ವಿಷಯಕ್ಕೆ ಹೋಗು

ಪುಟ:ಪರಂತಪ ವಿಜಯ ೨.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೬
೫೫

ವಜ್ರ ಮೊದಲಾದ ಅಮೂಲ್ಯವಾದ ರತ್ನದ ಹಲ್ಲೆಗಳನ್ನು ಇಲ್ಲಿಂದ ತೆಗೆಯುತ್ತಾರೆಂಬ ಕಿಂವದಂತಿಯೂ ಇದೆ. ಮಾಧವನು, ಆಗಾಗ್ಗೆ ಅಮೂಲ್ಯವಾದ ವಜ್ರಗಳನ್ನು ವಿಕ್ರಯಿಸುತ್ತಿದ್ದನು. ಇವುಗಳೆಲ್ಲ ಈ ಗಣಿಗಳಿಂದ ತೆಗೆಯಲ್ಪಟ್ಟುವೆಂದು ನಂಬ ಬಹುದಾಗಿದೆ. ಈ ಆಸ್ತಿಯು ನಿನಗೆ ಬಂದುದು, ಒಂದು ವಿಧದಲ್ಲಿ ಸಂತೋಷ ಜನಕವಾಗಿರುವುದು; ಇನ್ನೊಂದು ವಿಧದಲ್ಲಿ ನಮಗೆಲ್ಲ ಭಯಾವಹವಾಗಿದೆ.

ಪರಂತಪ- ಮನುಷ್ಯರ ಮುಖವುಳ್ಳ ಹುಲಿ ಕರಡಿಗಳನ್ನು ನೀನು ನೋಡಿದ್ದೀಯಾ ?

ಸತ್ಯಶರ್ಮ- ನಾನು ಒಂದಾವೃತ್ತಿ ಹೋಗಿದ್ದೆನು. ಇವುಗಳ ದರ್ಶನವಾದ ಕೂಡಲೇ ನನಗೆ ಪ್ರಜ್ಞೆ ತಪ್ಪಿತು. ದೈವಾಧೀನದಿಂದ, ನನಗೆ ಮಿತ್ರರಾದ ಕೆಲವರು ನನ್ನನ್ನು ಈ ದುರ್ಗದಿಂದ ಹೊರಗೆ ಕರೆತಂದು ಬಿಟ್ಟರು.

ಪರಂತಪ-ಈಚೆಗೆ ಯಾರಾದರೂ ಹೋಗಿ ಈ ಕಟ್ಟಡವನ್ನು ನೋಡಿ ಕೊಂಡು ಬಂದಿದ್ದಾರೆಯೋ ?

ಸತ್ಯಶರ್ಮ-ನನಗೆ ತಿಳಿಯದು.

ಪರಂತಪ-ಈ ಕಟ್ಟಡಕ್ಕೆ ಸುತ್ತಲೂ ಫಲವತ್ತಾದ ಭೂಮಿಯು ಬಹಳವಿದೆಯೆಂದು ಹೇಳಿದೆಯಲ್ಲ! ಇದು ಸಾಗುವಳಿಯಾಗಿದೆಯೊ ?

ಸತ್ಯಶರ್ಮ- ಈ ಕಟ್ಟಡಕ್ಕೆ ದೂರದಲ್ಲಿರುವ ಭೂಮಿಗಳನ್ನೆಲ್ಲ ಜನರು ಸಾಗುವಳಿ ಮಾಡುತ್ತಾರೆ. ಇದರ ಸಮೀಪದಲ್ಲಿ ಭೂಮಿಯು ಪಾಳುಬಿದ್ದಿದೆ.
  ಹೀಗೆ ಮಾತನಾಡುತ್ತಿರುವದರೊಳಗಾಗಿ, ಸತ್ಯವತಿಯೂ ಆರ್ಯಕೀರ್ತಿಯೂ ಕಾಮಮೋಹಿನಿಯೂ ಬೇರೆ ಕೊಠಡಿಗೆ ಹೋಗಿ, ವಿವಾಹಕ್ಕನುರೂಪವಾದ ಉಡುಗೆ ತೊಡುಗೆಗಳನ್ನು ಧರಿಸಿಕೊಂಡು, ಪುರೋಹಿತರನ್ನು ಕರೆಯಿಸಿ ಮುಹೂರ್ತವನ್ನು ನಿಶ್ಚಯಿಸಿಕೊಂಡು, ಮಂಗಳದ್ರವ್ಯವನ್ನು ಸಿದ್ಧಪಡಿಸಿಕೊಂಡು, ತಮ್ಮ ಕಾರ್ಯಗಳನ್ನು ಸತ್ಯಶರ್ಮನಿಗೆ ತಿಳಿಸಿದರು.

ಸತ್ಯಶರ್ಮ-ಅಯ್ಯಾ ! ಪರಂತಪ ! ಸತ್ಯವತಿ ಮೊದಲಾದವರು, ಈ ದಿನ ನಿನಗೆ ಕಾಮಮೋಹಿನಿಯನ್ನು ಕೊಟ್ಟು ವಿವಾಹ ಮಹೋತ್ಸವವನ್ನು ನೆರವೇರಿಸಬೇಕೆಂದು ಸಿದ್ಧರಾಗಿರುತ್ತಾರೆ. ಇದಕ್ಕೆ ಏನು ಹೇಳುತ್ತೀಯೆ ?