ಪುಟ:ಪರಂತಪ ವಿಜಯ ೨.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬

ಪರಂತಪ ವಿಜಯ


ನ್ಯಾಯಾಧಿಪತಿಯೇ ! ನೀನು ಸರಿಯಾದ ಕಾಲಕ್ಕೆ ಸಿಕ್ಕಿದುದು, ನನ್ನ ಸುಕೃತಾತಿಶಯವನ್ನು ತೋರಿಸುತ್ತದೆ. ನಾನು ಈಗ ಕೃತಕೃತ್ಯನಾದೆನು. ಇದೇ ಈ ರತ್ನಗಳನ್ನು ತೆಗೆದುಕೊ, ಈ ಪರಂತಪನನೂ ವೈದ್ಯನೂ ನನಗೆ ಪರ ಮಾಪ್ತರು. ನೀನು ಇವರೊಡನೆ ಸೇರಿಕೊಂಡು ಈ ಧರ್ಮವನ್ನು ನೆರವೇರಿಸಿದರೆ, ಇದರಿಂದ ಉಂಟಾಗತಕ್ಕ ಸುಕೃತಕ್ಕೆ ನೀವೂ ಭಾಗಿಗಳಾಗುವಿರಿ. ಇನ್ನು ನನಗೆ ಕಾಲ ಸಮೀಪಿಸಿತು. ಈ ಅಂಶಕ್ಕೆ ನೀನು ಒಪ್ಪಿದ ಪಕ್ಷದಲ್ಲಿ, ನಾನು ಸಂತುಷ್ಟನಾಗಿ ಪ್ರಾಣಬಿಡುವೆನು.
ನ್ಯಾಯಾಧಿಪತಿ--ನಾನು ಬಹು ಕಾಲದಿಂದ ನೀನು ಪರೋಪಕಾರಪರನೆಂಬುದನ್ನು ಕಿವಿಯಿಂದ ಕೇಳುತ್ತಿದ್ದೆನು. ಆದರೆ, ಈಗ ಅದೆಲ್ಲವೂ ನನಗೆ ಪ್ರತ್ಯಕ್ಷಾನುಭವಕ್ಕೆ ಬಂದಿತು. ಇಂಥ ಧರ್ಮಪರಾಯಣರನ್ನು ನಾನೆಲ್ಲಿಯೂ ನೋಡಿರಲಿಲ್ಲ. ನೀನೇ ಧನ್ಯನು. ಅಪರಿಮಿತವಾದ ಧನವನ್ನು ಸಂಪಾದಿಸಿ, ತಾವೂ ಅನುಭವಿಸದೆ, ಸತ್ಪಾತ್ರರಲ್ಲಿಯೂ ವಿನಿಯೋಗಿಸದೆ, ಧನಪಿಶಾಚಿಗಳಂತೆ ಬದುಕಿ, ಕೊನೆಗೆ ಚೋರರೇ ಮೊದಲಾದ ಅಪಾತ್ರಗಳಲ್ಲಿ ತಮ್ಮ ದ್ರವ್ಯವೆಲ್ಲ ಸೇರಿಹೋಗುವಂತೆ ಮಾಡಿದ, ಅನೇಕ ಜನ ಮೂಢರನ್ನು ನಾವು ನೋಡಿರುವೆವು. ಸಂಪಾದಿಸಿದ ದ್ರವ್ಯಕ್ಕೆ ದಾನ ಭೋಗಗಳೆರಡರಿಂದಲೇ ಸಾರ್ಥಕ್ಯವುಂಟಾಗುವುದು. ಇವೆರಡೂ, ಪುಣ್ಯವಂತರಿಗಲ್ಲದೆ ಇತರರಿಗೆ ಲಭಿಸಲಾರದು. ಈ ದಿವಸ ನೀನು ನಿನ್ನ ದ್ರವ್ಯ ವನ್ನು ವಿನಿಯೋಗಿಸಿರತಕ್ಕ ರೀತಿಯೇ ನಿನ್ನ ಪುಣ್ಯಾತಿಶಯವನ್ನು ತೋರಿಸುತ್ತಲಿದೆ. ಈ ವಿಷಯದಲ್ಲಿ ನಿನಗೆ ಯಾರು ತಾನೆ ಸಹಾಯಕರಾಗುವುದಿಲ್ಲ? (ಪರಂತಪನನ್ನು ನೋಡಿ) ಅಯ್ಯಾ! ಪರಂತಪ ! ಅದೋ ಅಲ್ಲಿ ನೋಡು, ಆ ಮಾರ್ಗದಲ್ಲಿ ಈ ದೇಶದ ಕೋಶಾಧ್ಯಕ್ಷನು ಹೋಗುತ್ತಿರು ವಂತೆ ಕಾಣುವುದು. ಪಾರಮಾರ್ಥಿಕರಾದವರಿಗೆ ಮನೋರಥ ಪರಿಪೂರ್ತಿಗೆ ಬೇಕಾದ ಸಾಧನೆಗಳೆಲ್ಲ ಅಪ್ರಾರ್ಥಿತವಾಗಿ ಒದಗುವುದು ಸಹಜವಾದುದೇ ಸರಿ : ಜಾಗ್ರತೆಯಾಗಿ ಹೋಗಿ ಅವನನ್ನು ಕರೆದು ಕೊಂಡು ಬಾ
  ಪರಂತಪನು ಅವನನ್ನು ಕರೆದುಕೊಂಡು ಬಂದನು. ಆಗ ಆ ಕೋಶಾಧ್ಯಕ್ಷನು ನ್ಯಾಯಾಧಿಪತಿಯನ್ನು ನೋಡಿ 'ಅಯ್ಯಾ ! ನ್ಯಾಯಾಧಿಪತಿಯೇ ! ನಾನು ನಿನ್ನನ್ನೇ ಹುಡುಕುತಿದ್ದೆನು. ಈ ದ್ಯೂತಶಾಲೆಯಲ್ಲಿ,