ವಿಷಯಕ್ಕೆ ಹೋಗು

ಪುಟ:ಪರಂತಪ ವಿಜಯ ೨.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೪
೩೩

ವಿವಾಹಮಾಡಿಕೊಳ್ಳಬೇಕೆಂದು ನನ್ನನ್ನು ಬಲಾತ್ಕರಿಸುತ್ತಿದ್ದಾನೆ. ಈ ಶಂಬರನು ಬಹು ದುರಾತ್ಮನು. ಇವನನ್ನು ವರಿಸುವುದಕ್ಕಿಂತ ಮರಣವೇ ಉತ್ತಮವೆಂದು ನಾನು ಭಾವಿಸಿದ್ದೇನೆ. ಈಗಲೂ, ವಿವಾಹಕಾಲಕ್ಕೆ ಸರಿಯಾಗಿ ವಿಷಪಾನವನ್ನು ಮಾಡಿ ಈ ಜೀವವನ್ನು ಕಳೆದುಕೊಳ್ಳಬೇಕೆಂದು, ನಾನು ದೃಢಸಂಕಲ್ಪಳಾಗಿದ್ದೇನೆ. ಶಂಬರನು ಸರ್ವಥಾ ನನಗೆ ಅನುರೂಪನಲ್ಲ. ಆದುದರಿಂದ, ಅದರಲ್ಲಿ ನನಗೆ ಇಷ್ಟವಿಲ್ಲ. ಮಾಧವನು ಸತ್ಯಸಂಧನು ; ಸಕಲ ವಿದ್ಯಾವಿಶಾರದನು; ಧರ್ಮಿಷ್ಟನು; ಗುಣನಿಧಿ, ಇಂಥವನನ್ನು ಬಿಟ್ಟು, ಗುಣ ಹೀನನಾಗಿಯೂ ನಿರಕ್ಷರಕುಕ್ಷಿಯಾಗಿಯೂ ನೀಚನಾಗಿಯೂ ಇರುವ ಈ ಶಂಬರನನ್ನು ವಿವಾಹಮಾಡಿಕೊಳ್ಳ ತಕ್ಕ ದುರವಸ್ಥೆ ನನಗೆ ಪ್ರಾಪ್ತವಾಗಿದೆ. ಇದನ್ನು ತಪ್ಪಿಸಿಕೊಳ್ಳುವುದಕ್ಕೆ ಉಪಾಯವೇ ತೋರಲಿಲ್ಲ. ಆದುದರಿಂದ, ಈ ವಿಷಯದಲ್ಲಿ ನೀನೆನಗೆ ಸಹಾಯಮಾಡಿ ಪ್ರಾಣದಾನವನ್ನು ಮಾಡಿದ ಉಪಕಾರಕ್ಕೆ ಭಾಗಿಯಾಗಬೇಕೆಂದು ನಿನ್ನನ್ನು ಪ್ರಾರ್ಥಿಸಿಕೊಳ್ಳುತ್ತೇನೆ.
ಪರಂತಪ-ಅರ್ಯಳೇ! ಚಿಂತಿಸಬೇಡ. ನಿನ್ನನ್ನು ಈ ಕಷ್ಟದಿಂದ ಬಿಡಿಸುವ ಭಾರವು ನನ್ನದಾಗಿರಲಿ. ನೀನು ಮಾಧವನ ಗುಣಗಳ ವಿಷಯದಲ್ಲಿ ಹೇಳಿದ್ದೆಲ್ಲ ನಿಜ. ಅಂಥವನು ಲಭಿಸದೆ ಹೋದುದು ನಿನ್ನ ದೌರ್ಭಾಗ್ಯವೇ ಸರಿ. ಸ್ತ್ರೀಯರಿಗೆ ಅಂಥ ಪತಿಗಳು ದೊರೆಯಬೇಕಾದರೆ ಜನ್ಮಾಂತರಗಳಲ್ಲಿ ಬಹು ಸುಕೃತಗಳನ್ನು ಮಾಡಿರಬೇಕು. ಆದರೆ, ಮೀರಿದ ಕೆಲಸಕ್ಕೆ ಎಷ್ಟು ಚಿಂತಿಸಿದರೆ ತಾನೆ ಏನು ಪ್ರಯೋಜನ? ಮಾಧವನು ಲೋಕಾಂತರವನ್ನೈದಿದನು. ಆತನು ಮಾಡಿದ ಧರ್ಮಕಾರ್ಯಗಳು ಮಾತ್ರ ದಿಗಂತ ವಿಶ್ರಾಂತಗಳಾಗಿ ನಿಲ್ಲುವುವು. ಆತನು ಪ್ರಾಣೋತ್ಕ್ರಮಣ ಕಾಲದಲ್ಲಿಯೂ ನಿನ್ನ ಗುಣಾತಿಶಯಗಳನ್ನೇ ಸ್ಮರಿಸಿಕೊಂಡು, ನಿನ್ನ ಔದಾಸೀನ್ಯಕ್ಕೆ ಆ ನೀಚನಾದ ಶಂಬರನ ದುರ್ಬೋಧನೆಯೇ ಕಾರಣವೆಂದು ತಿಳಿದು, ನಿನಗೆ ಕೊಡುವುದಕ್ಕಾಗಿ ೫೦ ಲಕ್ಷ ದ್ರವ್ಯಗಳನ್ನು ನನ್ನ ವಶಕ್ಕೆ ಕೊಟ್ಟಿರುವನು. ಆ ದ್ರವ್ಯವನ್ನು ಕೊಡುವೆನು. ಅದರಿಂದ ನೀನು ಪರಾಧೀನಳಾಗದೆ ಸ್ವತಂತ್ರವಾಗಿ ಜೀವಿಸುತ್ತ ಸುಖವಾಗಿರಬಹುದು.
ಕಾಮಮೋಹಿನಿ-ನಾನು ನಿರ್ಭಾಗ್ಯಳು. ನನ್ನ ದೌರ್ಮಾತ್ಯಕ್ಕೂ ಔದಾಸೀನ್ಯಕ್ಕೂ ತಕ್ಕ ಫಲವನ್ನು ಈಗ ನಾನು ಅನುಭವಿಸಬೇಕಾಯಿತು. ಇವು