ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಲಾಸ್ವರೂಪ ಮತ್ತು ಅಭಿವ್ಯಕ್ತಿ ವಿಧಾನ / ೩

ರಂಗದಲ್ಲಿ ಒಂದು ಸುತ್ತುತಿರುಗಿ 'ಕಾಡಿಗೆ ಬಂದಿದ್ದೇನೆ' ಎನ್ನುವುದು, ಮಾವಿನಸೊಪ್ಪಿನ ಗೊಂಚಲಿನಿಂದ ಬಡಿದು 'ಶಿಕ್ಷೆಕೊಡುವುದು', ರಾಕ್ಷಸನ ಪ್ರವೇಶಕ್ಕೆ ಪಂಜಿನ ಮುಂದೆ ರಾಳ ಹಾರಿಸಿ ಭೀಕರತೆ ಉಂಟುಮಾಡುವುದು ಇದೆಲ್ಲ ಆ ಭಾಷೆಯಲ್ಲಿನ ಸಂಕೇತಗಳು. ಪಾದುಕಾ ಪ್ರದಾನದಲ್ಲಿ ರಾಮನು ಭರತನಿಗೆ ಪಾದುಕೆಗಳನ್ನು ನೀಡುವಾಗ ಚಕ್ರತಾಳವನ್ನು ನೀಡುತ್ತಾನೆ. 'ವಿಶ್ವರೂಪದರ್ಶನ' ಆಗುವಾಗ, ಬಣ್ಣದ ಮನೆಯಲ್ಲಿದ್ದ ಎಲ್ಲ ಆಯುಧಗಳನ್ನು ತಂದು ಸುತ್ತ ಹಿಡಿಯುತ್ತಾರೆ. ಸೋಗೆವಲ್ಲಿಯನ್ನೆ ಮಡಚಿ ಮಗುವಿನಂತೆ ಆಡಿಸುತ್ತಾರೆ. ರಾಕ್ಷಸನು ಹೆಂಡತಿಯೊಂದಿಗೆ ಸಂಭಾಷಿಸುವಾಗಲೂ ಸ್ವಲ್ಪ ಅಬ್ಬರದಿಂದಲೇ ಮಾಡುತ್ತಾನೆ- ಹೀಗೆ ಹಲವು ಉದಾಹರಣೆಗಳನ್ನು ನೀಡಬಹುದು. ಇವೆಲ್ಲ ಯಕ್ಷಗಾನದ ಕಲಾಭಾಷೆಯ ಅಂಶಗಳು. ಈ ಅಂಶಗಳನ್ನು, ಸಕಾರಣವಾಗಿ, ಕಲಾತ್ಮಕವಾಗಿ, ಬದಲಿಸಬಾರದೆಂದಿಲ್ಲ. ಆದರೆ, ಕಲೆಯ ಗ್ರಹಿಕೆ ಇಲ್ಲದೆ, ಸಶಕ್ತವಾದ ಬದಲಿಯಾಗದ ರೀತಿಯಲ್ಲಿ, ಯಾವುದನ್ನಾದರೂ ತಂದು ತುರುಕಿದರೆ ಕಲೆಯ 'ಭಾಷಾಭಂಗ'ವಾಗಿ ವಿಸಂಗತಿ ಉಂಟಾಗುತ್ತದೆ. ಇದು ಕಲಾವಿದನಿಗೂ ನೋಡುವವನಿಗೂ ತಿಳಿದಿರಬೇಕು.

ಪಾದುಕಾಪ್ರದಾನದಲ್ಲಿ ಪ್ಲಾಸ್ಟಿಕಿನ ಪಾದುಕೆಗಳನ್ನು ತರುವುದು, ಆಟವನ್ನು 'ರೈಸುವಂತೆ ಮಾಡಲು' ಬ್ಯಾಂಡು ಬಾರಿಸಿ ಗಲಭೆ ಎಬ್ಬಿಸುವುದು, 'ಚಂದ ಕಾಣಲಿಕ್ಕಾಗಿ' ಸಿನಿಮೀಯ ವೇಷಗಳನ್ನು ತರುವುದು ಕಲೆಯ ಭಾಷಾ ಭಂಗದ ಉದಾಹರಣೆಗಳು, ಯಾವ ರೀತಿಯ ಕಲೆಯಲ್ಲಿ ತಾನು ವ್ಯವಹರಿಸುತ್ತಿರುವುದು, ಇದರಲ್ಲಿ ತಾನು ಏನು ಪರಿಣಾಮ ಸಾಧಿಸಬಹುದು ಎಂಬ ಚಿಂತನೆ, ಯಾವ ಪಾತ್ರ ಏನನ್ನು ಮಾಡಬಹುದು ಎಂಬ ತಿಳಿವಳಿಕೆ ಇದ್ದರೆ ಇಂತಹ ಸಮಸ್ಯೆ ಬರುವುದಿಲ್ಲ.

ಬದಲಾವಣೆ ಬೇಡವೆ?

ಕಲಾಶೈಲಿ ಮತ್ತು ಸಂಪ್ರದಾಯಕ್ಕೆ ವಿರುದ್ಧವಾಗಿ ಬರುವ ಒಂದು ಪ್ರಶ್ನೆ “ಹಾಗಾದರೆ, ಏನು, ಬದಲಾವಣೆ ಬೇಡವೆ?” ಇದು ಸುಲಭವಾಗಿ ಕೇಳುವ, ಆದರೆ, ನಿಜವಾಗಿ ತುಂಬ ತೊಡಕಾದ ಪ್ರಶ್ನೆ, ಬದಲಾವಣೆ ಎಂಬುದು ಬೇಕು ನಿಜ. ಗತಿಶೀಲತೆಯು ಕಲೆಯ ಧರ್ಮವಾಗಿದೆ. ಆದರೆ, ಪ್ರತಿಯಾಗಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು- ಯಾವುದು ಹೊಸತನ? ಅದು ಹೇಗಿರಬೇಕು? ಬದಲಾವಣೆಗಳೆಲ್ಲ ನೂತನ ಪ್ರಯೋಗ ಎನಿಸಲು ಅರ್ಹವೆ? ಪರಿಷ್ಕಾರದ ಉದ್ದೇಶವೇನು? ಅದು ಕಲೆಯ ರೂಪಕ್ಕೆ ಸಂಗತವೆ? ಮುಂತಾಗಿ, “ಶುದ್ಧವಾದ ಕಲೆ”, “ಪರಿವರ್ತನೆ ಇಲ್ಲದ ಸ್ಥಿರ ರೂಪ” ಎಂಬುದು, ವಿಶಾಲವಾದ ಅರ್ಥದಲ್ಲಿ ಇಲ್ಲ. ಯಾವನೇ ಪ್ರಜ್ಞಾವಂತ ವಿಮರ್ಶಕನೂ ಕಲಾಮೌಲ್ಯವುಳ್ಳ, ಕಲೆಯ ಒಟ್ಟಂದಕ್ಕೆ ಹೊಂದಿನಿಲ್ಲುವ ಬದಲಾವಣೆಗಳನ್ನು ಬೇಡವೆನ್ನಲಾರ, ಬೇಡ ಎನ್ನಲು ಕಾರಣವಿಲ್ಲ, ಸಾಧ್ಯವೂ ಇಲ್ಲ.