ವಿಷಯಕ್ಕೆ ಹೋಗು

ಪುಟ:ಪರಂತಪ ವಿಜಯ ೨.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಾಯ ೪
೩೧

ಸಿತವಾಗುತ್ತ ಬಂದಿತು. ಆದರೆ, ಆ ಸಂತೋಷವನ್ನು ತೋರ್ಪಡಿಸದೆ ಬಹಳ ದುಃಖವನ್ನಭಿನಯಿಸುತ "ಅಯ್ಯೋ ! ಇನ್ನೇನು ಗತಿ ! ನನ್ನ ಚಿಕ್ಕಪ್ಪನಿಗೆ ಇಂಥ ಅಪಮೃತ್ಯು ಸಂಭವಿಸಿತಲ್ಲಾ! ಹಾ!ಹಾ!"ಎಂದು ನೆಲದಮೇಲೆ ಬಿದ್ದು ಹೊರಳಿ ಹೊರಳಿ ಗಟ್ಟಿಯಾಗಿ ಅಳುವುದನ್ನುಪಕ್ರಮಿಸಿದನು. ಇದನ್ನು ಕೇಳಿದ ಕೂಡಲೆ, ಚಂದ್ರಮುಖಿಯು ಕೂಡ ಅತ್ಯಂತ ಶೋಕಾವೇಗದಿಂದ ಸ್ತಬ್ದಳಾಗಿ ಸ್ವಲ್ಪ ಹೊತ್ತಿನ ಮೇಲೆ ಚೇತರಿಸಿಕೊಂಡು ದುಃಖಿಸುತಿರಲು, ಸುಮಿತ್ರನು ಅವಳನ್ನು ಸಮಾಧಾನಪಡಿಸುತಿದ್ದನು. ಇದನ್ನೆಲ್ಲ ನೋಡಿ, ಅಲ್ಲಿ ಬಂದಿದ್ದ ಜನರೆಲ್ಲರೂ ಸಂತಾಪ ಪಡುತ್ತ, ಸುಮಿತ್ರನಿಗೆ ದುಃಖೋಪಶಮನಾರ್ಥವಾಗಿ ಹೇಳಬೇಕಾದ ಮಾತುಗಳನ್ನೆಲ್ಲ ಹೇಳಿ, ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರು. ಸುಮಿತ್ರನು ಸಹೋದರನ ಗುಣಾತಿಶಯಗಳನ್ನು ಆಗಾಗ್ಗೆ ಸ್ಮರಿಸಿಕೊಂಡು, ಆತನಿಗೆ ಉಂಟಾದ ಅಕಾಲ ಮರಣಕ್ಕಾಗಿ ದುಃಖಿಸುತ್ತ, ಇವನ ಮರಣವಿಷಯಕಗಳಾದ ಪೂರ್ವೋತ್ತರಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕೆಂದು, ಪರಂತಪನನ್ನೇ ಇದಿರು ನೋಡುತಿದ್ದನು. ಪರಂತಪನು ಮಾರನೆಯ ದಿನ ಸುಮಿತ್ರನ ಬಳಿಗೆ ಹೋಗಿ, ಕಾಮಮೋಹಿನಿಯ ವೃತ್ತಾಂತ ವಿನಾ-ಗಂಧರ್ವಪುರಿಯಲ್ಲಿ ನಡೆವ ಇತರ ವೃತ್ತಾಂತವೆಲ್ಲವನ್ನೂ ಹೇಳಿ, ಮಾಧವನು ಕೊಟ್ಟಿದ್ದ ವಜ್ರದ ಉಂಗುರವನ್ನೂ ತೋರಿಸಿದನು. ಸುಮಿತ್ರನು ಅದನ್ನು ನೋಡಿ, ಅಂತಸ್ವಾಸದಿಂದ ಕಣ್ಣೀರನ್ನು ಸುರಿಯಿಸಿ, "ಅಯ್ಯಾ ! ಪರಂತಪ ! ನಾನು ಮಾಧವನ ಇಷ್ಟದಂತೆ ನಡೆಸುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಆದರೆ, ಈಗ ನಿನ್ನಿಂದ ನನಗೆ ಒಂದು ಉಪಕಾರವಾಗಬೇಕಾಗಿದೆ. ನನಗೆ ಕಾಮಮೋಹಿನಿಯೆಂಬ ಸಾಕು ಮಗಳೊಬ್ಬಳಿರುವಳು. ಅವಳನ್ನು ನನ್ನ ತಮ್ಮನ ಮಗನಾದ ಶಂಬರನಿಗೆ ಕೊಟ್ಟು ವಿವಾಹ ಮಾಡಬೇಕೆಂದಿರುವೆನು. ಈ ಕಾರ್ಯವು ನೆರವೇರುವವರೆಗೂ, ಮಾಧವನು ತನ್ನ ಆಸ್ತಿಯೆಲ್ಲವನ್ನೂ ನಿನಗೆ ಬರೆದಿರುವ ಅಂಶವನ್ನು ಮಾತ್ರ ನೀನು ಹೊರಪಡಿಸಕೂಡದು. ಇಲ್ಲದಿದ್ದರೆ, ಈ ವಿವಾಹಕಾರ್ಯಕ್ಕೆ ವಿಘ್ನವಾಗುವುದು" ಎಂದು ಹೇಳಲು, ಅದಕ್ಕೆ ಪರಂತಪನು "ನಾನಾಗಿ ಈ ಪ್ರಸ್ತಾವವನ್ನು ಎಂದಿಗೂ ಮಾಡತಕ್ಕನಲ್ಲ; ಆದರೆ, ಈ ಮಾಧವನು ತನ್ನ ಆಸ್ತಿಯ ವಿಷಯದಲ್ಲಿ ಹೇಗೆ ವಿನಿಯೋಗ ಮಾಡಿರು