ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಲಾಸ್ವರೂಪ ಮತ್ತು ಅಭಿವ್ಯಕ್ತಿ,ವಿಧಾನ / ೫

ಮೊದಲು ಇದ್ದುದರಲ್ಲಿ ಯಾವ ಕೊರತೆಯನ್ನು ನಿವಾರಿಸಲು ಇದನ್ನು ತರಲಾಗಿದೆ? ಇದರಿಂದಾಗುವ ವಿಶೇಷ ಪ್ರಯೋಜನವೇನು?” ಈ ಪ್ರಶ್ನೆಗಳಿಗೆ ಸಮರ್ಪಕ, ಪ್ರಾಮಾಣಿಕ, ಉತ್ತರ ದೊರೆತಾಗ ಮಾತ್ರ ಪರಿವರ್ತನೆ ಯೋಗ್ಯವೆನಿಸುತ್ತದೆ.
ಸ್ತ್ರೀವೇಷ
ಮೇಲಿನ ಮಾತುಗಳನ್ನು ಸ್ಪಷ್ಟಪಡಿಸಲು, ಯಕ್ಷಗಾನದ ಸ್ತ್ರೀವೇಷದ ವೇಷ, ಭೂಷಣಾದಿಗಳಲ್ಲಾದ ಪರಿವರ್ತನೆಗಳ ಹಂತಗಳನ್ನು ಗಮನಿಸಬಹುದು. ಹಿಂದಕ್ಕೆ, ಈ ಶತಮಾನದ ಆದಿಭಾಗದಲ್ಲಿ ಸ್ತ್ರೀವೇಷದ ಚಿತ್ರವು, ಯಕ್ಷಗಾನದ ಪುರುಷವೇಷಕ್ಕೆ ಅನುರೂಪವಾಗಿತ್ತೆಂದು ತಿಳಿದವರ ಅಂಬೋಣ, ಬರಬರುತ್ತ ಅದು ದುರ್ಬಲವಾಗುತ್ತ, ಸಮಕಾಲೀನ ಸಮಾಜದ ಹೆಂಗಸಿನದೆ ಪ್ರತಿರೂಪವೆಂಬಂತಾಗಿ, ಪುರುಷವೇಷಗಳಿಗೂ ಸ್ತ್ರೀವೇಷಗಳಿಗೂ ಸಂಬಂಧವಿಲ್ಲದಂತಾಯಿತು. ಇದನ್ನು ಮನ ಗಂಡ ಹಲವರು, ಪುನಃ ಅದನ್ನು ಭವ್ಯವಾಗಿಸಲು ಯತ್ನಿಸಿದರು. (ಇದಕ್ಕೆ ಮುಖ್ಯವಾಗಿ ಡಾ| ಶಿವರಾಮ ಕಾರಂತರ ರಚನೆಯೇ ಪ್ರೇರಕ) ಸ್ತ್ರೀವೇಷಕ್ಕೆ ಉಚಿತ ವಾದ ಶಿರೋಭೂಷಣ, ಕೈಕಟ್ಟು, ಸೊಂಟದ ಡಾಬು ಮೊದಲಾದುವುಗಳ ರಚನೆ ಯಾಯಿತು. ಇತ್ತೀಚಿನ ವರ್ಷಗಳಲ್ಲಿ ಸ್ತ್ರೀವೇಷ ಯಕ್ಷಗಾನರಂಗಕ್ಕೆ ಉಚಿತವಾದ ರೀತಿಯಲ್ಲಿ ಬೆಳೆಯುತ್ತ ಬಂದಿದೆ. ಅದರಲ್ಲಿ ಇನ್ನಷ್ಟು ಸುಧಾರಣೆ ಸಾಧ್ಯವಿದೆ. ಇರಲಿ. ಈ ಮಧ್ಯೆ ಇತ್ತೀಚೆಗೆ, ಬಣ್ಣ ಬಣ್ಣದ ಮಡಿಕೆಗಳು, ಜಗಜಗ ಸೀರೆ, ನೃತ್ಯ ರಂಗದಲ್ಲಿದ್ದಂತಹ ಕಚ್ಚೆ, ಅಲ್ಲಲ್ಲಿ ವಿಚಿತ್ರವಾದ ಬಣ್ಣದ ರೇಖೆಗಳು, ಅಂಗಾಂಗ ಪ್ರದರ್ಶಕವಾದ ಬಿಗಿತಗಳು ಮತ್ತು ಈ ರಂಗದ ಕ್ರಮಕ್ಕೆ ಹೊಂದದ ಹೆಜ್ಜೆಗಳು, ಭಾವಭಂಗಿಗಳೂ ಕಾಣಿಸಿಕೊಂಡಿವೆ. ಇವುಗಳ ಹಿಂದಿನ ಪ್ರೇರಣೆ ಏನು? ಕಲಾತ್ಮಕ ನಾವೀನ್ಯವೆ? ಅಲ್ಲ ಸುಲಭದ ರಂಜನೆಯೆ?
ಮಾತು, ಹಾವಭಾವ ಮತ್ತು ಪಾತ್ರಚಿತ್ರಣವೂ ಹಾಗೆಯೇ. ಕಲಾವಿದ ಯಾವ ಪಾತ್ರವನ್ನು ರಂಗದಲ್ಲಿ ರಚಿಸುತ್ತಿದ್ದಾನೆ, ಅವನು ನಿರ್ಮಿಸುವ ಚಿತ್ರವು ಎಂತಹದು ಎಂಬುದು ಮುಖ್ಯ. ಶೂರ್ಪನಖಿಯು ಸೀತೆಯಂತಲ್ಲ, ಮೋಹಿನಿಯು ಚಂದ್ರಮತಿಯಂತಲ್ಲ ನಿಜ. ಉತ್ತರಕುಮಾರನು ಸುಧನ್ವನಾಗಬೇಕಿಲ್ಲ ಎಂಬುದೂ ಸತ್ಯ. ಆದರೆ ಈ ಪಾತ್ರಗಳಿಗೂ ಸಭ್ಯತೆ, ಕಲಾತ್ಮಕ ಸಮರ್ಪಕತೆ, ಔಚಿತ್ಯಗಳ ಸೀಮೆ ಇದ್ದೇ ಇದೆ. ಸ್ವತಂತ್ರವಾದ ಮಾತುಗಾರಿಕೆ, ಮತ್ತು ಅಭಿನಯ ಸ್ವಾತಂತ್ರ್ಯ ಇರುವ ಯಕ್ಷಗಾನ ರಂಗದಲ್ಲಿ ರಂಜನೆಯನ್ನು ಸಾಧಿಸಿ, ಔಚಿತ್ಯವನ್ನೂ ಉಳಿಸುವುದು ದೊಡ್ಡ ಹೊಣೆಯ ಕೆಲಸ. ಅದರಲ್ಲೂ ಹಾಸ್ಯ, ಶೃಂಗಾರ ರಸಗಳ ಸಂದರ್ಭ ಬಹಳ ಕಠಿನವಾದುದು, ಅಪಾಯಕರವಾದುದು. ಸ್ವಲ್ಪ ಅಳತೆ ತಪ್ಪಿದರೂ ಹಾಸ್ಯವು ಹೇಸಿಗೆಯಾಗುತ್ತದೆ. ಶೃಂಗಾರವು ಭೀಭತ್ಸವಾಗುತ್ತದೆ. ಇಲ್ಲಿ ಕಲಾವಿದನ ವಿವೇಕ ಬಹಳ ಮುಖ್ಯವಾಗುತ್ತದೆ. ಅದನ್ನು ತೋರಿಸಿ ಪಾತ್ರಗಳನ್ನು ಉಚಿತವಾಗಿ, ಕೆಡದಂತೆ ಸೃಜಿಸಬಲ್ಲ ಕಲಾವಿದರೂ ಇದ್ದಾರೆ.