ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ರಂಗಭೂಮಿಯ ಸಮಸ್ಯೆಗಳು / ೩೧


ತಾಳಮದ್ದಳೆ

ತಾಳಮದ್ದಳೆಯ ರಂಗದಲ್ಲಿ ಸಂಪ್ರದಾಯದ ಸಮಸ್ಯೆಗಳು ಕಡಿಮೆ. ಅದ ರಲ್ಲಿ ವೇಷ, ನೃತ್ಯಗಳಿಲ್ಲದಿರುವುದೂ, ಹೊಸ ಪ್ರಸಂಗಗಳ ಸಮಸ್ಯೆ ಇಲ್ಲದಿರುವುದೂ ಇದಕ್ಕೆ ಕಾರಣ. ಅದು ವೃತ್ತಿಪರ ಕಲೆಯಾಗಿಲ್ಲ. ವಾಣಿಜ್ಯ ಪರ ಸಮಸ್ಯೆಗಳು ಇಲ್ಲಿ ಇಲ್ಲ. ಆದರೂ, ಈ ಕ್ಷೇತ್ರದಲ್ಲಿ ಲಭ್ಯವಿರುವ ಪ್ರತಿಭೆಯ ಮಟ್ಟದ ಉತ್ಕೃಷ್ಟ ಪ್ರದರ್ಶನಗಳು ಏಷ್ಟೋ ಬಾರಿ ಸಾಧ್ಯವಾಗುವುದಿಲ್ಲ. ಮಾತುಗಾರಿಕೆಯೂ, ತರ್ಕ ಅತಿಯಾಗಿ ಬೆಳೆದು, ರಸಾಭಿವ್ಯಕ್ತಿ, ನಾಟಕೀಯ ಅಚ್ಚು ಕಟ್ಟುಗಳಿಗೆ ತೊಡಕಾಗಿದೆ. ಸಮಯದ ಹೊಂದಾಣಿಕೆ, ಹಿಮ್ಮೇಳದ ಪರಿಣಾಮಕಾರಿ ಬಳಕೆಗಳಲ್ಲಿ ಪರಿಷ್ಕಾರ ವಾಗಬೇಕು. ಹೊಸ ವಸ್ತುಗಳ ಬಳಕೆಗೂ, ಇಲ್ಲಿ ಹೆಚ್ಚು ಮುಕ್ತವಾದ ಅವಕಾಶ ವಿದೆ.

ಸಮನ್ವಯದ ಸವಾಲು

ಯಕ್ಷಗಾನ ರಂಗದ ಸಮಸ್ಯೆಗಳನ್ನೆಲ್ಲ ಒಟ್ಟಾಗಿ ಹೇಳುವುದಾದರೆ ಸಮನ್ವ ಯದ ಸವಾಲುಗಳು ಎಂದು ಗುರುತಿಸಬಹುದು. ಹಳತು ಹೊಸತುಗಳ ಸಮನ್ವಯ, ಪ್ರತಿಭೆ-ವ್ಯವಸ್ಥೆಗಳ ಸಮನ್ವಯ, ಸಂಪ್ರದಾಯದ `ರೂಪ'ಕ್ಕೆ ಹೊಸ ಆವಿಷ್ಕಾರ ಗಳನ್ನು ಹೊಂದಿಸುವ ಕೆಲಸ, ವಸ್ತು ರೂಪಗಳ ಹೊಂದಿಕೆ ಆಗಬೇಕಾಗಿದೆ. ಬದಲಾಗುತ್ತಿರುವ ಆರ್ಥಿಕ ಸಾಮಾಜಿಕ ಸಂಬಂಧಗಳ ಮಧ್ಯೆ, ಹೊಸ ಕಲಾರೂಪಗಳ ನಡುವೆ, ಹೊಸ ಸಾಮಾಜಿಕ ಮೌಲ್ಯಾದರ್ಶಗಳ ಎಡೆಯಲ್ಲಿ ಹಳೆಯ, ಅವಾಸ್ತವ ಸ್ವರೂಪದ ಕಲೆಯನ್ನು ಬೆಳೆಸುವ ಸಮಸ್ಯೆ ಇದೆ. ವಾಣಿಜ್ಯ ಮತ್ತು ಕಲೆಗಳ ಸಮನ್ವಯ ಸಾಧಿತವಾಗಬೇಕಾಗಿದೆ. ಪ್ರತಿಭೆ ಔಚಿತ್ಯಗಳ ಹೊಂದಿಕೆ, ಹೊಸ ಸಮತೋಲ ಸಾಧಿತವಾಗಬೇಕಾಗಿದೆ. ಹೊಸ ಪ್ರಭಾವಗಳನ್ನು ಯಕ್ಷಗಾನ ಅರಗಿಸಿ ಕೊಳ್ಳಬೇಕಾಗಿದೆ. ರೂಪವನ್ನುಳಿಸಿ ನೂತನ ಪ್ರಯೋಗದತ್ತ ತುಡಿಯಬೇಕಿದೆ. ಕಲೆಯ ಅಭಿವೃದ್ಧಿಯ ಜತೆ, ಕಲಾವಿದನ ಹಿತರಕ್ಷಣೆಯೂ ಆಗುವುದು ಮುಖ್ಯ.

ಈ ಸಮನ್ವಯದ ಹದವನ್ನು ಯಕ್ಷಗಾನ ಹೇಗೆ ಕಂಡುಕೊಳ್ಳುತ್ತದೆ ಎಂಬುದನ್ನು ಅವಲಂಭಿಸಿದೆ, ಅದರ ಮುಂದಿನ ಗತಿ, ವಿಗತಿ, ಪ್ರಗತಿ.


ಮುಂಡಾಜೆ (ಬೆಳ್ತಂಗಡಿ ತಾಲೂಕು) ಶತಾಬ್ದ ವಿದ್ಯಾಲಯದಲ್ಲಿ ಜರಗಿದ ವಿಚಾರಗೋಷ್ಠಿ ಯಲ್ಲಿ ಮಾಡಿದ ಉಪನ್ಯಾಸ (೨೫-೧೧-೧೯೮೮)