ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸೈದ್ಧಾಂತಿಕ ಖಚಿತತೆಯ ಆವಶ್ಯಕತೆ / ೩೫

ವೆಂದರೆ, ಯಕ್ಷಗಾನ ರಂಗಭೂಮಿಯಲ್ಲಿ ವ್ಯಕ್ತಿಗೊಂದು ವೇಷವಿಧಾನವಿಲ್ಲ. ಪಾತ್ರಕ್ಕೊಂದು ವೇಷವಿಲ್ಲ. ವೇಷಗಳ ಪ್ರಕಾರಗಳಿವೆ-ಪೀಠಿಕೆ ವೇಷ, ಇದಿರು ವೇಷ (ತೆಂಕು) (ಪುರುಷ ವೇಷ, ಎರಡನೇ ವೇಷ-ಬಡಗು) ಬಣ್ಣದ ವೇಷ, ಪುಂಡು ವೇಷ, ಹೀಗೆ, ಅಥವಾ, ಕಿರೀಟದ ವೇಷ, ಪಗಡಿ ವೇಷ, ತಡ್ಪೆ ಕಿರೀಟದ ವೇಷ, ಹೀಗೆ. ಯಾವ ಪಾತ್ರವಾದರೂ, ಈ 'ವೇಷ ಜಾತಿ' ಅಥವಾ 'ಪ್ರಕಾರ'ದಲ್ಲಿ ಬರಬೇಕು, ಬರುತ್ತದೆ. ಇದನ್ನು ಅಂಗೀಕರಿಸಿದರೆ, ಹೊಸತಾದ ಒಂದು ವಸ್ತುವನ್ನು, ಹೊಸ ಪ್ರಸಂಗವಾಗಿ ರಂಗಕ್ಕೆ ತರುವಾಗಲೂ ಗೊಂದಲಕ್ಕೆ ಅವಕಾಶವಿಲ್ಲ. ಶಿವಾಜಿಯ ವೇಷವಿರಲಿ, ಚಂದ್ರಗುಪ್ತನದಿರಲಿ, ಅಲೆಕ್ಸಾಂಡರನದಿರಲಿ ಅದು ಯಾವ ಪ್ರಕಾರ (Category) ದ್ದು? ಕಿರೀಟದ ವೇಷವೆ? ಪುಂಡುವೇಷವೆ? ದೊಡ್ಡ ಮುಂಡಾಸದ್ದೆ? ಬಣ್ಣದ ವೇಷವೆ? ಎಂದು ನಿರ್ಧರಿಸಿಕೊಂಡರೆ ಮುಗಿಯಿತು. ಹೀಗೆ ಪ್ರಕಾರವನ್ನು ನಿರ್ಣಯಿಸುವಲ್ಲಿ ಅಭಿಪ್ರಾಯ ವ್ಯತ್ಯಾಸಕ್ಕೆ ಅವಕಾಶವಿರಬಹುದು. ಅದರಿಂದಾಗಿ, ಒಂದೇ ವೇಷಕ್ಕೆ (ಅಂದರೆ ಪಾತ್ರಕ್ಕೆ) ಎರಡು ಬಗೆಯ ವೇಷ ವಿಧಾನವೂ ಬರಬಹುದು. ಆದರೆ ಆಯೆರಡೂ, ಯಕ್ಷಗಾನದೊಳಗಿನ ಪ್ರಕಾರವೇ ಆದರೆ, ಸಮಸ್ಯೆಯಿಲ್ಲ. ಎರಡು ಪರಂಪರೆಗಳು ಸೃಷ್ಟಿಯಾಗಬಹುದು, ಆಗಲಿ. ಅರ್ಜುನನಿಗೆ ಕಿರೀಟ, ಪಗಡಿ (ಕೇದಗೆ ಮುಂದಲೆ) ಎರಡೂ ವಿಧಾನಗಳಿವೆ. ಭೀಮನಿಗೆ ಮುಂಡಾಸು (ದೊಡ್ಡ ಪಗಡಿ), ಬಣ್ಣದ ವೇಷ (ಮುಡಿ)-ಇವೆರಡೂ ಪರಂಪರೆಗಳಿವೆ. ಆದರೆ, “ಕ್ಯಾಲೆಂಡರ್ ವೇಷ” ಯಾ ಆರ್ವಾಚೀನ “ಪೌರಾಣಿಕ ನಾಟಕ ವೇಷ'ವನ್ನು ತಂದರೆ, ಅದು ಸೈದ್ಧಾಂತಿಕವಾಗಿ ಅನುಚಿತವಾಗುತ್ತದೆ. ಇದನ್ನು ಇನ್ನೊಂದು ರೀತಿಯಿಂದ, ಸ್ವಲ್ಪ ಲಘು ತರ್ಕದಿಂದ ಹೇಳಬಹುದು: ದೇವರಿಗೇ ಯಕ್ಷಗಾನದಲ್ಲಿ ಪ್ರತ್ಯೇಕ ವೇಷವಿಲ್ಲ. ಮತ್ತೆ ಹಳೆ, ಹೊಸ ಯಾವುದೇ ಪ್ರಸಂಗದ ಯಾವದೇ ಪಾತ್ರಕ್ಕೂ ಇದ್ದ ವೇಷ ಪ್ರಕಾರಗಳಲ್ಲಿ ಆಯ್ದು ಅಳವಡಿಸಬಾರದೇಕೆ?

ಕಲೆಯ ರೂಪವಾಗಲಿ, ಅಭಿವ್ಯಕ್ತಿಯಾಗಲಿ, ತಾನು ಹೆಚ್ಚು ಹೆಚ್ಚು ಸಮರ್ಥ ಮತ್ತು ಸಂಗತವಾಗಲು, ಪ್ರಯತ್ನ ಮಾಡುತ್ತಿರುತ್ತದೆ. ಹಾಗೆ ಮಾಡುವಾಗ ಎರಡು ಪ್ರವೃತ್ತಿಗಳಿರುತ್ತವೆ ಎಂದು ಶ್ರೀ ಎ. ಈಶ್ವರಯ್ಯ ಗುರುತಿಸಿದ್ದಾರೆ (ಇದೇ ಸಮ್ಮೇ ಳನದ ಭಾಷಣವೊಂದರಲ್ಲಿ). ಒಂದು: ಒಳಗಿಂದ ನಡೆಯುವ ಸ್ಫೋಟ, implosion ಮತ್ತೊಂದು ಆಸ್ಫೋಟ, explosion. ಕಲೆಯ ಒಳಗೆ ಸಾಧ್ಯತೆಗಳ ಹುಡುಕಾಟ ನಡೆಯುವಾಗ, ಕಲೆಯ ಅಂಗೋಪಾಂಗಗಳು ಹೊಸ ಸಮನ್ವಯವನ್ನು ಪಡೆಯುತ್ತವೆ. ಒಂದು ಉದಾಹರಣೆ- ಬಹಳ ಹಿಂದಕ್ಕೆ, ಪ್ರಾಯಃ ಕಳೆದ ಶತಮಾನದಲ್ಲಿ, ತೆಂಕು ಯಕ್ಷಗಾನದಲ್ಲಿ, ರಾವಣ, ಇಂದ್ರಜಿತು ಇವೆರಡೂ ತಟ್ಟಿ ಕಿರೀಟದ ಬಣ್ಣದ ವೇಷಗಳಾಗಿದ್ದುವಂತೆ. ನಂತರ, ಇಂದ್ರಜಿತು ಪಾತ್ರಕ್ಕೆ, ಪ್ರತ್ಯೇಕ ವೇಷವನ್ನು ಅಳವಡಿಸುವ ದೃಷ್ಟಿ ಬಂತು. ಆಗ, ಇಂದ್ರಜಿತು ಕೋಲು ಕಿರೀಟದ ಮತ್ತು ಉಗ್ರ ಮುಖವರ್ಣಿಕೆಯ ಒಂದು ಬಗೆಯ 'ಅರೆಬಣ್ಣ ವೇಷ' ವಾಯಿತು.