ಪುಟ:ಪರಂತಪ ವಿಜಯ ೨.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೩೨

ಪರಂತಪ ವಿಜಯ


ವನೆಂದು ಯಾರಾದರೂ ಕೇಳಿದರೆ, ನಾನು ಸುಳ್ಳು ಹೇಳುವುದಕ್ಕಾಗುವುದಿಲ್ಲ” ಎಂದು ಹೇಳಿದನು. ಕೂಡಲೆ, ಸುಮಿತ್ರನು ತನ್ನ ಬಂಧು ಮಿತ್ರರೊಡನೆ ಸೇರಿ, ಯಥಾವಿಧಿಯಾಗಿ ಮಾಧವನಿಗೆ ಉತ್ತರಕ್ರಿಯೆಗಳನ್ನು ನಡೆಸಿ, ಪರಂತಪನನ್ನು ತನ್ನ ಸಹೋದರನೊಡನೆ ನಿರ್ವಿಶೇಷವಾಗಿ ನೋಡುತ್ತ ತನ್ನ ಮನೆಯಲ್ಲಿಟ್ಟುಗೊಂಡು ಉಪಚರಿಸುತ್ತಿದ್ದನು. ಶಂಬರನೂ ಕಾಮಮೋಹಿನಿಯೂ ಸಹ ಅಲ್ಲಿಯೇ ಇದ್ದರು. ಕ್ರಮ ಕ್ರಮವಾಗಿ ಪರಂತಪನಿಗೂ ಕಾಮಮೋಹಿನಿಗೂ ಪರಸ್ಪರ ಗೌರವವು ಹೆಚ್ಚುತಿದ್ದಿತು. ಅಲ್ಪ ಕಾಲದೊಳಗಾಗಿಯೇ ಈ ಗೌರವವು ಸ್ನೇಹ ರೂಪವಾಗಿ ಪರಿಣಮಿಸಿತು. ಕೊನೆಗೆ ಈ ಸ್ನೇಹವೇ ಇವರಿಬ್ಬರಲ್ಲಿಯ ಪರಸ್ಪರಾನುರಾಗ ರೂಪವನ್ನು ಹೊಂದಿತು. ಇವರಿಬ್ಬರಲ್ಲಿಯ ಶೃಂಗಾರ ಚೇಷ್ಟೆಗಳು ತರಂಗ ತರಂಗವಾಗಿ ಉದ್ಭವಿಸುತ್ತಿದ್ದುವು. ಹೀಗಿರುವಲ್ಲಿ, ಒಂದು ದಿನ ಪರಂತಪನು ಸಂಧ್ಯಾಕಾಲದಲ್ಲಿ ಸಂಚಾರಾರ್ಥವಾಗಿ ಹೋಗಿ ಬರುತ್ತಿರುವಾಗ, ಸುಮಿತ್ರನ ಉಪವನಕ್ಕೆ ಬಂದು ಅಲ್ಲಿ ಪುಷ್ಪಭರಿತಗಳಾದ ಲತೆಗಳ ರಾಮಣೀಯಕವನ್ನು ನೋಡಿ ಆನಂದಿಸುತ್ತಿರಲು, ಕಾಮಮೋಹಿನಿಯೂ ಪುಪ್ಪಾಪಚಯ ವ್ಯಾಜದಿಂದ ಅಲ್ಲಿಗೆ ಬಂದಳು.
ಕಾಮಮೋಹಿನಿ-ಮಹನೀಯನಾದ ಪರಂತಪನೆ! ನಾನು ನಿನ್ನಲ್ಲಿ ಕೆಲವು ವಿಜ್ಞಾಪನೆಗಳನ್ನು ತಿಳಿಯಿಸಬೇಕೆಂದು ಬಹು ದಿವಸಗಳಿಂದ ನಿರೀಕ್ಷಿಸುತಿದ್ದೆನು. ಆದರೆ ದೈವಕೃಪೆಯಿಂದ ಈಗ ಅವಕಾಶ ಸಿಕ್ಕಿರುವುದು. ನೀನು ಹೇಳಿದ ಮಾಧವನ ವೃತ್ತಾಂತವು ನನಗೆ ಬಹು ಸಂಕಟಕರವಾಗಿರುವುದು. ಆತನ ಅಕಾಲ ಮರಣಕ್ಕೆ, ಮಂದ ಭಾಗ್ಯಳಾದ ನಾನೇ ಮುಖ್ಯ ಕಾರಣ ಭೂತಳೆಂದು ಹೇಳಬೇಕಾಗಿದೆ. ಹೇಗೆಂದರೆ, ಅವನು ನನ್ನಲ್ಲಿ ಬಹು ಅನುರಾಗ ವುಳ್ಳವನಾಗಿದ್ದನು. ನನಗೂ ಅವನಲ್ಲಿ ಅನುರಾಗವು ಹೆಚ್ಚುತ್ತಿದ್ದಾಗ್ಗೂ ಶಂಬರನ ದುರ್ಬೋಧನೆಯಿಂದ ನಾನು ಅವನ ವಿಷಯದಲ್ಲಿ ಉದಾಸೀನೆಯಾದೆನು. ನನ್ನ ಭಾವವನ್ನು ತಿಳಿದಕೂಡಲೆ, ಅವನು ಈ ಪಟ್ಟಣವನ್ನು ಬಿಟ್ಟು ಹೊರಟುಹೋದನು. ಶಂಬರನು ಮಾಧವನ ವಿಷಯದಲ್ಲಿ ಜುಗುಪ್ಸೆ ಹುಟ್ಟಿಸಿದ್ದು ನನ್ನ ಮೃತ್ಯುವಿಗೇ ಎಂದು ಈಗ ನಿಜವಾಗಿ ನಂಬಬೇಕಾಗಿದೆ. ಈ ನೀಚನೇ ನನ್ನನ್ನು ವಿವಾಹ ಮಾಡಿಕೊಳ್ಳಬೇಕೆಂದು ಸಂಪೂರ್ಣ ಪ್ರಯತ್ನದಲ್ಲಿದ್ದಾನೆ. ಇದಕ್ಕನುಕೂಲವಾಗಿ, ಸುಮಿತ್ರನೂ ಇವನನ್ನೇ