ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೮ / ಪ್ರಸ್ತುತ

ಫ್ಯಾಶನಿನ ಅನಿವಾರ್ಯತೆ ಇಲ್ಲ. ಪರಂಪರೆಯನ್ನು ಉಳಿಸುವ ಅವಕಾಶ ಹೆಚ್ಚು ಇದೆ. ಆದರೇನು? ಅಲ್ಲಿನ ಪರಿಸ್ಥಿತಿಯೂ ಆಶಾದಾಯಕವಾಗಿಲ್ಲ. ನಾಟಕ ವೇಷಗಳು, ಕ್ಯಾಲೆಂಡರ್ ಚಿತ್ರ ಮಾದರಿಗಳು ಅಲ್ಲಿಗೂ ನುಗ್ಗಿ ವೆ. ಬ್ಯಾಂಡುವಾದ್ಯ, ಬಾಣ ಬಿರುಸುಗಳ ಗದ್ದಲದಲ್ಲಿ ಆಟಗಳು ಜಾತ್ರೆಗಳಾಗಿವೆ. ಹಣದ ಪ್ರದರ್ಶನ ಕಾಣುತ್ತದೆ, ಕಲೆಯದಲ್ಲ. ಸ್ವಾರಸ್ಯಕ್ಕಿಂತಲೂ ಸಂಭ್ರಮಕ್ಕೆ, ಹರಕೆ ಹೊತ್ತವರು ಮಹತ್ವ ನೀಡುತ್ತಾರೆ. ಆದರೂ, ಯಕ್ಷಗಾನದ ಮೂಲ ಸೌಂದರ್ಯದ ರಕ್ಷಣೆಯ ಆಸೆ ಬಯಲಾಟಗಳಲ್ಲಿ ಇದೆ. ನಾವು ಇನ್ನೂ ಹೊಂದಬಹುದು.

ಕಲಾವಿದ: ಸುಲಭದ ಯಶಸ್ಸು
ಒಂದೇ ಸಮನೆ ಹೆಚ್ಚುತ್ತಿರುವ ಮೇಳಗಳ ಸಂಖ್ಯೆಗೆ ಸರಿಯಾಗಿ ಕಲಾವಿದರ ಸಂಖ್ಯೆ ಏರುವುದಿಲ್ಲವಷ್ಟೆ. ಉತ್ತಮ ಕಲಾವಿದನೊಬ್ಬನ ತಯಾರಿ ಸುಲಭವೂ ಅಲ್ಲ. ಹಾಗಾಗಿ ಇರುವ ಕಲಾವಿದರೇ ಮೇಳಗಳಲ್ಲಿ ಹಂಚಿಹೋಗಿದ್ದಾರೆ. ಆರನೆಯ, ಎಂಟನೆಯ ಸ್ಥಾನದ ಕಲಾವಿದರು, ಒಂದನೇ ಸ್ಥಾನವನ್ನು ತುಂಬುತ್ತಿದ್ದಾರೆ. ಕೆಲವೊಂದು ಪಾತ್ರಗಳ ಪಡಿಯಚ್ಚಿನಿಂದ, ಅವನು ಯಶಸ್ಸನ್ನೂ ಪಡೆಯುತ್ತಾನೆ. ಯಕ್ಷಗಾನದ ಸರಿಯಾದ ಪರಿಜ್ಞಾನಕ್ಕಿಂತ, ಸುಲಭದ ಭ್ರಾಮಕ ಯಶಸ್ಸಿನ ತಾರಾಮೌಲ್ಯದಿಂದ, ಕಲಾವಿದನೂ ಅಭ್ಯಾಸವನ್ನು ಕಡೆಗಣಿಸುತ್ತಾನೆ. ಸೃಷ್ಟಿಶೀಲ ಪ್ರತಿಭೆ ಕಡಿಮೆ ಯಾಗಿ, ಅನುಕರಣ ಪ್ರತಿಭೆ ಹೆಚ್ಚುತ್ತಿದೆ. ಅನಭ್ಯಾಸ, ಅನುಕರಣೆ, ಸುಲಭ ಕೀರ್ತಿಗಳು ಕಲಾವಿದರ ಬೆಳವಣಿಗೆಗೆ ಪ್ರತಿಕೂಲಗಳಾಗಿ ನಿಂತಿವೆ.

ಹವ್ಯಾಸಿಗಳ ಸಮಸ್ಯೆ
ಹವ್ಯಾಸಿ ರಂಗಭೂಮಿ ಚೆನ್ನಾಗಿ ಬೆಳೆದಾಗ, ಅದು ವ್ಯವಸಾಯ ರಂಗ ಭೂಮಿಗೆ ಹೊಸ ತಿರುವು ನೀಡಬಲ್ಲುದು, ಆದರ್ಶ ಹಾಕಿಕೊಡಬಹುದು. ಯಕ್ಷಗಾನದಲ್ಲಿ ಮುನ್ನೂರಕ್ಕೂ ಮಿಕ್ಕ ಹವ್ಯಾಸಿ ತಂಡಗಳು ಇದ್ದು, ಹವ್ಯಾಸಿ ಚಟುವಟಿಕೆಗಳು ಬಹಳ ಭರದಲ್ಲೂ ಉತ್ಸಾಹದಲ್ಲೂ ನಡೆದಿವೆ. ಸಾಕಷ್ಟು ಪ್ರತಿಭಾವಂತರಾದ ಕಲಾವಿದರೂ ಇದ್ದಾರೆ. ಆದರೆ, ಹವ್ಯಾಸಿ ಯಕ್ಷಗಾನ ಪ್ರದರ್ಶನಗಳು, ವ್ಯವಸಾಯಿ ಕಲಾವಿದರ ಕೆಟ್ಟ ಅನುಕರಣೆಗಳಾಗಿರುವುದೇ ಹೆಚ್ಚು. ಹವ್ಯಾಸಿಗಳಲ್ಲಿ ಸ್ವಂತ ವೇಷ ಭೂಷಣಗಳು ಇಲ್ಲದಿರುವುದರಿಂದ, ಬಾಡಿಗೆಗೆ ತರಬೇಕಾದುದು ಅನಿವಾರ, ಲಭ್ಯವಿರುವ ವೇಷ ಸಾಮಗ್ರಿ, ಮುಖ್ಯವಾಗಿ ತೆಂಕುತಿಟ್ಟಿನಲ್ಲಿ ಅದೇ ಗೊಂದಲದ ಕಂತೆಯಾಗಿದೆ. ಉತ್ತಮ ಹಿಮ್ಮೇಳ ಕಲಾವಿದರ ಕೊರತೆಯೂ ಇದೆ. ವ್ಯವಸಾಯಿ ಕಲಾವಿದರಿಂದ ಯಾವುದನ್ನು ಅನುಕರಿಸಬಾರದೊ, ಅದನ್ನೆ ಹವ್ಯಾಸಿಗಳು ಅನುಕರಿಸುತ್ತಾರೆ. ಗುಣಮಟ್ಟ, ವ್ಯವಸ್ಥೆಗಳ ದೃಷ್ಟಿಯಲ್ಲಿ ನಾವು ಹವ್ಯಾಸಿಗಳಲ್ಲಿ ವ್ಯವಸಾಯಿಗಳ ಮಟ್ಟವನ್ನು ನಿರೀಕ್ಷಿಸಬಾರದು ನಿಜ. ಆದರೆ, ಹವ್ಯಾಸಿಗಳಿಗೆ ಹಣಗಳಿಕೆಯ,