇಲ್ಲ. ಬಹುಶಃ ರತ್ನಾಕರದಲ್ಲಿರಬಹುದು.
ಪುಟ:ಪರಂತಪ ವಿಜಯ ೨.djvu/೧೩೩
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಾಯ ೧೬
೧೨೩