ವಿಷಯಕ್ಕೆ ಹೋಗು

ಪುಟ:ಪರಂತಪ ವಿಜಯ ೨.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೮
ಪರಂತಪ ವಿಜಯ

ಗಳನ್ನೆಲ್ಲ ಅನುಭವಿಸಲೇಬೇಕು. ನಾನು ಸತ್ಯವಂತನಾಗಿದ್ದರೆ, ಈಶ್ವರನೇ ನನ್ನನ್ನು ರಕ್ಷಿಸಲಿ. ಆತನ ಮೇಲೆ ಭಾರವನ್ನು ಹಾಕಿ, ಇವರ ಇಷ್ಟಕ್ಕನುಸಾರವಾಗಿ ನಡೆದುಕೊಳ್ಳುತ್ತೇನೆ. ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು, ಸತ್ಯಶರ್ಮಾದಿಗಳನ್ನು ಕುರಿತು “ಎಲೈ ಸತ್ಯವತೀ ಸತ್ಯಶರ್ಮರೆ ! ಎಲೈ ಆರ್ಯಕೀರ್ತಿಯೇ ! ನಿಮ್ಮ ಪ್ರಾರ್ಥನೆಗೆ ಪ್ರತಿ ಹೇಳುವುದಕ್ಕೆ ನನಗೆ ಮನಸ್ಸು ಬರುವುದಿಲ್ಲ. ಈ ವಿವಾಹದಿಂದ ಉಂಟಾಗುವ ಅನರ್ಥಗಳನ್ನು ಈಶ್ವರನು ತಪ್ಪಿಸಬೇಕು. ನಿಮ್ಮ ಇಷ್ಟ ಪ್ರಕಾರ ನಡೆಯುವುದಕ್ಕೆ ಸಿದ್ಧನಾಗಿದ್ದೇನೆ' ಎಂದು ಹೇಳಿದನು.
ಸತ್ಯವತೀ, ಸತ್ಯಶರ್ಮ, ಅರ್ಯಕೀರ್ತಿಗಳು – ಧರ್ಮಪ್ರವರ್ತಕರಾದವರಿಗೆ ಬರತಕ್ಕ ಅನರ್ಥಗಳನ್ನು ತಪ್ಪಿಸುವುದಕ್ಕೆ ಈಶ್ವರನು ಬದ್ಧ ಸಂಕಲ್ಪನಾಗಿರುವನು. ಈ ವಿಷಯದಲ್ಲಿ ವಿಚಾರಪಡಬೇಡ, ” ಎಂದು ಹೇಳಿ, ಕಾಮಮೋಹಿನೀ ಪರಂತಪರಿಗೆ ಮಂಗಳ ಸ್ನಾನವನ್ನು ಮಾಡಿಸಿ, ಅನೇಕ ಬ್ರಾಹ್ಮಣ ಸುಮಂಗಲಿಯರನ್ನು ಕರೆದುಕೊಂಡು, ಮಂಗಳ ವಾದ್ಯ ಪುರಸ್ಸರವಾಗಿ ಸಮೀಪದಲ್ಲಿರುವ ಈಶ್ವರ ದೇವಸ್ಥಾನಕ್ಕೆ ಹೋಗಿ, ವಿವಾಹ ಮಹೋತ್ಸವವನ್ನು ನೆರವೇರಿಸಿದರು. ವಧೂವರರಿಬ್ಬರೂ, ಬ್ರಾಹ್ಮಣ ಸುಮಂಗಲಿಯರ ಇದುರಿಗೆ, ಅಗ್ನಿಸಾಕ್ಷಿಯಾಗಿ, ದೇವರ ಸಾನ್ನಿಧ್ಯದಲ್ಲಿ, ಧರ್ಮಾರ್ಥಕಾಮ ವಿಚಾರಗಳಲ್ಲಿ ವ್ಯಭಿಚರಿಸಿ ನಡೆಯುವುದಿಲ್ಲವೆಂದು ಪ್ರತಿಜ್ಞೆ ಮಾಡಿದರು. ಕಾಮಮೋಹಿನಿಗೂ ಪರಂತಪನಿಗೂ ವಿವಾಹ ಮಹೋತ್ಸವವು ಈ ರೀತಿಯಲ್ಲಿ ಪೂರಯಿಸಿತು.


ಪರಿಚ್ಛೇದ ೭.


ಪರಂತಪನು ಸುಮಿತ್ರನ ಮನೆಯಿಂದ ಹೊರಟು ಹೋದಕೂಡಲೆ, ಸುಮಿತ್ರನು ಸ್ವಲ್ಪಹೊತ್ತು ಮುಂದೆ ಮಾಡತಕ್ಕ ಕಾರ್ಯವನ್ನು ಯೋಚಿಸಿ, ಕಾಮಮೋಹಿನಿಯ ಪತ್ತೆಗಾಗಿ ಇನ್ನೂ ಕೆಲವು ಜನಗಳನ್ನು ಕಳುಹಿಸಿ, ಅಲ್ಲಿಂದ ಶಂಬರನ ಬಳಿಗೆ ಹೋದನು. ಶಂಬರನು ಅತ್ಯಂತ ವ್ಯಾಕುಲತೆಯಿಂದ ಸಂತಪಿಸುತ್ತಿದ್ದನು.