ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೪ / ಪ್ರಸ್ತುತ


ಗಳೇನು, ಅದರ ಚೌಕಟ್ಟಿನ ಸಾಧ್ಯತೆಗಳು, ರೀತಿಗಳು ಏನು ಎಂಬುದನ್ನು ಅರಿಯುವ ಸೂತ್ರವಿದು. ಯಕ್ಷಗಾನದ ಸ್ವರೂಪದಲ್ಲಿ ಸಮಸ್ಯೆಗಳಾಗಲಿ, ಪ್ರಶ್ನೆಗಳಾಗಲಿ ಇಲ್ಲವೆಂದಲ್ಲ. ಅಂತಹ ಸಮಸ್ಯೆಗಳಿಗೆ ನಾವು ಕಂಡುಕೊಳ್ಳುವ ಉತ್ತರವು 'ಯಕ್ಷಗಾನೀಯವಾದುದಾಗಿರಬೇಕು, ಅರ್ಥಾತ್, ಇದರ ಒಟ್ಟು ರೂಪರೇಖೆಯೊಳಗೆ ಸಂಗತವಾಗಬೇಕು. ಮಾಡುವ ಬದಲಾವಣೆಯೋ, ಪ್ರಯೋಗವೊ, ನಾವೀನ್ಯವೋ ಒಟ್ಟಾಗಿ ಯಕ್ಷಗಾನಕ್ಕೆ ಹೊಂದಿಕೆಯಾಗಬೇಕು.

ಮೊದಲು ಹೇಳಿದ ದೃಷ್ಟಾಂತವನ್ನೆ ತೆಗೆದುಕೊಳ್ಳೋಣ. ಪರಶುರಾಮನ ವೇಷವು ಪರಂಪರೆಯಂತೆ, ವೇಷ, ಸಾಮಗ್ರಿ ಸಹಿತ 'ಇಡಿವೇಷ'ವೇ ಹೊರತು ಋಷಿವೇಷವಲ್ಲ. ಅವನು ಕ್ಷತ್ರಿಯ ಸಂಹಾರಕನಾದ, ಕ್ಷಾತ್ರ ಸ್ವಭಾವದ ವ್ಯಕ್ತಿಯೆಂಬುದಕ್ಕೆ ಸಾಂಕೇತಿಕವಾಗಿ ಚಿತ್ರಿಸಲಾಗಿದೆ. ಇದು ಒಟ್ಟಿನಲ್ಲಿ ಸರಿಯಾಗಿಯೇ ಇದೆ. ಇದೇ ಕಲ್ಪನೆಯನ್ನು, ಪರಶುರಾಮನ ವಯೋಮಾನಕ್ಕನುಸರಿಸಿ, ತುಸು ಬದಲಾಯಿಸುವುದಾದರೆ, ಕಾರ್ತವೀರ್ಯಾರ್ಜುನ ಕಾಳಗದಲ್ಲಿ ಆತನನ್ನು ಕಿರೀಟ, ಮೀಸೆ ಇರುವ ರಾಜವೇಷದ ಬದಲು, ಪಗಡಿ ಇಟ್ಟ 'ಪುಂಡುವೇಷ'ವಾಗಿ ತರಬಹುದು. ಇದೊಂದು ಉದಾಹರಣೆ ಮಾತ್ರ. ಬದಲಾವಣೆಯೆಂಬುದು ಇದ್ದರೆ, ಬೇಕು ಅನಿಸಿದರೆ, ಅದು 'ಯಕ್ಷಗಾನೀಯವಾಗಿ' ಸಮರ್ಥನೀಯವಾಗಿರಬೇಕು. ಪ್ರತ್ಯೇಕವಾದ ಒಂದು ವೇಷ ಸೃಷ್ಟಿಯೂ, ಹಾಗೆಯೇ. ಅದು ಯಕ್ಷಗಾನದ ಚಿತ್ರ ಶಿಲ್ಪವನ್ನು ಅಭ್ಯಸಿಸಿ, ರಚಿಸಿದ್ದಾಗಬೇಕು. ಆಗ ಅದು, ವಿಸ್ತರಣವಾಗಿ ಕಾಣುತ್ತದೆ. ಬದಲಾಗಿ, ಯಾವುದೋ ಒಂದು ಮಾದರಿಯನ್ನು ತಂದು ತುರುಕಿದರೆ, ಅದೊಂದು ಬಿರುಕಾಗಿ, ಒಂದು ವಿಕೃತಿಯಾಗಿ ಕಾಣುತ್ತದೆ.

ಯಕ್ಷಗಾನ ಪ್ರದರ್ಶನದಲ್ಲಿ ಬರುವ 'ದೇವರುಗಳ' ವೇಷಗಳಲ್ಲಿ ಒಂದು ಗಮನಾರ್ಹವಾದ ಅಂಶವುಂಟು. ಯಕ್ಷಗಾನವು ಒಂದು ಕಾಲದಲ್ಲಿ ವೈಷ್ಣವ ಭಾಗವತ ಸಂಪ್ರದಾಯದ ಪ್ರಭಾವಕ್ಕೆ ಒಳಗಾದಂತಹುದು (ಅಥವಾ ಅದರಿಂದಲೇ ರೂಪುಗೊಂಡದ್ದೂ ಇರಬಹುದು). ದಶಾವತಾರವೆಂಬ ಅದರ ಹೆಸರು, ವೇಷಗಳಿಗಿರುವ ವೈಷ್ಣವ ನಾಮ ಮುದ್ರೆಗಳು ಇವೆಲ್ಲ ಆ ಪ್ರಭಾವದ ಪುರಾವೆಗಳು. ಇಂತಹ ಬಲವಾದ ಮತೀಯ ಅಂಶವಿದ್ದರೂ ಯಕ್ಷಗಾನದಲ್ಲಿ 'ದೇವರ' ವೇಷವು, ಇತರ ವೇಷಗಳಂತೆಯೇ ಇರುವುದು ವಿಶೇಷ. ವಿಷ್ಣು, ಕೃಷ್ಣ, ರಾಮ, ಶಿವ-ಇವರನ್ನು ಮನುಷ್ಯ ಪಾತ್ರಗಳಿಗಿಂತ ಬೇರೆಯಾಗಿ ಚಿತ್ರಿಸಿಲ್ಲ. ವಿಷ್ಣು, ಕೃಷ್ಣರು ಪುಂಡುವೇಷಗಳೇ ಆಗಿವೆ. ರಾಮನು ಕಿರೀಟದ ವೇಷ (ಪೀಠಿಕೆ ವೇಷ). ಶಿವನಿಗಾದರೂ ಅಷ್ಟೆ, ರಾಜ ವೇಷದ ಜವುಳಿ, ಆಭರಣ ಮತ್ತು ತಲೆಗೆ ಜಟೆ, ಗಂಗೆ, ಚಂದ್ರ ಇಷ್ಟೆ. ದೇವತ್ವವನ್ನು ಚಿತ್ರಿಸುವ ಪ್ರತ್ಯೇಕತೆಗಳೇನೂ ಈ ವೇಷಗಳಿಗಿಲ್ಲ. ಅದೇನಿದ್ದರೂ, ಕಥೆಯಲ್ಲಿ, ಮಾತಿನಲ್ಲಿ ಮಾತ್ರ ಇರುವಂತಹದು. ಈ ವಿದ್ಯಮಾನದ ಮೂಲ ಕಾರಣ