ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ರಂಗಭೂಮಿಯ ಸಮಸ್ಯೆಗಳು / ೨೯

ಹಣ ಗಳಿಕೆಯ, ವಾಣಿಜ್ಯ ಯಶಸ್ಸಿನ ಬಂಧನವಿಲ್ಲ. ಕಲಾದೃಷ್ಟಿಯಿಂದ ವ್ಯವಹರಿಸಲು ಸಾಧ್ಯವಿದೆ. ಆದರೆ, ಉತ್ಸಾಹವೇ ಅವರ ಬಂಡವಾಳ, ಪರಿಶ್ರಮ ಕಡಿಮೆ. ನೇತೃತ್ವದ ಅಭಾವವೂ ಇದೆ.

ಕಲಾವಿದ, ಸಿಬಂದಿಗಳ ಸಮಸ್ಯೆ
ಯಕ್ಷಗಾನ ಕಲಾವಿದನ ಗಳಿಕೆಯ ಸ್ಥಾನಮಾನವೂ ಒಂದಿಷ್ಟು ಸುಧಾರಿಸಿರುವುದು ನಿಜವಾದರೂ ಅವನ ಸಮಸ್ಯೆಗಳು ಹಲವಾರು, ದಿನನಿತ್ಯ ನಿದ್ದೆಗೆಡುತ್ತ, ಇನ್ನೂರು ದಿನಗಳಿಗೂ ಮಿಕ್ಕಿದ ಸತತ ಸಂಚಾರದ ಗಡಿಬಿಡಿಯ ಬದುಕು ಕಲಾವಿದನದು. ತುಂಬ ಕಠಿನವಾದ ಉದ್ಯೋಗ, ದೃಢವಾದ ಆರೋಗ್ಯವನ್ನು ಬಯಸುವಂತಹದು. ಸಂಚಾರದ ಮತ್ತು ನಿದ್ದೆ ಗೆಡುವ ಅವ್ಯವಸ್ಥೆಯ, ಅನಾರೋಗ್ಯದ, ಪ್ರಯಾಸದ ಜೀವನ, ಮಳೆಗಾಲದಲ್ಲೂ ವ್ಯವಸಾಯಕ್ಕೆ ಅವಕಾಶ, ತಿರುಗಾಟದ ಆಯಾಸದಲ್ಲಿ ಅಭ್ಯಾಸ ಅಧ್ಯಯನಗಳು ದೂರ ಉಳಿಯುತ್ತವೆ. ಹೆಚ್ಚು ಸಂಬಳದ ಲಾಭ ಕೆಲವೇ ಕೆಲವು ಕಲಾವಿದರಿಗೆ ಸಿಕ್ಕಿದ್ದು, ಬಹುಸಂಖ್ಯ ಕಲಾವಿದರ ಸ್ಥಿತಿ ಚೆನ್ನಾಗಿಲ್ಲ. ಬೆಲೆಗಳು ಏರುತ್ತಿವೆ. ಹಲವು ಹಿರಿಯ ಕಲಾವಿದರ ಗಳಿಕೆ ಈಗಲೂ, ಕೂಲಿಯಾಳುಗಳ ಗಳಿಕೆಗಿಂತ ಕಡಿಮೆ ಇದೆ. ಕಲಾವಿದನಿಗೆ ಕಲೆಯ ಹುಚ್ಚು ಇರುವುದರಿಂದಲೂ, ಬೇರೆ ಉದ್ಯೋಗ ಬಾರದಿರುವುದರಿಂದಲೂ, ಇದರಲ್ಲಿ ಹಲವರು ಉಳಿದಿರುವ ಪರಿಸ್ಥಿತಿ ಇದೆ. ಜ್ಯೇಷ್ಠತೆಗೆ ಅನುಸರಿಸಿದ, ಯೋಗ್ಯತೆಗೆ ತಕ್ಕುದಾದ ತರ್ಕಶುದ್ಧ ಸಂಬಳಗಳ ಸರಣಿ (gradation scale) ಹೆಚ್ಚುವರಿ ಪ್ರಯಾಣ ಭತ್ತೆ, ನಿವೃತ್ತಿಯ ನಂತರ ತುಂಬ ಅಭದ್ರವಾಗುವ ಬದುಕಿಗೆ ಆಸರೆಯಾಗಬಲ್ಲ ನಿವೃತ್ತಿ ವೇತನ, ಪ್ರಾವಿಡೆಂಟ್ ಫಂಡ್, ಗ್ರಾಚ್ಯುಯಿಟಿಗಳಂತಹ ಏನಾದರೂ ಏರ್ಪಾಡು ಆಗಬೇಕಾಗಿದೆ.

ಮೇಳಗಳ ಮಾಲೀಕರ ಸಮಸ್ಯೆಗಳು: ಯಜಮಾನಿಕೆಯ ಗೋಳು
ಮೇಳಗಳ ಮಾಲೀಕರು, ವ್ಯವಸ್ಥಾಪಕರನ್ನು ವಿಚಾರಿಸಿದರೆ ಇನ್ನೊಂದು ಚಿತ್ರವೇ ಸಿಗುತ್ತದೆ. (ಮೇಳದ ವ್ಯವಸ್ಥಾಪಕನಿಗೆ ಯಕ್ಷಗಾನ ಪರಿಭಾಷೆಯಲ್ಲಿ ಯಜಮಾನನೆನ್ನುವರು) ಹೆಚ್ಚಿನ ಮೇಳಗಳು ಆರ್ಥಿಕವಾಗಿ ಭದ್ರವಾಗಿಲ್ಲವೆಂದೂ, ಸಾಲಸೋಲಗಳಲ್ಲಿ ಇವೆಯೆಂದೂ ಹೇಳಲಾಗಿದೆ. ಕಲಾವಿದರಲ್ಲಿ ಶಿಸ್ತು ಇಲ್ಲವೆಂದೂ, ಪ್ರಮುಖ ಕಲಾವಿದರು ಅರ್ಹತೆ ಮೀರಿದ, ಸಂಬಳಗಳ, ಮುಂಗಡ ಹಣದ, ಸಾಲದ ಬೇಡಿಕೆ ಮಂಡಿಸುತ್ತಾರೆಂದೂ ಯಜಮಾನರು ಹೇಳುತ್ತಾರೆ. ಕೊಟ್ಟ ಸಾಲಗಳು ಹಿಂದೆ ಬಾರದಿರುವ ಸಂದರ್ಭಗಳು ಹಲವು. ಸುಸಜ್ಜಿತ ಮೇಳವೊಂದಕ್ಕೆ ಇಂದು ಮೂರರಿಂದ ಆರು ಲಕ್ಷದ ವರೆಗಿನ ಬಂಡವಾಳ ಬೇಕು. ಚಿಕ್ಕ ಮೇಳ, ಬಯಲಾಟದ ಮೇಳವಾದರೂ, ಒಂದರಿಂದ ಎರಡು ಲಕ್ಷಗಳು ಬೇಕಾದೀತು. ಇದರ ಬಡ್ಡಿ,