ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೦ / ಪ್ರಸ್ತುತ

ಸಾಮಗ್ರಿ ಸವಕಳಿ, ಸಾಗಾಣಿಕೆ ಖರ್ಚು, ಕಲಾವಿದ ಸಿಬಂದಿಗಳ ವೆಚ್ಚ, ಇವೆಲ್ಲ ದೊಡ್ಡ ಹೊರೆ, ದಿನನಿತ್ಯ ತಿರುಗಾಟದ ವ್ಯವಸ್ಥೆ, ಆಗಾಗ ಬರುವ ರಿಪೇರಿಗಳ ನಿಭಾವಣೆ, ಲೈಸೆನ್ಸ್, ಕ್ಯಾಂಪ್‌ಗಳ ನಿಶ್ಚಯ, ಸಂಪರ್ಕ ವ್ಯವಸ್ಥೆ, ಇವೆಲ್ಲ ತಲೆನೋವಿನ ಕೆಲಸಗಳು. ಕಲಾವಿದರ, ಸಿಬಂದಿಗಳ ನಿಯಂತ್ರಣ ಸುಲಭದ ಕೆಲಸವಲ್ಲ. ಚಿಲ್ಲರೆ ಖರ್ಚುಗಳೂ ಬಹಳ. ನಿತ್ಯ ನಿತ್ಯ ಊರಿಂದೂರಿಗೆ ಮಾಯಾಬಜಾರವೊಂದನ್ನು ಕಟ್ಟಿ, ಓಡಿಸಿ, ಸಾಗಿಸಿ ಎಲ್ಲವನ್ನೂ ಸುಸೂತ್ರವಾಗಿ ನಿರ್ವಹಿಸುವ ಜವಾಬ್ದಾರಿ - ಇಷ್ಟನ್ನೆಲ್ಲ ತೂಗಿಸಿಕೊಳ್ಳುವ ಯಜಮಾನನಿಗೆ ಅಸಾಧಾರಣವಾದ ಆಡಳಿತ ಸಾಮರ್ಥ್ಯ, ತಾಳ್ಮೆ, ನೇತೃತ್ವದ ಗುಣಗಳು ಬೇಕು. ಮೇಳಗಳ ಆರ್ಥಿಕತೆ ಭದ್ರವಾಗಿಲ್ಲ ಎಂದು ಯಜಮಾನರುಗಳ ಅಭಿಪ್ರಾಯ.
ಹಾಗಾದರೆ, ವರ್ಷದಿಂದ ವರ್ಷಕ್ಕೆ ಮೇಳಗಳ ಸಂಖ್ಯೆ ಹೆಚ್ಚುತ್ತಿರುವುದು ಹೇಗೆ, ಮತ್ತು ನಷ್ಟವೇ ನಿಜವಾದರೆ, ಯಕ್ಷಗಾನ ಮೇಳವನ್ನು ನಡೆಸುವ ಅನಿವಾರ್ಯತೆ ಏನು, ಎಂಬ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗುವುದಿಲ್ಲ. ಮೇಲಾಗಿ, ಹರಕೆ ಬಯಲಾಟಗಳ ಮೇಳಗಳ ಗಳಿಕೆ ತುಂಬ ಚೆನ್ನಾಗಿಯೇ ಇದೆ. ವ್ಯಾಪಾರಿ ಯಶಸ್ಸಿನೊಂದಿಗೆ, ಕಲೆಯ ಅಂದ ಚೆಂದಗಳನ್ನು ಉಳಿಸುವ ಹೊಣೆ ಯಜಮಾನರುಗಳಿಗಿದೆ. ನೂರಾರು ವರ್ಷಗಳಿಂದ ಬೆಳೆದ ಒಂದು ಶ್ರೀಮಂತ ಕಲಾಸಂಪತ್ತನ್ನು ರಕ್ಷಿಸುವ ದೊಡ್ಡ ನೈತಿಕ ಜವಾಬ್ದಾರಿ, ಯಜಮಾನನ ನೈತಿಕ ಹೊಣೆಯಾಗಿದೆ.

ಮುಖಾಮುಖಿಯ ಸಮಸ್ಯೆ
ಸಾಹಿತ್ಯ, ಕಲೆ, ಸಾಂಸ್ಕೃತಿಕ ಬೆಳವಣಿಗೆಗಳಿಗೆ, ಹೊಸ ಹೊಸ ಮಾದರಿಗಳ, ಪ್ರವೃತ್ತಿಗಳ, ಸಂದರ್ಭಗಳ ಮುಖಾಮುಖಿ ಒದಗಿದಾಗ, ಅದರಲ್ಲಿ ಹೊಸ ಸೃಷ್ಟಿ ಆಗುತ್ತದೆ. ಹಾಗಾಗಬೇಕಾದರೆ, ದೊರಕುವ ಮುಖಾಮುಖಿಯು, ಉತ್ತಮ ಮಟ್ಟದ್ದು ಆಗಿರಬೇಕು. ಯಕ್ಷಗಾನರಂಗ ಈ ದೃಷ್ಟಿಯಿಂದ ಅದೃಷ್ಟಶಾಲಿಯಲ್ಲ. ಯಕ್ಷಗಾನ ಕಲಾವಿದ ಕಾಣುವ ಮುಖಾಮುಖಿ, ಜನಪ್ರಿಯ ಸಿನಿಮಾಗಳ ಜತೆ, ಸಾಮಾನ್ಯ ನಾಟಕಗಳ ಜತೆ, ಜನಪ್ರಿಯ ಚಿತ್ರಗಳ ಜತೆ -ಇದರಿಂದ ಪಡದ ಸ್ಪೂರ್ತಿ ಅವನಿಗೆ ಯಾವದೇ ಹೊಸ ಸೃಷ್ಟಿಗೆ ಕಾರಣವಾಗದೆ, ಮತ್ತಷ್ಟು ಅಪಕರ್ಷಕ್ಕೆ ದಾರಿ ಮಾಡಿಕೊಡುತ್ತದೆ.
ಯಕ್ಷಗಾನ ಶೈಲಿ ಸ್ವಯಂ ಸಂಪೂರ್ಣವೇನೂ ಅಲ್ಲ. ಹಲವು ಪಾತ್ರಗಳಿಗೆ ವೇಷಗಳ ನಿರ್ಣಯವಿಲ್ಲ. ನೃತ್ಯದಲ್ಲಿ ಅಭಿವ್ಯಕ್ತಿ ನಾಜೂಕಾಗಲು ಅವಕಾಶವಿದೆ. ಹಾಡುಗಾರಿಕೆಯಲ್ಲೂ ವ್ಯವಸ್ಥೆ ತರಬೇಕಾಗಿದೆ. ಹೊಸ ಆಶಯ, ಹೊಸ ಅಭಿಪ್ರಾಯಗಳನ್ನು, ಜೀವನಪರವಾದ ಸಂದೇಶಗಳನ್ನು ಕಥಾವಸ್ತುವಿಗೆ ತರುವ ಅಗತ್ಯವಿದೆ. ಹೊಸ ಸಾಮಾಜಿಕ, ಕಲಾತ್ಮಕ ಸಂದರ್ಭಗಳೊಂದಿಗೆ ಸಂಘರ್ಷಿಸಿ, ಅದು ಹೊಸ ತಿರುಳನ್ನು ಪಡೆಯಬೇಕಾಗಿದೆ. ಪ್ರಯೋಗ ಭೂಮಿ ವಿಶಾಲವಾಗಿದೆ.