ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೬ / ಪ್ರಸ್ತುತ

ರಂಗಚಿತ್ರ ಬೇರೆಯೇ ಇರುತ್ತಿತ್ತೋ ಏನೋ. ವರ್ಷಕ್ಕೆ ಸುಮಾರು ಹತ್ತು ಹದಿನೆರಡು ಸಾವಿರದಷ್ಟು ಪ್ರದರ್ಶನಗಳನ್ನು ಹೊಂದಿದ ಈ ರಂಗದ ಬಗ್ಗೆ ಬಂದಿರುವ ವಿಮರ್ಶೆ ತೀರ ಕಡಿಮೆ. ಒಳ್ಳೆಯ ವಿಮರ್ಶೆ, ಯಾವುದೇ ಕ್ಷೇತ್ರಕ್ಕೆ ಮಾರ್ಗದರ್ಶನ ನೀಡಬಲ್ಲುದು, ಅದರ ಅಡ್ಡಾದಿಡ್ಡಿ ಬೆಳವಣಿಗೆಗೆ ಕಡಿವಾಣ ಹಾಕಬಲ್ಲುದು, ಆದರೆ ಆ ಕೆಲಸ ಏನೇನೂ ಆಗಿಲ್ಲ. ವಿಮರ್ಶಕರು ತಮ್ಮ ಕೆಲಸದಲ್ಲಿ ವಿಫಲರಾಗಿದ್ದಾರೆ. ನಮ್ಮಿ ಕರಾವಳಿ ಪ್ರದೇಶದಲ್ಲಿ, ದೊಡ್ಡ ಸಂಖ್ಯೆಯಲ್ಲಿ ಕವಿ, ಕತೆಗಾರ, ಸಾಹಿತ್ಯ ವಿಮರ್ಶಕರಿದ್ದಾರೆ. ಒಂದು ಚಿಕ್ಕ ಪದ್ಯವನ್ನು ಹಿಡಿದು ಪ್ರೌಢವಾಗಿ ದೀರ್ಘವಾಗಿ ವಿವೇಚಿಸಬಲ್ಲವರಿದ್ದಾರೆ, ಆದರೆ, ಕೆಲವೇ ಕೆಲವು ಉಜ್ವಲ ಅಪವಾದಗಳನ್ನು ಬಿಟ್ಟರೆ ನಮ್ಮ ಕರಾವಳಿಯ ಸಾಂಸ್ಕೃತಿಕ ಕ್ಷೇತ್ರದ ಪ್ರತಿಭೆ, ವಿಮರ್ಶೆಯ ಶಕ್ತಿ ಯಕ್ಷಗಾನದ ಕಡೆಗೆ ಹರಿಯಲಿಲ್ಲ. ನಮ್ಮಲ್ಲಿನ ಅನೇಕ ಪ್ರೌಢ,ಪ್ರಾಜ್ಞ ವ್ಯಕ್ತಿಗಳಿಗೂ, ಯಕ್ಷಗಾನದ ಸಾಮಾನ್ಯ ತಿಳಿವೂ ಇಲ್ಲ. ಸಾಹಿತಿಗಳಿಗೂ ಹಲವು ಬಾರಿ ಇಲ್ಲ. ಕಾರಣ-ಯಕ್ಷಗಾನದ ವಿಮರ್ಶೆ, ಅದರ ವಿವಿಧ ಅಂಗೋಪಾಂಗಗಳ ಜ್ಞಾನವನ್ನು ಬಯಸುವ, ಹೆಚ್ಚಿನ ಪರಿಶ್ರಮದ ಕೆಲಸ. ಇಡಿಯ ರಾತ್ರಿ ನಿದ್ದೆಗೆಟ್ಟು ನೋಡುವ ತೊಂದರೆ ಬೇರೆ. ಇದರಿಂದಾಗಿ, ಈ ಸಾಂಸ್ಕೃತಿಕ ಕಂದರ ಉಂಟಾಗಿದೆ.

ಸಂವಹನದ ಅಭಾವ

ಇರುವ ಒಂದಿಷ್ಟು ವಿಮರ್ಶೆಯೂ ವೃತ್ತಿ ಕಲಾವಿದರನ್ನು, ಮೇಳಗಳ ಮಾಲೀಕರನ್ನು ಮುಟ್ಟುವುದಿಲ್ಲ. ಗೋಷ್ಠಿ, ಕಮ್ಮಟಗಳಲ್ಲಿ ಅವರು ಭಾಗವಹಿಸುವುದಿಲ್ಲ. ಸಮಯಾಭಾವ, ಆರ್ಥಿಕ ಮುಂತಾದ ಕಾರಣಗಳಿಂದ ಪರಂಪರೆ, ಸುಧಾರಣೆ, ಕಲಾಸೌಂದರ್ಯಗಳ ವಿಮರ್ಶಾತ್ಮಕ ಪರಿಭಾಷೆ, ಕಲಾವಿದರಿಗೆ ಹೊಸತು. ವಿಮರ್ಶಕ ಏನು ಹೇಳುತ್ತಿದ್ದಾನೆ ಎನ್ನುವುದನ್ನು ಅವರು ತಿಳಿಯದೆ ಗೊಂದಲಪಡುತ್ತಾರೆ. ಇದು ಸಹಜ. ವಿಮರ್ಶೆ ಒಂದು ಕಡೆ, ಕಲಾವಿದ ಇನ್ನೊಂದೆಡೆ ಎಂಬಂತಾಗಿದೆ. ಈ ಅಂತರವನ್ನು ಹೋಗಲಾಡಿಸಿ, ವಿಮರ್ಶೆ ವೃತ್ತಿರಂಗವನ್ನು ತಲಪುವಂತೆ ಏನಾದರೂ ವ್ಯವಸ್ಥೆ ಬೇಕು.

ಹೊಸತನ ತಂದ ಸಮಸ್ಯೆ

ಯಕ್ಪಗಾನ ಪ್ರಸಂಗ, ನೃತ್ಯ, ಕಥಾವಸ್ತುಗಳು ಇದ್ದಂತೆ ಇರಬೇಕೆ? ಬದಲಾವಣೆ, ಹೊಸತನ ಬೇಡವೆ? ಎಂಬ ಪ್ರಶ್ನೆ ಇದೆ. ಇದು ಗಂಭೀರವಾದ ಪ್ರಶ್ನೆ ನಿಜ. ಆದರೆ, ಯಕ್ಷಗಾನದಂತಹ ಒಂದು ಸಿದ್ದ ಚೌಕಟ್ಟಿನ ಪಾರಂಪರಿಕ ಕಲೆಯಲ್ಲಿ ಹೊಸತನವನ್ನು ಹೇಗೆ ತರಬೇಕು, ಎಷ್ಟು ತರಬೇಕು, ಯಕ್ಷಗಾನದ ಯಕ್ಷಗಾನತ್ವವನ್ನು ಉಳಿಸಿ, ಹೊಸತನ ಹೇಗೆ ಸಾಧ್ಯವೆಂಬ ಬಗ್ಗೆ ಚಿಂತನೆ ಸಾಕಷ್ಟು ನಡೆದಿಲ್ಲ,