ಪುಟ:ಪರಂತಪ ವಿಜಯ ೨.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೬೬

ಪರಂತಪ ವಿಜಯ


ಳಿಗೆ ನಿನ್ನಲ್ಲಿ ಜುಗುಪ್ಪೆಯುಂಟಾಗುವಂತೆ ಮಾಡಿದುವಲ್ಲವೆ? ಈಕೆಯಲ್ಲಿ ಮಾಧವನು ಅನುರಕ್ತನಾಗಿರಲಿಲ್ಲವೆ? ಪಿತೃದ್ರೋಹಿಯಾದ ನೀನು, ಅವರಿಬ್ಬರಿಗೂ ವೈಮನಸ್ಯವನ್ನುಂಟುಮಾಡಿ ಅವನ ಅಕಾಲ ಮರಣಕ್ಕೂ ಮುಖ್ಯ ಕಾರಣಭೂತನಾದೆ. ಈ ಪಾಪಕ್ಕೆ ತಕ್ಕ ಫಲವನ್ನು ಅನುಭವಿಸದಿರುವುದಿಲ್ಲ. ಅವಳನ್ನು ನಿನ್ನ ದುರ್ಬುದ್ಧಿಯಿಂದಲೇ ನೀನು ಕಳೆದುಕೊಂಡು, ಈಗ ಪುನಃ ನನ್ನನ್ನು ಪ್ರಾರ್ಥಿಸುವುದು ಬಹಳ ವಿಸ್ಮಯಾವಹವಾಗಿದೆ. ನಾನು ನಿನಗೆ ಶರಣಾಗತನಾಗಬೇಕೋ? ಆಗಲಿ, ನಿನ್ನ ಕೃತ್ಯಕ್ಕೆ ತಕ್ಕ ಫಲವನ್ನು ಈಗಲೇ ತೋರಿಸುವೆನು.

ಶಂಬರ- ಎಲಾ ದುರಾತ್ಮನೆ! ಮಾಧವನ ಮರಣಕಾಲದಲ್ಲಿ ಅವನ ಸಮೀಪದಲ್ಲಿದ್ದವನು ನೀನು. ನೀನೇ ಅವನ ಮರಣಕ್ಕೆ ಕಾರಣಭೂತನು. ನಿನಗೆ ಇಂಥ ದುರ್ಬುದ್ಧಿ ಹುಟ್ಟುವುದಕ್ಕೂ ಅವನ ಅನ್ಯಾದೃಶವಾದ ಸಂಪತ್ತುಗಳೇ ಕಾರಣವು. ನಿನ್ನ ವಂಚನೆಗೆ ಒಳಪಟ್ಟು ಕಾಮಮೋಹಿನಿಯು ನಿನಗೆ ಸ್ವಾಧೀನಳಾದುದಕ್ಕೆ, ನನ್ನ ಶೀಲಸ್ವಭಾವಗಳಲ್ಲಿ ದೋಷವನ್ನು ಕಲ್ಪಿಸುವೆಯೋ? ಎಲೈ ನೀಚನೇ! ನಿನ್ನೊಡನೆ ವೃಥಾಲಾಪಗಳಿಂದ ಪ್ರಯೋಜನವೇನು? ಅಯ್ಯಾ! ಸಮರಸಿಂಹ! ಈ ನೀಚನ ಪ್ರಲಾಪವನ್ನು ನಿಲ್ಲಿಸುವೆನು; ಆಜ್ಞೆಯನ್ನು ಕೊಡು.

ಪರಂತಪ- ಎಲೈ ಸಮರಸಿಂಹನೆ! ಈ ನೀಚನೊಡನೆ ವೃಥಾ ವಾಕ್ಕಲಹದಿಂದ ಪ್ರಯೋಜನವೇನು? ನಮ್ಮ ನಮ್ಮ ನ್ಯಾಯಾನ್ಯಾಯಗಳಿಗೆ ನಮ್ಮ ನಮ್ಮ ಮನಸ್ಸೇ ಕಾರಣಭೂತವಾಗಿರುತ್ತದೆ. ಅಲ್ಲದೆ, ನಮ್ಮಿಬ್ಬರ ಧರ್ಮಾಧರ್ಮಗಳನ್ನು ಸರ್ವಾಂತರ್ಯಾಮಿಯಾದ ಜಗದೀಶ್ವರನೊಬ್ಬನೇ ಬಲ್ಲನು. ನಾನು ಮಾಧವನ ಆಸ್ತಿಯ ವಿಷಯದಲ್ಲಾಗಲಿ ಕಾಮಮೋಹಿನಿಯ ವಿಷಯದಲ್ಲಾಗಲಿ ದುರಾಶೆಪಟ್ಟು ಪ್ರವರ್ತಿಸಿದ್ದರೆ, ಶಂಬರನ ಪ್ರಹಾರವು ನನಗೆ ತಗುಲಲಿ; ಹಾಗಿಲ್ಲದೆ ಈತನು ಪಿತೃದ್ರೋಹಿಯೂ ಕೃತಘ್ನುನೂ ಆಗಿದಲ್ಲಿ, ನನ್ನ ಪ್ರಹಾರಕ್ಕೆ ಈತನೇ ಗುರಿಯಾಗಲಿ. ಧರ್ಮವಿದ್ದ ಕಡೆ ಜಯವೆಂಬುದು ಈಗ ಸ್ಥಿರಪಡುವುದು. ಇನ್ನು ನಮಗೆ ಆಜ್ಞೆಯನ್ನು ಕೊಡು.

ಸಮರಸಿಂಹನು “ಅಯ್ಯಾ! ಇನ್ನು ನಿಮ್ಮಿಬ್ಬರ ಸಲ್ಲಾಪಗಳನ್ನು ನಿಲ್ಲಿಸಿರಿ. ಯುದ್ಧಕ್ಕೆ ಸಿದ್ಧರಾಗಿರಿ. ನಾನು ಒಂದರಿಂದ ಮೂರರವರೆಗೆ