ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸೈದ್ಧಾಂತಿಕ ಖಚಿತತೆಯ ಆವಶ್ಯಕತೆ / ೩೩


ಒಟ್ಟು ಯಕ್ಷಗಾನ ಕಲೆಯನ್ನು ಅಥವಾ ಒಂದು ಪ್ರದರ್ಶನವನ್ನು ನೋಡುವಾಗ, ನಾವು ಗಮನಿಸಲೇಬೇಕಾದ ವಿಷಯವೊಂದಿದೆ. ಅದೆಂದರೆ, ಇದು ಯಕ್ಷಗಾನದ ಆಟ, ಇದು ಒಂದು ವಿಶಿಷ್ಟವಾದ ರೂಪವುಳ್ಳ, ಲಕ್ಷಣಗಳುಳ್ಳ ಕಲೆ, ನಾವು ನೋಡುತಿರುವುದು ಒಂದು ಶೈಲಿಗೆ ಸಂಬಂಧಿಸಿದ ರಂಗಪ್ರಕಾರ, ಎಂಬ ನೆನಪು ನಮಗೆ ಸದಾ ಜಾಗೃತವಾಗಿರಬೇಕು. ಅರ್ಥಾತ್, ಅದು ನಮ್ಮ ಮನಸ್ಸಿನಲ್ಲಿ ಪೂರ್ವಭಾವಿಯಾಗಿಯೇ ಇರಬೇಕಾದ ಮಾನಸಿಕ ಸಿದ್ಧತೆ. ಅದೇ ಆಟ, ಕೂಟಗಳನ್ನು ನೋಡುವವನಿಗಿರಬೇಕಾದ ಅರ್ಹತೆ ಕೂಡ ಹೌದು. ಇಂತಹ ತಿಳುವಳಿಕೆ ಇದ್ದಾಗ, ಸಹೃದಯತೆ ಸಾರ್ಥಕವಾಗುತ್ತದೆ. ಗೊಂದಲ ಇರುವುದಿಲ್ಲ. ಅಂದರೆ, 'ಇದು ಯಕ್ಷಗಾನ ಪ್ರದರ್ಶನ' ಎಂಬ ಅರಿವಿನ ಅಡಿಪಾಯದಿಂದ, ವಿಮರ್ಶೆಯನ್ನು ನಿರಾಕರಿಸಿ, ಎಲ್ಲವನ್ನೂ ಒಪ್ಪಬೇಕೆಂದಲ್ಲ. ನಮ್ಮ ನೋಡುವಿಕೆಯೆಂಬುದು, ಯಕ್ಷಗಾನ ಪ್ರಜ್ಞೆಯಿಂದ ಕೂಡಿರಬೇಕು. ನಾವು ಭಾವಿಸುವ ಸರಿ, ತಪ್ಪುಗಳು, ಔಚಿತ್ಯ, ಅನೌಚಿತ್ಯಗಳು, ಯಕ್ಷಗಾನ ಕಲೆಯ ಸ್ವರೂಪದ ಅರಿವಿನಿಂದ ಸ್ಪುಟಗೊಂಡವುಗಳಾಗಿರಬೇಕು. ಆಗ ನಾವು ಕಲಾರಸಿಕರಾಗಿ ಪಡೆದ ಅನುಭವಗಳೂ, ನಮ್ಮ ತೀರ್ಮಾನಗಳೂ ಅರ್ಥವತ್ತಾಗಿರುತ್ತವೆ. ಇಲ್ಲವಾದರೆ, ನಮ್ಮ ಅನಿಸಿಕೆಗಳು, ಎಷ್ಟೇ ಅಧ್ಯಯನ, ಜಾಣತನಗಳಿಂದ ಕೂಡಿದ್ದರೂ, ಯುಕ್ತವಾಗುವುದಿಲ್ಲ. ಒಂದು ಚಿಕ್ಕ ದೃಷ್ಟಾಂತವನ್ನು ಹೇಳುವುದಾದರೆ, ಯಕ್ಷಗಾನ ಕಲಾ ಸ್ವರೂಪದ ಒಟ್ಟು ಗ್ರಹಿಕೆ ಇದ್ದಾಗ, “ಶಿವನ ವೇಷಕ್ಕೆ ಕೈಕಟ್ಟು, ಸೊಂಟಪಟ್ಟಿ, ಅಂಗಿಗಳು ಯಾಕೆ?” “ಭೀಮನ ವೇಷದ ಬಣ್ಣ ಹೇಗೆ?” ಎಂಬಂತಹ ಪ್ರಶ್ನೆಗಳೇ ಅಲ್ಲಿ ಬರುವುದಿಲ್ಲ. ಯಕ್ಷಗಾನದ ಬಿಂಬಸೃಷ್ಟಿಯು, ಪ್ರತೀಕಾತ್ಮಕವೂ, ಸಾಂಕೇತಿಕವೂ, ರಮ್ಯಾದ್ಭುತ ಶೈಲಿ ಪ್ರಕಾರದ್ದೂ ನೃತ್ಯರಂಗ ಭೂಮಿಗೆ ಹೊಂದುವಂತಹದೂ ಆಗಿರಬೇಕೆಂಬ ಮೂಲಸೂತ್ರವು, ಆ ಪ್ರಶ್ನೆಗಳನ್ನು ತಾನಾಗಿ ಪರಿಹರಿಸುತ್ತದೆ. ಕಲೆಯ ಸೈದ್ಧಾಂತಿಕವಾದ ಅಡಿ ಬುಡಗಳನ್ನು ಪರಿಭಾವಿಸಿದರೆ ಮಾತ್ರ ಇದು ಸಾಧ್ಯ.

ಕಿರೀಟ, ವೇಷ ಭೂಷಣಗಳನ್ನು ತೊಟ್ಟ ಪರಶುರಾಮನ ವೇಷವನ್ನು ಕಂಡವರೊಬ್ಬರು, ಆ ವೇಷಧಾರಿಯಲ್ಲಿ ಪರಶುರಾಮನು ಋಷಿ, ಅವನಿಗೆ ಕಿರೀಟ ವೆಲ್ಲಿಂದ? ಎಂದಾಗ, “ಇವನು ನಮ್ಮ ಆಟದ (ಯಕ್ಷಗಾನದ) ಪರಶುರಾಮ. ನೀವು ಹೇಳುವ ಪರಶುರಾಮ ಬೇರೆ.” ಎಂದುತ್ತರಿಸಿದರಂತೆ. ಈ ಉತ್ತರ ತೋರಿಕೆಗೆ, ವಕ್ರವೆಂಬಂತೆ ಕಂಡರೂ, ಇದು ಸೈದ್ಧಾಂತಿಕವಾಗಿ ಸರಿಯಾದ ಮಾತು. ಈ ಅರಿವಿನ ಮೂಲಕವೇ ಯಕ್ಷಗಾನದ ಅಭಿವ್ಯಕ್ತಿ ಕಲ್ಪನೆಯನ್ನು ಪರಿಶೀಲಿಸಬೇಕು.

“ಇದು ಯಕ್ಷಗಾನ, ಹಾಗಾಗಿ, ಅದನ್ನು ಅದು ಇದ್ದಂತೆಯೇ ಒಪ್ಪಿಕೊಳ್ಳಿ' ಎಂದು ಒತ್ತಾಯದ ಒಪ್ಪಿಗೆಯನ್ನು ಹೇರುವುದು, ಈ ಸೈದ್ಧಾಂತಿಕ ವಾದದ ಉದ್ದೇಶವಲ್ಲ. ಬದಲಾಗಿ, ಈ ರಂಗಭೂಮಿ ಏನು, ಇದರ ಸ್ವರೂಪ ಸ್ವಭಾವ