ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨ / ಪ್ರಸ್ತುತ

ಆಂಗಿಕ, ವಾಚಿಕ, ಸಾತ್ತ್ವಿಕ, ಆಹಾರ (ವೇಷ, ಭೂಷಣ, ಬಣ್ಣ) ಎಲ್ಲವೂ ಸೇರಿ ಅಭಿನಯವೆನಿಸುತ್ತದೆ. ಅಂದರೆ ಇಡಿಯ ರಂಗವ್ಯವಹಾರವೆಲ್ಲ ಅಭಿನಯವೇ ಆಗಿದೆ. ಮಾತು ಅಭಿನಯದ್ದೇ ಒಂದು ಅಂಗ, ಸಾಮಾನ್ಯ ಪ್ರೇಕ್ಷಕನಿಗೆ ಅದೇ ಕೆಲವೊಮ್ಮೆ ಮುಖ್ಯ ಅಂಗ ಅನಿಸಬಹುದು. ಆದರೆ, ಅಭಿನಯವನ್ನು ವ್ಯಾಪಕ ಅರ್ಥದಲ್ಲಿ ತೆಗೆದುಕೊಂಡಾಗಲೇ ನಮಗೆ ಕಲೆ 'ಅರ್ಥ ಆಗುವುದು' ಮತ್ತು 'ತಲಪುವುದು' ಶಕ್ಯ. ನೃತ್ಯ, ವೇಷ, ಚಲನ, ಮಾತು, ಹಾಡು ಎಲ್ಲವೂ ಅಭಿನಯಗಳೇ. ಯಕ್ಷಗಾನದ ದೃಷ್ಟಾಂತವನ್ನೆ ತೆಗೆದುಕೊಳ್ಳುವುದಾದರೆ, ಬಣ್ಣದ ವೇಷದ ಆರ್ಭಟ, ಚಿಟ್ಟಿಯ ಮುಖವರ್ಣಿಕೆಯಿಂದ ಹಿಡಿದು ಚೆಂಡೆಯ ಬಡಿತವೂ ಕೂಡ ಅಭಿನಯದ ಅಂಗಗಳೇ. ಕಾರಣ, ಅವು ವಸ್ತುವನ್ನೂ ಪಾತ್ರವನ್ನೂ ಅಭಿವ್ಯಕ್ತಿಸುತ್ತವೆ.

ಬಹುವಿಧದ ಚೌಕಟ್ಟು

ಯಾವುದೇ ಕಲಾಮಾಧ್ಯಮವಿರಲಿ, ಅದರಲ್ಲಿನ ರಚನೆಯೊಂದನ್ನು ಕಲ್ಪಿಸುವಾಗ ಹಲವು ಆವರಣಗಳೊಳಗೆ ಅದನ್ನು ಯೋಚಿಸುವುದು ಅಗತ್ಯ. ಮೌಲಿಕವಾಗಿ, ಔಚಿತ್ಯದ ಸೀಮೆ ಎಲ್ಲದಕ್ಕೂ ಇದೆಯಷ್ಟೆ. ಅಷ್ಟೆ ಮುಖ್ಯವಾದ ಇತರ ವಿಷಯಗಳಿವೆ. ಆ ಆ ಕಲೆಯ ಪರಂಪರೆಯೆಂಬ ಒಂದು ಸ್ಕೂಲವಾದ ಬೇಲಿ ಇದೆ. ಆ ಕಲೆಯಲ್ಲಿ ಪ್ರಾದೇಶಿಕ ಭೇದ ಅಥವಾ ತಿಟ್ಟುಗಳು ಇವೆ. ಆ ಆ ಕಲಾರೂಪದ ಅಂಗೋಪಾಂಗಗಳಾದ ಪದ್ಯ, ಗದ್ಯ, ವೇಷ ವಿಧಾನಗಳು ಇವೆ. ಅಂದರೆ ಒಟ್ಟಾಗಿ ಕಲಾಶೈಲಿಯೆಂಬುದು ಇದೆ. ಔಚಿತ್ಯ ಮತ್ತು ವಸ್ತುವನ್ನು ಮಂಡಿಸುವ ವಿಧಾನವು ಕಲೆಯ ಸ್ವರೂಪವನ್ನು ಮತ್ತು ಶೈಲಿಯನ್ನು ಹೊಂದಿಕೊಂಡೇ ಇರುತ್ತದೆ. ಈ ಕಲಾಶೈಲಿ ಮತ್ತು ಸ್ವರೂಪಗಳನ್ನು ಗೌರವಿಸಿಯೇ ನಾವು ಮುಂದುವರಿಯಬೇಕು. ಇಲ್ಲವಾದರೆ ಯಾವುದೇ ಕಲೆಗೆ ಪ್ರತ್ಯೇಕತೆಯೆಂಬುದು ಉಳಿಯಲಾರದು. ಯಕ್ಷಗಾನಕ್ಕೆ ಮೇಲೆ ಹೇಳಿದ ಚೌಕಟ್ಟುಗಳೊಳಗೆ ಪುನಃ ಕರಾವಳಿಯ ಜನಜೀವನದ ಪ್ರಭಾವವಲಯ, ಅದರೊಳಗೆ ಯಕ್ಷಗಾನದ್ದಾದ ತನ್ನತನ, ತಿಟ್ಟುಗಳ ಕ್ರಮ ಯಾ ನಡೆಗಳು ಎಲ್ಲ ಇವೆ. ಈಯೆಲ್ಲದರ ಹೊರಗೆ ಸಭ್ಯತೆ ಮತ್ತು ಔಚಿತ್ಯದ ಒಂದು ದಪ್ಪದ ಗಡಿರೇಖೆ ಇದೆ.

ಕಲಾಭಾಷೆ:

ಈಯೆಲ್ಲದರ ಹಿನ್ನೆಲೆಯಲ್ಲಿ ಒಂದು 'ಕಲೆಯಭಾಷೆ' ಸಿದ್ಧವಾಗುತ್ತದೆ. ಆ ಭಾಷೆಯನ್ನು ಒಂದು ಒಪ್ಪಂದವಾಗಿ ಸ್ವೀಕರಿಸದೆ ಇದ್ದರೆ, ಕಲೆ ಸಾರ್ಥಕವಾಗುವುದಿಲ್ಲ. ಕಲೆಯ ಭಾಷೆಯನ್ನು ಅರ್ಥಮಾಡಿಕೊಳ್ಳಲಾರದವನು ಯಾ ಒಪ್ಪದವನು ಆ ಕಲೆಯ ಮಟ್ಟಿನ 'ಭಾಷೆ ಇಲ್ಲದವ'ನಾಗುತ್ತಾನೆ. ಉದಾ- ಒಂದು ಪಾತ್ರವು