ಪುಟ:ಪರಂತಪ ವಿಜಯ ೨.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೪

ಪರಂತಪ ವಿಜಯ


ಕೊಳ್ಳುವ ಪಕ್ಷದಲ್ಲಿ, ಆ ಸ್ವತ್ತುಗಳನ್ನೂ ಉಯಿಲನ್ನೂ ಆ ಸುಂದರಿಯನ್ನೂ ತಂದು ಒಪ್ಪಿಸಿ ಶರಣಾಗತನಾಗು. ಇಲ್ಲದಿದ್ದರೆ, ನಾಳೆ ಪ್ರಾತಃ ಕಾಲ ಎಂಟು ಘ೦ಟೆಯ ವೇಳೆಗೆ, ನಿನ್ನ ಕಡೆಯ ಪಂಚಾಯಿತರೊಡಗೊಂಡು, ಆಯುಧಪಾಣಿಯಾಗಿ ಊರಿನ ಹೊರಗಿರುವ ಉದ್ಯಾನಕ್ಕೆ ಯುದ್ಧ ಸನ್ನದ್ಧನಾಗಿ ಬರತಕ್ಕದ್ದು. ಆ ಯುದ್ಧದಲ್ಲಿ ಆಗುವ ಜಯಾಪಜಯಗಳೇ, ನಮ್ಮಿಬ್ಬರಲ್ಲಿರುವ ನ್ಯಾಯಾನ್ಯಾಯಗಳನ್ನು ತೋರ್ಪಡಿಸಲಿ. ಈ ವಿಷಯದಲ್ಲಿ ಮನಃಪೂರ್ವಕವಾಗಿ ನಾನು ಒಪ್ಪಿ ಈ ಲೇಖನವನ್ನು ಬರೆದಿರುತ್ತೇನೆ.
               ಶಂಬರ.
  ಅದನ್ನು ಓದಿದ ಕೂಡಲೆ, ಪರಂತಪನು ಕೆಳಗೆ ಬರೆದಿರುವಂತೆ ಪ್ರತ್ಯುತ್ತರವನ್ನು ಕಳುಹಿಸಿದನು.
        ಶಂಬರನ ಸನ್ನಿಧಿಯಲ್ಲಿ,
          ಪರಂತಪನ ವಿಜ್ಞಾಪನೆ...
  ನಿನ್ನ ಲೇಖನವನ್ನು ಓದಿಕೊಂಡೆನು. ಅದರಲ್ಲಿ ಕಂಡಂತೆ ನೀನು ನನ್ನ ಮೇಲೆ ಆಪಾದನೆ ಮಾಡಿರುವ ತಪ್ಪಿತಗಳೆಲ್ಲ ಸುಳ್ಳು. ನಿನ್ನ ಲೇಖನದಂತೆ ನೀನು ನಿರ್ಣಯಿಸಿರುವ ಸಂಕೇತ ಸ್ಥಾನಕ್ಕೆ ಸಿದ್ಧನಾಗಿ ನಾನು ಬರುವೆನು. ನೀನೂ ನಿನ್ನ ಕಡೆಯ ಪಂಚಾಯಿತರೊಡನೆ ಸಿದ್ಧನಾಗಿ ಬಾ. ನಮ್ಮಿಬ್ಬರ ನ್ಯಾಯಾನ್ಯಾಯಗಳು, ಈ ಯುದ್ಧದಿಂದಲೇ ಪ್ರಕಟವಾಗಲಿ.
               ಪರಂತಪ.
  ಈ ನಿರ್ಣಯಕ್ಕನುಸಾರವಾಗಿ, ಮರುದಿನವೇ ಆ ಪುರದ ಬಹಿರುದ್ಯಾನದಲ್ಲಿ ಇಬ್ಬರೂ ತಮ್ಮ ತಮ್ಮ ಕಡೆಯ ಪಂಚಾಯಿತರೊಡಗೊಂಡು ಬಂದು ಸೇರಿದರು. ಸುಮಿತ್ರನೂ ಅತ್ಯಾತುರನಾಗಿ ಬಂದು ಸೇರಿದನು. ಸಮರ ನಿಂಹನೆಂಬ ಆ ಪಟ್ಟಣದ ಯಜಮಾನನೂ ಅಲ್ಲಿಗೆ ಬಂದನು. ಎರಡು ಕಡೆಯ ಪಂಚಾಯಿತರೂ, ಆತನನ್ನು ಸಭಾಧ್ಯಕ್ಷನನ್ನಾಗಿ ನಿರ್ಣಯಿಸಿದರು. ಇವರಿಬ್ಬರ ಪಿಸ್ತೂಲಿನಲ್ಲಿಯೂ ಒಂದೊಂದು ಗುಂಡು ಇರುವಂತೆಯೂ, ಅದನ್ನು ಒಂದಾವೃತ್ತಿ ಹಾರಿಸಿ ಅದರಲ್ಲಿ ಜಯಾಪಜಯಗಳು ಗೊತ್ತಾಗದಿದ್ದರೆ ಪಂಚಾಯಿತರ ಅನುಮತಿಯಿಂದ ಮತ್ತೊಂದಾವೃತ್ತಿ ಪ್ರಯೋಗಿಸಬೇಕೆಂದೂ ನಿರ್ಣಯಿಸಿಕೊಂಡರು. ಕೂಡಲೆ, ಇವರಿಬ್ಬರನ್ನೂ ಮಧ್ಯದಲ್ಲಿ ಮುವ್ವತ್ತು