ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ರಂಗಭೂಮಿಯ ಸಮಸ್ಯೆಗಳು / ೨೫

ಅನುಕೂಲವಿರುವಂತಹದು ಆದರೆ ಸಾಕು. ಅದು ಹೇಗಿದ್ದರೂ ಅವರಿಗೇನೂ ಚಿಂತೆಯಿಲ್ಲ. ಮೇಳಗಳಿಗೆ ಕಂಟ್ರಾಕ್ಟ್ರುಗಳಿಂದಾಗಿ ವ್ಯಾವಹಾರಿಕ ಭದ್ರತೆ ಒದಗುತ್ತದೆ.

ಕಂಟ್ರಾಕ್ಟ್ ಪದ್ಧತಿಯಲ್ಲಿರುವ ಇನ್ನೊಂದು ಅಪಾಯವೆಂದರೆ ಟಿಕೆಟ್‌ದರ ಏರಿಕೆ. ಎರಡು ರೂಪಾಯಿಗಳಿಂದ ಹತ್ತು ರೂಪಾಯಿಯವರೆಗಿರುವ ಯಕ್ಷಗಾನದ ಟಿಕೆಟ್‌ದರ, ಅತ್ಯಂತ ಅಗ್ಗದಲ್ಲಿ ಎಂಟು ಗಂಟೆಗಳ ಮನೋರಂಜನೆ ನೀಡುವ ಒಂದು ಅದ್ಭುತ ಆರ್ಥಿಕ ವಿದ್ಯಮಾನ. ಕಂಟ್ರಾಕ್ಟುದಾರರು ದರಗಳನ್ನು ಏರಿಸಿ, ಯಕ್ಷಗಾನದ ಮುಖ್ಯ ಪ್ರೇಕ್ಷಕವರ್ಗವಾದ ಕೆಳ ಮಧ್ಯಮ ವರ್ಗ, ಬಡ ಜನರನ್ನು ಯಕ್ಷಗಾನದಿಂದ ದೂರ ಓಡಿಸುತ್ತಿದ್ದಾರೆ. ಒತ್ತಾಯದ ಮಾರಾಟದಿಂದ ಹಣಗಳಿಸಿದರೂ, ಹೊಸ ಪ್ರೇಕ್ಷಕವರ್ಗ ನಿರ್ಮಾಣವಾಗುವುದಿಲ್ಲ. ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೆ ಕೊಯ್ಯುವವನ ಕತೆಯಂತೆ, ಕಂಟ್ರಾಕ್ಟ್ ಪದ್ಧತಿಯು ಯಕ್ಷಗಾನಕ್ಕೆ ದೊಡ್ಡ ಶತ್ರುವಾಗಿದೆ.

ಚೌಕಟ್ಟು ಇಲ್ಲದ ಪ್ರತಿಭೆ

ವಿಸ್ತಾರವಾಗಿ ಬೆಳೆದಿರುವ ಯಕ್ಷಗಾನ ರಂಗದಲ್ಲಿ, ಪ್ರತಿಭೆಗೆ ಕೊರತೆಯೇನೂ ಇಲ್ಲ. ಹಲವು ಅನುಭವಿಗಳಲ್ಲಿ ಸಂಪ್ರದಾಯದ ದ್ರವ್ಯ ಜೀವಂತವಾಗಿದೆ. ಹೊಸಬರಲ್ಲೂ ಉತ್ತಮ ಕಲಾವಿದರು ಮೂಡಿ ಬಂದಿದ್ದಾರೆ. ಹೊಸ ಹೊಸ ಕಲ್ಪನೆಗಳು ಬೆಳೆದಿವೆ. ಆದರೆ, ಯಕ್ಷಗಾನದ ಮೂಲ ಚೌಕಟ್ಟು ವಿಘಟನೆಗೊಂಡು ವಿನಾಶವಾಗುತ್ತಿದೆ. ಯಕ್ಷಗಾನ ಪ್ರತಿಭೆಯಲ್ಲಿ ಬೆಳೆದಿದೆ, ಸ್ವರೂಪ (form) ದಲ್ಲಿ ಕುಸಿದಿದೆ. ಇದೊಂದು ವಿರೋಧಾಭಾಸವಾಗಿದೆ.

ಕಲಾವಿದನ ಹೊಣೆ

ಕಲಾವಿದರಲ್ಲಿ, ಬಹು ಮಂದಿ, ಪರಿಸ್ಥಿತಿಯನ್ನು ಇರುವಂತೆ ಒಪ್ಪಿಕೊಂಡಿದ್ದು, ಯಕ್ಷಗಾನ ಶೈಲಿಯ ವಿನಾಶದ ಗೊಂದಲದ ಬಗ್ಗೆ ಅವರಿಗೆ ವ್ಯಥೆಯಾಗಲಿ, ಆತಂಕವಾಗಲಿ ಇಲ್ಲವೇ ಇಲ್ಲ. ಪ್ರಭಾವಿ ಕಲಾವಿದರ ನಿಲುವೂ ಹೀಗಿದೆ. ಶೈಲಿಬದ್ದ ಕಲೆಯೊಂದರಲ್ಲಿ ಕಲೆಯನ್ನು ಉಳಿಸುವ ಹೊಣೆ ಕಲಾವಿದರ ಮೇಲೆ, ಕಲಾಸಂಘಟಕರ ಮೇಲೆ ಬಹಳವಾಗಿ ಇದೆ. ಕಲಾಮೌಲ್ಯಕ್ಕೆ ಸಂಖ್ಯೆಯ ಬಹುಮತವು ನಿರ್ಣಾಯಕವಾಗಲಾರದು. ಕಲಾವಿದನ ನೈತಿಕ ಹೊಣೆ, ಮೇಳಗಳ ಮಾಲೀಕರ ಜವಾಬ್ದಾರಿ ಬಹಳ ದೊಡ್ಡದು.

ವಿಮರ್ಶೆಯ ವೈಫಲ್ಯ

ಬೃಹತ್ಪ್ರಮಾಣದಲ್ಲಿ ಬೆಳೆದಿರುವ ಯಕ್ಷಗಾನದ ಗಾತ್ರಕ್ಕೆ ಸರಿಯಾಗಿ ತಾತ್ವಿಕ ಮತ್ತು ಪ್ರಾಯೋಗಿಕ ವಿಮರ್ಶೆ ಬೆಳೆಯುತ್ತಿದ್ದರೆ, ಇಂದು ಯಕ್ಷಗಾನ